‘ಮಯೂರ' ಹಾಸ್ಯ - ಭಾಗ ೮೧

ಹೃದಯವನ್ನಲ್ಲ !
ಗುಂಡ ಮೂರು ವಾರ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಆಗಿದ್ದ. ಆಗ ಅಲ್ಲಿದ್ದ ಚಿಕ್ಕ ವಯಸ್ಸಿನ ಚಂದನೆಯ ನರ್ಸ್ ಮೇಲೆ ಆತನಿಗೆ ಪ್ರೇಮಾಂಕುರವಾಯಿತು. ‘ನೀನು ನನ್ನ ಹೃದಯ ಕದ್ದಿರುವೆ' ಅಂತ ಅವಳಿಗೊಂದು ಚೀಟಿ ಬರೆದು ಕೊಟ್ಟ. ಓದಿ ಗಾಬರಿಗೊಂಡ ನರ್ಸ್ ಹೇಳಿದಳು ‘ಇಲ್ಲ ಸರ್, ನಾವು ಕದ್ದಿದ್ದು ನಿಮ್ಮ ಕಿಡ್ನಿಯನ್ನು ! ಹೃದಯವನ್ನಲ್ಲ.’
-ಪ್ರಿಯಾಂಕ ವಿ ಎಚ್.
***
ತಾಜ್ ಮಹಲ್
ಶಾಲೆಯಲ್ಲಿ ರಮೇಶನಿಗೆ ಟೀಚರ್ ಕೇಳಿದರು. “ತಾಜ್ ಮಹಲ್ ಎಲ್ಲಿದೆ?” ರಮೇಶ, ‘ಆಗ್ರಾದಲ್ಲಿ ಟೀಚರ್' ಎಂದು ಉತ್ತರಿಸಿದ. ಟೀಚರ್ ‘ತಪ್ಪು, ಅದು ಬೆಂಗಳೂರಿನಲ್ಲಿದೆ.’ಎಂದರು. ರಮೇಶ, ‘ಇಲ್ಲ ಮಿಸ್, ಅದು ಆಗ್ರಾದಲ್ಲಿದೆ.’ ಎಂದ. ‘ನಾನು ಹೇಳಿದ್ದನ್ನು ಕೇಳಿಸಿಕೋ, ಅದು ಬೆಂಗಳೂರಿನಲ್ಲೇ ಇದೆ.’ ಎಂದು ಗದರಿದರು. ಮನೆಗೆ ಬಂದ ರಮೇಶ ಅಪ್ಪನಿಗೆ ಶಿಕ್ಷಕಿ ತಪ್ಪುತಪ್ಪಾಗಿ ಕಲಿಸುತ್ತಿರುವ ವಿಷಯ ತಿಳಿಸಿದ. ಸಿಟ್ಟಿಗೆದ್ದ ಅಪ್ಪ ಹಲ್ಲು ಕಡಿಯುತ್ತಾ ಮರುದಿನ ಶಾಲೆಗೆ ಬಂದು ಟೀಚರನ್ನು ವಿಚಾರಿಸಿದ. ಅದಕ್ಕೆ ಟೀಚರ್ ಹೇಳಿದ್ದು, ‘ಮೊದಲು ಬಾಕಿಯಿರುವ ನಿಮ್ಮ ಮಗನ ಆರು ತಿಂಗಳ ಫೀಸ್ ಕಟ್ಟಿ. ಎಲ್ಲಿಯವರೆಗೆ ಫೀಸ್ ಕಟ್ಟುವುದಿಲ್ಲವೋ ಅಲ್ಲಿಯ ತನಕ ತಾಜ್ ಮಹಲ್ ಬೆಂಗಳೂರಿನಲ್ಲಿಯೇ ಇರುತ್ತದೆ.’ ಎಂದರು. ಅಪ್ಪ ಮಗ ಬೆಪ್ಪಾಗಿ ನಿಂತರು.
-ಶಿವಲೀಲಾ ಸೊಪ್ಪಿನಮಠ
***
ಏನು ಮಾಡೋದು?
ಗುಂಡಿ ಎಂದಿನಂತೆ ತನ್ನ ಲೇಡಿಸ್ ಕ್ಲಬ್ ಕಡೆ ಹೋಗದೆ ಮುಖ ಸಪ್ಪಗೆ ಮಾಡಿಕೊಂಡು ಕ್ಯಾಂಡಿ ಕ್ರಷ್ ಆಡುತ್ತಿದ್ದಳು. ಪರಮೇಶಿಗೆ ಅಚ್ಚರಿ. ಕೇಳಿದ ‘ ಯಾಕೆ ಡಾರ್ಲಿಂಗ್ ಕ್ಲಬ್ ಗೆ ಹೋಗಲ್ವಾ?’ ಎಂದು. ಅವಳು ಮೊಬೈಲ್ ಪಕ್ಕಕ್ಕಿಟ್ಟು ಇವನತ್ತ ಕೆಂಗಣ್ಣು ಬಿಟ್ಟು ಹೇಳಿದಳು. ‘ಮುಂದಿನ ವಾರ ಅಲ್ಲಿ ಚುನಾವಣೆ. ನೀತಿ ಸಂಹಿತೆಯಂತೆ... ಇಂದಿನಿಂದ ಇನ್ನೊಬ್ಬರ ಬಗ್ಗೆ ಮಾತನಾಡುವಂತಿಲ್ಲ... ಮತ್ತೆ ಅಲ್ಲಿ ಹೋಗಿ ಇನ್ನೇನು ಮಾಡೋದು?’ ಈಗ ಗಂಡನಿಗೆ ಜ್ಞಾನೋದಯವಾಯಿತು. ಕನಿಕರದಿಂದ ಅವಳ ತಲೆ ನೇವರಿಸಿದ.
-ತಲಕಾಡು ಶ್ರೀನಿಧಿ
***
ಯಾರು ಧೈರ್ಯವಂತರು?
ಶೀನನ ಪತ್ನಿ ತನ್ನ ಪತಿಗೆ, ‘ನಿಮಗಿಂತ ನಾನೇ ಧೈರ್ಯವಂತೆ ಕಣ್ರಿ' ಎಂದಳು. ‘ನೀನು ಯಾವ ಮಹಾ ಧೈರ್ಯವಂತೆ?’ ಶೀನನ ಪ್ರಶ್ನೆ. ‘ನೋಡ್ರಿ ನೀವು ನನ್ನ ನೋಡೋದಕ್ಕೆ ಏಳೆಂಟು ಜನರ ಜೊತೆಯಾಗಿ ನಮ್ಮನೆಗೆ ಬಂದಿರಿ. ಆಮೇಲೆ ಮದುವೆಗೆ ನೂರಾರು ಜನರನ್ನು ಕರೆದುಕೊಂಡು ಬಂದಿರಿ. ಆದ್ರೆ ನಾನು ಮದುವೆಯಾದ ಮೇಲೆ ಒಬ್ಬಳೇ ನಿಮ್ಮನೆಗೆ ಬಂದೆ. ಹೇಳಿ ಯಾರು ಧೈರ್ಯವಂತರು?’
-ಶಂಕರೇಗೌಡ ತುಂಬಕೆರೆ
***
(‘ಮಯೂರ' ಜೂನ್ ೨೦೨೧ರ ಸಂಚಿಕೆಯಿಂದ ಆಯ್ದದ್ದು)