‘ಮಿಸ್ಟರ್ ಭಾರತ್’ ನೆನಪಿನಲ್ಲಿ…


ನಿಮಗೂ ನೆನಪಿರಬಹುದು, ೮೦ ಹಾಗೂ ೯೦ರ ದಶಕದಲ್ಲಿ ದೂರದರ್ಶನಗಳು (ಟಿವಿ) ನಮ್ಮ ನಮ್ಮ ಮನೆಯನ್ನು ಹೊಕ್ಕಿದ್ದವಷ್ಟೇ. ನಿರ್ಧಾರಿತ ಸಮಯಕ್ಕೆ ಮಾತ್ರ ಕಾರ್ಯಕ್ರಮಗಳು. ಈಗಿನಂತೆ ನೂರಾರು ಚಾನೆಲ್ ಗಳ ಭರಾಟೆ ಇಲ್ಲ. ದೂರದರ್ಶನ ಎನ್ನುವ ಸರಕಾರಿ ಚಾನೆಲ್. ಅವರು ತೋರಿಸಿದ್ದನ್ನು ನಾವು ನೋಡಬೇಕು. ಹೀಗಿರುವಾಗ ನಾನು ‘ಉಪಕಾರ್’ ಎಂಬ ಹಿಂದಿ (ಆಗಿನ್ನೂ ಕನ್ನಡ ವಾಹಿನಿ ಚಂದನ ಪ್ರಾರಂಭವಾಗಿರಲಿಲ್ಲ) ಚಲನಚಿತ್ರವನ್ನು ದೂರದರ್ಶನದಲ್ಲಿ ನೋಡಿದೆ. ೧೯೬೫ರ ಭಾರತ - ಪಾಕಿಸ್ತಾನ ಯುದ್ಧದ ಕಥೆಯನ್ನು ಹಾಗೂ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಖ್ಯಾತ ಘೋಷ ವಾಕ್ಯ ‘ಜೈ ಜವಾನ್ ಜೈ ಕಿಸಾನ್’ ಎನ್ನುವುದನ್ನು ಆಧಾರವಾಗಿರಿಸಿಕೊಂಡು ೧೯೬೭ರಲ್ಲಿ ತಯಾರಿಸಲಾದ ಚಿತ್ರ ಉಪಕಾರ್. ಕೃಷಿಕ ಕುಟುಂಬದ ಯುವಕನೊಬ್ಬ ದೇಶಕ್ಕಾಗಿ ಮಾಡುವ ತ್ಯಾಗದ ಕುರಿತಾಗಿದ್ದ ಮನೋಜ್ಞ ಚಿತ್ರ ಇದು. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಮನೋಜ್ ಕುಮಾರ್ ಎನ್ನುವ ಸ್ಫುರದ್ರೂಪಿ ಯುವಕ. ಆಶಾ ಪಾರೇಖ್ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಪ್ರಾಣ್, ಪ್ರೇಮ್ ಚೋಪ್ರಾ ಮೊದಲಾದವರೂ ನಟಿಸಿದ್ದರು. ‘ಮೇರೆ ದೇಶ್ ಕಿ ಧರತಿ ಸೋನಾ ಉಗಲೇ…’ ಎನ್ನುವ ಹಾಡು ಆ ಕಾಲದ (ಈಗಲೂ) ಸೂಪರ್ ಹಿಟ್ ಗೀತೆಯಾಗಿತ್ತು. ದೇಶ ಭಕ್ತಿಯ ಕಿಚ್ಚನ್ನು ಹಚ್ಚುವ ಈ ಗೀತೆ ‘ಉಪಕಾರ್’ ಎಂಬ ಸಿನೆಮಾದ್ದು.
ಆ ಸಿನೆಮಾದ ಕೊನೆಯ ದೃಶ್ಯದಲ್ಲಿ ಮನೋಜ್ ಕುಮಾರ್ ಅವರ ಎರಡೂ ಕೈಗಳು ಯುದ್ಧದಲ್ಲಿ ಗಾಯಗೊಂಡು ಕತ್ತರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಆಗ ಅವರು ಕೊನೆಯ ಬಾರಿ ತನ್ನ ಕೈಯಿಂದ ತಮ್ಮ ಹೊಲದ ಮಣ್ಣನ್ನು ಮುಟ್ಟ ಬೇಕೆಂದು ಆಸೆ ಪಡುತ್ತಾರೆ. ಒಬ್ಬ ಜವಾನ್ (ಸೈನಿಕ) ನಾದರೂ ಮೂಲತಃ ಕಿಸಾನ್ (ರೈತ) ಆಗಿದ್ದ ಮನೋಜ್ ಕುಮಾರ್ ಅವರ ಆ ಸಮಯದ ನಟನೆ ಎಲ್ಲರ ಕಣ್ಣಲ್ಲೂ ನೀರು ತಂದಿತ್ತು. ಇಂತಹ ಮನೋಜ್ಞ ಅಭಿನಯ ನೀಡಿ ಎಲ್ಲರಲ್ಲೂ ದೇಶಭಕ್ತಿಯ ಕಿಚ್ಚನ್ನು ಹತ್ತಿಸಿದ್ದು ಮನೋಜ್ ಕುಮಾರ್ ಆಲಿಯಾಸ್ ಮಿ.ಭಾರತ್ ಅಥವಾ ಶ್ರೀಮಾನ್ ಭಾರತ್.
