‘ಮಯೂರ' ಹಾಸ್ಯ - ಭಾಗ ೭೭

‘ಮಯೂರ' ಹಾಸ್ಯ - ಭಾಗ ೭೭

ಸ್ಮಾಲ್ ಅಂಕಲ್ಸ್

ನನ್ನ ಅಕ್ಕನ ಮಗ ಅವ್ಯಾನ್ ಆಗ ತಾನೇ ಪ್ಲೇ ಸ್ಕೂಲಿಗೆ ಹೊರಟಿದ್ದ. ಹೊಸ ಹೊಸ ಪದ ಹೇಳುವುದನ್ನು ಬಣ್ಣಗಳ ಗುರುತಿಸುವುದನ್ನು ಕಲಿತಿದ್ದ. ಅಮ್ಮ ಅಂದ್ರೆ ಮದರ್, ಅಪ್ಪ ಅಂದ್ರೆ ಫಾದರ್, ಅಜ್ಜ ಅಂದ್ರೆ ಗ್ರಾಂಡ್ ಫಾದರ್ ಅನ್ನುವುದನ್ನೆಲ್ಲಾ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ‘ಆಂಟಿ-ಅಂಕಲ್' ಅಂದರೆ ಯಾರು ಎನ್ನುವುದನ್ನೂ ಹೇಳಿಕೊಟ್ಟಿದ್ದರು. ಒಂದು ಭಾನುವಾರ ನಮ್ಮ ಮನೆಯ ಮಹಡಿಯ ಕಿಟಕಿಯಿಂದ ಕೆಳಗೆ ನೋಡಿದವ, 'ಅಜ್ಜಿ ಅಜ್ಜಿ, ಸ್ಮಾಲ್ ಅಂಕಲ್ಸ್ ಆರ್ ಪ್ಲೇಯಿಂಗ್' ಎಂದು ಹೇಳಿದಾಗ ಮನೆಯಲ್ಲಿದ್ದವರೆಲ್ಲಾ ನಕ್ಕಿದ್ದಾಯ್ತು. ಆನಂತರ, ‘ಅವರು ಸ್ಮಾಲ್ ಅಂಕಲ್ಸ್ ಅಲ್ಲ, ಬಾಯ್ಸ್' ಎಂದು ಹೇಳಿಕೊಟ್ಟೆ. 

-ರೇವತಿ ಅಗ್ನಿಹೋತ್ರಿ

***

ಎಚ್ಚರ ತಪ್ಪಿಸೋ ಕಚೇರಿ

ಹೊಸದಾಗಿ ಕೆಲಸಕ್ಕೆ ಸೇರಿದ್ದ ಲಕ್ಷ್ಮಮ್ಮನ ಬಳಿ ಮಾತನಾಡುತ್ತಾ ಕೇಳಿದೆ. ‘ನಿನ್ನ ಮಗ ಎಲ್ಲಿ ಕೆಲಸ ಮಾಡ್ತಾ ಇದ್ದಾನೆ?’ ಎಂದು. ಕಸ ಮೂಲೆಗೆ ಮಾಡುತ್ತಾ ಹೇಳಿದಳು. ‘ಎಚ್ಚರ ತಪ್ಪಿಸೋ ಆಫೀಸ್ನಾಗೆ ಕೆಲ್ಸ ಮಾಡ್ತಾನೆ' ಅಂತ. ಅವಳ ಮಾತು ಕೇಳಿ ಆ ಕ್ಷಣಕ್ಕೆ ದಿಗ್ಭ್ರಮೆಯಾದಂತಾಯಿತು. ಆಮೇಲೆ ಬಿಡಿಸಿ ಕೇಳಿದಾಗ ಗೊತ್ತಾಗಿದ್ದು, ಅವಳ ಮಗ ಖಾಸಗಿ ಆಸ್ಪತ್ರೆಯೊಂದರ ಅನಸ್ತೇಶಿಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ ಅಂತ !

-ಕೆ. ಲೀಲಾ ಶ್ರೀನಿವಾಸ್

***

ಪಿಯುಸಿ ಆಗಿಲ್ವಲ್ರೀ?

