‘ರಾಮೇಶ್ವರ’ದಲ್ಲೊಂದು ಪೋಲಿ ಸಿನಿಮಾ

‘ರಾಮೇಶ್ವರ’ದಲ್ಲೊಂದು ಪೋಲಿ ಸಿನಿಮಾ

ಖ್ಯಾತ ಕತೆಗಾರ, ಕಾದಂಬರಿಕಾರ ವಸುಧೇಂದ್ರ ಅವರು ತಮ್ಮ ಪ್ರಾರಂಭಿಕ ದಿನಗಳಲ್ಲಿ ಅಂದರೆ ಸುಮಾರು ೨೦ ವರ್ಷಗಳ ಹಿಂದೆ ಬರೆದ ಒಂದು ಲಲಿತ ಪ್ರಬಂಧವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದನ್ನು ಯಥಾವತ್ತಾಗಿ ಪ್ರಕಟ ಮಾಡುತ್ತಿರುವೆ. 

ನನಗೆ ಚಿಕ್ಕಂದಿನಿಂದಲೂ ಸಿನಿಮಾ ಹುಚ್ಚು. ಮನೆಯಲ್ಲಿ ಅತ್ತು-ಕರೆದು ಹಠ ಮಾಡಿ ಸಿನಿಮಾಕ್ಕೆ ಅಪ್ಪನ ಬಳಿ ರೊಕ್ಕ ಕೀಳುತ್ತಿದ್ದೆ. ನವರಾತ್ರಿ ಹಬ್ಬದಲ್ಲಿ ಬನ್ನಿಯ ಜೊತೆ ಕೊಟ್ಟ ದಕ್ಷಿಣೆಯನ್ನು ಕಲೆ ಹಾಕಿ ಸಿನಿಮಾಕ್ಕೆ ನುಗ್ಗುತ್ತಿದ್ದೆ. ಶನಿವಾರದ ದಿನ ಅಮ್ಮಗೆ ಬೆಳಗಿನ ಶಾಲೆಯ ಸಮಯಕ್ಕೆ ಫಲಹಾರ ತಯಾರಿಸಲು ಸಮಯವಿಲ್ಲದೆ ಕೈಗೆ ಒಂದಿಷ್ಟು ಚಿಲ್ಲರೆ ತುರುಕಿ “ಹೋಟಲಿನಲ್ಲಿ ಏನಾದರೂ ಕೊಂಡು ತಿನ್ನಿರಿ” ಎಂದು ಹೇಳಿದರೆ, ಉಪವಾಸವಿದ್ದು ಆ ಚಿಲ್ಲರೆಯಲ್ಲಿ ಸಿನಿಮಾಕ್ಕೆ ಹೋಗುತ್ತಿದ್ದೆ. ಮುಂದೆ ನನ್ನ ಓದು ಮುಗಿದು, ಮದ್ರಾಸಿನಲ್ಲಿ ಸಾಫ್ಟ್‍ವೇರ್ ಉದ್ಯೋಗ ದೊರೆತ ಪತ್ರ ಕೈಗೆ ಸಿಕ್ಕ ತಕ್ಷಣ “ಇನ್ನು ಎಷ್ಟು ಬೇಕೋ ಅಷ್ಟು ಸಿನಿಮಾ ನೋಡಬಹುದು” ಅಂತ ಖುಷಿಯಾಗಿತ್ತು. 

ಮದ್ರಾಸಿನಲ್ಲಿ ಬ್ರಹ್ಮಚಾರಿಗಳಿಗೆ ಸಂಸಾರಸ್ಥರ ಬಡಾವಣೆಯಲ್ಲಿ ಬಾಡಿಗೆ ಮನೆ ಸಿಗುವುದು ತುಂಬಾ ಕಷ್ಟ. ನಾನು ಮತ್ತು ನನ್ನಿಬ್ಬರು ಸಹೋದ್ಯೋಗಿಗಳು ಮನೆಗಾಗಿ ಹುಡುಕಿ ಹುಡುಕಿ ಬೇಸತ್ತು ಹೋಗಿದ್ದೆವು. ಕೊನೆಗೆ ಯಾರೋ ಪರಿಚಯದವರ ಶಿಫಾರಸ್ಸಿನೊಂದಿಗೆ ಒಂದು ಮನೆ ಸಿಕ್ಕಿತ್ತು. ಮನೆಯೊಡೆಯ ಮತ್ತು ಒಡತಿ, ನಾವು ಮೂವರನ್ನೂ ಕೂಡಿಸಿ ಅರ್ಧ ಗಂಟೆ ತಮಿಳಿನಲ್ಲಿ ನಾವು ಹೇಗೆ ಮರ್ಯಾದೆಯಿಂದ ಬದುಕಬೇಕೆಂದು ತಿಳಿ ಹೇಳಿದರು. ಸರಿಯೆಂದು ಗೋಣಲ್ಲಾಡಿಸಿದೆವು. ಮೂವರಿಗೂ ತಮಿಳು ಬರುತ್ತಿರಲಿಲ್ಲ!

ನನ್ನ ಸಹೋದ್ಯೋಗಿಗಳ ಹೆಸರು ಶ್ರೀನಿವಾಸುಲು ಮತ್ತು ಶಾಸ್ತ್ರಿ. ಇಬ್ಬರೂ ಆಂಧ್ರಪ್ರದೇಶದವರು. ಅವರಿಗೂ ನನ್ನಂತೆ ಸಿನಿಮಾ ಹುಚ್ಚಿತ್ತೆಂದು ಬೇರೆ ಹೇಳಬೇಕೆ? ವಾರಕ್ಕೆ ಐದು ಸಿನಿಮಾ ವನ್ನಾದರೂ ನೋಡದೆ ಬಿಡುತ್ತಿರಲಿಲ್ಲ. ವಾರಾಂತ್ಯದ ಮಾತು ಬಿಡಿ, ಕೆಲಸವಿದ್ದ ದಿನವೂ ಕಛೇರಿಯಿಂದ ಬಂದ ತಕ್ಷಣ ಗಬಗಬನೆ ಊಟ ಮಾಡಿದ್ದೇ ಎರಡನೆ ಆಟಕ್ಕೆ ಓಡುತ್ತಿದ್ದೆವು. ಬರೀ ಹಿಂದಿ, ಇಂಗ್ಲೀಷ್ ಸಿನಿಮಾ ಮಾತ್ರವಲ್ಲ, ತಮಿಳಿನ ಸಿನಿಮಾಗಳನ್ನು ನೋಡುತ್ತಿದ್ದೆವು. ಭಾಷೆ ಬರಲಿ ಬಿಡಲಿ, ಸಿನಿಮಾ ಥೇಟರಿನಲ್ಲಿ ಕುಳಿತು ಚಲಿಸುವ ಚಿತ್ರಗಳನ್ನು ನೋಡುವುದೇ ನಮಗೆ ಉಲ್ಲಾಸದಾಯಕವಾಗಿರುತ್ತಿತ್ತು. ದೂರ ದೂರದ ಥೇಟರುಗಳನ್ನು ಹುಡುಕಿಕೊಂಡು ಹೋಗಿ, ಬರುವಾಗ ಬಸ್ಸಿಲ್ಲದೆ ನಡೆದುಕೊಂಡು ಬರುತ್ತಿದ್ದೆವು. 

