‘ಮಯೂರ' ಹಾಸ್ಯ - ಭಾಗ ೮೧
ಬುದ್ಧಿವಂತ
ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತು ತೂಕಡಿಸುತ್ತಿದ್ದ ನಂಜನನ್ನು ಕರೆದು ಬೋರ್ಡ್ ಮೇಲೆ ‘ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು’ ಎಂದು ಬರೆಯಲು ತಿಳಿಸಿದರು. ನಂಜ ನಿದ್ದೆಗಣ್ಣಲ್ಲಿ ಎದ್ದು ಬಂದು ಬೋರ್ಡ್ ಮೇಲೆ ಗುರುಗಳು ಹೇಳಿದ ಹಾಗೆಯೇ ಬರೆದ. ಆದರೆ, ಆರಂಭದ ‘ಉ' ಪದ ಬಿಟ್ಟು ಹೋಗಿತ್ತು. ‘ಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು' ಅದನ್ನು ಓದಿ ಗುರುಗಳು ಬೆಚ್ಚಿಬಿದ್ದರು.
-ವಿ. ಹೇಮಂತ ಕುಮಾರ್
***
ತಿಂಡಿ, ಊಟ ಉಚಿತ…
ಒಮ್ಮೆ ಆ ಊರಿನ ಅತೀ ಸೋಮಾರಿ ಮನುಷ್ಯ ದಿನ ಪತ್ರಿಕೆಯಲ್ಲಿ ‘ನನಗೆ ತುರ್ತಾಗಿ ಸೇವಕ ಬೇಕಾಗಿದ್ದಾರೆ. ಸಂಬಳ ಇಲ್ಲ. ಆದರೆ ಬೆಳಗಿನ ಉಪಹಾರ, ಎರಡು ಊಟ ನೀಡಲಾಗುವುದು' ಎಂದು ಜಾಹೀರಾತು ನೀಡಿದ. ಸರಿ, ತಪ್ಪದೆ ಊಟವಾದರೂ ಸಿಗುತ್ತದಲ್ಲ ಎಂದುಕೊಂಡವನೊಬ್ಬ ಈತನ ಎದುರು ಬಂದು ಕೈಕಟ್ಟಿ ನಿಂತು, ‘ಸ್ವಾಮಿ, ನೀವು ಕೊಟ್ಟ ಜಾಹೀರಾತು ಓದಿದೆ. ನನ್ನ ಒಪ್ಪಿಗೆ ಇದೆ. ಕೆಲಸ ಏನು? ಎಂದ. ಆಗ ಆ ಮಹಾ ಸೋಮಾರಿ, ‘ಪಕ್ಕದ ಬೀದಿಯಲ್ಲಿರುವ ಶ್ರೀ ಮಠದಿಂದ ಬೆಳಗಿನ ಎರಡು ಉಪಹಾರ, ಮದ್ಯಾಹ್ನ, ರಾತ್ರಿಗೆ ಎರಡೆರಡು ಊಟ ತರಬೇಕು. ಒಂದು ನಿನಗೆ ಮತ್ತೊಂದು ನನಗೆ. ಇದಿಷ್ಟೇ ನೀನು ಮಾಡಬೇಕಾಗಿರುವ ಕೆಲಸ.’ ಎಂದ.
-ಅರವಿಂದ ಜೋಷಿ
***
ಖುಷಿಯ ಮೂಲ
ಗಿರೀಶ ಹಾಗೂ ಗೌರೀಶ ಆತ್ಮೀಯ ಸ್ನೇಹಿತರು. ಹಿಂದಿನ ದಿನ ಬಹಳ ದುಃಖದಲ್ಲಿದ್ದ ಗಿರೀಶ ಇಂದು ಖುಷಿಯಾಗಿದ್ದುದನ್ನು ನೋಡಿ ಗೌರೀಶ ಕೇಳಿದ. ‘ಯಾಕೋ ಗಿರಿ. ನಿನ್ನೆ ತುಂಬಾ ಬೇಸರದಲ್ಲಿದ್ದೆ. ಇವತ್ತು ಮಾತ್ರ ಸಂತೋಷದಿಂದ ಓಡಾಡಿಕೊಂಡಿದ್ದೀಯ?’ ಎಂದು. ಅದಕ್ಕೆ ಗಿರೀಶ ಅಷ್ಟೇ ಉತ್ಸಾಹದಿಂದ ನುಡಿದ. ‘ನಿನ್ನೆ ನನ್ನ ಹೆಂಡತಿ ೫೦ ಸಾವಿರ ರೂಪಾಯಿ ಕೊಟ್ಟು ಸೀರೆ ತೆಗೆದುಕೊಂಡಿದ್ದಳು.’ ‘ಮತ್ತೆ ? ಇವತ್ಯಾಕೆ ಈ ಖುಷಿ ?’ ಕೇಳಿದ ಗೌರೀಶ. ‘ಇವತ್ತು ಅವಳು ಆ ಸೀರೆ ಉಟ್ಟುಕೊಂಡು ನಿನ್ನ ಹೆಂಡತಿಗೆ ತೋರಿಸಲು ಹೋಗಿದ್ದಾಳೆ.’ ಎಂದ ಗಿರೀಶ.
-ಸುಧಾ ಎಚ್ ಎಸ್
***
ಆಪರೇಷನ್ ಸಕ್ಸೆಸ್ !
ವೃದ್ಧ ಸೋಮಶೇಖರಯ್ಯನವರು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ್ದರು. ದೊಡ್ಡ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅವರ ಅಳಿಯನೇ ಅದನ್ನು ನಿರ್ವಹಿಸಬೇಕಿದ್ದ ವೈದ್ಯ ಶಸ್ತ್ರ ಚಿಕಿತ್ಸೆ ಆರಂಭಿಸಬೇಕೆನ್ನುವಾಗ ಮಾವ ಅವರ ಕೈ ಹಿಡಿದು, ‘ಅಳಿಯಂದ್ರೇ ನೀವು ಯಶಸ್ವಿಯಾಗಿಯೇ ಆಪರೇಷನ್ ಮಾಡುವಿರೆಂಬ ಭರವಸೆ ನನಗಿದೆ. ಒಂದೊಮ್ಮೆ ದುರದೃಷ್ಟವಶಾತ್ ನನಗೇನಾದರೂ ಆದರೆ ನಿಮ್ಮ ಅತ್ತೆ ನಿಮ್ಮೊಂದಿಗೇ ನೆಲೆಸುತ್ತಾಳೆ. ಅವಳನ್ನು ಜತನದಿಂದ ನೋಡಿಕೊಳ್ಳಿ.' ಎಂದು ಅರುಹಿದರು. ಆವೇಶಭರಿತರಾದವರಂತೆ ಅಳಿಯ ವೈದ್ಯ ಬಹಳ ಅಸ್ಥೆಯಿಂದ ಶಸ್ತ್ರಕ್ರಿಯೆ ನಡೆಸಿದರು ಮತ್ತು ಆಪರೇಷನ್ ಅದ್ಭುತ ರೀತಿಯಲ್ಲಿ ಯಶಸ್ವಿಯಾಯಿತು.
-ರಮಣ್ ಶೆಟ್ಟಿ ರೆಂಜಳ್
***
(‘ಮಯೂರ' ಜನವರಿ ೨೦೨೨ ರ ಸಂಚಿಕೆಯಿಂದ ಆಯ್ದದ್ದು)