‘ಮಯೂರ' ಹಾಸ್ಯ - ಭಾಗ ೭೬

‘ಮಯೂರ' ಹಾಸ್ಯ - ಭಾಗ ೭೬

ತಲೆಯ ಮೇಲೆ

ಬಹಳ ವರ್ಷಗಳ ಹಿಂದೆ ನಡೆದದ್ದು. ಅಂದು ಭಾನುವಾರ ರಜೆ ಇತ್ತು. ನಮ್ಮ ಮೈದುನ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಜೆ ನಮ್ಮ ಮನೆಗೆ ಬಂದರು. ಪಡಸಾಲೆಯಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಮಕ್ಕಳ ಆಟ, ಚೀರಾಟ, ಗಲಾಟೆ ನಮ್ಮ ಮಾತಿಗೆ ಅಡ್ಡಿಯಾಗತೊಡಗಿತು. ಎಷ್ಟು ಸಲ ಹೇಳಿದರೂ ಅವರ ಗಲಾಟೆ ಕಡಿಮೆಯೇನೂ ಆಗಲಿಲ್ಲ. ಅದರಲ್ಲೂ ಮೈದುನನ ಮಗ ಸಚಿನ್ ನ ಗಲಾಟೆ ಹೆಚ್ಚಾಗಿತ್ತು. ಅವನ ಅಪ್ಪ ಸಚ್ಚಿಗೆ, ‘ಎಷ್ಟು ಗಲಾಟೆ ಮಾಡ್ತಾ ಇದ್ದೀಯಾ? ಸ್ವಲ್ಪ ಸಲಿಗೆ ಕೊಟ್ಟಿದ್ದೇ ಸೈ, ತಲೆಗೇರಿ ಕುಳಿತು ಬಿಡ್ತೀಯಾ ನೋಡು' ಎಂದು ಗದರಿದರು. ಅದಕ್ಕೆ ಸಚ್ಚಿ ‘ಇಲ್ಲ ಪಪ್ಪ, ನಿಮ್ಮ ತಲೆಯ ಮೇಲೆ ಕುಳಿತುಕೊಂಡರೆ ಜಾರಿ ಬಿದ್ದು ಬಿಡುತ್ತೇನೆ. ಅಷ್ಟೇ’ ಅನ್ನಬೇಕೇ? ಆಗ ನಾವೆಲ್ಲಾ ಮೈದುನನ ತಲೆ ನೋಡಿದೆವು. ಅವರ ಮುಂದಲೆಯಲ್ಲಿ ಕೂದಲುಗಳಿಲ್ಲದೆ ಬೋಳಾಗಿದ್ದನ್ನು ನೋಡಿ ನಗು ತಡೆಯಲಾಗಲಿಲ್ಲ.!

-ಸುನಂದ ಸಿದ್ದಪ್ಪ ಮುಳೆ

***

ಮರಿ ಕುರಿ

ತರಗತಿಯಲ್ಲಿ ವಿಜ್ಞಾನದ  ‘ಧಾತುಗಳು ಮತ್ತು ಅವುಗಳ ಸಂಕೇತಗಳು' ಎಂಬ ಪಾಠ ಮಾಡುವಾಗ ‘ಪಾದರಸ (ಮರ್ಕ್ಯೂರಿ)’ದ ಬಗ್ಗೆ ತಿಳಿಸಿದ್ದೆ. ಮುಂದೊಂದು ದಿನ ಶಾಲೆಗೆ ಬಂದಿದ್ದ ಅಧಿಕಾರಿಯೊಬ್ಬರು ಮಕ್ಕಳನ್ನು ಮೌಖಿಕವಾಗಿ ಪ್ರಶ್ನಿಸುತ್ತಾ, ಬೋರ್ಡಿನ ಮೇಲೆ Hg ಎಂದು ಬರೆದು, ‘ಇದು ಯಾವ ಲೋಹ?’ ಎಂದು ಪ್ರಶ್ನಿಸಿದರು. ಮಕ್ಕಳಿಗೆ ಉತ್ತರಿಸಲು ಕಷ್ಟವಾಗತೊಡಗಿತು. ಆಗ ತರಗತಿಯಲ್ಲಿ ಹಿಂದುಗಡೆ ಕುಳಿತಿರುತ್ತಿದ್ದ ವಿದ್ಯಾರ್ಥಿಯೊಬ್ಬ ಥಟ್ಟನೆ ‘ಮರಿಕುರಿ' ಎಂದು ಉತ್ತರಿಸಿದ. ಅವನ ಉತ್ತರವನ್ನು ತುಸುವೂ ಅನುಮಾನಿಸದ ಅಧಿಕಾರಿ ‘ಶಹಬ್ಬಾಸ್' ಎಂದರು. ಆ ವಿದ್ಯಾರ್ಥಿಯ ಪೋಷಕರು ಕುರಿ ಸಾಕಣೆಗಾರರಾಗಿದ್ದರಿಂದ ಅವನ ತಲೆಯಲ್ಲಿ ‘ಮರ್ಕ್ಯೂರಿ' ಎನ್ನುವುದು ‘ಮರಿಕುರಿ' ಆಗಿ ದಾಖಲಾಗಿರಬಹುದು. ಅವನು ಅದನ್ನು ನೆನಪಿಟ್ಟುಕೊಂಡು ಹೇಳಿದ್ದಕ್ಕೂ, ಅಧಿಕಾರಿ ಅದನ್ನು ತಿದ್ದಿಕೊಂಡು, ಸರಿಯಾಗಿ ಗ್ರಹಿಸಿ, ಸರಿ ಉತ್ತರ ಎಂದಿದ್ದಕ್ಕೂ ನನಗೆ ಅಚ್ಚರಿಯಾಗಿತ್ತು.

