‘ಮೊದಲ ಪಂಕ್ತಿಯೂ..ಕೊನೆಯ ಪಂಕ್ತಿಯೂ..ಬರೆದೆನು ಕಣ್ಣೀರಲಿ’

‘ಮೊದಲ ಪಂಕ್ತಿಯೂ..ಕೊನೆಯ ಪಂಕ್ತಿಯೂ..ಬರೆದೆನು ಕಣ್ಣೀರಲಿ’

ಬರಹ

ಮೊದಲ ಪುಟಕೂ..ಕೊನೆಯ ಪುಟಕೂ ನಡುವೆ ಎನಿತು ಅಂತರ....



ಭಾರತಿ ವಿಷ್ಣುವರ್ಧನ್. ‘ಸ್ಯಾಂಡಲ್ ವುಡ್’ -ಗಂಧದ ಗುಡಿಯ ಯಶಸ್ವಿ ನಟ, ಅಸ್ತಂಗತ ವಿಷ್ಣುವರ್ಧನ್ ಹಿಂದಿನ ಸ್ಪೂರ್ತಿ. ೩೫ ವರ್ಷಗಳ ಕಾಲ ಪರಸ್ಪರ ಗೌರವಿಸುತ್ತ, ಒಬ್ಬರಮೇಲೊಬ್ಬರು ಹಕ್ಕನ್ನು ಸ್ಥಾಪಿಸದೇ, ವಯಕ್ತಿಕ ಸ್ವಾತಂತ್ರ್ಯಗಳಿಗೆ ಮನ್ನಣೆ ಇತ್ತು ‘ಹೀಗೆ ಬದುಕಬೇಕು’ ‘ದಾಂಪತ್ಯ ಎಂದರೆ ಇದು’ ಎಂಬುವಂತೆ ಬದುಕಿ-ಬಾಳಿ ತೋರಿಸಿ, ದಾಂಪತ್ಯಕ್ಕೊಂದು ಉದಾತ್ತವಾದ ಭಾಷ್ಯೆ ಬರೆದವರು ಈ ತಾರಾ ದಂಪತಿ. ನಿನ್ನೆಗೆ ಇಹದ ವ್ಯಾಪರ ಮುಗಿಸಿ ವಿಷ್ಣುವರ್ಧನ್ ಹೊರಟುನಿಂತಾಗ, ಇನ್ನೆಂದಿಗೂ ಮರಳಿ ಬಾರದ ಲೋಕಕ್ಕೆ ಹೋದ ತನ್ನ ಜೀವದ ಸಂಗಾತಿಯನ್ನು ಕಳೆದುಕೊಂಡ ದು:ಖದಲ್ಲೂ  ಭಾರತಿ ಅವರು ಮೆರೆದ ಸ್ಥಿತಪ್ರಜ್ಞತೆ ನಮ್ಮ ಕಣ್ಣನ್ನು ಹನಿಗೂಡಿಸಿತು.