ಒಮ್ಮೆ ಜಪಾನಿ ಭಾಷೆಯ ಸಿನಿಮಾವೊಂದು ‘ರಾಮೇಶ್ವರ’ ಎನ್ನುವ ಥೇಟರಿಗೆ ಬಂತು. ಆ ಸಿನಿಮಾದ ಬಗ್ಗೆ ನಾನು ತುಂಬಾ ಓದಿದ್ದೆ. ಸಾವಿನ ಅಂಚಿನಲ್ಲಿರುವ ವ್ಯಕ್ತಿ ತನ್ನ ಉಳಿದ ದಿನಗಳಲ್ಲಿ ಸಮಾಜಕ್ಕೆ ಸಹಾಯ ಮಾಡುವದಕ್ಕಾಗಿ ಪರಿಶ್ರಮಿಸುವ ಹೃದಯಸ್ಪರ್ಶಿ ಕತೆಯದು. 1950ರ ಸುಮಾರಿನಲ್ಲಿ ತೆಗೆದ ಕಪ್ಪು-ಬಿಳುಪಿನ ಚಿತ್ರವದು. ಅದರಲ್ಲಿ ಸಾವಿನಂಚಿನಲ್ಲಿರುವ ಮುದುಕ ನಿರ್ಜನವಾದ ಪಾರ್ಕಿನಲ್ಲಿ ಉಯ್ಯಾಲೆಯಲ್ಲಿ ಕುಳಿತು ಹಾಡುತ್ತ ಜೀಕುವ ದೃಶ್ಯ ಬಹು ಪ್ರಸಿದ್ಧಿ. ಆ ಸಿನಿಮಾಕ್ಕೆ ಹೋಗೋಣವೆಂದು ಗೆಳೆಯರಿಗೆ ಸಲಹೆಯಿತ್ತೆ. ಬರೀ ತೆಲುಗಿನ ಮಸಾಲೆ ಸಿನಿಮಾಗಳಲ್ಲಿಯೇ ಬೆಳೆದ ಆಂಧ್ರದ ಗೆಳೆಯರು ನಾನು ಹೇಳಿದ ಕತೆ ಕೇಳಿ ಬರಲು ಹಿಂದೇಟು ಹಾಕಿದರು. ಕಪ್ಪು-ಬಿಳುಪು ಸಿನಿಮಾ ಎಂದು ಗೊತ್ತಾದ ತಕ್ಷಣ “ದಾರುಣಂ...” ಎಂದು ರಾಗವೆಳೆದರು. ಕೊನೆಗೆ ನಾನೊಬ್ಬನೇ ಹೊರಡುತ್ತೀನೆಂದು ತಯಾರಾದಾಗ “ಮಿತ್ರದ್ರೋಹಂ ಚೇಯಕು...” ಎಂದು ತಾವೂ ಜೊತೆಗೂಡಿದರು. 

ರಾತ್ರಿ ಎರಡನೆಯ ಆಟದ ಸಿನಿಮಾಕ್ಕೆ ಹೋಗಬೇಕಾದರೆ ನಮಗೊಂದು ಸಮಸ್ಯೆ ಎದುರಾಗುತ್ತಿತ್ತು. ಮದ್ರಾಸಿನಲ್ಲಿ ನೀರಿನ ಬರ ಎಲ್ಲರಿಗೂ ಗೊತ್ತಿದ್ದೇ ಅಲ್ಲವೆ? ಕುಡಿಯುವ ನೀರಿನ ಲಾರಿ ರಾತ್ರಿ ಹತ್ತಕ್ಕೆ ಬರುತ್ತಿತ್ತು. ನಮ್ಮ ರೇಶನ್ ಕಾರ್ಡನ್ನು ಒಯ್ದರೆ, ಅದರಲ್ಲಿ ಪೆನ್ನಿನಿಂದ ‘ಟಿಕ್’ ಮಾಡಿ, ಮನೆಗೊಂದರಂತೆ ಒಂದು ಕೊಡ ನೀರು ಕೊಡುತ್ತಿದ್ದರು. ತಪ್ಪಿಸಿಕೊಂಡರೆ ಮರುದಿನ ರಾತ್ರಿಯವರೆಗೆ ನೀರಿಲ್ಲ. ಆದಿತ್ಯವಾರ ವಾರದ ರಜ! ಆದ್ದರಿಂದ ನಮ್ಮ ಸ್ಟೀಲ್ ಕೊಡವನ್ನು ಹಿಡಿದುಕೊಂಡು ಮನೆಯೊಡೆಯನ ಮನೆಗೆ ಹೋದೆವು. 

