‘ಮಯೂರ' ಹಾಸ್ಯ - ಭಾಗ ೮೫

‘ಮಯೂರ' ಹಾಸ್ಯ - ಭಾಗ ೮೫

ಸಿಮ್ ಕಾರ್ಡ್ ಹಾಕಿ

ಪ್ರತಿ ದಿನ ಆಫೀಸಿಗೆ ಹೋಗುವಾಗ ನನ್ನ ಬ್ಯಾಗ್ ಎಲ್ಲಿ, ನನ್ನ ಪರ್ಸ್ ಎಲ್ಲಿ, ವಾಚು ಸಿಗ್ತಾ ಇಲ್ಲ... ಅಂತೆಲ್ಲಾ ಮಡದಿಗೆ ಕೇಳುತ್ತಿರುತ್ತೇನೆ. ಆವತ್ತು ಎಲ್ಲವೂ ಸಿಕ್ಕ ಮೇಲೆ ತಿಂಡಿ ತಿನ್ನುತ್ತ, ಟೀವಿ ಆನ್ ಮಾಡೋಣ ಎಂದರೆ ರಿಮೋಟ್ ಸಿಗಲಿಲ್ಲ ! ತುಸು ರೇಗುತ್ತಲೇ ರಿಮೋಟ್ ಗಾಗಿ ತಡಕಾಡಿದೆ. ಕೇಳಿದ್ದನ್ನೆಲ್ಲಾ ತಂದುಕೊಟ್ಟು ಅವಳಿಗೂ ಸಾಕಾಯ್ತು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಮಗ ಗಣಪ, ‘ಅಪ್ಪ, ನಿಮ್ಮ ಕಷ್ಟ ನೋಡಲು ಆಗುತ್ತಿಲ್ಲ. ದಯವಿಟ್ಟು ನಿಮ್ಮ ಎಲ್ಲಾ ವಸ್ತುಗಳಿಗೂ ಒಂದೊಂದೂ ಸಿಮ್ ಕಾರ್ಡ್ ಹಾಕಿಸಿ ಬಿಡಿ. ಸಿಗದೇ ಇದ್ದಾಗ ಮಿಸ್ ಕಾಲ್ ಕೊಟ್ಟು ಹುಡುಕಬಹುದು.’ ಎಂದ !

-ಹರವೆ ಸಂಗಣ್ಣ ಪ್ರಕಾಶ್

***

ಹಾಲಿಡೇ

ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಧಾರವಾಡ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಒಂದರಿಂದ ಸ್ಪರ್ಧಿಸಿ, ನಮ್ಮ ಪರಿಚಿತರೊಬ್ಬರು ಆರಿಸಿ ಬಂದರು. ಅವರಿಗೆ ಓದಲು ಬರೆಯಲು ಬಾರದು ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿತ್ತು. ಈ ಶಾಸಕರು ತಮ್ಮ ಹಿಂಬಾಲಕರೊಂದಿಗೆ ಒಮ್ಮೆ ಬೆಂಗಳೂರಿಗೆ ಹೋಗುತ್ತಿದ್ದರು. ದಾರಿಯಲ್ಲಿ ತಿಂಡಿ ಮಾಡಲು ಹೋಟೇಲ್ ಮುಂದೆ ಕಾರು ನಿಲ್ಲಿಸಿ ಒಳಗೆ ಹೋದರು. ಅವರಿಗೆ ಮೆನು ಓದಲು ಬರುತ್ತಿಲ್ಲವಾದ್ದರಿಂದ ಎಲ್ಲೇ ಹೋದರೂ ‘ಏನಿದೆ ತಿನ್ನೋಕೆ?’ ಎಂದು ಕೇಳುತ್ತಿದ್ದರು. ಹಾಗೇ ಅಂದೂ ಕೇಳಿದರು. ವೇಟರ್ ‘ ಈ ದಿನ ಹಾಲಿಡೇ ಸರ್' ಎಂದಿದ್ದಕ್ಕೆ ನಮ್ಮ ಶಾಸಕರು, ‘ಸರಿ, ಅದನ್ನೇ ನಾಲ್ಕು ಪ್ಲೇಟ್ ಕೊಡಪ್ಪ' ಎಂದರು. 

-ಪ್ರಕಾಶ್ ಮಲ್ಕಿಒಡೆಯರ್

***

ತರಕಾರಿ !

