‘ಮಯೂರ' ಹಾಸ್ಯ - ಭಾಗ ೭೫

‘ಮಯೂರ' ಹಾಸ್ಯ - ಭಾಗ ೭೫

ಯಾರ ಮನೆ?

ಲಾಕ್ ಡೌನ್ ಸಮಯದಲ್ಲಿ ನಾನು ಹಾಗೂ ಪತ್ನಿ ಇಬ್ಬರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದೆವು. ಯಾವಾಗಲೂ ಮುಚ್ಚಿಕೊಂಡೇ ಇರುತ್ತಿದ್ದ ನಮ್ಮನೆಯ ಬಾಗಿಲು ಅಪರೂಪಕ್ಕೆ ಹಗಲು ಹೊತ್ತಿನಲ್ಲೂ ತೆರೆದಿರುವುದನ್ನು ನೋಡಿ ನಮ್ಮ ಮನೆ ಮಾಲೀಕರ ಮಗ ಐದು ವರ್ಷದ ನಚಿಕೇತ ಮೆಲ್ಲಗೆ ಹೊಸ್ತಿಲ ಬಳಿ ಬಂದು ನಿಂತ. ‘ಬಾರೋ ನಚಿಕೇತ ಒಳಗೆ' ಅಂದೆ. ಒಳಗೆ ಬಂದು ಮನೆಯ ತುಂಬೆಲ್ಲಾ ಕಣ್ಣಾಡಿಸುತ್ತಾ ನಿಂತ. ‘ಯಾಕೆ ಹಾಗೆ ಮನೆ ನೋಡ್ತಾ ಇದ್ದೀಯಾ?’ ಎಂದೆ. ‘ಈ ಮನೆ ಯಾರದು?’ ಅಂತ ಕೇಳಿದೆ. ‘ನಿಮ್ಮದೇ ಮನೆ ಕಣೋ ಇದು.’ ಎಂದೆ. ‘ಹಾಗಾದ್ರೆ ನೀವು ಯಾಕೆ ಇಲ್ಲಿದ್ದೀರಾ?’ ಅಂದ. ನಾನು ಉತ್ತರ ಹೇಳಲಾಗದೆ ಪೆಚ್ಚಾದೆ.

-ಶರಣಬಸಪ್ಪ ಪಾಟೀಲ

***

ಬದರಿ ಪ್ರಸಾದ

ಚಿಕ್ಕಪ್ಪನ ಷಷ್ಟಿಪೂರ್ತಿಗೆ ನಮ್ಮನ್ನು ಕರೆಯಲು ಅವರ ಕುಟುಂಬ ಬಂದಿತ್ತು. ಊಟವಾದ ಮೇಲೆ ಎಲ್ಲರೂ ಹಾಲಿನಲ್ಲಿ ಕುಳಿತು ಮಾತನಾಡುತ್ತಿದ್ದರು. ನಾನು ರೂಮಿನಲ್ಲಿ ನಮ್ಮ ಎರಡು ವರ್ಷದ ಮೊಮ್ಮಗ ಬದರಿಯನ್ನು ಮಲಗಿಸುತ್ತಿದ್ದೆ. ಚಿಕ್ಕಮ್ಮ ರೂಮಿಗೆ ಬಂದು ಅಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರಲು ಹೋದರು. ‘ಚಿಕ್ಕಮ್ಮ, ಆ ಕುರ್ಚಿಯಲ್ಲಿ ಕೂರಬೇಡಿ. ಅಲ್ಲಿ ಬದರಿಯ ಪ್ರಸಾದವಾಗಿದೆ.’ ಎಂದೆ. ತಕ್ಷಣ ಚಿಕ್ಕಮ್ಮ ಕುರ್ಚಿಯಲ್ಲಿದ್ದ ನೀರನ್ನು ಕೈಯಲ್ಲಿ ತಗೊಂಡು ಕಣ್ಣಿಗೊತ್ತಿಕೊಂಡು, ತಲೆಗೆ ಸವರಿಕೊಂಡು, ‘ಬದರಿಗೆ ಯಾರೇ ಹೋಗಿದ್ದು?’ ಹೇಳಿದ್ರೆ ನಾವೂ ಬರ್ತಿದ್ವಿ' ಎಂದರು. ‘ಚಿಕ್ಕಮ್ಮ ಬದರಿ ಪ್ರಸಾದ ಎಂದರೆ ನನ್ನ ಮೊಮ್ಮಗ ಬದರಿ ಸುಸ್ಸೂ ಮಾಡಿದ್ದು' ಎಂದೆ. ‘ಹೌದೇನೇ? ಇರಲಿ ಬಿಡು. ಚಿಕ್ಕ ಮಕ್ಕಳು ದೇವರ ಸಮಾನ' ಎಂದವರು ಮುಖ ಕಿವುಚಿ ಅಲ್ಲಿಂದ ಹೊರಗೆ ನಡೆದರು.