ಅಂದಿನ ಸಮಯದಲ್ಲಿ ತಯಾರಾಗುತ್ತಿದ್ದ ದೇಶಭಕ್ತಿಯ ಚಿತ್ರಗಳಲ್ಲಿ ಮನೋಜ್ ಕುಮಾರ್ ಅವರ ಅಭಿನಯ ಇದ್ದೇ ಇರುತ್ತಿತ್ತು. ಈ ಕಾರಣದಿಂದ ಅವರನ್ನು ‘ಮಿಸ್ಟರ್ ಭಾರತ್’ ಎಂದೇ ಕರೆಯಲಾಗುತ್ತಿತ್ತು. ೧೯೬೫ರಲ್ಲಿ ಬಿಡುಗಡೆಗೊಂಡ ಭಗತ್ ಸಿಂಗ್ ಜೀವನಾಧಾರಿತ ಚಿತ್ರ ‘ಶಹೀದ್’ ಅವರ ಚಿತ್ರ ಬದುಕಿನ ಮತ್ತೊಂದು ಮೈಲಿಗಲ್ಲು. ದೇಶಭಕ್ತಿಗೆ ಮಾತ್ರ ಸೀಮಿತವಾಗದೆ ರಹಸ್ಯಮಯ ಚಿತ್ರವಾದ ‘ಗೂಮ್ ನಾಮ್’ ನಲ್ಲೂ ಪೋಲೀಸ್ ಅಧಿಕಾರಿಯಾಗಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು.
ಹುಟ್ಟು ಮತ್ತು ಬೆಳವಣಿಗೆ: ಮನೋಜ್ ಕುಮಾರ್ ಅವರ ಮೂಲ ನಾಮ ಹರಿಕೃಷ್ಣಗಿರಿ ಗೋಸ್ವಾಮಿ ಆಗಿತ್ತು. ಅವರು ಈಗ ಪಾಕಿಸ್ತಾನದಲ್ಲಿರುವ ಅಬೋಟಾಬಾದ್ ನಲ್ಲಿ ೧೯೩೭ರ ಜುಲೈ ೨೪ರಂದು ಹುಟ್ಟಿದರು. ಇವರ ಹೆತ್ತವರಿಗೆ ಭಾರತದಲ್ಲಿ ವಾಸಿಸಬೇಕೆಂಬ ತುಡಿತ. ಆಗಲೇ ಭಾರತ - ಪಾಕಿಸ್ತಾನ ವಿಭಜನೆಯ ಊಹಾಪೋಹಗಳು ಹರಿದಾಡಲು ಶುರುವಾಗಿದ್ದವು. ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಭಾರತದಿಂದ ಬೇರ್ಪಟ್ಟಾಗ ಮನೋಜ್ ಕುಮಾರ್ ಅವರ ಕುಟುಂಬ ದಿಲ್ಲಿಗೆ ಬಂದು ನೆಲೆಸಿತು.