ನಮ್ಮ ಬ್ಯಾಂಕಿನ ಮ್ಯಾನೇಜರ್ ಬಿಹಾರ ಮೂಲದವರು. ಅಂದು ಸಂಜೆ ಮನೆಗೆ ಹೋದಾಗ ಅವರ ಪತ್ನಿ ಬ್ಯಾಗಿನಲ್ಲಿದ್ದ ಲಂಚ್ ಬಾಕ್ಸ್ ಜೊತೆಗೆ ರೂ ೧೫೦ರ ಬೆಲೆಯ ಕ್ಯಾಡ್ಬರೀಸ್ ಚಾಕ್ಲೆಟ್ ನೋಡಿ, ಇಷ್ಟು ಬೆಲೆಯ ಚಾಕ್ಲೆಟ್ ಯಾಕೆ ತಂದ್ರಿ? ಈ ಹಣದಲ್ಲಿ ಒಂದು ವಾರದ ಭಾಜೀ (ತರಕಾರಿ) ಆದ್ರೂ ಬರ್ತಿತ್ತು.’ ಎಂದರಂತೆ. ಅದಕ್ಕೆ ಮ್ಯಾನೇಜರ್ ‘ಆ ಚಾಕ್ಲೇಟ್ ಅನ್ನು ಹಾಗೇ ಬ್ಯಾಗಿಗೆ ಹಾಕು. ದೀಪಾವಳಿಗೆಂದು ಎಲ್ಲಾ ಸಿಬ್ಬಂದಿಗೆ ಚಾಕ್ಲೇಟ್ ಕೊಟ್ಟಿದ್ದಾರೆ. ನಾಳೆ ಅದನ್ನು ವಾಪಾಸ್ ಕೊಟ್ಟು ಅದರ ಬದಲಾಗಿ ತರಕಾರಿ ಕೊಡಲು ಹೇಳುವೆ.’ ಎಂದು ಪತ್ನಿಗೆ ಹೇಳಿದರಂತೆ. 

-ನಗರ ಗುರುದೇವ್ ಭಂಡಾರ್ಕರ್

***

ಬ್ಯೂಟಿಫುಲ್

ತಂಗಿಯ ಮಗಳು ಆನಂದಿಗೆ ಹೋಮ್ ವರ್ಕ್ ಮಾಡಿಸುತ್ತಿದ್ದೆ. ಅವಳ ಇಂಗ್ಲಿಷ್ ಪದಸಂಪತ್ತನ್ನು ಬೆಳೆಸಲು ಕೆಲವು ಶಬ್ಧಗಳನ್ನು ನಾನು ಉಚ್ಛರಿಸುವುದು, ಅವಳು ಅದರ ಸ್ಪೆಲ್ಲಿಂಗ್ ಬರೆಯುವುದು ನಡೆದಿತ್ತು. ತುಂಬಾ ಚೂಟಿಯಾಗಿರುವ ಆರು ವರ್ಷದ ಆನಂದಿ. ಒಂದೊಂದು ಶಬ್ದಕ್ಕೂ ಏನೇನೋ ತಮಾಷೆ ಮಾಡುತ್ತ ಬರೆಯುತ್ತಿತ್ತು. ‘ಹೋಮ್’ ಬರೆಯಲು ಹೇಳಿದೆ. ‘ನಮ್ಮ ಹೋಮಾ, ನಿಮ್ಮ ಹೋಮಾ?’ ಅನ್ನೋದು. ‘ವಿಂಡೊ ಬರಿ' ಅಂದರೆ ‘ಬೆಡ್ ರೂಮ್ ವಿಂಡೋ? ಹಾಲ್ ವಿಂಡೋ? ಎಂದು ಕೇಳುವುದು. ‘ಫ್ಯಾನ್’ ಎಂದರೆ, ‘ಟೇಬಲ್ ಫ್ಯಾನ್? ಸೀಲಿಂಗ್ ಫ್ಯಾನ್' ಎನ್ನುವುದು ನಡೇದೇ ಇತ್ತು. ನಗು ಬಂದರೂ ನಗದೇ ಪಾಠ ಮಾಡುತ್ತಿದ್ದೆ. ‘ಬ್ಯೂಟಿಫುಲ್' ಬರೆಯಲು ಹೇಳಿದೆ. ‘ಥ್ಯಾಂಕ್ಯೂ ದೊಡ್ದಮ್ಮ’ ಅಂದಳು. ‘ಬ್ಯೂಟಿಫುಲ್' ಮತ್ತೊಮ್ಮೆ ಹೇಳಿದೆ. ‘ಥ್ಯಾಂಕ್ಯೂ ಸೋ ಮಚ್ ದೊಡ್ಡಮ್ಮ, ಐ ನೋ.. ಐ ಆಮ್ ಬ್ಯೂಟಿಫುಲ್' ಅಂದಾಗ ತಡೆಯಲಾಗದೆ ಅವಳ ಮುದ್ದು ಮುಖವನ್ನು ಬೊಗಸೆಯಲ್ಲಿ ಹಿಡಿದು ಮುತ್ತು ಕೊಟ್ಟೆ. 

-ಸುವರ್ಣಾ ಮಠ

*** 

(‘ಮಯೂರ' ಫೆಬ್ರವರಿ ೨೦೨೩ ರ ಸಂಚಿಕೆಯಿಂದ ಆಯ್ದದ್ದು)