ಮನೆಯೊಡೆಯ ಮತ್ತು ಮನೆಯೊಡತಿಯ ಕಣ್ಣಲ್ಲಿ ಈಗಾಗಲೇ ನಾವು ಒಳ್ಳೆಯ ಹುಡುಗರೆಂಬ “ಇಂಪ್ರೆಶನ್” ಮೂಡಿಸಿದ್ದೆವು. ಬಾಡಿಗೆ ಮನೆಗೆ ಬಂದ ದಿನದಿಂದ ಒಮ್ಮೆಯೂ ತಪ್ಪಿಸದಂತೆ ಬೆಳಿಗ್ಗೆ ಆರಕ್ಕೆ “ಕೌಸಲ್ಯಾ ಸುಪ್ರಜ ರಾಮಾ...” ಸುಪ್ರಭಾತದ ಕ್ಯಾಸೆಟ್ ಹಾಕಿ ಗೊರಕೆ ಹೊಡೆಯುತ್ತಿದ್ದೆವು. ಮೂವರೂ ಮೂಗಿನ ಮೇಲೆ ಕುಂಕುಮದ ಬಟ್ಟನ್ನು ಇಡುವದನ್ನು ಅಭ್ಯಾಸ ಮಾಡಿಕೊಂಡೆವು. ಆಗೊಮ್ಮೆ ಈಗೊಮ್ಮೆ ಗುಡಿಗಳಿಗೆ ನುಗ್ಗಿ ಬಂದು “ಮುರುಗನ್ ಪ್ರಸಾದ”, “ತಿರುಪತಿ ಲಡ್ಡು” ಎಂದೆಲ್ಲಾ ಕೊಟ್ಟು “ನಲ್ಲ ಮಾಪಿಳ್ಳೆಗಳ್...” ಎಂಬ ಬಿರುದನ್ನು ಪಡೆದಿದ್ದವು. ತಮಿಳು ಸಿನಿಮಾಗಳನ್ನು ಹೇರಳವಾಗಿ ನೋಡಿದ್ದರಿಂದ ಹರುಕು ಮುರುಕು ತಮಿಳು ಕೂಡಾ ಬರುತ್ತಿತ್ತು. 

ಮನೆಯೊಡೆಯ ಆಗಲೇ ಹಾಸಿಗೆ ಸೇರಿಯಾಗಿತ್ತು. ಮನೆಯೊಡತಿ ಅಳಿದುಳಿದ ಕೆಲಸಗಳಲ್ಲಿ ಮಗ್ನಳಾಗಿದ್ದಳು. ನಾವು ಕೊಡವನ್ನು ಕೊಟ್ಟು, ಸಿನಿಮಾಕ್ಕೆ ಹೋಗುವ ವಿಚಾರವನ್ನು ತಿಳಿಸಿದೆವು. ಅಷ್ಟಕ್ಕೇ ಸುಮ್ಮನಿರದೆ ಶ್ರೀನಿವಾಸುಲು “ರಾಮೇಶ್ವರ ಥೇಟರ್ ಎಲ್ಲಿ?” ಎಂದು ಕೇಳಿಬಿಟ್ಟ. ನಾವು ಒಮ್ಮೆಯೂ ಆ ಥೇಟರಿಗೆ ಹೋಗಿರಲಿಲ್ಲ. ರಾಮೇಶ್ವರದ ಹೆಸರು ಕೇಳುತ್ತಲೇ ಮನೆಯೊಡತಿ ಮುಖವನ್ನು ಸಿಂಡರಿಸಿಬಿಟ್ಟು “ಆಂಡವನೆ...” ಎಂದು ಉದ್ಗರಿಸಿದಳು. ನಮ್ಮೊಡನೆ ಮಾತನ್ನೂ ಆಡದೆ ಸೀದಾ ಕೋಣೆಗೆ ಹೋಗಿ, ಗಂಡನನ್ನು ಎಬ್ಬಿಸಿ “ಎಲ್ಲಾ ಮಾಪಿಳ್ಳೆಗಳಿಗೂ ಒಂದೇ ಕಲ್ಯಾಣ ಗುಣ. ನಾನೇನೋ ಇವು ಒಳ್ಳೇವು ಅಂದ್ಕೊಂಡಿದ್ದೆ. ರಾಮೇಶ್ವರಕ್ಕೆ ಹೋಗಲಿಕ್ಕೆ ಶುರು ಮಾಡಿವೆ” ಎಂದು ವಟಗುಟ್ಟಿದ್ದು ಕೇಳಿಸಿತು. ಮನೆ ಯೊಡೆಯ ಹೊರಬಂದ. “ರಾಮೇಶ್ವರ ವೇಂಡ. ಬೇರೆ ಥೇಟರ್‍ಗೆ ಪೋಂಗ” ಎಂದು ಶುರುವಿಟ್ಟ. ನನಗೆ ಕಿರಿಕಿರಿಯೆನ್ನಿಸಿತು. ಜಪಾನಿನ ಮಹತ್ವದ ಚಿತ್ರವದೆಂದು ವಿವರಿಸಲು ಹೆಣಗಾಡತೊಡಗಿದೆ. ಒಳಗೆ ಮನೆಯೊಡತಿ ಪಾತ್ರೆಗಳನ್ನು ದಬದಬನೆ ಬೀಳಿಸುತ್ತಾ, ಕುಕ್ಕುತ್ತಾ ಸದ್ದು ಮಾಡುತ್ತಿದ್ದಳು. ಬೇಸತ್ತ ಮನೆಯೊಡೆಯ ಕೊನೆಗೆ ರಾಮೇಶ್ವರದ ದಾರಿಯನ್ನು ಹೇಳಿ, ಬಾಗಿಲು ಹಾಕಿಕೊಂಡ. ಶಾಸ್ತ್ರಿ, ಶ್ರೀನಿವಾಸುಲು “ಅದು ಪೋಲಿ ಸಿನಿಮಾನಾ?” ಎಂದು ಶುರುವಿಟ್ಟರು. ಮೊದಲೇ ಕಪ್ಪು-ಬಿಳುಪು ಸಿನಿಮಾ, ಐವತ್ತರ ದಶಕದ್ದು ಬೇರೆ - ಪೋಲಿಯಾಗಿರಲು ಸಾಧ್ಯವೇ ಇಲ್ಲ ಎಂದು ಸಮರ್ಥಿಸಿಕೊಂಡೆ. 

ಚಿತ್ರಮಂದಿರ ಕಿಕ್ಕಿರಿದು ತುಂಬಿತ್ತು. ಶ್ರೇಷ್ಠ ಚಿತ್ರವನ್ನು ನೋಡಲು ಅದೆಷ್ಟು ಜನ ಬಂದಿದ್ದಾರಲ್ಲಾ ಎಂದು ಖುಷಿಯಾಯ್ತು. “ಮದ್ರಾಸಿನ ಜನರಿಗೆ ಸದಭಿರುಚಿಯಿದೆ” ಎಂದು ಸ್ನೇಹಿತರ ಮುಂದೆ ಡೈಲಾಗ್ ಹೊಡೆದೆ. ಚಿತ್ರಮಂದಿರದಲ್ಲಿ ಅಂಟಿಸಿದ್ದ ಭಿತ್ತಿ ಚಿತ್ರಗಳೂ ನಾನು ಹೇಳುವ ಚಿತ್ರದ್ದೇ ಆಗಿದ್ದವು. ಸಾವಿನಂಚಿನಲ್ಲಿರುವ ಮುದುಕ ಹಾಡುತ್ತಾ ಉಯ್ಯಾಲೆ ತೂಗುತ್ತಿರುವ ದೃಶ್ಯ ಮತ್ತಿಷ್ಟು ಭರವಸೆಯನ್ನು ಕೊಟ್ಟಿತು. 

