‘ಮಯೂರ' ಹಾಸ್ಯ - ಭಾಗ ೮೭

ಮಂಗಲ್ - ಪೊಂಗಲ್
ಆರು ವರ್ಷದ ಸಾನ್ವಿಯನ್ನು ಕರೆದುಕೊಂಡು ಮನೆಯ ಪಕ್ಕದ ಗಾರ್ಡನ್ನಿಗೆ ಹೋಗಿದ್ದೆ. ಅಲ್ಲಿ ನಮ್ಮ ಯಜಮಾನರ ಸಹೋದ್ಯೋಗಿಯೊಬ್ಬರು ತಮ್ಮ ಮಗಳನ್ನು ಆಟ ಆಡಿಸಲು ಬಂದಿದ್ದರು. ಸಾನ್ವಿಯನ್ನು ನೋಡಿ ‘ಯಾರು ಈ ಮಗು?’ ಎಂದು ಹಿಂದಿಯಲ್ಲಿ ಕೇಳಿದರು. ‘ತಂಗಿಯ ಮಗಳು’ ನಾನು ಹೇಳಿದೆ. ‘ನಾಮ್ ಕ್ಯಾ ಹೈ ಬೇಟಾ?’ ಎಂದರು. ಅವಳು ತನ್ನ ಹೆಸರು ಹೇಳಿ ಅವರ ಹೆಸರನ್ನೂ ಕೇಳಿದಳು. ಅವರು ‘ಮೈ ನೇಮ್ ಈಸ್ ಮಂಗಲ್' ಎಂದಳು. ಅದಕ್ಕೆ ಸಾನ್ವಿ ‘ಆಪ್ ಮಂಗಲ್ ಹೋ ತೊ, ಪೊಂಗಲ್ ಕೌನ್? ಆಪ್ ಕಾ ಭಾಯಿ?’ ಎಂದಳು. ಅವಳ ಹಾಸ್ಯ ಪ್ರಜ್ಞೆಗೆ ಅಲ್ಲಿದ್ದವರೆಲ್ಲಾ ನಕ್ಕರು.
-ಸುವರ್ಣಾ ಚಿದಾನಂದ
***
ಮಿಸ್ಟರ್ - ಸಿಸ್ಟರ್
ಕೈಫ್ ನಮ್ಮ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಹುಡುಗ. ಒಮ್ಮೊಮ್ಮೆ ಅವನಾಡುವ ಮಾತುಗಳು ಇಡೀ ತರಗತಿಯನ್ನು ನಗೆಗಡಲಲ್ಲಿ ಮುಳುಗಿಸುತ್ತವೆ. ಒಮ್ಮೆ ನಾನ್ಯ್ ತರಗತಿಯಲ್ಲಿ ಮಿಸ್ಟರ್ ಮತ್ತು ಮಿಸ್ಟ್ರೇಸ್ ಪದಗಳ ಬಳಕೆಯ ಬಗ್ಗೆ ವಿವರಿಸುತ್ತಿದ್ದೆ. ‘ಗಂಡು ಮಕ್ಕಳನ್ನು ಕರೆಯುವಾಗ ‘ಮಿಸ್ಟರ್' ಎಂದು ಸಂಬೋಧಿಸಬೇಕು. ಹಾಗಾದರೆ ಹೆಣ್ಣು ಮಕ್ಕಳನ್ನು ಏನೆಂದು ಸಂಬೋಧನೆ ಮಾಡಬೇಕು?’ ಎಂದು ಕೇಳಿದೆ. ಕೈಫ್ ಕೈ ಎತ್ತಿದ. ‘ಗಂಡು ಮಕ್ಕಳು ಮಿಸ್ಟರ್ ಆದರೆ ಹೆಣ್ಣು ಮಕ್ಕಳು ಸಿಸ್ಟರ್' ಎಂದಾಗ ಇಡೀ ತರಗತಿಯಲ್ಲಿ ನಗು ಅಲೆಅಲೆಯಾಗಿ ತೇಲಿತು.
