‘ಮಯೂರ' ಹಾಸ್ಯ - ಭಾಗ ೮

‘ಮಯೂರ' ಹಾಸ್ಯ - ಭಾಗ ೮

ಕಣ್ಣಲ್ಲಿ ಸಕ್ಕರೆ

ಅಂದು ನಮ್ಮ ಮನೆಯಲ್ಲಿ ಹೋಮ ಏರ್ಪಡಿಸಲಾಗಿತ್ತು. ಮನೆ ತುಂಬಾ ನೆಂಟರಿಷ್ಟರು ನೆರೆದಿದ್ದರು. ಹೋಮಕ್ಕೆ ಉಪಯೋಗಿಸಿದ ಸೌದೆ ಸ್ವಲ್ಪ ಹಸಿಯಾಗಿದ್ದುದರಿಂದ ಬೆಂಕಿ ಹತ್ತಿಕೊಳ್ಳಲು ಸತಾಯಿಸುತ್ತಿತ್ತು. ಅದರಿಂದಾಗಿ ಮನೆಯೆಲ್ಲಾ ಹೊಗೆ, ಉರಿಯಿಂದ ಎಲ್ಲರ ಕಣ್ಣಲ್ಲಿ ನೀರು ಸುರಿಯುತ್ತಿದ್ದು, ಮೂಗನ್ನು ಸೊರ ಸೊರ ಏರಿಸುತ್ತಿದ್ದರು.

ಆಗ ನನ್ನ ಮೂರು ವರ್ಷದ ಮೊಮ್ಮಗಳು ಸಂಜನಾ ಓಡಿ ಬಂದು ಕಣ್ಣು ತಿಕ್ಕುತ್ತಾ, ‘ಅಜ್ಜಿ, ನನ್ನ ಕಣ್ಣು ಖಾರ ಆಗಿದೆ. ಕಣ್ಣಲ್ಲಿ ಸ್ವಲ್ಪ ಸಕ್ಕರೆ ಹಾಕು' ಎಂದಳು. ಖಾರ ಹೆಚ್ಚಾದಾಗ ಬಾಯಲ್ಲಿ ಸಕ್ಕರೆ ಹಾಕುವುದನ್ನು ತಿಳಿದಿದ್ದ ಅವಳು ಹೇಳಿದ್ದನ್ನು ಕೇಳಿ ನೆರೆದವರೆಲ್ಲಾ ತಮ್ಮ ಕಣ್ಣುರಿಯನ್ನು ಮರೆತು ಖೊಳ್ಳನೆ ನಕ್ಕರು. ಆ ಪುಟಾಣಿ ನಾಚಿ ಅಲ್ಲಿಂದ ಪರಾರಿಯಾದಳು.

-ಸ್ಮಿತಾ ಜೋಶಿ, ಬೆಂಗಳೂರು

***

ರಿಟೈರ್ ಮೆಂಟು

ನನ್ನವರು ತಮ್ಮ ಅನಾರೋಗ್ಯದ ಕಾರಣ ಬ್ಯಾಂಕ್ ಕೆಲಸದಿಂದ ಸ್ವಯಂ ನಿವೃತ್ತಿ ಪಡಕೊಂಡಿದ್ದರು. ನಮ್ಮ ಮೊಮ್ಮಗ ಐದು ವರ್ಷದ ವೇದಾಂತನಿಗೆ ಅಜ್ಜ ಮನೆಯಲ್ಲೇ ಇರುತ್ತಾರೆ ಎಂದು ಖುಷಿಯೋ ಖುಷಿ. ದಿನವಿಡೀ ಅಜ್ಜನೊಂದಿಗೆ ತಿರುಗಲು ಹೋಗುವುದು, ಐಸ್ ಕ್ರೀಂ, ಕೇಕು, ಚಾಕಲೇಟು, ಬಿಸ್ಕಿತ್ತುಗಳ ಸಮಾರಾಧನೆ. ಮೇ ತಿಂಗಳು ಮುಗಿದು ಜೂನ್ ನಲ್ಲಿ ಅವನ ಶಾಲೆ ಪ್ರಾರಂಭವಾಯಿತು. ಇವನಿಗೆ ಅಜ್ಜನನ್ನು ಬಿಟ್ಟು ಹೋಗುವ ಮನಸ್ಸಿಲ್ಲ.

