‘ಮಯೂರ' ಹಾಸ್ಯ - ಭಾಗ ೮೨
ಟೆನ್ ಟೆನ್
ಹಳ್ಳಿಯ ಗೌಡನೊಬ್ಬ ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಹೊಸದಾಗಿ ಬಿಡುಗಡೆಯಾದ ಒಂದು ಪ್ರತಿಷ್ಟಿತ ಕಂಪೆನಿಯ ಕೈಗಡಿಯಾರವನ್ನು ಕೊಂಡು ಅದಕ್ಕೆ ಬಂಗಾರದ ಚೈನು ಹಾಕಿಸಿಕೊಂಡು, ಎಲ್ಲರಿಗೂ ಕಾಣುವಂತೆ ತನ್ನ ಎಡಗೈಯನ್ನೇ ಮುಂದೆ ಮಾಡುತ್ತಾ ನಡೆದಿದ್ದ. ಶಾಲಾ ಬಾಲಕನೊಬ್ಬ ಬೀದಿಯಲ್ಲಿ ಹೋಗುತ್ತಿರುವಾಗ ಈ ಗೌಡಪ್ಪ ಎದುರಿಗೆ ಬರುತ್ತಿದ್ದ. ಶಾಲಾ ಸಮಯವಾಗಿದ್ದರಿಂದ ಆ ಹುಡುಗ ಗೌಡಪ್ಪನನ್ನು ‘ಅಜ್ಜಾ, ಟೈಂ ಎಷ್ಟಾಯ್ತು?’ ಎಂದು ಕೇಳಿದ. ಅವನು ‘ತಮ್ಮಾ ! ಇಂದೇ ಹೊಸ ವಾಚ್ ಕೊಂಡು ಬಂದಿದ್ದೀನಿ. ನೀನೇ ನೋಡಿ ನನಗೂ ಸಮಯ ಹೇಳು' ಎಂದು ಎಡಗೈಯನ್ನು ಮುಂದೆ ಚಾಚಿದ. ಹುಡುಗ ‘ ಟೆನ್ ಟೆನ್' ಎಂದು ಹೇಳಿದ. ಆಗ ಆ ಗೌಡ, ‘ನನಗೆ ಕಿವಿ ಕೇಳ್ತಾವೆ ಕಣ್ಲಾ. ಒಂದೇ ಸಲ ಹೇಳಿದರೆ ಸಾಕು ! ಎರಡು ಸಲ ಯಾಕ್ ಹೇಳ್ತೀಯಾ?’ ಎಂದ. ಹುಡುಗ ನಗುತ್ತಾ ಶಾಲೆಗೆ ಓಡಿದ.
-ಆರ್ ಡಿ ಕುಲಕರ್ಣಿ
***
ಖುಷಿಯ ಗುಟ್ಟು
ನೆರೆಮನೆಯಾತ ಪರಮೇಶಿಗೆ ‘ಇದೇನಯ್ಯಾ... ದಿನವೂ ನಿನ್ನ ಮನೆಯಿಂದ ಇಬ್ಬರೂ ಅಷ್ಟು ಜೋರಾಗಿ ನಗುವ ಶಬ್ಧ ಕೇಳಿ ಬರುತ್ತಿದೆ? ನಿಮ್ಮ ಈ ಖುಷಿ ಜೀವನದ ಗುಟ್ಟು ನನಗೂ ಸ್ವಲ್ಪ ಹೇಳಿ ಕೊಡು' ಎಂದು ಕೇಳಿದ. ಅದಕ್ಕೆ ಪರಮೇಶಿ ‘ಹೋ. ಅದಾ? ನಿತ್ಯ ಒಂದಲ್ಲಾ ಒಂದು ವಿಷಯಕ್ಕೆ ಅವಳು ಜಗಳ ತೆಗೆಯುತ್ತಾಳೆ. ಕೋಪ ಬಂದಾಗ ಕೈಗೆ ಸಿಕ್ಕ ಪಾತ್ರೆಯನ್ನು ನನ್ನತ್ರ ಎಸೆಯುತ್ತಾಳೆ. ಆ ರೀತಿ ಎಸೆದ ಪಾತ್ರೆ ನನಗೆ ತಾಗಿದರೆ ಅವಳು ಜೋರಾಗಿ ನಗುತ್ತಾಳೆ. ಒಂದು ವೇಳೆ ಅದು ನನಗೆ ತಾಗದಿದ್ದರೆ ನಾನೂ ಅಷ್ಟೇ ಜೋರಾಗಿ ನಗುತ್ತೇನೆ. ಇದೇ ಕಣಯ್ಯಾ ನಮ್ಮ ಖುಷಿ ಜೀವನದ ಗುಟ್ಟು' ಎಂದ.