ಸ್ವಲ್ಪ ಸಮಯದ ನಂತರ ಶಾಸ್ತ್ರಿ ಅಪಸ್ವರ ಎತ್ತಿದ. “ಇಷ್ಟೊಂದು ಗುಂಪಿನಾಗೆ ಒಕ್ಕೇ ಒಕ್ಕ ಅಮ್ಮಾಯಿ ಕೂಡಾ ಲೇದು” ಅಂತ ವೇದಾಂತಿಯಂತೆ ನುಡಿದ. ಅವನ ಮಾತಿನಲ್ಲಿ ಸತ್ಯವಿತ್ತು. ಜೊತೆಗೆ ಅಲ್ಲಿ ಸೇರಿದ ಗುಂಪೆಲ್ಲಾ ರಿಕ್ಷಾ ತುಳಿಯುವವರು, ಪಡ್ಡೆ ಹುಡುಗರು, ಬರೀ ಪಂಚೆ ಕಟ್ಟಿಕೊಂಡು ಬೀಡಿ ಸೇದುವವರೇ ತುಂಬಿದ್ದರು. ಸಾರಾಯಿ ವಾಸನೆ ಗಪ್ಪೆಂದು ಮೂಗಿಗೆ ಹೊಡೆಯುತ್ತಿತ್ತು. ಯಾಕೋ ನನಗೂ ಅನುಮಾನ ಶುರುವಾಯ್ತು. ಆದರೆ ಬಂದದ್ದಂತೂ ಆಗಿದೆ. ಟಿಕೆಟ್‍ಗೆ ಹಣ ತೆತ್ತಿದ್ದೂ ಆಗಿದೆ. ಅದೇನಾದರೂ ಆಗಿರಲಿ, ಸಿನಿಮಾ ನೋಡಿಯೇ ಹೋಗುವದೆಂದು ನಿರ್ಧರಿಸಿದೆ. 

ಸಿನಿಮಾ ಶುರುವಾಯ್ತು. ಅದೇ ಸಾಯುವ ಮುದುಕನ ಚಿತ್ರವದು. ನಿಧಾನಗತಿಯಲ್ಲಿ ಬದುಕಿನ ಲಯದ ಬಗ್ಗೆ ಮಾತನಾಡುವ ಚಿತ್ರದಲ್ಲಿ ಪೋಲಿ ದೃಶ್ಯಗಳು ಬರಲಿಕ್ಕೆ ಸಾಧ್ಯವೇ ಇಲ್ಲವೆಂದು ಖಡಾಖಂಡಿತವಾಗಿ ಮನಸ್ಸು ಹೇಳಿತು. ಆದರೆ ಸಿನಿಮಾ ಶುರುವಾಗಿ ಹದಿನೈದು ನಿಮಿಷವಾದರೂ ಯಾರೂ ಒಳಗೆ ಬಂದು ಕುಳಿತುಕೊಳ್ಳದಿದ್ದದ್ದು ನಮಗೆ ಅಚ್ಚರಿಯನ್ನುಂಟುಮಾಡಿತು. ಸುಮಾರು ಒಂದು ತಾಸು ಕಳೆದ ನಂತರ ಜನ ಗುಂಪುಗುಂಪಾಗಿ ಬರಲಾರಂಭಿಸಿದರು. ಥೇಟರಿನಲ್ಲಿದ್ದ ಆಸನದ ಮಿತಿಯ ಎರಡರಷ್ಟು ಜನ ಜಮಾಯಿಸಿದರು. ಯಾರಿಗೂ ನಡೆಯುತ್ತಿರುವ ಸಿನಿಮಾದ ಬಗ್ಗೆ ಆಸಕ್ತಿಯಿಲ್ಲದೆ ಗದ್ದಲ ಮಾಡುತ್ತಿದ್ದರು. ನೆಲದ ಮೇಲೆ, ಕಂಬಿಯ ಮೇಲೆಲ್ಲಾ ಜನರು ಕುಳಿತುಬಿಟ್ಟಿದ್ದರು. 

ಸಾಯುವ ಮುದುಕ ಜೋಕಾಲಿಯ ಮೇಲೆ ಕುಳಿತುಕೊಂಡ. “ಈಗಲೇ ಆ ಹಾಡು” ಎಂದು ಗೆಳೆಯರಿಬ್ಬರಿಗೆ ಹೇಳಿ ಕುರ್ಚಿಯಂಚಿಗೆ ಸರಿದು ಕುಳಿತುಕೊಂಡೆ. ಅದೇನು ದುರಾದೃಷ್ಟವೋ ಕಾಣೆ, ತಕ್ಷಣ ಸಿನಿಮಾ ನಿಂತುಹೋಯ್ತು! ಜನರೆಲ್ಲಾ ಕೇಕೆ ಹಾಕಿ ಗದ್ದಲವೆಬ್ಬಿಸಿ ಹರ್ಷದಿಂದ ಕೂಗಾಡಲಾರಂಭಿಸಿದರು. “ಬೋಳಿಮಕ್ಕಳು, ಒಳ್ಳೆ ಸೀನಿಗೆ ಕೈ ಕೊಟ್ಟರು” ಅಂತ ನಾನು ನನ್ನ ಕೋಪವನ್ನು ತೋಡಿಕೊಂಡೆ. ಆದರೆ ಕೆಲವೇ ನಿಮಿಷಗಳಲ್ಲಿ ಸಿನಿಮಾ ಶುರುವಾಯ್ತು. ಉಕ್ಕುವ ಹಾಲಿಗೆ ನೀರು ಹಾಕಿದಂತೆ ಜನ ಸುಮ್ಮನಾಯ್ತು. 

