‘ಮಯೂರ' ಹಾಸ್ಯ - ಭಾಗ ೮೪

‘ಮಯೂರ' ಹಾಸ್ಯ - ಭಾಗ ೮೪

ಹೆಂಡತಿಗೆ ಕೊಡುವಷ್ಟೇ ಕೊಡಿ…

ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ ಪಕ್ಕದ ಮನೆ ಕಡೆ ನೋಡಿದಾಗ ರಮೆಶ ಪಾತ್ರೆಗಳನ್ನು ತಿಕ್ಕಿ ತೊಳೆದು ಇಡುತ್ತಿದ್ದರು. ಅವರಿಗೆ ಅವಮಾನ ಮಾಡಲು ಕಾಯುತ್ತಿದ್ದ ಗೀತಾ, ‘ಎಷ್ಟು ಚೆನ್ನಾಗಿ ಪಾತ್ರೆ ತೊಳಿತೀರಿ? ನಮ್ಮ ಮನೆಯಲ್ಲೂ ರಾಶಿ ಪಾತ್ರೆ ಬಿದ್ದಿದೆ. ಸ್ವಲ್ಪ ತಿಕ್ಕಿ ಕೊಟ್ಟರೆ ನನಗೂ ಸಹಾಯವಾಗುತ್ತೆ. ನಿಮಗೆ ಏನು ಕೊಡಬೇಕು ಹೇಳಿ ಕೊಡುತ್ತೇನೆ' ಎಂಡು ಛೇಡಿಸಿದಳು. ರಮೇಶ ಯಾವ ಸಂಕೋಚವೂ ಇಲ್ಲದೆ, ‘ಓ.. ಅದಕ್ಕೇನಂತೆ? ಇದು ಮುಗಿದ ಕೂಡಲೇ ನಿಮ್ಮ ಪಾತ್ರೆ ತೊಳೆದು ಕೊಡುವೆ. ನನ್ನ ಹೆಂಡತಿ ಏನು ಕೊಡುತ್ತಾಳೋ ಅದನ್ನೇ ನೀವೂ ಕೊಟ್ಟರೆ ಸಾಕು' ಎಂದ. ಅಲ್ಲಿಂದ ಗೀತಾ ಕಾಲ್ಕಿತ್ತಳು.

-ಜಯಮಾಲಾ ಪೈ

***

ಒಳ್ಳೆ ಐಡಿಯಾ

ನಡುರಾತ್ರಿ ಒಬ್ಬ ಹುಡುಗಿ ಒಂಟಿಯಾಗಿ ನಡೆದು ಹೋಗುತ್ತಿದ್ದಳು. ಅವಳು ಒಂಟಿಯಾಗಿ ಹೋಗುವುದನ್ನು ನೋಡಿದ ಇಬ್ಬರು ಪುಂಡ ಹುಡುಗರು ಅವಳನ್ನು ಕಿಚಾಯಿಸಬೇಕೆಂದು ಹಿಂದೆ ಹಿಂದೆ ಹೋದರು. ಅವಳು ಯಾವ ಅಂಜಿಕೆಯೂ ಇಲ್ಲದೆ ಹೋಗುವುದನ್ನು ಕಂಡು ‘ಏ ಹುಡುಗಿ, ಇಷ್ಟು ರಾತ್ರಿಯಲ್ಲಿ ಒಬ್ಬಳೇ ಹೊರಟಿರುವಿ? ನಾವು ಹಿಂದೆ ಬರುತ್ತಿದ್ದರೂ ನಿಮಗೆ ಭಯವಿಲ್ಲವೇ? ಎಂದು ಕೇಳಿದರು. ಆಕೆ ಒಂದಿನಿತೂ ಗಾಬರಿಯಾಗದೆ ನಗುನಗುತ್ತಲೇ, ‘ಇಲ್ಲ ಮಿಸ್ಟರ್.. ನಾನು ಬದುಕಿದ್ದಾಗ ಎಲ್ಲದ್ದಕ್ಕೂ ಹೆದರುತ್ತಿದ್ದೆ. ಈಗ ಯಾಕೆ ಹೆದರಬೇಕು ಹೇಳಿ...' ಎಂದು ಹೇಳಿ ಮುಗಿಸುವಷ್ಟರಲ್ಲಿ ಆ ಹುಡುಗರು ಅಲ್ಲಿಂದ ಹೇಳ ಹೆಸರಿಲ್ಲದೇ ಮಂಗ ಮಾಯ !