-ಮಹೇಶ್ವರ ಹುರುಕಡ್ಲಿ

***

ನಾನ್ ವೆಜ್

ಗೆಳೆಯರೊಂದಿಗೆ ಹೋಟೇಲಿಗೆ ಊಟಕ್ಕೆ ಹೋಗಿದ್ದೆವು. ‘ನನಗಂತೂ ವೆಜ್ ಥಾಲಿ ಬೇಕು. ನಿಮಗೆ ಯಾರಿಗೆ ವೆಜ್, ಯಾರಿಗೆ ನಾನ್ ವೆಜ್ ಬೇಕು ಹೇಳಿ' ಎಂದ ಗೆಳೆಯ. ಇನ್ನಿಬ್ಬರು ಗೆಳೆಯರು ‘ವೆಜ್... ವೆಜ್...' ಎಂದರು. ‘ನಿನಗೇನು ಬೇಕು ಹೇಳೋ?, ವೇಟರ್ ನಿಂತಿದ್ದಾನೆ.’ ಎಂದು ಮೊಬೈಲ್ ನೋಡುತ್ತಲಿದ್ದ ನನ್ನನ್ನು ಎಚ್ಚರಿಸಿದರು. ‘ನಾನ್ ವೆಜ್' ಎಂದೆ. ವೇಟರ್ ಮೂವರಿಗೂ  ವೆಜ್ ಥಾಲಿ ಕೊಟ್ಟು ನನಗೆ ನಾನ್ ವೆಜ್ ಥಾಲಿ ಕೊಟ್ಟ. ‘ಅಯ್ಯೋ, ಇದನ್ನ ಯಾಕಯ್ಯಾ ಕೊಟ್ಟೆ? ನಾನ್ ವೆಜ್ ಅಲ್ವೇ ಹೇಳಿದ್ದು?’ ಎಂದೆ. ‘ಹೌದು ಸರ್, ಇದು ನಾನ್ ವೆಜ್ಜೇ’ ಅಂದ. ‘ನಾನ್ ವೆಜ್ ಅಲ್ಲಯ್ಯ, ನಾನು ವೆಜ್ ಅಂದೆ' ಎಂದು ತಿಳಿಸಿ ಹೇಳಬೇಕಾಯ್ತು.

-ನರಸಿಂಹಾರೆಡ್ಡಿ ಯಂಕಾಮೊಳ

***

ಯಾವುದು ರುಚಿ?

ಒಮ್ಮೆ ಮನೆಯಲ್ಲಿ ದೋಸೆ ಮಾಡಿದಾಗ ಅದರೊಂದಿಗೆ ಪಲ್ಯ ಹೇಗಿದ್ದರೆ ಒಳ್ಳೆಯದು ಎಂಬ ಚರ್ಚೆ ನಡೆಯುತ್ತಿತ್ತು. ಚೆನ್ನಾಗಿ ಕುದಿಸಿದ ಬಟಾಟೆ (ಆಲೂಗಡ್ಡೆ) ಸಾಕಷ್ಟು ಉಳ್ಳಾಗಡ್ಡಿ (ಈರುಳ್ಳಿ) ಹಾಕಿ ಮಾಡಿದರೆ ರುಚಿ ಎಂದು ಕೆಲವರೆಂದರೆ, ಇಂಗು - ಜೀರಿಗೆ ಒಗ್ಗರಣೆ ಹಾಕಿದ ಬಟಾಟೆಗೆ ಕಡಿಮೆ ಉಳ್ಳಾಗಡ್ಡಿ ಹಾಕಿದರೂ ರುಚಿ ಎನ್ನುವ ವಾದ ಇನ್ನೊಬ್ಬರದು. ಆಗ ಮನೆಗೆ ಕಾಯಿಪಲ್ಯ ತರುವ ಸ್ನೇಹಿತ, ‘ಉಳ್ಳಾಗಡ್ಡೆ, ಬಟಾಟೆ ಇವುಗಳಲ್ಲಿ ಯಾವುದು ಸೋವಿ (ಕಡಿಮೆ ಬೆಲೆ) ಇರುತ್ತದೆಯೋ ಅದನ್ನು ಹೆಚ್ಚಿಗೆ ಹಾಕಿದರೆ ಪಲ್ಯ ರುಚಿಯಾಗಿರುತ್ತದೆ.’ ಎಂದಾಗ ಎಲ್ಲರೂ ನಗತೊಡಗಿದೆವು. 

-ರವಿ ಮುನವಳ್ಳಿ  

***

(‘ಮಯೂರ' ಸೆಪ್ಟೆಂಬರ್ ೨೦೨೨ರ ಸಂಚಿಕೆಯಿಂದ ಆಯ್ದ ಬರಹ)