ಶುರುವಾದ ಸಿನಿಮಾ ಬಣ್ಣದಲ್ಲಿತ್ತು!! ಜಪಾನು ಹೋಗಿ ಯಾವುದೋ ಕೇರಳದ ಸಮುದ್ರ ತೀರ ಬಂತು. ಮೈಕೈ ತುಂಬಿಕೊಂಡ ಭಾರತೀಯ ಹೆಣ್ಣೊಬ್ಬಳು ಹತ್ತು ನಿಮಿಷ ಸ್ನಾನ ಮಾಡಿದಳು. ಎಲ್ಲಿಂದಲೋ ಮೈಯೆಲ್ಲಾ ರೋಮ ತುಂಬಿಕೊಂಡ ಧಡಿಯನೊಬ್ಬ ಬೀಡಿ ಸೇದುತ್ತ ಬಂದು, ಅವಳನ್ನು ಎತ್ತಿಕೊಂಡು ಹತ್ತಿರದ ಗುಡಿಸಲಿಗೆ ಒಯ್ದ. ಅವಳು ವಯ್ಯಾರದಿಂದ ಅವನೆಡೆಗೆ ಮಾದಕ ನೋಟ ಬೀರಿದಳು. ಮುಂದೆ ಅರ್ಧ ಗಂಟೆ ಮಾತಿಲ್ಲದೆ ಬರಿಯ ನರಳಾಟದ ಸದ್ದಿನಲ್ಲಿ ನಡೆದ ಕಾಮಕೇಳಿಯನ್ನು ನಾನಿಲ್ಲಿ ಹೇಳಲಾರೆ. 

ಬಿಟ್ಟ ಬಾಯಿ ಬಿಟ್ಟಂತೆ ನಾವು ದೃಶ್ಯಗಳನ್ನು ಉಗುಳು ನುಂಗುತ್ತಾ ನೋಡಿದೆವು. “ಏನೋ ಇದು” ಅಂತ ನಾನು ಗೆಳೆಯರ ಮುಂದೆ ಪಿಸುಗುಟ್ಟಿದರೆ, “ಡಿಸ್ಟರ್ಬ್ ಚೇಯಕು...” ಎಂದು ಗದರಿಕೊಂಡರು. ದೇಹದ ಗುಪ್ತ ಭಾಗಗಳನ್ನು ಸೆವೆಂಟಿ ಎಂ.ಎಂ. ಪರದೆಯಲ್ಲಿ ನೋಡಿದಾಗ ಎದೆಬಡಿತ ಹೆಚ್ಚಾಗಿ, ಉಸಿರು ಬಿಸಿಯಾಗಿತ್ತು. ಅರ್ಧ ಗಂಟೆಯ ದೃಶ್ಯವೈಭವ ಮುಗಿದ ಮೇಲೆ ಮತ್ತೆ ಸಿನಿಮಾ ನಿಂತುಹೋಯ್ತು. ಜನರೆಲ್ಲಾ ಉತ್ಸಾಹದಿಂದ ಚಪ್ಪಾಳೆ ತಟ್ಟಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ನಂತರ ಲೈಟುಗಳೆಲ್ಲಾ ಹತ್ತಿಕೊಂಡು ಥೇಟರು ಜಗಮಗವಾಯ್ತು. ಜನರೆಲ್ಲಾ ಮನೆಗೆ ಹೊರಟುಹೋದರು. ಕಡೆಗೆ ಥೇಟರಿನಲ್ಲಿ ಉಳಿದದ್ದು ನಾವು ಮೂವರೇ! “ನಾವೂ ಹೋಗೋಣ” ಎಂದು ಶಾಸ್ತ್ರಿ ಮತ್ತು ಶ್ರೀನಿವಾಸುಲು ಶುರುವಿಟ್ಟರು. “ಇನ್ನೂ ಹಾಡು ಮುಗಿದಿಲ್ಲ. ನಾನಂತೂ ಬರಂಗಿಲ್ಲ” ಅಂತ ಪಟ್ಟು ಹಿಡಿದೆ. ಸಾವಿರದ ನಾಲ್ಕುನೂರು ಆಸನಗಳ ಆ ದೊಡ್ಡ ಥೇಟರಿನಲ್ಲಿ ನಾವು ಮೂವರೇ ಕುಳಿತಿದ್ದೆವು! 

ಸ್ವಲ್ಪ ಸಮಯದ ನಂತರ ಗೇಟ್‍ಕೀಪರ್ ಎಲ್ಲಾ ದೀಪಗಳನ್ನು ಆರಿಸಲು ಶುರುವಿಟ್ಟ. ನಾನು ಅವನನ್ನು ಕೂಗಿ ಕರೆದೆ. ನಾವು ಇನ್ನೂ ಉಳಿದಿರುವುದು ಅವನಿಗೆ ಅಚ್ಚರಿ. “ಪೂರ್ತಿ ಸಿನಿಮಾ ನೋಡದೆ ಹೋಗಂಗಿಲ್ಲ” ಅಂತ ಹೇಳಿಬಿಟ್ಟೆ. ಅವನಿಗೆ ಏನು ಹೇಳಬೇಕೋ ತೋಚದೆ ಮ್ಯಾನೇಜರರನ್ನು ಕರೆದುಕೊಂಡು ಬಂದ. ಮ್ಯಾನೇಜರ್ ಇಂತಹ ವಿಚಿತ್ರ ಸನ್ನಿವೇಶವನ್ನು ಹಿಂದೆ ಎದುರಿಸಿಯೇ ಇರಲಿಲ್ಲವೆಂದು ಹೇಳಲಾರಂಭಿಸಿದ. “ಬರೀ ಮೂವರಿಗೆ ಪ್ರೊಜೆಕ್ಟರ್ ಓಡಿಸೋದು ಗಿಟ್ಟಂಗಿಲ್ಲ” ಎಂದು ಅಲವತ್ತುಕೊಂಡ. ನಾನು ಒಪ್ಪಲಿಲ್ಲ. ಪೋಲಿ ಸಿನಿಮಾ ತೋರಿಸಿದ್ದನ್ನು ಪೋಲೀಸರಿಗೆ ಹೇಳಿ, ಎಲ್ಲಾ ಪತ್ರಿಕೆಗಳಲ್ಲಿ ಹಾಕಿಸುತ್ತೇನೆಂದು ಬೆದರಿಸಿದೆ. “ಅವರಿಗೆಲ್ಲಾ ಅದು ಗೊತ್ತಿದೆ ಸಾರ್. ರಾಮೇಶ್ವರ ಅಂದರೆ ಎಲ್ಲರೂ ಅರ್ಥ ಮಾಡಿಕೊಳ್ತಾರೆ” ಎಂದು ನಿರಾತಂಕವಾಗಿ ಉತ್ತರಿಸಿದ. ಅವನು ನಿರಾಕರಿಸಿದಂತೆಲ್ಲಾ ನನ್ನ ಹಠವೂ ಹೆಚ್ಚಾಗಿ, ಕೊನೆಗೆ ಸಿನಿಮಾ ಮುಂದುವರಿಸಲು ಒಪ್ಪಿಕೊಂಡ. 