ದಿಲ್ಲಿಯ ಹಿಂದೂ ಕಾಲೇಜಿನಲ್ಲಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲೇ ಇವರಿಗೆ ಸಿನೆಮಾ ರಂಗ ಹಾಗೂ ನಾಟಕಗಳಲ್ಲಿ ನಟಿಸುವ ಹಂಬಲ ಬಲವಾಗಿತ್ತು. ೨೦ರ ಹರೆಯದಲ್ಲೇ ಅದೃಷ್ಟವಶಾತ್ ಅವರಿಗೆ ಸಿನೆಮಾರಂಗದಲ್ಲಿ ಅವಕಾಶ ದೊರೆಯಿತು. ಅಂದಿನ ಖ್ಯಾತ ನಟರಾಗಿದ್ದ ಅಶೋಕ್ ಕುಮಾರ್, ದಿಲೀಪ್ ಕುಮಾರ್ ಅವರಂತೆ ಇವರೂ ಮನೋಜ್ ಕುಮಾರ್ ಎನ್ನುವ ನಾಮಧಾರಿಯಾದರು. ೧೯೫೭ರಲ್ಲಿ ಇವರು ನಟಿಸಿದ ಮೊದಲ ಚಿತ್ರ ‘ಫ್ಯಾಶನ್’. ಆದರೆ ಈ ಚಿತ್ರ ಹೇಳ ಹೆಸರಿಲ್ಲದಂತೆ ನೆಲಕಚ್ಚಿತು. ಆದರೆ ದೃತಿಗೆಡದ ಮನೋಜ್ ಕುಮಾರ್ ಸತತವಾಗಿ ಸಹರಾ, ಚಾಂದ್, ಹನಿಮೂನ್, ಕಾಂಚ್ ಕಿ ಗುಡಿಯಾ, ಪಿಯಾ ಮಿಲನ್ ಕಿ ಆಸ್, ಸುಹಾಗ್ ಸಿಂಧೂರ್, ರೇಷ್ಮೀ ರುಮಾಲ್ ಮೊದಲಾದ ೭ ಚಿತ್ರಗಳಲ್ಲಿ ನಟಿಸಿದರು. ಇವುಗಳು ಯಾವುದೂ ಅವರ ಕೈ ಹಿಡಿಯಲಿಲ್ಲ. ಆದರೆ ಅವರ ಅದೃಷ್ಟದ ಬಲ ದೊಡ್ಡದಿತ್ತು. ನೋಡಲು ಸ್ಫುರದ್ರೂಪಿಯಾಗಿದ್ದ ಮನೋಜ್ ಕುಮಾರ್ ಅವರಿಗೆ ಸಿನೆಮಾ ರಂಗದಲ್ಲಿ ಅವಕಾಶಗಳು ಕಡಿಮೆಯಾಗಲಿಲ್ಲ. ೧೯೬೨ರಲ್ಲಿ ತೆರೆಕಂಡ ‘ಹರಿಯಾಲಿ ಔರ್ ರಾಸ್ತಾ’ ಚಿತ್ರ ಸೂಪರ್ ಹಿಟ್ ಆಗುವುದರೊಂದಿಗೆ ಮನೋಜ್ ಕುಮಾರ್ ಖ್ಯಾತಿಯತ್ತ ಮುಖ ಮಾಡಿದರು.
ನಂತರ ೧೯೬೫ರಲ್ಲಿ ತೆರೆಕಂಡ ‘ಶಹೀದ್’ ಚಿತ್ರ ಭಗತ್ ಸಿಂಗ್ ಜೀವನಾಧಾರಿತವಾಗಿತ್ತು. ಈ ಸಿನೆಮಾದ ನಟನೆಗೆ ಮನೋಜ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೂ ದೊರೆಯಿತು. ಪ್ರಶಸ್ತಿಯೊಂದಿಗೆ ದೊರೆತ ಹಣವನ್ನು ಮನೋಜ್ ಕುಮಾರ್ ಅವರು ಭಗತ್ ಸಿಂಗ್ ಅವರ ಕುಟುಂಬಕ್ಕೆ ನೀಡುವುದರ ಮೂಲಕ ತಾವು ನಿಜ ಜೀವನದಲ್ಲೂ ದೇಶಭಕ್ತರೇ ಎನ್ನುವುದನ್ನು ಸಾಬೀತು ಪಡಿಸಿದರು. ೧೯೬೫ರ ನಂತರದ ೨೦ ವರ್ಷಗಳು ಮನೋಜ್ ಕುಮಾರ್ ಜೀವನದ ಸ್ವರ್ಣ ಯುಗವೆಂದೇ ಹೇಳಬಹುದು. ಅವರು ನಟಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾದವು. ಆ ಸಮಯದಲ್ಲಿ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಮೊದಲಾದವರ ಚಿತ್ರಗಳೂ ಹಿಟ್ ಆಗುತ್ತಿದ್ದವು. ಇವರಂತೆ ಸೂಪರ್ ಸ್ಟಾರ್ ಅನಿಸಿಕೊಳ್ಳದೇ ಹೋದರೂ ಮನೋಜ್ ಕುಮಾರ್ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು ಎಂದರೆ ಸುಳ್ಳಾಗದು. ಇವರು ತಮ್ಮ ‘ಮಿಸ್ಟರ್ ಭಾರತ್’ ಇಮೇಜ್ ನಿಂದ ಹೊರ ಬರದೇ ಇದ್ದುದೂ ಒಂದು ರೀತಿಯಲ್ಲಿ ಅವರಿಗೆ ಪ್ಲಸ್ ಪಾಯಿಂಟ್ ಆಗಿತ್ತು ಎಂದರೆ ತಪ್ಪಲ್ಲ. ೧೯೭೦ರಲ್ಲಿ ತೆರೆಕಂಡ ‘ಪೂರಬ್ ಔರ್ ಪಶ್ಚಿಮ್’ ಎನ್ನುವ ಚಿತ್ರ ಅಭೂತಪೂರ್ವ ಗೆಲುವು ಸಾಧಿಸಿತು. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಉತ್ತಮ ಪ್ರದರ್ಶನ ಕಂಡಿತು. ಲಂಡನ್ ನಲ್ಲಿ ಸುಮಾರು ೫೦ ವಾರಗಳ ಪ್ರದರ್ಶನ ಕಂಡ ಮೊದಲ ಭಾರತೀಯ ಚಲನಚಿತ್ರವಾಗಿ ಗುರುತಿಸಿಕೊಂಡಿತು.
