‘ಮಯೂರ' ಹಾಸ್ಯ - ಭಾಗ ೭

ಎಮ್ಮೆಯಲ್ಲ ಕಾಡೆಮ್ಮೆ !
ನಮ್ಮ ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದ ಕಾಶಿ ಮಾತಿನ ರೈಲು ಬಿಟ್ಟೆನೆಂದರೆ ನಿಜವಾದ ರೈಲು ಕೂಡಾ ಬದಿಗೆ ಸರಿಯಲೇಬೇಕು. ಅವನು ವೃತ್ತಿಯಿಂದ ನಾಲ್ಕಾರು ಎಮ್ಮೆಗಳನ್ನು ಸಾಕಿ ಹಾಲು ಮಾರಿ ಜೀವನ ಸಾಗಿಸುವವ.
ಒಂದು ರಾತ್ರಿ ಮೇಯಲು ಬಿಟ್ಟ ಒಂದು ಎಮ್ಮೆ ಕೊಟ್ಟಿಗೆಗೆ ತಿರುಗಿ ಬರಲಿಲ್ಲವಂತೆ. ಹೆಂಡತಿಗೆ ಹೇಳಿ ಕಾಶಿ ಎಮ್ಮೆ ಹುಡುಕಲು ಕಾಡಿಗೆ ಹೋದ. ಅಂತೂ ಎಮ್ಮೆ ಕಾಡಲ್ಲಿ ಸಿಕ್ಕಿತು. ಅದನ್ನು ದಾಂಬಿ (ದನಗಳನ್ನು ಕಟ್ಟುವ ಸಾಧನ) ಯಿಂದ ಕಟ್ಟಿ ಕೊಟ್ಟಿಗೆಗೆ ಎಳತಂದು ಕಟ್ಟಿ ಮಲಗಿದನಂತೆ.
ಬೆಳಿಗ್ಗೆ ಕಾಶಿ ಎದ್ದಾಗ ಕೊಟ್ಟಿಗೆಯ ಸುತ್ತಲೂ ಜನವೋ ಜನ. ಹೆಂಡತಿಯನ್ನು ಕರೆದು ವಿಚಾರಿಸಿದಾಗ ಕಾಶಿಗೆ ಆಶ್ಚರ್ಯವಂತೆ. ರಾತ್ರಿ ಕಾಶಿ ಅವನ ಎಮ್ಮೆಯನ್ನು ಎಳತರುವ ಬದಲು ದೊಡ್ಡದಾದ ಕಾಡೆಮ್ಮೆಯನ್ನು ಎಳತಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದನಂತೆ! ಅದಕ್ಕೆ ಕೊಟ್ಟಿಗೆ ಸುತ್ತ ಜನವೋ ಜನ.
-ಬೀರಣ್ಣ ನಾಯಕ ಮೊಗಟಾ
***
ಅಪ್ಪ ಅಮ್ಮನ ಸಹಾಯ
ನಾನು ಆರನೇ ತರಗತಿಯ ಮಕ್ಕಳ ಹೋಂವರ್ಕ್ ಪುಸ್ತಕ ನೋಡುತ್ತಿದ್ದೆ. ಕಿಟ್ಟು ಎಂಬ ವಿದ್ಯಾರ್ಥಿ ಬಹಳ ತಪ್ಪುಗಳನ್ನು ಮಾಡಿದ್ದ. ‘ಒಬ್ಬನೇ ವಿದ್ಯಾರ್ಥಿ ಇಷ್ಟು ತಪ್ಪುಗಳನ್ನು ಮಾಡಲು ಸಾಧ್ಯವೇ?’ ಎಂದು ಅವನನ್ನು ಕೇಳಿದೆ.
‘ಇಲ್ಲ ಮೇಡಂ. ಇದು ನಾನೊಬ್ಬನೇ ಮಾಡಿದ ತಪ್ಪಲ್ಲ, ಅಪ್ಪ, ಅಮ್ಮ ಕೂಡ ಹೋಂವರ್ಕ್ ಮಾಡಲು ನನಗೆ ಸಹಾಯ ಮಾಡಿದ್ದಾರೆ!
