‘ಯಮ ದ್ವಿತೀಯಾ’ ಎಂದರೇನು ಗೊತ್ತೇ?
ಕಾರ್ತಿಕ ಮಾಸದ ಈ ದೀಪಾವಳಿಯ ಮೂರು ದಿನಗಳ ಸಂಭ್ರಮ, ಸಡಗರ ಮುಗಿಯಿತು. ಈನ್ನೇನಿದ್ದರೂ ಪಾಡ್ಯದ ಅನಂತರ ವೃದ್ಧಿಸುವಿಕೆಯ ಪರ್ವ. ನಾವು ನಮ್ಮ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸಬೇಕೆಂಬ ಸಂಕೇತ. ಚಂದ್ರನ ವೃದ್ಧಿಯಾದಂತೆ ನಮ್ಮ ವೃದ್ಧಿ, ಏಳಿಗೆಯಾಗಬೇಕು.
ಮಾನವ ಸಹಜವಾದ ಕೋಪ-ತಾಪ, ಸಿಟ್ಟು, ದ್ವೇಷ, ಮತ್ಸರ ಎಲ್ಲವನ್ನೂ ದೀಪಜ್ಯೋತಿಯ ಮೂಲಕ ಸುಟ್ಟಿದ್ದೇವೆ. ಇನ್ನೆಲ್ಲೆಡೆ ಹೊಸಬೆಳಕಿಗೆ ಸ್ವಾಗತ. ಈ ನಿಟ್ಟಿನಲ್ಲಿ ಪಾಡ್ಯದ ಮರುದಿನ ಸಹೋದರತ್ವದ ಒಂದು ಪೌರಾಣಿಕ ಹಿನ್ನೆಲೆಯ ಕಥೆಯಿದೆ. ನಂಬಿಕೆ ಅವರವರಿಗೆ ಬಿಟ್ಟ ವಿಚಾರ. (ನೀನು ನೋಡಿದ್ದೀಯಾ ಎಂದರೆ ಅದಕ್ಕೆ ಮೌನ).
ದೀಪಾವಳಿಯ ಈ ಸಹೋದರ ಬಿದಿಗೆಗೆ ‘ಯಮ ದ್ವಿತೀಯಾ’ ಎನ್ನುತ್ತಾರೆ. ನನಗೂ ಪುರಾಣಗಳ ಬಗ್ಗೆ ಓದುವಾಗ ದೊರೆತ ಮಾಹಿತಿಯಿದು. ಮೃತ್ಯುದೇವತೆ, ಸೂರ್ಯ ಸಂಧ್ಯಾದೇವಿಯರ ಪುತ್ರ, ದಕ್ಷಿಣ ದಿಕ್ಕಿನ ಅಧಿಪತಿ, ಕೋಣ ವಾಹನ ಹೊಂದಿದವನೇ ಯಮ. ಈತ ಧರ್ಮಾತ್ಮನಾದ ಕಾರಣ ಯಮಧರ್ಮರಾಜ. ಅಂತಕ, ಕಾಲ, ನೀಲ, ವೃಕೋದರ, ಔದಂಬರ ಹೆಸರುಗಳಿಂದಲೂ ಪ್ರಸಿದ್ಧಿ.
*ಓಂ ಯಮಾಯ ಧರ್ಮರಾಜಾಯ/*
*ಮೃತ್ಯುವೇ ಚಾಂತ್ತಕಾಯಚ:/*
*ವೈವಸ್ವಿತಾಯಾ ಕಾಲಾಯ/*
*ಸರ್ವಭೂತಕ್ಷಯಾಯಚ*://
*ಔದಂಬರಾಯ ದದ್ನಾಯ/*
*ನೀಲಾಯ ಪರಮೇಷ್ಠಿನೇ//*
*ವೃಕೋದರಾಯ ಚಿತ್ರಾಯ/*
*ಚಿತ್ರ ಭುಕ್ತಾಯ ವೈನಮೋ ನಮ://*
ಯಮನ ತಂಗಿ ಯಮಿ. ತಮ್ಮ ಶನೀಶ್ವರ. ಛಾಯಾದೇವಿ ಪುತ್ರ. ಪತ್ನಿ ಊರ್ಮಿಳಾ ಅಥವಾ ಶ್ಯಾಮಲಾ. ತಂಗಿ ಯಮಿ ಸಹೋದರನನ್ನೇ ಬಯಸಿದಳೆಂದೂ, ಅಣ್ಣ ಬುದ್ಧಿ ಹೇಳಿದನೆಂದೂ, ಪ್ರಾಯಶ್ಚಿತ್ತವಾಗಿ ಆಕೆ ಯಮುನಾ ನದಿಯಾಗಿ ಭೂಲೋಕದಲ್ಲಿ ಹುಟ್ಟಿ ಹರಿದಳೆಂದೂ ಪ್ರತೀತಿ.
ಸಹೋದರಿಯ ಸವಿನೆನಪಿನಲ್ಲಿ ಯಮಧರ್ಮರಾಜನು ಈ ಬಿದಿಗೆಯ ದಿನದಂದು ಸೌಹಾರ್ದ ಭೇಟಿಗಾಗಿ ಬಂದು ಆತಿಥ್ಯ ಸ್ವೀಕರಿಸುತ್ತಾನೆ, ತಂಗಿಗೆ ವಿಶೇಷ ಉಡುಗೊರೆಗಳನ್ನು ನೀಡುತ್ತಾನೆಂಬ ನಂಬಿಕೆ. ಇನ್ನೂ ಒಂದೆಡೆ ನರಕದಲ್ಲಿರುವ ಎಲ್ಲರನ್ನೂ ಈ ಒಂದು ದಿನ ಪಾರುಮಾಡುತ್ತಾನಂತೆ. ಸ್ವಂತ ಸಹೋದರ ಇಲ್ಲದ ಸ್ತ್ರೀಯರು, ಇತರರನ್ನು ಅಣ್ಣನೆಂದು ಭಾವಿಸಿ ಆರತಿ ಬೆಳಗಬಹುದು. ಯಾರೂ ಇಲ್ಲದಿದ್ದಲ್ಲಿ ಚಂದ್ರನಿಗೆ ಆರತಿಯೆತ್ತಿ ನಮಸ್ಕರಿಸಬಹುದು.
ಅಪಮೃತ್ಯು, ಅಕಾಲಸಾವುಗಳನ್ನು ತಡೆಯಲು ಯಮಧರ್ಮನಿಗೆ ಆತನ ಹೆಸರುಗಳನ್ನು ಉಚ್ಛರಿಸುತ್ತಾ ತರ್ಪಣ ಬಿಟ್ಟರೆ ಶುಭವೆಂದು ಶಾಸ್ತ್ರದಲ್ಲಿ ನಂಬಲಾಗಿದೆ. ಇದುವೇ ಅಣ್ಣ-ತಂಗಿ ಬಾಂಧವ್ಯದ ಯಮ ದ್ವಿತೀಯಾ ಬಿದಿಗೆಯ ಪೌರಾಣಿಕ ಹಿನ್ನೆಲೆ.
(ಸಂಗ್ರಹ: ಪೌರಾಣಿಕ ಕಥಾ ಮಾಲಾ)
-ರತ್ನಾ ಕೆ.ಭಟ್,ತಲಂಜೇರಿ