ಜಪಾನಿ ಸಿನಿಮಾ ಮುಂದುವರೆಯಿತು. ಸಾಯುವ ಮುದುಕ ಹಾಡಲು ಶುರುವಿಟ್ಟ. ನಂಬಿದರೆ ನಂಬಿ, ಬಿಟ್ಟರೆ ಬಿಡಿ - ನನಗೇ ಆ ಹಾಡು ಮಹಾ ಗೋಳೆನ್ನಿಸಿಬಿಟ್ಟಿತು. ವಾದ್ಯಮೇಳವೂ ಇಲ್ಲದೆ ನಿಧಾನಕ್ಕೆ ಹಾಡು ಹೇಳುತ್ತಾ ಜೀಕುವ ಆ ಮುದುಕ ತಲೆಕೆಟ್ಟವನೆನ್ನಿಸಿಬಿಟ್ಟಿತು. ಪಕ್ಕಕ್ಕೆ ಕೂತ ಗೆಳೆಯರಿಬ್ಬರೂ “ಇದನ್ನೇನು ನೋಡ್ತಿಯಲೇ. ಇನ್ನೂ ಒಮ್ಮೆಯೂ ಹುಡುಗಿ ಮೈ ಮುಟ್ಟಿಲ್ಲ ನೀನು, ಸಾಯೋವರ ಸಿನಿಮಾ ನೋಡ್ತಿದೀಯಲ್ಲ” ಎನ್ನುತ್ತಾ ಕಿರಿಕಿರಿ ಕೊಡಲಾರಂಭಿಸಿದರು. ಐದು ನಿಮಿಷಕ್ಕೂ ಹೆಚ್ಚು ಕಾಲ ನನಗೆ ಆ ಸಿನಿಮಾ ನೋಡಲು ಆಗಲಿಲ್ಲ. ನಾವೇ ಎದ್ದು ಹೋಗಿ ಮ್ಯಾನೇಜರನ್ನು ಕಂಡು ನಿಲ್ಲಿಸಲು ಹೇಳಿದೆವು. “ನಾನು ಆಗಲೇ ಹೇಳಿದೆ ಸಾರ್, ಬೋರ್ ಹೊಡಿತದೆ ಅಂದ್ರೂ ನೀವು ಕೇಳಲಿಲ್ಲ” ಅಂತ ತನ್ನ ವಿಜಯದ ಮಾತುಗಳನ್ನು ಉದುರಿಸಿದ. 

ಮನೆಗೆ ನಡೆದು ಹೋಗುವಾಗ ಮೌನವಾಗಿದ್ದ ನನ್ನನ್ನು ಗೆಳೆಯರಿಬ್ಬರೂ ಮನಃಪೂರ್ವಕವಾಗಿ ರೇಗಿಸಿದರು. ಇಂಥಾ ಒಳ್ಳೆಯ ಜಪಾನಿ ಸಿನಿಮಾ ತೋರಿಸಿದ್ದಕ್ಕೆ ಥ್ಯಾಂಕ್ಸ್ ಎಂದು ಬಾರಿ ಬಾರಿ ಕೈ ಕುಲುಕಿದರು. ಇನ್ನು ಮುಂದೆ ಎಲ್ಲಾ ಜಪಾನಿ ಸಿನಿಮಾಗಳನ್ನು ನೋಡೋಣ ಎಂದು ಹಾಸ್ಯ ಮಾಡಿದರು. ಸಾಯೋದರೊಳಗೆ ಒಮ್ಮೆಯಾದರೂ ರಾಮೇಶ್ವರಕ್ಕೆ ಹೋಗಬೇಕು ಅಂತ ನಮ್ಮಜ್ಜಿ ಹೇಳ್ತಿದ್ದಿದ್ದು ಈಗ ಅರ್ಥವಾಗ್ತಿದೆ ಎಂದು ಶಾಸ್ತ್ರಿ ಹೇಳಿದ.

