‘ಮಯೂರ' ಹಾಸ್ಯ - ಭಾಗ ೯೨
ಟೂತ್ ಪಿಕ್ಸ್
ರಮೇಶ ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಹಾಕಿದ್ದ. ಸಂದರ್ಶನದಲ್ಲಿ ಅವನಿಗೆ ಒಂದೇ ಪ್ರಶ್ನೆ ಕೇಳಲಾಯಿತು. ಅವನ ಉತ್ತರ ಕೇಳಿದ ಸಂದರ್ಶಕರು ಎರಡನೇ ಪ್ರಶ್ನೆಯನ್ನು ಕೇಳಲೇ ಇಲ್ಲ. ಅದೇನೆಂದರೆ, ದಂತವೈದ್ಯರು ತಮ್ಮ x rayಗಳನ್ನು ಏನೆಂದು ಕರೆಯುತ್ತಾರೆ? ಎಂದು ಕೇಳಿದಾಗ ರಮೇಶ, ‘ಟೂತ್ ಪಿಕ್ಸ್' ಎಂದು ಕರೆಯುತ್ತಾರೆ ಎಂದು ಉತ್ತರಿಸಿದ್ದ.
-ಕಾವ್ಯಾ ಎಸ್ ಎಚ್.
***
ಸೂಪರ್ ಐಡಿಯಾ
ಸಾಂಪ್ರ ಮನೆಗೆ ಸಾಮಾನು ತರಲು ಸೂಪರ್ ಮಾರ್ಕೆಟ್ ಗೆ ಹೊರಟಿದ್ದ. ಹೆಂಡ್ತಿ ಶೀಲಾ ಹೇಳಿದಳು ‘ ರೀ, ಒಂದು ಪ್ಯಾಕ್ ಹಾರ್ಲಿಕ್ಸ್ ತನ್ನಿ. ಅಲ್ಲಿ ದಾಳಿಂಬೆ ಹಣ್ಣು ಕಂಡ್ರೆ ಹತ್ತು ತನ್ನಿ...'ಎಂದು. ಸಾಂಪ್ರ ಮಾರ್ಕೆಟ್ ನಿಂದ ಮನೆಗೆ ಬಂದ. ಶೀಲಾ ಅವನ ಕೈಯಲ್ಲಿನ ಬ್ಯಾಗು ನೋಡಿದಳು. ಹತ್ತು ಪ್ಯಾಕ್ ಹಾರ್ಲಿಕ್ಸ್ ತಂದಿದ್ದ ! ಶೀಲಾ ಕೇಳಿದಳು. ‘ಯಾಕ್ರೀ, ಹತ್ತು ಪ್ಯಾಕ್ ಹಾರ್ಲಿಕ್ಸ್ ತಂದ್ರಿ?’ ಸಾಂಪ್ರ ಹೇಳಿದ. ‘ನೀನೇ ಹೇಳಿದ್ದಿಯಲ್ಲಾ? ಒಂದು ಹಾರ್ಲಿಕ್ಸ್ ಪ್ಯಾಕ್ ತನ್ನಿ. ದಾಳಿಂಬೆ ಕಂಡ್ರೆ ಹತ್ತು ತನ್ನಿ ಅಂತ. ದಾಳಿಂಬೆ ಕಾಣ್ತು, ಅದ್ಕೆ ಹತ್ತು ಪ್ಯಾಕ್ ಹಾರ್ಲಿಕ್ಸ್ ತಂದೆ.’ ಎಂದ.
-ಮಂಡ್ಯ ಮ ನಾ ಉಡುಪ
***
ಕಾರಣ
ಗುಂಡಣ್ಣ ಅಂದು ಕಚೇರಿಗೆ ಎಂದಿಗಿಂತ ಎರಡು ತಾಸು ಲೇಟ್ ಆಗಿ ಬಂದ. ಬಾಸ್, ‘ಯಾಕ್ರೀ ಗುಂಡಣ್ಣ ಇವತ್ತು ಇಷ್ಟು ಲೇಟ್ ಮಾಡಿದ್ರಿ?’ ಎಂದು ಪ್ರಶ್ನಿಸಿದಾಗ, ಆತ ‘ಸಾರ್ ನಾನು ಬರಬೇಕಿದ್ದರೆ ಬಸ್ ಸ್ಟಾಪಿನಲ್ಲಿ ಓರ್ವ ವಯಸ್ಸಾದ ಅಜ್ಜಿ ಐನೂರು ರೂಪಾಯಿ ನೋಟು ಕಳಕೊಂಡಿದ್ರು.. ಅದಕ್ಕೆ...' ಎಂದು ಹೇಳುತ್ತಿದ್ದವನನ್ನು ಅರ್ಧಕ್ಕೆ ತಡೆದ ಬಾಸ್ ‘ವೆರಿ ಗುಡ್ ಗುಂಡಣ್ಣಾ, ಅಂದ್ರೆ ನೀವು ಆ ಅಜ್ಜಿಗೆ ದುಡ್ಡು ಹುಡುಕಿಕೊಡಲು ಸಹಾಯ ಮಾಡ್ತಾ ಇದ್ರಿ ಅಂದಂಗಾಯ್ತು.’ ಎಂದ ಸಂತಸದಿಂದ. ಗುಂಡಣ್ಣ ‘ಸಾರ್ ಅದು ಹಾಗಲ್ಲ... ನಾನು ಆ ನೋಟಿನ ಮೇಲೆ ನಿಂತಿದ್ದೆ. ಆ ಮುದುಕಿ ಅಲ್ಲಿಂದ ಹೋಗೋವರೆಗೂ ಕಾಯ್ತಾ ಇದ್ದೆ... ಹೀಗಾಗಿ ಲೇಟ್ ಆಯ್ತು ‘ ಎಂದ.
-ಅರವಿಂದ ಜಿ. ಜೋಷಿ
***
ಶ್ಯಾಮ್ ಸಿಂಗನ ಮೊಬೈಲ್ !
ಡಿಂಗಣ್ಣ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಮೊಬೈಲ್ ಅಂಗಡಿಗೆ ಹೋಗಿ, ‘ಶ್ಯಾಮ್ ಸಿಂಗನ ಮೊಬೈಲ್ ತೋರ್ಸಣ್ಣ' ಎಂದ. ಅಂಗಡಿಯಾತ ಆಶ್ಚರ್ಯಚಕಿತನಾಗಿ ‘ಈ ಶ್ಯಾಮ್ ಸಿಂಗ್ ಯಾರು?’ ಎಂದು ಗದರಿದ. ಆಗ ನೇಪಾಳಿ ವಿನೀತನಾಗಿ ‘ಟೀವಿಯಲ್ಲಿ ಜಾಹೀರಾತು ಬರುತ್ತಲ್ಲಾ? ಶ್ಯಾಮ್ ಸಿಂಗ್ ಗೊತ್ತಿಲ್ವಾ? ಕೇಳಿದ. ಅಂಗಡಿಯಾತ ‘ಓಹೋ, ಅದು ಶ್ಯಾಮ್ ಸಿಂಗ್ ಅಲ್ಲ, ಸ್ಯಾಮ್ ಸಂಗ್ ಕಣೋ’ ಎಂದು ವಿವರಣೆ ಕೊಟ್ಟು ಮೊಬೈಲ್ ತೋರಿಸಲಾರಂಭಿಸಿದ.
-ರಮಣ್ ಶೆಟ್ಟಿ ರೆಂಜಾಳ್
***
(‘ಮಯೂರ' ಮೇ ೨೦೨೩ ರಿಂದ ಸಂಗ್ರಹಿತ)