ವಿಷ್ಣುವರ್ಧನ್ ಅವರ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಸಿಗಲಿಲ್ಲ ಎಂಬ ಕಾರಣವನ್ನೇ ಮುಂದುಮಾಡಿಕೊಂಡು ಕೆಲವರು ಹಿಂಸಾಚರಕ್ಕೆ ಇಳಿದರು. ಕಲ್ಲುಗಳನ್ನು ಎಸೆದರು, ಪೊಲೀಸರ ಮೇಲೆ ಎರಗಿ ಹಲ್ಲೆಗೂ ಮುಂದಾದರು, ಅಂಗಡಿಗಳನ್ನು ಲೂಟಿ ಮಾಡಿದರು, ಪೊಲೀಸ್ ವಾಹನ ಸೇರಿದಂತೆ ಖಾಸಗಿ ವಾಹನಗಳಿಗೂ ಬೆಂಕಿ ಹಚ್ಚಿದರು. ರಸ್ತೆ ಮಧ್ಯೆ ಟಾಯರ್ ಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿಯ ಲಾಭ ಪಡೆಯಲು ಹವಣಿಸಿದ ಕೆಲವರಿಗೆ ಪಾಠ ಕಲಿಸಲು ಪೊಲೀಸರು ಸಾಮೂಹಿಕವಾಗಿ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿ, ಗುಂಪುಗಳನ್ನು ಚದುರಿಸಲು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ತಹಬದಿಗೆ ತರಲು ಇನ್ನಿಲ್ಲದ ಕಸರತ್ತು ನಡೆಸಿದರು. ಅಮಾಯಕರು  ಪೆಟ್ಟು ತಿಂದರು. ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದರೆ, ಇನ್ನು ಕೆಲವರು ಆತ್ಮಾರ್ಪಣೆಯನ್ನೂ ಮಾಡಿದರು.. ಇಂತಹ ಅನಾಗರಿಕರಿಗೆ ಭಾರತಿ ಅವರು ಖಾಸಗಿ ಸುದ್ದಿ ವಾಹಿನಿಗಳ ಮೂಲಕ ಕೈಮುಗಿದು ಬೇಡಿಕೊಂಡು ಶಾಂತವಾಗಿರುವಂತೆ ಮಾಡಿದ ಮನವಿ ದೂರದ ಧಾರವಾಡದಲ್ಲಿ ಕುಳಿತಿದ್ದ ನಮ್ಮಂಥವರ ಕಣ್ಣಾಲೆಗಳನ್ನು ತೇವಗೊಳಿಸಿತು. ಅವರಿಗೆ ಅತ್ತು ಹಗುರವಾಗಲೂ ಕೂಡ ಅವಕಾಶ ಮಾಡಿಕೊಡದೇ ಈ ಪರಿಯ ಅಸಹಾಯಕ ಸ್ಥಿತಿಗೆ ನೂಕಿದ ‘ಅಭಿಮಾನದ ಪರಿ’ ಕಂಡು ನಾವು ಮಮ್ಮಲ ಮರುಗಿದೆವು. ಹೃದಯ ಹಿಂಡಿದ ಅನುಭವವಾಯಿತು. ಶಾಂತಿ ಪ್ರಿಯ ನಟನಿಗೆ ಅಭಿಮಾನಿಗಳು ಎಂದು ಕರೆಯಿಸಿಕೊಂಡವರು, ಹೇಳಿಕೊಂಡವರು ನಡೆದುಕೊಂಡ ಪರಿ ಸಿಟ್ಟು ತರಿಸಿತು.



ಖಾಸಗಿ ಸುದ್ದಿ ಚಾನೆಲ್ ನಿರೂಪಕರೊಬ್ಬರು ಭಾರತಿ ಅವರಿಗೆ ಕೇಳಿದ ಪ್ರಶ್ನೆ "ಮೇಡಂ..ವಿಷ್ಣುವರ್ಧನ್ ಅವರ ಸಾವಿನ ಹಿನ್ನೆಲೆ ಏನು?" ಅವರು ಸಾತ್ವಿಕ ಸಿಟ್ಟು ತೋರಿದಂತೆ ಮೈಕ್ ಗಳನ್ನು ತಳ್ಳಿ, ಉಬ್ಬಿದ ಗಂಟಲು, ತುಂಬಿ ಬಂದ ಕಣ್ಣಾಲೆಗಳನ್ನು ಮುಚ್ಚಿ ಒಳನಡೆದ ದೃಶ್ಯ ನೋಡುಗರ ಮನ ನೋಯಿಸಿತು. ಭಗವಂತ ನಮ್ಮ ಸರಕಾರಿ ಅಧಿಕಾರಿಗಳಂತೆ (ಕ್ಷಮಿಸಿ ಇಲ್ಲಿ ‘ಅಭಿಮಾನಿಗಳಂತೆ’) ಯಾವುದಕ್ಕೂ ಹೊಣೆಗಾರನಲ್ಲ. ಅದಕ್ಕೊಂದು ಕಾರಣವನ್ನು ಸಹ ತಾನೇ ಪೋಣಿಸಿ, ಅದನ್ನೇ ಉತ್ತರ ವೆಂಬಂತೆ ಕೊರಳಿಗೆ ಹಾಕಿ ಅಲ್ಲಿಗೆ ಕರೆದೊಯ್ಯುತ್ತಾನೆ. ಇದು ವ್ಯವಹಾರ ಜ್ಞಾನ. ಭಾರತಿ ಆ ಹಂತದಲ್ಲಿ ಯಾವ ಉತ್ತರವನ್ನು ತಾನೇ ಕೊಡಬಲ್ಲರು? ಇದನ್ನು ನಾವು ಅರಗಿಸಿಕೊಳ್ಳುವ ಮೊದಲೇ ‘ಮೇಡಂ..ನಿಮಗೇನನ್ನಿಸುತ್ತಿದೆ ಈ ಕ್ಷಣದಲ್ಲಿ?" ಹತ್ತೇ ನಿಮಿಷದಲ್ಲಿ ಮತ್ತೊಂದು ಸುದ್ದಿಯ live ಚಾನೆಲ್ ವರದಿಗಾರ ಪ್ರಶ್ನಿಸಿದ! ಸಾವಿನ ಮನೆಯಲ್ಲೂ ಸುದ್ದಿ ಹಸಿವೆ? ಸೂತಕದ ಮನೆಯಲ್ಲಿ ಚಕ್ಕಳಬಕ್ಕಳ ಹಾಕಿಕೊಂಡು ಕುಳಿತು ಊಟ ಉಣಬಡಿಸಿ ಎಂದು ಕೇಳಿದಂತೆ.