-ಅರವಿಂದ ಜಿ.ಜೋಷಿ

***

ಫೇಲಾದ್ರೂ ಬೈಕ್

ತಂದೆ ತನ್ನ ಮಗನಿಗೆ ಹೇಳಿದ, ‘ಮಗಾ, ಈ ವರ್ಷ ನೀನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆದ್ರೆ ನಿನಗೊಂದು ಹೊಸಾ ಬೈಕ್ ಕೊಡಿಸ್ತೇನೆ' ಅದಕ್ಕೆ ಮಗ, ‘ಅಪ್ಪಾ, ಫೇಲಾದ್ರೆ ಕೊಡಿಸಲ್ವಾ?’ ಎಂದು ಪ್ರಶ್ನಿಸಿದ. ಅದಕ್ಕೆ ಅವನ ತಂದೆ ನಗುತ್ತಲೇ ‘ಫೇಲಾದ್ರೂ ಕೊಡಿಸ್ತೇನೆ ಕಂದಾ’ ಎಂದ. ಅಪ್ಪನ ಮಾತು ಕೇಳಿ ಮಗ ಕುಣಿಯುತ್ತಾ ಮನೆಯಿಂದ ಹೊರಗೆ ಓಡಿದ. ಇದನ್ನು ಕೇಳಿಸಿಕೊಂಡ ಅವನ ಹೆಂಡತಿ, ‘ರೀ, ನಿಮಗೇನು ತಲೆಕೆಟ್ಟಿದೆಯಾ? ಫೇಲಾದ್ರೆ ಯಾಕ್ರೀ ಬೈಕ್ ಕೊಡಿಸ್ತೀರಿ ಅವನಿಗೆ?’ ಎಂದಳು. ಅದಕ್ಕೆ ಅವಳ ಗಂಡ ‘ಪಾಸಾದ್ರೆ ಕಾಲೇಜಿಗೆ ಹೋಗೋಕೆ, ಫೇಲಾದ್ರೆ ನನ್ನ ಹಾಗೆ ಹಾಲು ಮಾರೋಕೆ'

-ಪ ನಾ ಹಳ್ಳಿ ಹರೀಶ್ ಕುಮಾರ್

***

ನಾಲ್ಕು ಸಾವು

ಗಣಿತ ಶಿಕ್ಷಕಿ ರಮೇಶನಿಗೆ ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳಲು ಹೇಳಿದರು. ರಮೇಶ ೧,೨,೩,೫,೬,೭,೮,೯,೧೦ ಎಂದು ಹೇಳಿ ಮುಗಿಸಿದ. ಶಿಕ್ಷಕಿ ‘ನಾಲ್ಕು ಎಲ್ಲೋ? ಹಾರಿಸಿ ಬಿಟ್ಟಿಯಲ್ಲಾ?’ ಎಂದರು. ರಮೇಶ ‘ನಾಲ್ಕು ಸತ್ತೋಗಿದೆ ಟೀಚರ್' ಎಂದ ಗಂಭೀರವಾಗಿ. ‘ನಾಲ್ಕು ಸತ್ತೋಗಿದೆಯಾ? ಯಾರೋ ಹೇಳಿದ್ದು?’ ಎಂದರು ಆಶ್ಚರ್ಯದಿಂದ. ರಮೇಶ ಹೇಳಿದ ‘ ನೀವು ಪೇಪರ್ ಓದಲ್ವಾ ಟೀಚರ್, ನಿನ್ನೆನೇ ಪೇಪರ್ ನಲ್ಲಿ ಬಂತಲ್ಲ. ರಸ್ತೆ ಅಪಘಾತಕ್ಕೆ ನಾಲ್ಕು ಸಾವು ಅಂತ...' ಎಂದ. ಶಿಕ್ಷಕಿ ಸುಸ್ತು.

-ಅನುಪಮಾ ವಸ್ತ್ರದ್

***

(‘ಮಯೂರ' ಜನವರಿ ೨೦೨೩ ಸಂಚಿಕೆಯಿಂದ ಆಯ್ದದ್ದು)