‘ಮಯೂರ' ಹಾಸ್ಯ - ಭಾಗ ೮೮
ಅಸ್ಥಿಪಂಜರ
ಆ ನರ್ಸಿಂಗ್ ಹೋಮ್ ಗೆ ಕಿಟ್ಟು ಪದೇ ಪದೇ ಹೋಗಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯ ಡಾಕ್ಟರಿಗೂ ಗೊತ್ತಾಯಿತು. ಅವರು ಮುಂದಾಲೋಚನೆ ಮಾಡಿ, ಅವನು ಬರುವ ಬಾಗಿಲಿಗೆ ಅಸ್ಥಿಪಂಜರವನ್ನು ನೇತು ಹಾಕಿದರು. ಅದನ್ನು ನೋಡಿ ಹಿಂದಕ್ಕೆ ಹೋಗುವಾಗ, ಡಾಕ್ಟರ್ ಅವನನ್ನು ಕರೆದು ಕೇಳಿದರು. ಆಗ ಕಿಟ್ಟು, ‘ಸರ್, ನೀವು ಬಟ್ಟೆ ಹಾಕಿಕೊಂಡಿರುವಾಗಲೇ ನಿಮ್ಮನ್ನು ನೋಡೋದಕ್ಕೆ ಇಷ್ಟ ಆಗೋದು, ಹಾಗೆಯೇ ಎಂದೂ ಎದುರಾಗಬೇಡಿ.’ ಎಂದಾಗ ಡಾಕ್ಟರಿಗೆ ಸುಸ್ತೋ ಸುಸ್ತು. !
-ಶಂಕರೇಗೌಡ ತುಂಬಕೆರೆ
***
ವೈದ್ಯರು ಏನು ಹೇಳಿದರು?
ಮಧ್ಯ ವಯಸ್ಸಿನ ದಂಪತಿ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದರು. ಪತಿಯನ್ನು ಪರೀಕ್ಷಿಸಿದ ವೈದ್ಯರು ಆತನ ಪತ್ನಿಯನ್ನು ಮಾತ್ರವೇ ಒಳಗೆ ಕರೆದು ‘ನೋಡಿ, ನಿಮ್ಮ ಗಂಡನಿಗೆ ಅಂತಹ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ನೀವು ಅವರಿಗೆ ತಿನ್ನೋದಕ್ಕೆ-ಉಣ್ಣುವುದಕ್ಕೆ ತಡೆಯೊಡ್ಡಬೇಡಿ. ಅವರು ಟಿವಿಯಲ್ಲಿ ತಮ್ಮಿಷ್ಟದ ಕ್ರೀಡೆಗಳನ್ನು ನೋಡಲಿ. ಹಾಗೆಯೇ ಎರಡು ಹೊತ್ತು ಕಾಫಿ ಮಾಡಿಕೊಡಿ. ಸ್ನೇಹಿತರೊಂದಿಗೆ ಫೋನಿನಲ್ಲಿ ಹರಟಲಿ. ಎಲ್ಲದಕ್ಕೂ ಅವರನ್ನು ದೂರಬೇಡಿ. ಇಷ್ಟು ಮಾಡಿದರೆ ಬಹುಷಃ ಅವರು ಇನ್ನೂ ೨೦ ವರ್ಷ ಬದುಕುತ್ತಾರೆ.’ ಎಂದರು. ಪತ್ನಿ ಮೌನವಾಗಿ ಎದ್ದು ಹೊರಗೆ ಬಂದಳು. ಪತಿ, ‘ವೈದ್ಯರು ಏನಂತ ಹೇಳಿದರು?’ ಎಂದು ಕೇಳಿದ. ‘ರೀ ನಡಿರಿ. ನೀವು ಇನ್ನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದರು' ಎಂದಳು.