ಈ ಎಲ್ಲ ವಿಷಯದಲ್ಲಿ ಭಾರತಿ ಅವರ ಪ್ರಸಂಗಾವಧಾನ ಮೆಚ್ಚಬೇಕಾದದ್ದೇ. ಅವರು ಮೌನವಾಗಿ ರೋಧಿಸಿದರು. ಆತ್ಮಸಂಯಮದಿಂದ ವರ್ತಿಸಿದರು. ಸಾರ್ವಜನಿಕವಾಗಿ ವಿಷ್ಣುವರ್ಧನ್ ಅವರು ತಮ್ಮ ಶ್ರೀಮತಿ ಭಾರತಿ ಕುರಿತು ಹೇಳಿದ ಮಾತು -‘I owe a lot to her and I don't deserve her' ನನಗೆ ನೆನಪಾಯಿತು. ವಿಷ್ಣುವರ್ಧನ್ ಅಭಿಮಾನದಿಂದ ಹೇಳಿದ ಮಾತು.. "ನಾವು ಗಂಡಸರು ಮನೆಯ ಬಾವಿ ಇದ್ದಹಾಗೆ. ಹುಟ್ಟಿದ ಮನೆಗೆ ಮಾತ್ರ ಉಪಯೋಗವಾಗುವವರು. ಆದರೆ ಹೆಣ್ಣು ಹಾಗಲ್ಲ..ಹರಿಯುವ ಜೀವನದಿ ಕಾವೇರಿ ಇದ್ದಹಾಗೆ. ಹುಟ್ಟಿದ ಮನೆಗೆ ಮಾತ್ರವಲ್ಲ..ಕೊಟ್ಟ ಮನೆಯನ್ನೂ ಪೊರೆಯಬಲ್ಲ ಕಣ್ಣು. ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಗಂಡನ ವಂಶ ಉದ್ಧಾರಕ್ಕಾಗಿ ತನ್ನ ಅಸ್ತಿತ್ವವನ್ನೇ ಧಾರೆ ಎರೆಯುವ ಎರಡನೇ ತಾಯಿ ಹೆಂಡತಿ" ಭಾರತಿ ವಿಷ್ಣುವರ್ಧನ್ ಈ ಮಾತಿಗೆ ಭೂಷಣ, ಅಲಂಕಾರ; ಅನ್ವರ್ಥಕ.



