‘ಮಯೂರ' ಹಾಸ್ಯ - ಭಾಗ ೯೧

‘ಮಯೂರ' ಹಾಸ್ಯ - ಭಾಗ ೯೧

ಕಾಮಿಡಿ ಮಾಡಿದ್ದು ಯಾರು?

ಎರಡನೇ ಸೆಮಿಸ್ಟರ್ ಪರೀಕ್ಷೆ ಸಮೀಪಿಸುತ್ತಿತ್ತು. ಪಾಠಗಳೆಲ್ಲಾ ಮುಗಿದಿದ್ದು, ರಿವಿಜನ್ ನಡೆದಿತ್ತು. ‘ಈ ಸೆಮಿಸ್ಟರ್ ನಲ್ಲಿ ತುಂಬಾ ಕಠಿಣ ಪಾಠಗಳು ಇಲ್ಲ. ಹಾಗಾಗಿ, ಈ ಬಾರಿ ನೀವೆಲ್ಲಾ ಎಲ್ಲಾ ವಿಷಯಗಳಲ್ಲಿ ಶೇಕಡಾ ೯೦ ರಷ್ಟು ಅಂಕಗಳನ್ನು ಪಡಿಬೇಕು' ಎಂದೆ. ಪ್ರತಿಯಾಗಿ ಯಾರೂ ಏನೂ ಹೇಳಲಿಲ್ಲ. ಹಿಂದಿನ ಬೆಂಚಿನಲ್ಲಿ ಕುಳಿತಿದ್ದವನೊಬ್ಬ, ‘ಸರ್, ನೀವೇನೂ ಯೋಚಿಸಬೇಡಿ. ಈ ಬಾರಿ ನಾವು ನೂರಕ್ಕೆ ನೂರು ಅಂಕಗಳನ್ನು ಪಡಿತೀವಿ' ಎಂದ. ಅವನೋ ಸರಿಯಾಗಿ ಕ್ಲಾಸಿಗೆ ಬರದೇ ಇರುವ ಹುಡುಗ. ‘ಏಯ್, ಸುಮ್ಮನಿರು ಕಾಮಿಡಿ ಮಾಡ್ತಿದ್ದೀಯಾ?’ ಎಂದೆ. ಆತ ಕೂಡಲೆ ‘ನೀವೇ ಅಲ್ವಾ ಸರ್, ಮೊದಲು ಕಾಮಿಡಿ ಮಾಡಿದ್ದು?’ ಎಂದು ಬಿಟ್ಟ. ಅವನ ಮಾತಿನಿಂದ ಕ್ಲಾಸಲ್ಲಿ ಎಲ್ಲರೂ ಜೋರಾಗಿ ನಗತೊಡಗಿದರು.

-ಭೋಜರಾಜ ಸೊಪ್ಪಿಮಠ

***

ಹಡಗು ಎಂದರೇನು?

ಆಂಗ್ಲ ಮಾಧ್ಯಮದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮಗಳು ಆದ್ಯಾಳಿಗೆ ಕನ್ನಡ ಪರೀಕ್ಷೆಯಲ್ಲಿ ‘ಹಡಗು' ಪದವನ್ನು ಬಳಸಿಕೊಂಡು ಸ್ವಂತ ವಾಕ್ಯ ರಚಿಸಬೇಕಿತ್ತು. ಇವಳಿಗೆ ಹಡಗು ಅಪರಿಚಿತ ಪದ । ಹಾಗಾದರೆ ಈ ಪದವನ್ನು ಬಳಸಿ ಸ್ವಂತ ವಾಕ್ಯ ರಚಿಸುವುದು ಹೇಗೆ? ಅವಳು ತನ್ನದೇ ವಿಶೇಷ ಬುದ್ಧಿವಂತಿಕೆ ಬಳಸಿ ವಾಕ್ಯ ರಚಿಸಿಯೇ ಬಿಟ್ಟಳು. ‘ಹಡಗು ಎಂದರೆ ಏನು ಎಂದು ನನ್ನ ಗೆಳತಿ ರಾಣಿಯನ್ನು ಕೇಳಿದೆ. ಅವಳು ಹಡಗು ಎಂದರೆ ಏನೆಂದು ತನಗೂ ಗೊತ್ತಿಲ್ಲ ಎಂದಳು' ಎಂದು ಬರೆದಿದ್ದಾಗಿ ಹೇಳಿದಳು. ಅವಳ ಮಾತು ಕೇಳಿ ನಾನು ಕಕ್ಕಾಬಿಕ್ಕಿ !