ಇವರ ವೃತ್ತಿ ಜೀವನದ ಯಶಸ್ವಿ ಚಿತ್ರಗಳೆಂದರೆ ವೋ ಕೌನ್ ಥೀ?, ಹಿಮಾಲಯ್ ಕಿ ಗೋದ್ ಮೇ, ದೋ ಬದನ್, ಪತ್ತರ್ ಕಿ ಸನಮ್, ಶೋರ್, ಕ್ರಾಂತಿ, ಉಪಕಾರ್, ಗೂಮ್ ನಾಮ್, ರೋಟಿ ಕಪಡಾ ಔರ್ ಮಕಾನ್,ಸನ್ಯಾಸಿ, ದಸ್ ನಂಬರಿ ಮೊದಲಾದುವುಗಳು. ಜಿಂದಗೀ ಕಿ ನ ಟೂಟೇ ಲಡಿ, ಪ್ಯಾರ್ ಕರ್ಲೆ ಘಡಿ ದೋ ಘಡಿ, ತೀನ್ ರಂಗ್ ಕಿ ಡೋಲಿ, ಪ್ರೀತ್ ಯಹಾಂ ಕಿ ರೀತ್ ಸದಾ, ಇಕ್ ಪ್ಯಾರ್ ಕಾ ನಗಮಾ ಹೈ, ಮೈನ್ ನಾ ಭೂಲೂಂಗಾ ಮೊದಲಾದ ಹಾಡುಗಳು ೫ ದಶಕಗಳ ಬಳಿಕ ಈಗಲೂ ಮತ್ತೆ ಮತ್ತೆ ಆಲಿಸುವ ಎಂದು ಮನಸ್ಸಾಗುತ್ತದೆ. ನಟ, ನಿರ್ದೇಶಕ, ಗೀತೆ ರಚನೆಕಾರ, ಕಥೆಗಾರ ಎಲ್ಲವೂ ಆಗಿದ್ದ ಇವರು ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗುವ ಮೂಲಕ ರಾಜಕೀಯದಲ್ಲೂ ಸಕ್ರಿಯರಾಗಿದ್ದರು.
ದೇಶದ ಜ್ವಲಂತ ಸಮಸ್ಯೆಗಳನ್ನು ತಮ್ಮ ಚಲನಚಿತ್ರಗಳ ಮೂಲಕ ಬೆಳಕು ಚೆಲ್ಲುತ್ತಿದ್ದ ಮನೋಜ್ ಕುಮಾರ್ ಅವರು ಮುಂಬೈಯಲ್ಲಿ ಎಪ್ರಿಲ್ ೪, ೨೦೨೫ರಂದು ನಮ್ಮನ್ನು ಅಗಲಿದ್ದಾರೆ. ಶಶಿ ಗೋಸ್ವಾಮಿ ಇವರ ಧರ್ಮಪತ್ನಿ. ಕುನಾಲ್ ಗೋಸ್ವಾಮಿ ಮತ್ತು ವಿಶಾಲ್ ಗೋಸ್ವಾಮಿ ಇವರ ಪುತ್ರರು. ಧೀಮಂತ ರಾಷ್ಟ್ರ ಪ್ರೇಮಿಯಾಗಿದ್ದ ಮನೋಜ್ ಕುಮಾರ್ ಆವರಿಗೆ ೨೦೧೫ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ೧೯೯೨ರಲ್ಲಿ ಪದ್ಮಶ್ರೀ, ೧೯೬೭ರಲ್ಲಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಹಾಗೂ ನಾಲ್ಕು ಬಾರಿ ಫಿಲಂ ಫೇರ್ ಪ್ರಶಸ್ತಿಗಳು ದೊರೆತಿವೆ. ೮೭ ವರ್ಷಗಳ ಸಾರ್ಥಕ ಬದುಕು ಕಂಡ ಅದ್ಭುತ ನಟ, ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಚಿತ್ರ ಕೃಪೆ: ಅಂತರ್ಜಾಲ ತಾಣ