ಬೆಂಗಳೂರಿನ ಖಾಸಗಿ ಸಂಜೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದೆ. ಅಂದು ಬೈಕಿನಲ್ಲಿ ಕಾಲೇಜಿಗೆ ಹೊರಟಾಗ ಪೋಲೀಸರು ವಾಹನ ದಾಖಲೆ ತಪಾಸಣೆಗೆ ಬೈಕ್ ನಿಲ್ಲಿಸಿದರು. ‘ಕಾಲೇಜಿಗೆ ತಡವಾಗುತ್ತೆ ಸರ್, ಬಿಡಿ.’ ಅನ್ನುತ್ತಾ ನನ್ನ ವಾಹನದ ದಾಖಲೆ ತೋರಿಸಿದೆ. ಎಲ್ಲವನ್ನೂ ತಿರುವಿ, ನಿಮ್ದು ಪಿಯುಸಿ (PUC) ಆಗಿಲ್ವಲ್ರೀ?’ ಎಂದರು. ಪಿಯುಸಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಮಾಡಿದ್ದೇನೆ ಸರ್, ಈಗ ಪದವಿ ಕಾಲೇಜಿಗೆ ಹೋಗ್ತಾ ಇದ್ದೀನಿ. ಬೇಕಾದ್ರೆ ನೋಡಿ' ಎಂದು ಕಾಲೇಜಿನ ಐಡಿ ಕಾರ್ಡ್ ತೋರಿಸಿದೆ. ಅದಕ್ಕವರು ನಗುತ್ತಾ, ನಾನು ಕೇಳಿದ್ದು, ಆ ಪಿಯುಸಿ ಅಲ್ಲ , PUC ಅಂದ್ರೆ Pollution Under Control ಸರ್ಟಿಫಿಕೇಟ್!’ ಅಂದಾಗ ನಗು ತಡೆಯಲಾಗಲಿಲ್ಲ.

-ನಗರ ಗುರುದೇವ್ ಭಂಡಾರ್ಕರ್

***

ಅಪಾರ್ಥ

ಬೇಸಿಗೆ ರಜೆಯ ಸಮಯ. ಮಾವಿನ ಹಣ್ಣಿನ ಕಾಲ. ಒಂದು ಸಂಜೆ ನನ್ನ ಮೂರು ವರ್ಷದ ಮೊಮ್ಮಗನ ಜೊತೆ ಪಕ್ಕದ ಮನೆಗೆ ಹೋಗಿದ್ದೆ. ಮಲೆನಾಡಿನ ಕಡೆಯ ಅವರು ನಮ್ಮಿಬ್ಬರಿಗೂ ತಿನ್ನಲು ರೊಟ್ಟಿ ಜೊತೆಗೆ ಕಾಡು ಮಾವಿನ ಹಣ್ಣಿನ ಗೊಜ್ಜು ಕೊಟ್ಟರು. ಆತ ‘ಕತ್ತೆ ಬೇಡಾ...ಬರೀ ರೋಸು ಸಾಕು' ಎಂದ. ಅವರು ಕೋಪ ಮಿಶ್ರಿತ ಬೇಸರದಿಂದ, ‘ಏನೋ ಪುಟ್ಟಾ...ನನಗೆ ಕತ್ತೆ ಅಂತ ಬೈತಿಯಾ...?’ ಎಂದರು ! ನನಗೆ ಪರಿಸ್ಥಿತಿಯ ಅರ್ಥವಾಗಿ, ಅವನ ಮಾತಿಗೆ ಅರ್ಥ ತಿಳಿಸಬೇಕಾಯಿತು. ಅವನು ಮಾವಿನ ಗೊಜ್ಜಿಗೆ ಹಾಕಿದ ಓಟೆ ಬೇಡ. ಬರೀ ರಸ ಬೇಕು ಅನ್ನುವುದಕ್ಕೆ ಕೊಂಕಣಿ ಮಿಶ್ರಿತ ಕನ್ನಡದಲ್ಲಿ ಕತ್ತೆ (ಓಟೆ) ಬೇಡಾ..ಬರೀ ರೋಸು (ರಸ) ಸಾಕು ಎಂದು ಹೇಳಿದ್ದು... ವಿವರಿಸಿದಾಗ ನಗುವ ಸರದಿ ಅವರದಾಯಿತು.

-ಜಯಮಾಲಾ ಎನ್ ಪೈ

***

(‘ಮಯೂರ' ಅಕ್ಟೋಬರ್ ೨೦೨೨ ರ ಸಂಚಿಕೆಯಿಂದ ಆಯ್ದದ್ದು)