‘ಮಯೂರ' ಹಾಸ್ಯ - ಭಾಗ ೮೦

‘ಮಯೂರ' ಹಾಸ್ಯ - ಭಾಗ ೮೦

ಅತ್ಯವಸರ ಲೋಪವಾಗುತ್ತದೆ…

ಹೊಸದಾಗಿ ಮದುವೆಯಾಗಿ ಬಂದ ಸೊಸೆ ಪದ್ಮಾವತಿಗೆ ಅತ್ತೆ ಮೀನಾಕ್ಷಮ್ಮ ಹೇಳಿದರು. ‘ಪದ್ದೂ... ಎಲ್ಲದಕ್ಕೂ ಅತ್ಯವಸರದ ನಿರ್ಧಾರ ಸಲ್ಲದು, ಅದು ಲೋಪವಾಗುತ್ತದೆ. ಯಾವುದೇ ವಿಚಾರವಾದರೂ ಸರಿ. ಮೊದಲು ಯೋಚನೆ ಮಾಡಿ, ನಂತರ ನಿಧಾರ ಮಾಡಬೇಕು' ಎಂದು. ಕನ್ನಡ ವಿಷಯದಲ್ಲಿ ಪಿ ಎಚ್ ಡಿ ಪಡೆದಿದ್ದ ಪದ್ಮಾವತಿ ‘ಅತ್ತೆ ಅತ್ಯವಸರ ಲೋಪ ಹೇಗಾಗುತ್ತದೆ? ಅತಿ + ಅವಸರ = ಅತ್ಯವಸರ. ಇದು ಯಣ್ ಸಂಧಿ. ಲೋಪ ಸಂಧಿ ಅಲ್ಲ. ಬೇಕಿದ್ರೆ ನನ್ನ ಗೈಡ್ ಗೆ ಕೇಳಿ...' ಎಂದು ಪೆಚ್ಚುಪೆಚ್ಚಾಗಿ ನುಡಿದಾಗ ಸೊಸೆಯ ಅತಿ ಬುದ್ದಿವಂತಿಕೆಗೆ ಅತ್ತೆ ಬೆಚ್ಚಿ ಬಿದ್ದಳು.

-ಶೈಲಜಾ ಕೇಕಣಾಜೆ

***

ಸೇರಿಸಿದ್ದು…

ನಾಗರಾಜನ ಮಗ ರಮೇಶ ಲೆಕ್ಕದಲ್ಲಿ ಬಹಳ ಹಿಂದಿದ್ದ. ಅಂದು ರಮೇಶ ಅಪ್ಪನಿಗೆ ತನ್ನ ಅಂಕಪಟ್ಟಿಯನ್ನು ಕೊಟ್ಟು ಸಹಿ ಮಾಡಲು ಹೇಳಿದ. ನೋಡಿದರೆ ಲೆಕ್ಕದಲ್ಲಿ ಅವನಿಗೆ ೯೦ ಅಂಕಗಳು ! ನಾಗರಾಜನಿಗೆ ಆಶ್ಚರ್ಯ ಮತ್ತು ಅನುಮಾನ. ಯಾವಾಗಲೂ ಲೆಕ್ಕದಲ್ಲಿ ೧೦ರ ಮೇಲೆ ಅಂಕ ತೆಗೆಯದಿದ್ದವನು ಈಗ ೯೦ ಅಂಕಗಳನ್ನು ತೆಗೆದಿದ್ದಾನೆ ಎಂದರೆ ಏನೊ ಮಾಡಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡ. ‘ನಿಜ ಹೇಳು, ಏನು ಮಾಡಿದ್ದೀಯಾ? ನೀನು ತೆಗೆದಿರುವ ೯ ಅಂಕಕ್ಕೆ ೦ ಸೇರಿಸಿದ್ದೀಯಾ. ನಿಜ ತಾನೆ?’ ಎಂದ. ರಮೇಶ ತಡವರಿಸುತ್ತಾ,’ಅಯ್ಯೋ ಇಲ್ಲ ಅಪ್ಪ, ನನ್ನ ನಂಬಿ, ದೇವರಾಣೆಗೂ ನಾನು ‘೦ ಸೇರಿಸಿಲ್ಲ. ನಾನು ಸೇರಿಸಿದ್ದು ೯’ ಎಂದ.