-ಶಶಿರೇಖಾ ನಾಗೇಂದ್ರ

***

ಮರೆವು

ಒಮ್ಮೆ ನನ್ನ ಸ್ನೇಹಿತೆಯೊಂದಿಗೆ ಸಂಗೀತ ಕಾರ್ಯಕ್ರಮಕ್ಕೆ ಹೋದಾಗಿನ ಘಟನೆ. ಸ್ನೇಹಿತೆಯ ಪುಟ್ಟ ಮಗು ಹರ್ಷಿತಾಳೂ ನಮ್ಮ ಜೊತೆಗೆ ಬಂದಿದ್ದಳು. ಸ್ವಾಗತ, ಪರಿಚಯ ಭಾಷಣ ಇತ್ಯಾದಿ ಮುಗಿದು ಸಂಗೀತಗಾರರು, ವಾದ್ಯಗಾರರು ಬಂದು ಕುಳಿತರು. ಮೈಕ್ ರಿಪೇರಿ, ತಬಲಾ ಸರಿಪಡಿಸುವುದು, ತಂಬೂರಿ ಶ್ರುತಿಗೊಳಿಸುವುದು ಆದ ನಂತರ ಸಂಗೀತಗಾರರು ಆಲಾಪ ಶುರು ಮಾಡುತ್ತಾ ಗಂಟಲು ಹೂಂ ಹೂಂ ಅನ್ನುತ್ತಾ ನೀರು ಕುಡಿದರು. ಮತ್ತೆ ಸ್ವಲ್ಪ ಆಲಾಪ ... ಮತ್ತೆ ಗಂಟಲು ಸರಿಪಡಿಸುವುದು ಮುಂದುವರೆಯಿತು. ಆಗ ಹರ್ಷಿತಾ ‘ಅಯ್ಯೋ.. ಪಾಪ ... ನೋಡಮ್ಮಾ ಅವರಿಗೆ ಮರೆವು ಅನ್ಸುತ್ತೆ, ಹಾಡನ್ನೇ ಮರೆತು ಬಿಟ್ಟಿದ್ದಾರೆ. ಅದಕ್ಕೆ ಮತ್ತೆ ಮತ್ತೆ ಹಾಡಿದ್ದನ್ನೇ ಹಾಡ್ತಾ ಇದ್ದಾರೆ, ನಡಿ ಹೋಗೋಣ' ಎಂದು ಹೇಳಿ ಬಿಡೋದೆ !

-ಅನು ಬೊಮ್ನಳ್ಳಿ

***

‘ದಾರೂ ಸೋಡಾ’

ಮಹಾರಾಷ್ಟ್ರದಲ್ಲಿ ಬಂದು ನೆಲೆಸಿದ್ದ ಹೊಸತರಲ್ಲಿ ನಡೆದ ಪ್ರಸಂಗ ಇದು. ಒಮ್ಮೆ ಬಸ್ಸಿನಲ್ಲಿ ಸಂಚರಿಸುತ್ತಿದ್ದಾಗ ಎದುರಿನಲ್ಲಿ ಸಾಗುತ್ತಿದ್ದ ಟ್ರಕ್ಕಿನ ಹಿಂದುಗಡೆ ಹಿಂದಿ ಅಕ್ಷರಗಳಲ್ಲಿ ಬರೆಯಲ್ಪಟ್ಟಿದ್ದ ಸೂಚನೆ ಗಮನ ಸೆಳೆಯಿತು. ‘ದಾರೂ ಸೋಡಾ, ಸಂಸಾರ್ ಜೋಡಾ!’ ಎಂದಿತ್ತು. ಅದನ್ನು ಓದಿ ಆಶ್ಚರ್ಯಗೊಂಡು ಪಕ್ಕದ ಸೀಟಿನಲ್ಲಿ ಕೂತಿದ್ದ ಮರಾಠಿ ಪ್ರಯಾಣಿಕನಲ್ಲಿ ವಿಚಾರಿಸಿದೆ. ‘ಆ ಟ್ರಕ್ಕಿನ ಹಿಂದೆ ಅದೇನು ಬರೆದಿದ್ದಾರೆ? ದಾರೂ ಸೋಡಾ ಸಂಸಾರವನ್ನು ಜೊಡಿಸುತ್ತದೆಯೇ?’ ಎಂದು. ಆತ ನನ್ನನ್ನೊಮ್ಮೆ ಅಪಾದಮಸ್ತಕ ವೀಕ್ಷಿಸಿ, ‘ಅದು ಮರಾಠಿ ವಾಕ್ಯ, ದಾರು ಸೋಡಾ ಅಂದರೆ ಶರಾಬು ಬಿಡಿ ಎಂದರ್ಥ. ‘ಶರಾಬು ಬಿಟ್ಟು ಸಂಸಾರವನ್ನು ಜೋಡಿಸಿ' ಎಂದು ಬರೆದಿದ್ದಾರೆ' ಎಂಬುದಾಗಿ ವಿವರಿಸಿದಾಗ ಮರಾಠಿ ತಿಳಿಯದೆ ಕೇವಲ ಹಿಂದೀ ಓದಲು ತಿಳಿದಿದ್ದ ನನ್ನ ಅಜ್ಞಾನಕ್ಕೆ ನಾನೇ ನಾಚುವಂತಾಯಿತು.

-ರಮಣ್ ಶೆಟ್ಟಿ ರೆಂಜಾಳ್

***

(ಆಗಸ್ಟ್ ೨೦೨೨ರ ‘ಮಯೂರ' ಸಂಚಿಕೆಯಿಂದ ಆಯ್ದದ್ದು)