ಮರುದಿನ ಬೆಳಿಗ್ಗೆ ಮನೆಯೊಡೆಯ ನೀರಿನ ಕೊಡ ತಂದುಕೊಟ್ಟು “ರಾಮೇಶ್ವರ ಹೆಂಗಿತ್ತು?” ಎಂದು ವ್ಯಂಗ್ಯ ನಗೆಯನ್ನು ತುಳುಕಿಸಿ ಕೇಳಿದ. ನಾನು ಮತ್ತು ಶ್ರೀನಿವಾಸುಲು ಏನೆಂದು ಉತ್ತರಿಸುವದೆಂದು ತಡಕಾಡುತ್ತಿದ್ದರೆ, ಶಾಸ್ತ್ರಿ ತನ್ನ ಮಾತಿನ ಚಕಮಕಿ ಶುರುಮಾಡಿಬಿಟ್ಟ. “ಭಾಳ ಚೆನ್ನಾಗಿತ್ತು ಅಂಕಲ್! ಶಿವ-ಪಾರ್ವತಿ ಮಹಿಮೆಯ ಅದ್ಭುತ ಚಿತ್ರ” ಎಂದು ಹೊಗಳಲು ಶುರುವಿಟ್ಟ. “ಜಪಾನಿ ಸಿನಿಮಾ ಅಂದ್ರಲ್ಲಪ್ಪ” ಎಂದು ಮನೆಯೊಡೆಯ ಅನುಮಾನಿಸಿದ. ಶಾಸ್ತ್ರಿ ಅದಕ್ಕೂ ತಯಾರಾಗಿದ್ದ. “ಹೂಂ, ಜಪಾನಿ ಸಿನಿಮಾನೇ! ಆದರೆ ಅದರಾಗೂ ಶಿವ-ಪಾರ್ವತಿ ಮಹಿಮೇನಾ ಚಂದಾಗಿ ತೋರಿಸಾರೆ. ಜಪಾನಿನಾಗೆ ಒಬ್ಬ ಕಾರು ತಯಾರಿಸೋ ವರ್ತಕ ಒಬ್ಬ ಸಮುರಾಯಿಯಿಂದ ತುಂಬಾ ನಷ್ಟಕ್ಕೆ ಒಳಗಾಗ್ತಾನೆ. ದಬ್ಬಾಳಿಕೆಯಿಂದ ಅವನು ಇವನ ಕಾರು ತಯಾರಿಸುವ ಕಂಪನಿ ಕಿತ್ತುಗೊಳ್ತಾನೆ. ಪಾಪ, ಆತ ಎಷ್ಟೇ ಬೇಡಿಕೊಂಡರೂ ಕೇಳಲ್ಲ. ದಿಕ್ಕು ತೋಚದ ವರ್ತಕ ಜಪಾನಿನ ಎಲ್ಲಾ ದೇವರನ್ನೂ ಪೂಜೆ ಮಾಡ್ತಾನೆ. ಯಾರೂ ಸಹಾಯ ಮಾಡಂಗಿಲ್ಲ. ಕೊನೆಗೆ ಕನಸಿನಲ್ಲಿ ಸನ್ಯಾಸಿಯೊಬ್ಬ ಬಂದು ಶಿವ-ಪಾರ್ವತಿಯರನ್ನು ಪೂಜೆ ಮಾಡಲು ಹೇಳುತ್ತಾನೆ. ವರ್ತಕ ಅದನ್ನು ನಂಬಿ ಭಕ್ತಿಯಿಂದ ಪೂಜೆ ಮಾಡಲು ಶುರುವಿಡುತ್ತಾನೆ. ಕೈಲಾಸದಲ್ಲಿದ್ದ ಶಿವ-ಪಾರ್ವತಿಯರಿಗೆ ಅವನ ಕರೆ ಕೇಳಿಸುತ್ತದೆ. ಜಪಾನಿಗೆ ಹೊರಡಲು ಸಿದ್ಧರಾಗುತ್ತಾರೆ. ಮುರುಗನ್ ತನ್ನ ನವಿಲನ್ನು ಅಪ್ಪ-ಅಮ್ಮರಿಗೆ ಉಪಯೋಗಿಸಲು ಕೊಡುತ್ತಾನೆ. ಗಣೇಶ ಯಾವುದೇ ಕಷ್ಟದ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಿ, ತಕ್ಷಣ ಪ್ರತ್ಯಕ್ಷನಾಗುತ್ತೇನೆ ಎಂದು ಹೇಳಿ ಕಳುಹಿಸುತ್ತಾನೆ. ಶಿವ-ಪಾರ್ವತಿಯರಿಬ್ಬರೂ ಭಕ್ತನಿಗೆ ಪ್ರತ್ಯಕ್ಷರಾಗಿ, ಅವನ ಫ್ಯಾಕ್ಟರಿ ಅವನಿಗೆ ಸಿಗುವಂತೆ ಮಾಡುತ್ತಾರೆ. ಸಿಟ್ಟಿಗೆದ್ದ ಸಮುರಾಯಿ ಶಿವನನ್ನೇ ಮಲ್ಲಯುದ್ಧಕ್ಕೆ ಆಹ್ವಾನಿಸುತ್ತಾನೆ. ಶಿವ ತನ್ನ ಮೂರನೇ ಕಣ್ಣನ್ನೇ ತೆಗೆಯಲು ಸಿದ್ಧವಾದಾಗ, ಪಾರ್ವತಿ ಬೇಡವೆಂದು ತಡೆದು ಗಣೇಶನನ್ನು ಸ್ಮರಿಸುತ್ತಾಳೆ. ಗಣೇಶ ಕ್ಷಣದಲ್ಲಿ ಪ್ರತ್ಯಕ್ಷನಾಗಿ ಮಲ್ಲಯುದ್ಧಕ್ಕೆ ಅಖಾಡಕ್ಕಿಳಿಯುತ್ತಾನೆ. ತನ್ನ ಸೊಂಡಲಿನಿಂದಲೇ ಸಮುರಾಯಿಯನ್ನು ಗರಗರ ತಿರುಗಿಸಿ ನೆಲಕ್ಕೆ ಅಪ್ಪಳಿಸುತ್ತಾನೆ. ಎಲ್ಲಾ ಸುಖಾಂತವಾಗಿ ಅವರು ಹಿಂತಿರುಗಲು ತಯಾರಾದಾಗ ವರ್ತಕ ಅವರಿಗಾಗಿ ಒಂದು ಹೊಸ ಜಪಾನಿ ಕಾರನ್ನು ಉಡುಗೊರೆಯಾಗಿ ಕೊಡುತ್ತಾನೆ. ಕಾರಿನಲ್ಲಿ ಆಕಾಶ ಮಾರ್ಗದಲ್ಲಿ ಹಿಂತಿರುಗಿ ಬರುತ್ತಿರುವಾಗ ನಂದಿ ಅಡ್ಡ ಬರುತ್ತಾನೆ. ‘ಆದಿದೈವ, ನಾನಿರುವಾಗ ನೀನು ಮತ್ತೊಂದು ವಾಹನವನ್ನು ಉಪಯೋಗಿಸಬಹುದೆ?’ ಎಂದು ಮೊರೆಯಿಡುತ್ತಾನೆ. ಶಿವನಿಗೆ ತನ್ನ ತಪ್ಪು ಅರ್ಥವಾಗಿ ತಕ್ಷಣ ಆ ಕಾರನ್ನು ಬಿಟ್ಟು ನಂದಿಯನ್ನೇರುತ್ತಾನೆ. ವೇಗವಾಗಿ ನೆಲಕ್ಕಪ್ಪಳಿಸಿದ ಆ ಕಾರು ಒಂದು ದೊಡ್ಡ ಹೊಂಡವನ್ನು ಸೃಷ್ಟಿಸಿ ಅದರ ಮಧ್ಯೆ ಕಲ್ಲಿನ ಕಾರಾಗಿ ಸ್ಥಾಪನೆಗೊಳ್ಳುತ್ತದೆ. ವರ್ತಕ ಶಿವನ ವರ್ತನೆಯ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಂಡು ಆ ಕಲ್ಲಿನ ಕಾರಿಗೆ ಗುಡಿಯೊಂದನ್ನು ಕಟ್ಟಿಸುತ್ತಾನೆ. ಹೊಂಡವನ್ನು ನಿರ್ಮಿಸಿ ಸ್ಥಾಪನೆಯಾದ್ದರಿಂದ ಆ ಕಾರಿಗೆ ‘ಹೋಂಡಾ ಕಾರು’ ಎಂದು ನಾಮಕರಣ ಮಾಡುತ್ತಾನೆ. ಮುಂದೆ ಅದೇ ಹೆಸರಿನಲ್ಲಿ ಸಾಕಷ್ಟು ಕಾರುಗಳನ್ನು ಉತ್ಪಾದಿಸಿ ಸುಖ-ಸಂತೋಷದಿಂದಿರುತ್ತಾನೆ” ಎಂದೆಲ್ಲಾ ಹೇಳಿಬಿಟ್ಟ. 