ವಿಷ್ಣುವರ್ಧನ್ ತಾಯಿ ಆಗ್ರಹ ಪಡಿಸಿ ಮನೆಯ ಕಂಪೌಂಡ್ ಹಾಗೂ ಗೇಟ್ ಗಳನ್ನು ಆಕಾಶದೆತ್ತರಕ್ಕೆ ನಿರ್ಮಿಸುವಂತೆ ಮಾಡಿದ್ದರು. ಕಾರಣ ಅದು ಮನೆ. ಮನೆಯ ಖಾಸಗೀತನಕ್ಕೆ ಧಕ್ಕೆ ಬರಬಾರದು. ಹಾಗೆಯೇ ಹೊರಗಿನ ವಿಚಾರಗಳು ಮನೆಯನ್ನು ಪ್ರವೇಶಿಸಬಾರದು; ಮನೆಯ ಸಂಗತಿಗಳು ಗೋಡೆದಾಟಿ ಆಚೆ ಹೋಗಬಾರದು. ಭಾರತಿ ಅಕ್ಷರಶ: ಹಾಗೆ ನಡೆದರು. ಮನೆಯ ಯಜಮಾನನ ಸ್ಥಾನವನ್ನು ಈ ಯಜಮಾನ್ಯೆ ಸಮರ್ಥವಾಗಿ ತುಂಬಿ ಕೊಟ್ಟರು. ರಾಷ್ಟ್ರಕವಿ ಕುವೆಂಪು ಮಗಳು ತಾರಿಣಿ ಡಾ. ಚಿದಾನಂದ ಗೌಡರನ್ನು ಮದುವೆಯಾದಮೇಲೆ ಚಿದಾನಂದ ಗೌಡರು ವಿಶ್ವವಿದ್ಯಾಲಯಕ್ಕೆ ತೆರಳುವ ಮುನ್ನ ಬಾಗಿಲಲ್ಲಿ ನಿಂತು ಹೇಳುತ್ತಿದ್ದರಂತೆ.."ರೀ..ಪರ ಚರ್ಚೆ ಹಾಗೂ ಪರ ನಿಂದೆ ಬೇಡ"! ಈ ಕುರಿತು ಭಾರತಿ ಹಾಗೂ ವಿಷ್ಣುವರ್ಧನ್ ಅವರ ಬಗ್ಗೆ ಹೆಚ್ಚೇನೂ ನಾನು ಹೇಳಲು ಬಯಸುವುದಿಲ್ಲ. ಕಾರಣ ಹಾಗೆ ಬದುಕಿ ತೋರಿಸಿದರು ಅವರು.



ಹಿರಿಯ ಕಲಾವಿದ ಶಿವರಾಮಣ್ಣ ದೊಡ್ಡ ಖಂಬದಂತೆ ನಿಂತು ಎಲ್ಲ ವಿಧಿ-ವಿಧಾನಗಳನ್ನು ನೆರವೇರಿಸಿದ್ದು, ಹಿರಿಯ ಕಲಾವಿದೆ ಲೀಲಾವತಿ, ವಿಷ್ಣುವರ್ಧನ್ ಅವರ ಹಲವಾರು ಚಿತ್ರಗಳಲ್ಲಿ ತಾಯಿ ಪಾತ್ರ ಮಾಡಿದ ಮಹಾತಾಯಿ ಮಗ ವಿನೋದ್ ರಾಜ್ ಅವರೊಂದಿಗೆ ಅಂತಿಮ ದರ್ಶನಕ್ಕೆ ಬಂದಾಗ..