-ದಿವ್ಯಶ್ರೀ ವಿಕ್ರಮ್

***

ಕ್ಯಾಪಿಟಲ್ ಸಿಸ್ಟರ್

ನಮ್ಮ ವಿಭವ ಎಲ್ ಕೆಜಿ ಹಾಗೂ ಮಗಳು ವೈಷ್ಣು  ೯ ನೇ ತರಗತಿಯಲ್ಲಿದ್ದಾರೆ. ಒಂದು ದಿನ ನಮ್ಮ ಮಗಳು ರಾತ್ರಿ ತಮ್ಮನಿಗೆ ಪ್ರೀತಿಯಿಂದ ‘you are my small brother’ ಎಂದಳು. ತಕ್ಷಣ ಅವನು ಅಕ್ಕನಿಗೆ ‘you are my capital sister’ ಎಂದ. ನಾವೆಲ್ಲಾ ಜೋರಾಗಿ ನಕ್ಕೆವು. ಪಾಪ ಅವನು ‘Big letter, small letter ಗುಂಗಿನಲ್ಲಿದ್ದ. ಹೀಗಾಗಿ ‘you are my big sister’ ಎನ್ನುವ ಬದಲು ಶಾಲೆಯಲ್ಲಿ ಹೇಳುವ ಹಾಗೆ capital ಪದ ಬಳಸಿ ನಮ್ಮೆಲ್ಲರನ್ನೂ ನಗಿಸಿದ.

-ಪ್ರಮೋದ್ ಕೆ.ಕುಲಕರ್ಣಿ

***

ಪಾರ್ಟಿ ವಾಸನೆ

ನಮ್ಮ ಸಾನ್ವಿ ಬಹಳ ಚೂಟಿ. ಅವಳ ಮುಂದೆ ದೊಡ್ಡವರ ಆಟಗಳು ನಡೆಯುವುದೇ ಇಲ್ಲ. ಪರೀಕ್ಷೆ ಹತ್ತಿರ ಬಂದಿದ್ದರಿಂದ ಅವಳು ಅಪ್ಪನಿಗೆ ಪಾರ್ಟಿಗೆಲ್ಲಾ ಹೋಗುವಂತಿಲ್ಲಎಂದು ನಿರ್ಬಂಧಿಸಿದ್ದಳು. ಅವರು ಮನೆಗೆ ಬರುವವರೆಗೆ ತನಗೆ ನಿದ್ದೆ ಬರಲ್ಲ. ರಾತ್ರಿ ತಡವಾಗಿ ಬಂದರೆ ಬೆಳಿಗ್ಗೆ ಬೇಗ ಏಳಲಾಗದು. ಹೀಗಾಗಿ, ತನ್ನ ಪರೀಕ್ಷೆಗೆ ತೊಂದರೆಯಾಗುತ್ತದೆ ಎನ್ನುವುದು ಅವಳ ವಾದ. ಆವತ್ತು ಅವಳಪ್ಪ ಎಂದಿಗಿಂತ ತುಸು ತಡವಾಗಿ ಮನೆಗೆ ಬಂದರು. ‘ನಾನು ಹೇಳಿದ್ರೂ ಪಾರ್ಟಿಗೆ ಹೋಗಿದ್ರಿ ಅಲ್ವಾ?’ ಎಂದು ಗದರಿದಳು. ಅವರು ಇಲ್ಲ ಎಂದಾಗ ಅವರ ಬಾಯಿಯ ಹತ್ತಿರ ತನ್ನ ಮೂಗು ಒಯ್ದು ಮೂಸಿ ಮೂಸಿ ನೋಡುತ್ತಿದ್ದಳ. ಅವರು ‘ಬೆಳಿಗ್ಗೆಯಿಂದ ಹಲ್ಲುಜ್ಜಿರಲ್ಲ. ವಾಸನೆ ಬಂದೇ ಬರುತ್ತದೆ.’ ಎಂದರೆ, ‘ಇದೆ... ವಾಸನೆ ಇದೆ... ಪಾರ್ಟಿ ವಾಸನೆ ಇದೆ…’ ಇದು ಹಲ್ಲುಜ್ಜದೇ ಇರುವ ವಾಸನೆ ಅಲ್ಲ ... ಎಣ್ಣೆ ವಾಸನೆ...' ಎಂದಳು ಗಂಭೀರವಾಗಿ. ಅವಳ ಮಾತು ಕೇಳಿ ಮನೆಮಂದಿಗೆಲ್ಲಾ ಆಶ್ಚರ್ಯ.

-ಅನುಪಮಾ ವಸ್ತ್ರದ

(‘ಮಯೂರ' ಮೇ ೨೦೨೩ರ ಸಂಚಿಕೆಯಿಂದ ಆಯ್ದದ್ದು)