-ಪ್ರತಿಮಾ ಪ್ರಮೋದ ಮೋನೆ
***
ಬೇಬಿ ಕಾರ್ನ್
ರಜೆಗೆ ಊರಿಗೆ ಹೋಗಿದ್ದ ನಾವು ಮಕ್ಕಳೊಂದಿಗೆ ಹೊಲಕ್ಕೆ ಹೋದೆವು. ಅಲ್ಲಿ ಜೋಳದ ತೆನೆ ನೋಡಿದ ನನ್ನ ತಂಗಿ ಮಗ ಪುಟಾಣಿ ಪ್ರಜ್ವಲ್
“ದೊಡ್ಡಮ್ಮ ಇದು ಬೇಬಿ ಕಾರ್ನ್?” ಎಂದು ಪ್ರಶ್ನಿಸಿದ. ಅದಕ್ಕೆ ನಾನು “ಅಲ್ಲಪ್ಪಾ ಅದು..." ಎಂದು ಹೇಳುವ ಮೊದಲೇ “ಓ... ಹಾಗಾದ್ರೆ ಅದು ಅಡಲ್ಟ್ ಕಾರ್ನಾ!” ಎಂದು ಅವನೇ ವಾಕ್ಯ ಪೂರ್ಣಗೊಳಿಸಿದ.
-ಸುಮಾ ಕಳಸಾಪುರ
***
ಮಾರಿ ಹಬ್ಬಕ್ಕೆ ಡ್ರೆಸ್ಸು!
ನನ್ನ ತಮ್ಮನ ಮಗಳು ನಾಲ್ಕು ವರ್ಷದ ಶುಭದಾ ತುಂಬಾ ತುಂಟಿ. ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದಳು. ‘ದೊಡ್ಡಪ್ಪಾ..ನನಗೆ ಲಂಗ ಬ್ಲೌಸು ತಕ್ಕೊಡು..’ ಎಂದು ನನಗೆ ಹೇಳಿದಳು.
‘ಲಂಗಾ ಬ್ಲೌಸಾ? ಯಾಕೆ?’ ಎಂದೆ.
‘ಲಂಗಾ ಬ್ಲೌಸು ಹೊಸ ಡ್ರೆಸ್ಸು ದೊಡ್ಡಪ್ಪಾ... ಮಾರಿ ಹಬ್ಬಕ್ಕೆ ತಕ್ಕೊಡು ದೊಡ್ಡಪ್ಪಾ’ ಎಂದಳು !
‘ಮಾರಿ ಹಬ್ಬಕ್ಕೆ ಹೊಸ ಡ್ರೆಸ್ಸಾ?’ ಎಂದು ಆಶ್ಚರ್ಯ ಪಟ್ಟು ಕೇಳಿದೆ!
‘ಹೌದು ದೊಡ್ಡಪ್ಪಾ ಮಾರಿ ಹಬ್ಬಕ್ಕೆ ಲಂಗ ಬ್ಲೌಸು!’ ಎಂದಳು.
ನಂತರ ತಿಳಿಯಿತು. ಅದು ಮಾರಿಹಬ್ಬ ಅಲ್ಲ.. ಗೌರಿ ಹಬ್ಬ ಎಂದು! ‘ಗೌರಿ ಹಬ್ಬ' ಎಂದು ಹೇಳುವ ಬದಲು ‘ಮಾರಿ ಹಬ್ಬ' ಎಂದಿದ್ದಳು ಆಕೆ!
-ಪಿ.ಜೆ.ರಾಘವೇಂದ್ರ
***
(ಮಯೂರ ಮೇ ೨೦೧೬ರ ಸಂಚಿಕೆಯಿಂದ ಸಂಗ್ರಹಿತ)