-ಜೀವಿ ಗೊಂಡೇದಹಳ್ಳಿ
***
ಬರ್ತಾ ಇತ್ತು…
ಯಾದಗಿರಿ ಕಡೆಯ ಸ್ನೇಹಿತರೊಬ್ಬರು ಫೇಸ್ ಬುಕ್ ಮೂಲಕ ಪರಿಚಿತರು. ಅಲ್ಲಿಯ ಭಾಷಾ ಶೈಲಿ ಸ್ವಲ್ಪ ಭಿನ್ನ. ಮೊನ್ನೆ ಹೀಗೇ ವಾಟ್ಸಾಪ್ ನಲ್ಲಿ ಚಾಟ್ ಮಾಡುವಾಗ ‘ಏನಿತ್ತು ಟಿಫಿನ್?’ ಅಂತಾ ಕೇಳಿದೆ. ‘ಬೆಳಿಗ್ಗೆ ಚಪಾತಿ ಬರ್ತಾ ಇತ್ತು.’ ಎನ್ನುವ ಉತ್ತರ ಬಂತು. ‘ಏನು? ಚಪಾತಿ ಬರ್ತಾ ಇತ್ತಾ? ಎಲ್ಲಿಂದ ಬರ್ತಾ ಇತ್ತು?’ ಚಕಿತಗೊಂಡು ಕೇಳಿದ್ದೆ. ನಗುವ ಇಮೋಜಿ ಹಾಕಿ. ‘ನಮ್ಮ ಕಡೆ ಬರ್ತಾ ಅಂದರೆ ಎಲ್ಲ ರೀತಿಯ ತರಕಾರಿಗಳನ್ನು ಹಾಕಿ ಮಾಡುವ ಪಲ್ಯ' ಎಂದು ಉತ್ತರಿಸಿದರು.
-ನಳಿನಿ ಟಿ ಭೀಮಪ್ಪ
***
ಶೀತರಾಮ
ಮದುವೆ ಮನೆಯಲ್ಲಿ ಮಕ್ಕಳ ಕಲರವಕ್ಕೆ ಕಡಿವಾಣ ಇರುವುದಿಲ್ಲ. ಎಲ್ಲಾ ದಿನ ಶಾಲಾ ಕೊಠಡಿಗಳಲ್ಲಿ ಸೆರೆಯಾಗಿರುವ ಮಕ್ಕಳು ಬಿಡುಗಡೆಗೊಂಡ ಭಾವದಲ್ಲಿ ಸ್ವಚ್ಛಂದವಾಗಿ ಆಡ್ತಾ ಇದ್ದರು. ನಾನು ಸುಮಾರು ನಾಲ್ಕು ವರ್ಷದ ಮುದ್ದಾದ ಹುಡುಗನನ್ನು ಎಳೆದುಕೊಂಡು ನನ್ನ ತೋಳ ತೆಕ್ಕೆಗೆ ತೆಗೆದುಕೊಂಡು ‘ಏನೋ ನಿನ್ನ ಹೆಸರು?’ ಎಂದು ಕೇಳಿದೆ. ಅದಕ್ಕವನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾ ‘ಶೀತರಾಮ' ಎಂದ. ‘ಶೀತರಾಮ! ಅದೆಂಥ ಹೆಸರೋ?’ ಎಂದೆ. ಅಷ್ಟರಲ್ಲಿ ಆತನ ತಾಯಿ ಬಂದು ‘ಇವನು ಸ ಅಕ್ಷರ ಬದಲಿಗೆ ಶ ಅಕ್ಷರ ಉಚ್ಛಾರ ಮಾಡುತ್ತಾನೆ. ಸೀತಾರಾಮ ಅನ್ನೋದನ್ನ ಶೀತರಾಮ ಎಂದು ಹೇಳ್ತಾನೆ' ಅಂತ ಸಮಜಾಯಿಸಿ ನೀಡಿದರು.
-ಮಲ್ಲಿಕಾರ್ಜುನ ಸುರಧೇನುಪುರ
***
(‘ಮಯೂರ' ಮಾರ್ಚ್ ೨೦೨೩ರ ಸಂಚಿಕೆಯಿಂದ ಆಯ್ದದ್ದು)