-ಎಂ ಕೆ ಮಂಜುನಾಥ

***

ಜಿಪುಣಾಗ್ರೇಸರು

ಪರಮೇಶಿ ಜಿಪುಣಾತಿ ಜಿಪುಣ. ಅವನು ಶೀಲಾಳನ್ನು ಪ್ರೀತಿಸುತ್ತಿದ್ದ. ಅಂದು ಶೀಲಾ ಹೇಳಿದಳು, 'ನಾಳೆ ಬೆಳಿಗ್ಗೆ ನಮ್ಮ ಮನೆಯ ಹತ್ತಿರ ಬಾ. ಅಪ್ಪ ಮಲಗಿದ ಮೇಲೆ ನಾನು ಒಂದು ರೂಪಾಯಿ ಕಾಯಿನ್ ಕೆಳಗೆಸೆಯುವೆ. ಅದರ ಶಬ್ಧ ಕೇಳಿ ಮೇಲೆ ಬಾ.' ಎಂದು. ಮರುದಿನ ಶೀಲಾ ಹೇಳಿದಂತೆ ಬೆಳಿಗ್ಗೆ ಬೇಗ ಬಂದು ಕಾಯುತ್ತಿದ್ದ ಪರಮೇಶಿ. ಶೀಲಾ ಕಾಯಿನ್ ಹಾಕಿ ಅರ್ಧ ಗಂಟೆಯ ನಂತರ ಮೇಲೆ ಹೋದ. ಶೀಲಾ ‘ಯಾಕಿಷ್ಟು ಲೇಟು ಮಾಡಿದೆ?’ ಎಂದಳು. ‘ನೀನು ಕೆಳಗೆ ಎಸೆದ ಕಾಯಿನ್ ಹುಡುಕುತ್ತಾ ಇದ್ದೆ ಕಣೆ' ಎಂದ ಪರಮೇಶಿ. ಶೀಲಾ ನಗುತ್ತಾ ಹೇಳಿದಳು. ‘ಅಯ್ಯೋ ಪೆದ್ದಾ, ನಾನು ಕಾಯಿನ್ ಗೆ ದಾರ ಕಟ್ಟಿ ಕೆಳಗೆ ಎಸೆದು, ಕೂಡಲೇ ಮೇಲೆಳೆದುಕೊಂಡೆ' ಎಂದಳು. ಪರಮೇಶಿ ಗರಬಡಿದವನಂತಾದ.

-ಮಂಡ್ಯ ಮ.ನಾ. ಉಡುಪ

***

ರೂಢಿ ಆಗೋಗುತ್ತೆ…

ನಂಜಮ್ಮ ಹೊಸದಾಗಿ ಮನೆ ಕೆಲಸಕ್ಕೆ ಸೇರಿದಳು. ನವದಂಪತಿ ಇಬ್ಬರೇ ಇದ್ದ ಮನೆಯದು. ಒಂಬತ್ತು ಗಂಟೆಗೆ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೊರಟುಬಿಡುತ್ತಿದ್ದರು. ಈ ವೇಳೆಗಾಗಲೇ ಇವರಿಬ್ಬರ ನಡುವೆ ಒಂದೆರಡು ವಾಗ್ವಾದಗಳು ನಡೆದು ಹೋಗುತ್ತಿದ್ದವು. ಒಂದು ದಿನ ವಾಗ್ವಾದ ತಾರಕಕ್ಕೇರಿ ಗಂಡ ಕೆಲಸಕ್ಕೆ ಹೋಗಿದ್ದ. ಹೆಂಡತಿ ಮುನಿಸಿಕೊಂಡು ತವರಿಗೆ ಹೊರಡಲು ಅಣಿಯಾಗಿದ್ದಳು. ನಂಜಮ್ಮನಿಗೆ ನಡೆದ ಗಲಾಟೆಯನ್ನು ಕಣ್ಣಲ್ಲಿ ನೀರು ಹರಿಸಿಕೊಂಡು ಹೇಳಿದಳು. ಅದಕ್ಕೆ ನಂಜಮ್ಮ ‘ಒಂದು ಗುಟ್ಟು ಹೇಳ್ತೀನಿ ಕೇಳಿ...ಒಂದ್ವರ್ಸ ಹಾಗೂ ಹೀಗೂ ತಳ್ಳಿ’ ಎಂದಳು. ಆಕೆ ‘ಆಮೇಲೆ' ಎಂದು ಕೇಳಿದಳು. ನಂಜಮ್ಮ ‘ಆಮ್ಯಾಕೆ ಅದೇ ರೂಢಿ ಆಗೋಗುತ್ತೆ ಅಷ್ಟೇ’ ಎಂದಳು.

-ಮಲ್ಲಿಕಾರ್ಜುನ ಸುರಧೇನುಪುರ

***

(‘ಮಯೂರ' ಡಿಸೆಂಬರ್ ೨೦೨೨ರ ಸಂಚಿಕೆಯಿಂದ ಆಯ್ದದ್ದು)