‘ಅಜ್ಜ, ಅಜ್ಜಿ ನಾನೂ ಸ್ಕೂಲಿನಿಂದ ರಿಟೈರ್ ಮೆಂಟು ತೆಗೆದುಕೊಳ್ಳುತ್ತೇನೆ. ಇಬ್ಬರೂ ಒಟ್ಟಿಗೆ ಮಜಾ ಮಾಡೋಣ' ಎನ್ನುವುದೇ ನಮ್ಮ ವೇದಾಂತ. ಕೇಳಿ ನಮಗೆಲ್ಲಾ ನಗುವೋ ನಗು.

-ರಾಜಲಕ್ಷ್ಮಿ ವಿ. ಶೆಣೈ, ಬೆಂಗಳೂರು

***

ವ್ಯತ್ಯಾಸ ತಿಳೀವಲ್ದು

ನಮ್ಮ ಉತ್ತರ ಕರ್ನಾಟಕದ ಹಿರಿಯ ಮಹಿಳೆಯರು ತಲೆ ತುಂಬಾ ಸೆರಗು ಹೊದ್ದುಕೊಳ್ಳುವುದು ಸಂಪ್ರದಾಯ. ಹೀಗೊಂದು ದಿನ ಬಸ್ಸಿನಲ್ಲಿ ಹೋಗುವಾಗ ಅಜ್ಜಿಯೊಬ್ಬಳು ಬಿಸಿಲ ಧಗೆಯಿಂದ ಬಳಲಿ ಸೆರಗಿನಿಂದ ಗಾಳಿ ಹಾಕಿಕೊಳ್ಳುತ್ತಿದ್ದಳು. ಕಾಲೇಜು ಪೋರನೊಬ್ಬ ಕೂದಲನ್ನು ಸ್ಟೈಲಾಗಿ ಪೋನಿ ಕಣ್ಣಿದ್ದ. ಆ ಅಜ್ಜಿಯ ಹಿಂದಿನ ಸೀಟಿನಲ್ಲಿ ಕೂತು ಅಜ್ಜಿಯನ್ನು ಗಮನಿಸತೊಡಗಿದ.

ಮುಂದಿನ ನಿಲ್ದಾಣದಲ್ಲಿ ದೋತರ ಉಟ್ಟು, ತಲೆಗೆ ರುಮಾಲು ಸುತ್ತಿ, ಕೈಲಿ ಬಿದಿರು ಬಿಡಿಗೆ ಹಿಡಿದು ಅಜ್ಜನೊಬ್ಬ ಬಸ್ಸು ಹತ್ತುತ್ತಿದ್ದಂತೆ ಅಜ್ಜಿ ತಡಬಡಿಸಿ ತಲೆ ತುಂಬಾ ಸೆರಗು ಹೊದ್ದು ಕೂತಳು. ಕುಚೇಷ್ಟೆಯ ಹುಡುಗ ಸುಮ್ಮನಿರದೆ ‘ಅಜ್ಜೀ, ನಾನು ಬಸ್ಸು ಹತ್ತಿ ನಿನ್ನ ಮುಂದೇನ ಹಾದಿನಿ.. ಆಗ ಸೆರಗ ಹೊದಿಲಿಲ್ಲ.. ಆ ಅಜ್ಜ ಬರಾನ ಸೆರಗ ಹೊರ್ತೀ?’ ಎಂದು ಹಲ್ಲು ಕಿರಿದ. ‘ಈಗಿನ ಹುಡ್ಗೀರು ತಲೀ ಬೋಳಿಸ್ಕೋತಾರ. ಪ್ಯಾಂಟಾ, ಅಂಗೀ ಹಾಕೋತ್ತಾರ... ಹೆಣ್ಣಾವುದು..ಗ಼ಂಡ್ಯಾವುದು ತಿಳೀಲಾರ್ದಂಗ ಆಗ್ಯಾದ... ನೀನೀಗ ಕೇಳ್ದಾಗ ನೋಡೋ ನೀ ಹುಡುಗನ್ನೋದು ಗೊತ್ತಾಗಿದ್ದು' ಎಂಬ ಅಜ್ಜಿಯ ಖಡಕ್ ನುಡಿಗೆ ಹುಡುಗ ಇಂಗು ತಿಂದ ಮಂಗನಂತಾಗಿದ್ದ.

-ನಳಿನಿ ಸುನೀಲ ಕುಮಾರ ಸುಧಾಕರ, ವಿಜಯಪುರ

***

(ಮಯೂರ ಎಪ್ರಿಲ್ ೨೦೧೬ರ ಸಂಗ್ರಹ)