-ಜ್ಯೋತಿ ಪರಬತ್
***
ದುಪ್ಪಟ್ಟು ಶುಲ್ಕ
ತಿಮ್ಮೇಶಿ ತನ್ನ ಮಗನ ಹಲ್ಲು ನೋವೆಂದು ಹಲ್ಲಿನ ವೈದ್ಯರ ಬಳಿಗೆ ಕರೆದೊಯ್ದ. ವೈದ್ಯರು ಅವನನ್ನು ಪರೀಕ್ಷಿಸಿ, ಒಂದು ಹಲ್ಲನ್ನು ಕೀಳಬೇಕೆಂದು, ನೂರು ರೂಪಾಯಿ ಶುಲ್ಕವಾಗುತ್ತದೆ ಎಂದು ತಿಳಿಸಿದರು. ಆಗಲಿ ಎಂದ ತಿಮ್ಮೇಶಿ. ಹಲ್ಲು ಕಿತ್ತ ನಂತರ ನೂರು ರೂಪಾಯಿ ಕೊಡಲು ಹೋದ. ವೈದ್ಯರು ಇನ್ನೂರು ರೂಪಾಯಿ ಕೇಳಿದರು. ‘ಒಂದು ಹಲ್ಲು ಕೀಳಲು ನೂರು ರೂಪಾಯಿ ಅಂದಿದ್ರಿ ಅಲ್ಲ? ದುಪ್ಪಟ್ಟು ಶುಲ್ಕ ಯಾಕೆ?’ ಎಂದ. ‘ನಿಮ್ಮ ಮಗನ ಹಲ್ಲು ಕಿತ್ತಿದ್ದಕ್ಕೆ ನೂರು ರೂಪಾಯಿ. ಆದರೆ, ಅವನ ಕಿರುಚಾಟ ಕೇಳಿ ಹೊರಗಿದ್ದ ಒಬ್ಬ ರೋಗಿ ಓಡಿ ಹೋದನಲ್ಲ, ಅವನದ್ದೂ ಸೇರಿ ಇನ್ನೂರು ರೂಪಾಯಿ ಕೊಡಿ.’ ಎಂದು ಹೇಳಿದರು.
-ಪ ನಾ ಹಳ್ಳಿ ಹರೀಶ್ ಕುಮಾರ್
***
ಗ್ಯಾಸ್ ಸಮಸ್ಯೆ
ಸ್ವಲ್ಪ ವಯಸ್ಸಾದ ಮಹಿಳೆ ವೈದ್ಯರ ಬಳಿ ಹೋಗಿ, ‘ಡಾಕ್ಟರ್, ನನಗೆ ಗ್ಯಾಸ್ ಸಮಸ್ಯೆ ಇದೆ. ಆದರೆ ಇದು ವಾಸನೆಯೂ ಇರುವುದಿಲ್ಲ, ಶಬ್ಧವೂ ಇರುವುದಿಲ್ಲ. ನಾನು ಕ್ಲಿನಿಕ್ ಗೆ ಬಂದ ಬಳಿಕ ಸುಮಾರು ೨೦ ಬಾರಿ ಗ್ಯಾಸ್ ಬಿಟ್ಟಿದ್ದೇನೆ. ನಿಮಗೆ ಗೊತ್ತೇ ಆಗಲಿಲ್ಲವಲ್ಲ?’ ಎಂದಳು. ವೈದ್ಯರು ಮೌನವಾಗಿ ಒಂದಷ್ಟು ಮಾತ್ರೆಗಳನ್ನು ಕೊಟ್ಟು, ಮುಂದಿನ ವಾರ ಬರಲು ಹೇಳಿದರು. ಒಂದು ವಾರ ಬಿಟ್ಟು ಆ ಮಹಿಳೆ ಮತ್ತೆ ವೈದ್ಯರ ಬಳಿ ಬಂದಳು. ‘ಡಾಕ್ಟರ್, ನೀವು ನನಗೆ ಅದೇನು ಮಾತ್ರೆ ಕೊಟ್ಟಿದ್ದೀರೋ ಗೊತ್ತಿಲ್ಲ. ನನ್ನ ಗ್ಯಾಸ್ ಗಬ್ಬು ವಾಸನೆ ಬರುತ್ತಿದೆ. ಆದರೆ ಶಬ್ಧವಾಗುತ್ತಿಲ್ಲ ಅಷ್ಟೇ. ಎಂದಳು. ವೈದ್ಯರು ಹೇಳಿದರು. ‘ಒಳ್ಳೆಯದು. ನಿಮಗೀಗ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ. ಇನ್ನು ನಾವು ನಿಮ್ಮ ಶ್ರವಣ ಸಮಸ್ಯೆಗೆ ಚಿಕಿತ್ಸೆ ನೀಡೋಣ.’
-ಅನುಪಮಾ ವಸ್ತ್ರದ
***
(‘ಮಯೂರ’ ಮಾರ್ಚ್ ೨೦೨೩ರ ಸಂಚಿಕೆಯಿಂದ ಆಯ್ದದ್ದು)