-ಅರವಿಂದ ಜಿ.ಜೋಷಿ
***
ತುಂಬಾ ಹಸಿದವ
ರಮೇಶ-ಯೋಗೇಶ ಆಪ್ತ ಸ್ನೇಹಿತರು. ಒಮ್ಮೆ ಪಾರ್ಕಿನಲ್ಲಿ ಕುಳಿತಿದ್ದಾಗ ಅವರಿಗೆ ಹಸಿವಾಗಿ ಏನಾದರೂ ತಿನ್ನಬೇಕೆಂದು ಅನಿಸಿತು. ಕಡ್ಲೆಕಾಯಿ ಮಾರುವವನಿಂದ ಒಂದು ಕಿಲೋ ಕಡಲೆಕಾಯಿ ಖರೀದಿಸಿ ತಿನ್ನಲು ಪ್ರಾರಂಭಿಸಿದರು. ರಮೇಶ ತಾನು ತಿಂದ ಕಡಲೆಕಾಯಿ ಸಿಪ್ಪೆಯನ್ನೆಲ್ಲಾ ಯೋಗೇಶನ ಮುಂದೆ ಹಾಕತೊಡಗಿದ. ಎಲ್ಲಾ ತಿಂದು ಮುಗಿಸಿದ ನಂತರ ಅವನು, ‘ನೀನು ತುಂಬಾ ಹಸಿದಿದ್ದೆ ಅನ್ಸುತ್ತೆ. ಅದ್ಕೆ ಎಷ್ಟೊಂದು ತಿಂದಿದ್ದೀಯಾ ನೋಡು' ಎಂದು ಅವನ ಮುಂದಿದ್ದ ಸಿಪ್ಪೆಯನ್ನು ತೋರಿಸಿ ಹೇಳಿದ. ಸ್ವಲ್ಪ ಬುದ್ಧಿವಂತನಿದ್ದ ಯೋಗೇಶ, ‘ನೀನು ನನಗಿಂತ ಜಾಸ್ತಿ ಹಸಿದಿದ್ದೆ. ನಾನು ಸಿಪ್ಪೆಯನ್ನಾದ್ರೂ ಬಿಟ್ಟಿರುವೆ. ನೀನು ಅದನ್ನೂ ಬಿಟ್ಟಿಲ್ಲ' ಎಂದಾಗ ರಮೇಶ ಮಾತಿಲ್ಲದೆ ಕುಳಿತ.
ಪ ನಾ ಹಳ್ಳಿ ಹರೀಶ್ ಕುಮಾರ್
***
ವಯಸ್ಸು
ಹೆಂಡತಿ ಕನ್ನಡಿ ಮುಂದೆ ನಿಂತು ಅಲಂಕಾರ ಮಾಡಿಕೊಳ್ಳುತ್ತಾ ಗಂಡನಿಗೆ ಕೇಳಿದಳು ‘ರೀ, ನಾನೀಗ ಎಷ್ಟು ವರ್ಷದವಳ ತರಹ ಕಾಣಿಸ್ತೀನಿ ಹೇಳಿ' ಗಂಡ ಹೇಳಿದ. ‘ಕೂದಲು ನೋಡಿದರೆ ೩೦, ಮೈಕಾಂತಿ ನೋಡಿದರೆ ೨೫, ಮೈಮಾಟ ನೋಡಿದರೆ ೨೦’ ಹೆಂಡತಿಗೆ ಖುಷಿಯೋ ಖುಷಿ ನಾಚುತ್ತಾ, ‘ಹೋಗಿಪ್ಪಾ, ನೀವೊಂದು ...ಸುಮ್ನೆ ಏನೇನೋ ಹೇಳ್ತೀರಾ..' ಅಂದಳು. ಕೂಡಲೇ ಗಂಡ ಹೇಳಿದ ‘ಇರು ಇರು ಎಲ್ಲಾ ಟೋಟಲ್ ಮಾಡ್ಬೇಕು.!’
-ವಿ.ಹೇಮಂತ ಕುಮಾರ್
***
(‘ಜುಲೈ ೨೦೨೨ ರ ‘ಮಯೂರ' ಪತ್ರಿಕೆಯಿಂದ ಆಯ್ದದ್ದು)