ಭಾರತಿ ಅವರು ಅಪ್ಪಿಕೊಂಡು ಅತ್ತಿದ್ದು, ಬೆಳ್ಳಿ ತೆರೆಯ ಪತಿಯನ್ನು ನೋಡಲು ಸುಹಾಸಿನಿ ಮಣಿರತ್ನಂ ಚೆನ್ನೈ ನಿಂದ ಬಂದಾಗ ‘ಬಂಧನ’ ಕಳಚಿದ, ‘ಮುತ್ತಿನ ಹಾರ‘ ಹರಿದು ಬಿದ್ದ ಅನುಭವವಾಯಿತು. ಚಾಮಯ್ಯ ಮೇಷ್ಟ್ರು ಕೆ.ಎಸ್. ಅಶ್ವಥ್ ದೂರದರ್ಶನಕ್ಕೆ ಸಂದರ್ಶನ ನೀಡಿ ೩೭ ವರ್ಷಗಳ ಹಿಂದೆ ನಾಗರಾವು ಚಿತ್ರದಲ್ಲಿ ನಟಿಸಿದ್ದನ್ನು ಸ್ಮರಿಸಿದಾಗ ‘ಮೇಷ್ಟ್ರೇ ನೀವು ಅಡ್ದ ಬರಬೇಡಿ’ ಎಂದು ಚಿತ್ರದುರ್ಗದ ಕಲ್ಲಿನ ಕೋಟೆ ಹತ್ತಿ ನಿಂತು ಧಮಕಿ ಹಾಕಿ ತನ್ನ ಜಿದ್ದನ್ನೇ ಸಾಧಿಸಿದ ಪರಿ, ಜಯಂತಿ ಅವರು ಕುಸಿದು ಬಿದ್ದು ಮೂರ್ಛೆ ಹೋದಾಗ ನಮ್ಮ ಕಣ್ಣೀರು ಅರಿವಿಗೆ ಬಾರದಂತೆ ಕೆನ್ನೆಯ ಮೇಲೆ ಜಾರಿದವು. ಜೀವದ ಗೆಳೆಯ ಅಂಬರೀಷ್ ಸ್ವತ: ಕೈಯಲ್ಲಿ ಧ್ವನಿವರ್ಧಕ ಹಿಡಿದು ‘ಅಪ್ಪಾ..ಅಭಿಮಾನಿಗಳಾ ನಲ್ವತ್ತು ವರ್ಷ ನಮಗೆ ಅನ್ನ ಹಾಕಿದ್ದೀರಾ. ಕೈ ಮುಗಿದು ಬೇಡ್ತೀನಿ..ದಯವಿಟ್ಟು ಅವರ ಮನೆಯವರಿಗೆ ನೋಡಲು ಅವಕಾಶ ಮಾಡಿ ಕೊಡ್ರಪಾ..ತಳ್ಳೋದು-ನೂಕೋದು ಮಾಡಬ್ಯಾಡ್ರಪಾ..ಒಂದ ಅರ್ಧ ಗಂಟೆ ಶಾಂತವಾಗಿರ್ರೀ..ಮನೆಯವರ ಪರಿಸ್ಥಿತಿ ಅರ್ಥ ಮಾಡಿಕೊಳ್ರೀ ಅನ್ನದಾತರಾ’ ಎಂದು ಮನವಿ ಮಾಡುತ್ತ ತೆರೆಯ ಮರೆಗೆ ಸರಿದು ಬಿಕ್ಕಿ ಬಿಕ್ಕಿ ದು:ಖಿಸಿದ, ಹಿರಿಯ ನಟ ಶ್ರೀನಾಥ್ ಸಂತೈಸುತ್ತ ಅತ್ತ ಪರಿ ‘ವಿಷ್ಣುವರ್ಧನ್ ನೀವು ಹೀಗೆ ಹೇಳದೇ ಹೋಗಬಹುದೇ? ಇದಕ್ಕೆಲ್ಲ ನೀವೇ ಕಾರಣ’ ಎಂದು ವ್ಯಗ್ರಗೊಂಡಿತು ಮನಸ್ಸು.