ನಾವು ಬೆರಗಾಗಿ ಅವನು ಹೇಳುವದನ್ನೇ ಕೇಳುತ್ತಿದ್ದೆವು. ಮಾಲಿಕ ನಂಬಿದನೋ ಬಿಟ್ಟನೋ ಗೊತ್ತಿಲ್ಲ, ಹೆಚ್ಚು ಮಾತನಾಡದೆ ಹಿಂತಿರುಗಿಬಿಟ್ಟ. ಆ ದಿನವೆಲ್ಲಾ ಶಾಸ್ತ್ರಿಯ ಮಾತಿನ ಚಮತ್ಕಾರಕ್ಕೆ ನಾವೆಲ್ಲರೂ ನಕ್ಕಿದ್ದೇ ನಕ್ಕಿದ್ದು. ಚೆನ್ನಾಗಿ ಮೋಡಿ ಮಾಡಿದೆವೆಂದು ಹೆಮ್ಮೆಯಿಂದ ಬೀಗಿದೆವು. ಆದರೆ ರಾತ್ರಿ ಸರಿಯಾಗಿ ಒಂಬತ್ತಕ್ಕೆ ನಾವು ಕಣ್ಣು-ಕಣ್ಣು ಬಿಡುವ ಸಂಗತಿಯೊಂದು ಜರುಗಿತು! 

ಊಟ ಮುಗಿಸಿ ಕೈತೊಳೆದು ಹರಟೆ ಹೊಡೆಯಲು ಕುಳಿತಿದ್ದಾಗ, ಮನೆಯೊಡೆಯ ಪತ್ನಿಸಮೇತನಾಗಿ ತನ್ನ ಸ್ಟೀಲ್ ಕೊಡವನ್ನು ಹಿಡಿದುಕೊಂಡು ಬಂದ. ಹೆಂಡತಿ ಒಂಬತ್ತು ಗಜದ ಸೀರೆಯನ್ನು ಕಚ್ಚೆಹಾಕಿ ಉಟ್ಟು, ಘಮಘಮಿಸುವ ಮಲ್ಲಿಗೆಯ ಹೂವನ್ನು ತುರುಬಿನ ಸುತ್ತಲೂ ಸುತ್ತಿದ್ದಳು. ಕೊಡವನ್ನು ನಮ್ಮ ಕೈಗೆ ಕೊಟ್ಟು “ಈವತ್ತು ನಮಗೆ ನೀರು ನೀವು ಹಿಡಿದಿಟ್ಟಿರಿ. ನೀವು ಹೇಳಿದ ಶಿವ-ಪಾರ್ವತಿ ಕಥೇನ ನನ್ನಾಕಿಗೆ ಹೇಳಿದೆ. ಅವಳಿಗೆ ಭಾಳ ಇಷ್ಟ ಆಗಿಬಿಟ್ಟಿದೆ. ಸಣ್ಣ ಹುಡುಗರು ನೀವು ಇಷ್ಟೊಂದು ಭಕ್ತಿಯಿಂದ ದೇವರ ಸಿನಿಮಾ ನೋಡಿ ಬಂದ ಮೇಲೆ, ನಾವು ಹೋಗದೆ ಇದ್ದರೆ ಹೇಗೆ? ಶಿವ-ಪಾರ್ವತಿ ಜಪಾನಿ ಭಾಷೆ ಹೆಂಗೆ ಮಾತಾಡ್ತಾರೋ ನೋಡಬೇಕು ಅಂತ ಆಸೆ ಆಗಿದೆ. ಅದಕ್ಕೇ ಈವತ್ತು ನಾವು ರಾಮೇಶ್ವರಕ್ಕೆ ಹೋಗ್ತಿದೀವಿ“ ಎಂದು ಪ್ರಾಮಾಣಿಕವಾಗಿ ಹೇಳಿದರು. ನಮಗೆ ಮೂರ್ಚೆ ತಪ್ಪುವದೊಂದು ಬಾಕಿ! ಅವರಿಬ್ಬರೂ ಮರೆಯಾಗುತ್ತಲೇ ಶಾಸ್ತ್ರಿಗೆ ಮೈ-ಮೂಳೆ ನೋಡದೆ ದಬದಬನೆ ಚಚ್ಚಿದೆವು. 

ಈ ಘಟನೆ ನಡೆದು ಸುಮಾರು ಹತ್ತು ವರ್ಷಗಳಾಗಿವೆ. ಅದೇ ಜಪಾನಿ ಸಿನಿಮಾವನ್ನು ಮತ್ತೆ ಸಾಕಷ್ಟು ಬಾರಿ ನೋಡಿದ್ದೇನೆ. ಪ್ರತಿ ಬಾರಿ ನೋಡಿದಾಗಲೂ ಸಾಯುವ ಮುದುಕನ ನೋವಿನ ಹಾಡು ನನ್ನ ಕಣ್ಣಲ್ಲಿ ನೀರು ತರಿಸಿದೆ. ಆದರೆ ಅಂದು ರಾಮೇಶ್ವರದಲ್ಲಿ ಮಾತ್ರ ಅದೇ ವ್ಯಕ್ತಿ ಆ ಹಾಡಿನ ದೃಶ್ಯದಲ್ಲಿ ಪೆಕರನಂತೆ ಕಂಡಿದ್ದು ಮಾತ್ರ ಸಾವಿನಷ್ಟೇ ಸತ್ಯ! 

-ವಸುಧೇಂದ್ರ, ಬೆಂಗಳೂರು

(6ನೇ ಮಾರ್ಚ್ 2004)

ಸಂಗ್ರಹ: ರಾಜೇಶ್ ಐತಾಳ್, ಸುರತ್ಕಲ್

ಚಿತ್ರ ಕೃಪೆ: ಇಂಟರ್ನೆಟ್ ತಾಣ