ಸರಕಾರದ ಸಕಲ ಗೌರವದೊಂದಿಗೆ, ಬಂದೂಕುಗಳ ಕುಶಾಲ ತೋಪಿನ ಸಲಾಮಿಗೆ, ಶೋಕ ಶಸ್ತ್ರ ಸಲಾಮಿಗೆ, ಜನ ಗಣ ಮನ ಮೊಳಗಿಸಿದಾಗ, ಪಾರ್ಥಿವ ಶರೀರದ ಮೇಲೆ ಗೌರವಾರ್ಥ ಹೊದಿಸಲಾಗಿದ್ದ ಭಾರತದ ತ್ರಿವರ್ಣ ಧ್ವಜ ಅಧಿಕಾರಿಗಳು ಶಿಷ್ಠಾಚಾರದಂತೆ ಮಡಿಕೆ ಮಾಡಿ ಅಭಿನಯ ಭಾರ್ಗವನ ಕುಟುಂಬಕ್ಕೆ ಹಸ್ತಾಂತರಿಸಿದ ರೀತಿ ಮನಮಿಡಿಸಿತು.



ಅಭಿಮಾನ್ ಸ್ಟುಡಿಯೋದಲ್ಲಿನ ನೂಕು ನುಗ್ಗಲಿಗೆ ಕಿಂಚಿತ್ತೂ ಬೇಜಾರು ಪಡದೇ..ಶಾಂತವಾಗಿ ಪತಿಯ ಪ್ರದಕ್ಷಿಣೆ ಹಾಕಿದ ಭಾರತಿ ಅವರು ವಿಷ್ಣುವರ್ಧನ್ ಪಾರ್ಥಿವ ಶರೀರದ ಹಣೆಗೆ ಮುತ್ತಿಟ್ಟಾಗ ದು:ಖ ತಡೆಯಲಾಗದೇ ಅತ್ತೆವು..ಅತ್ತೆವು. ತಲೆ ನೇವರಿಸಿ, ಮತ್ತೊಮ್ಮೆ ಮಗುದೊಮ್ಮೆ ವಿಷ್ಣುವರ್ಧನ್ ಅವರನ್ನು ದಿಟ್ಟಿಸಿ ನೋಡಿದ ಅವರು ಗಲ್ಲ ಹಿಡಿದು, ಅಪ್ಪಿ, ಭಾರತದ ತ್ರಿವರ್ಣ ಧ್ವಜ ಮಡಿಕೆ ಮಾಡಿ ಹಿಡಿದಿದ್ದ ಮಕ್ಕಳನ್ನು ಸಹ ಹತ್ತಿರಕ್ಕೆ ಕರೆದು ತೋರಿಸಿ ಅಲ್ಲಿಂದ ನಿರ್ಗಮಿಸಿದರು. ವಿಷ್ಣುವರ್ಧನ್ ಅವರ ಹಿರಿ ಅಣ್ಣ ರವಿ ಅಗ್ನಿ ಸ್ಪರ್ಷ ಮಾಡಿದಾಗ..ಅಲ್ಲಿಯತನಕ ತಾಳ್ಮೆಯಿಂದ ಇದ್ದ ಹಿರಿಯ ನಟ ಶಿವರಾಮಣ್ಣ ಬಿಕ್ಕಿ ಬಿಕ್ಕಿ ಅತ್ತಾಗ ಆ ಜ್ವಾಲೆಯ ಬಿಸಿ ನಮ್ಮನ್ನು ಆವರಿಸದೇ ಬಿಡಲಿಲ್ಲ.    



ವಿಷ್ಣುವರ್ಧನ್ ಅವರ ಮೂರ್ತಿ ಸ್ಥಾಪಿಸಲಿ, ಸ್ಮಾರಕ ನಿರ್ಮಾಣ ಮಾಡಲಿ, ವಿಶ್ವವಿದ್ಯಾಲಯಗಳಲ್ಲಿ ಅವರ ಹೆಸರಿನ ಅಧ್ಯಯನ ಪೀಠ ಸ್ಥಾಪನೆಯಾಗಲಿ, ಫಿಲ್ಮ್ ಸಿಟಿಗೆ ಅವರ ಹೆಸರಾಗಲಿ..ಹೀಗೆ ಬೇಡಿಕೆಗಳು ‘ಅಭಿಮಾನಿಗಳ’ ಪರವಾಗಿ ಸಾವಿರ ಇರಬಹುದು. ನೂರಾರು ಬೇಡಿಕೆಗಳಿಗೆ ಸರಕಾರವೂ ಸ್ಪಂದಿಸಬಹುದು. ಆದರೆ ಮಹಾನ್ ನಟ ವಿಷ್ಣುವರ್ಧನ್ ತಮ್ಮ ಜೀವನದಲ್ಲಿ ಪಾಲಿಸಿದ ಆದರ್ಶಗಳು, ಎತ್ತಿ ಹಿಡಿದ ಜೀವನ ಮೌಲ್ಯಗಳು, ಬಾಳಿದ ಉದಾತ್ತ ಬದುಕಿನಿಂದ ನಾವು ಚೂರಾದರೂ ನಮ್ಮ ಜೀವನದಲ್ಲಿ ಜಾಗೆ ನೀಡುವುದು ಬೇಡವೇ? ಕೊನೆಯ ಪಕ್ಷ ಭಾರತಿ ಅವರನ್ನಾದರೂ ನಾವು ಕೇಳಬೇಡವೇ? ‘ವಿಷ್ಣುವರ್ಧನ್ ತಮ್ಮನ್ನು ಕನ್ನಡನಾಡಿನ ಜನ ಹೇಗೆ ಸ್ಮರಿಸಿಕೊಳ್ಳಬೇಕು ಎಂದು ಬಯಸುತ್ತಿದ್ದರು’ ಎಂದು?



ಇಲ್ಲ..ಮತ್ತೆ ಎಲ್ಲ ಬಲ್ಲವರಂತೆ....



ಮೊದಲ ಪುಟದ ‘ಸಂಪತ್ ಕುಮಾರ್’..ಕೊನೆಯ ಪುಟದ ವಿಷ್ಣುವರ್ಧನ್ ಅವರ ಜೀವನದಲ್ಲಂತೂ ‘ಸ್ನೇಹ ಸಾವಿರ’ ಬಂದು ಹೋಗಿವೆ..