‘ರೂಬಿ' ಆನೆಯ ಚಿತ್ರಕಲೆ!

‘ರೂಬಿ' ಆನೆಯ ಚಿತ್ರಕಲೆ!

ಪ್ರಾಣಿ, ಪಕ್ಷಿಗಳು ತುಂಬಾನೇ ಚುರುಕಾಗಿರುತ್ತವೆ. ಬಹಳಷ್ಟು ಪ್ರಾಣಿಗಳು ತಮ್ಮ ಭಾವನೆಯನ್ನು ಒಂದಲ್ಲಾ ಒಂದು ವಿಧಾನದಿಂದ ವ್ಯಕ್ತ ಪಡಿಸುತ್ತವೆ. ಪ್ರಾಮಾಣಿಕತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಇದು ತನಗೆ ಪರಿಚಯವಿರುವವರನ್ನು ಕಂಡಾಗ ಬಾಲ ಅಲ್ಲಾಡಿಸುವುದರ ಮೂಲಕ ತನ್ನ ಸಂತಸ, ಪರಿಚಯ ವ್ಯಕ್ತ ಪಡಿಸುತ್ತದೆ. ಕೋತಿಗಳು ತಮ್ಮ ಮರಿಗಳು ಸತ್ತು ಹೋದಾಗ ಅದನ್ನು ಹಿಡಿದುಕೊಂಡು ರೋಧಿಸುತ್ತವೆ. ಚಿಂಪಾಂಜಿ ಹಾಗೂ ಗೋರಿಲ್ಲಾಗಳೂ ಮಾನವ ರೀತಿಯ ಭಾವನೆಗಳನ್ನು ವ್ಯಕ್ತ ಪಡಿಸುತ್ತವೆ. ಆನೆ, ಕುದುರೆ, ದನಗಳೂ ತಮ್ಮ ತಮ್ಮ ಭಾವನೆಗಳನ್ನು ತಮ್ಮದೇ ಆದ ಭಾಷೆಯಲ್ಲಿ ವ್ಯಕ್ತ ಪಡಿಸುತ್ತವೆ. ಆದರೆ ಥಾಯಿಲ್ಯಾಂಡ್ ನ ಆನೆಯೊಂದು ತನ್ನ ಭಾವನೆಗಳನ್ನು ವ್ಯಕ್ತ ಪಡಿಸಲು ಕಂಡುಕೊಂಡ ದಾರಿಯೆಂದರೆ ಚಿತ್ರಕಲೆ. ಅಚ್ಚರಿಯಾಯಿತಾ? 

ಹೌದು, ಥಾಯಿಲ್ಯಾಂಡ್ ನ ಫೀನಿಕ್ಸ್ ಮೃಗಾಲಯದಲ್ಲಿದ್ದ ಈ ರೂಬಿ ಎಂಬ ಹೆಸರಿನ ಆನೆಯು ತನ್ನ ಚಿತ್ರಕಲೆಗೆ ಹೆಸರುವಾಸಿಯಾಗಿದೆ. ೧೯೭೩ರಲ್ಲಿ ಜನ್ಮ ತಾಳಿದ ಈ ಆನೆಯನ್ನು ಕಾಡಿನಲ್ಲಿ ಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ತರಲಾಗಿತ್ತು. ಅದನ್ನು ಪಳಗಿಸಿ ಮೃಗಾಲಯದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವ ಕೆಲಸವು ಶ್ಯಾಮ್ ಥೇರಾ ಎಂಬ ಮಾವುತನಾಗಿತ್ತು. ಈ ಮಾವುತನು ಆನೆಯ ಮೇಲೆ ಬಹಳ ಪ್ರೀತಿಯನ್ನು ಹೊಂದಿದ್ದ. ಒಂದು ದಿನ ಆನೆಗೆ ತಿನ್ನಲು ಬಾಳೆಯ ಗಿಡಗಳನ್ನು ಕೊಡಲಾಗಿತ್ತು. ರೂಬಿಯು ಈ ಬಾಳೆಯ ಗಿಡಗಳನ್ನು ತಿನ್ನುತ್ತಾ, ಅದರ ಮಧ್ಯಭಾಗದ ಉದ್ದನೆಯ ತುಂಡನ್ನು ಸೊಂಡಿಲಲ್ಲಿ ಹಿಡಿದುಕೊಂಡು ಬದಿಯಲ್ಲೇ ಇದ್ದ ಗೋಡೆಯ ಮೇಲೆ ಏನೋ ಗೀಚುತ್ತಿತ್ತು. ಮಾವುತನು ಆನೆಯು ಏನೋ ಆಟವಾಡುತ್ತಿದೆ ಎಂದು ಭಾವಿಸಿದ್ದ. ಆದರೆ ಸ್ವಲ್ಪ ಸಮಯದ ನಂತರ ನೋಡುವಾಗ ಅಲ್ಲಿ ಕಾಡಿನಲ್ಲಿರುವ ಜೋಡಾನೆಗಳ ಚಿತ್ರ ರಚನೆಯಾಗಿತ್ತು. ಈ ಚಿತ್ರ ರಚಿಸಿದ ಬಳಿಕ ರೂಬಿಯ ಕಣ್ಣುಗಳು ಒದ್ದೆಯಾಗಿದ್ದವು. ಅದು ಯಾವುದೋ ಅವ್ಯಕ್ತ ಭಾವನೆಯನ್ನು ವ್ಯಕ್ತ ಪಡಿಸಲು ಬಯಸುತ್ತಿತ್ತು. 

ಮಾವುತ ಶ್ಯಾಮ್ ಥೇರಾನಿಗೆ ಆ ಚಿತ್ರವನ್ನು ನೋಡಿ ರೂಬಿಯ ಕಾಡಿನ ದಿನಗಳು ನೆನಪಿಗೆ ಬಂದವು. ರೂಬಿಯನ್ನು ಕಾಡಿನಲ್ಲಿ ಹಿಡಿಯುವಾಗ ಅದರ ಜೊತೆ ಸಂಗಾತಿ ಆನೆಯೂ ಇತ್ತು. ಪಟಾಕಿ, ಸಿಡಿಮದ್ದನ್ನು ಬಳಸಿ ಹಿಡಿಯುವಾಗ ಅದರ ಸಂಗಾತಿಯು ಚದುರಿಹೋಗಿತ್ತು. ಆ ಕಾರಣದಿಂದ ರೂಬಿಯನ್ನು ಏಕಾಂಗಿಯಾಗಿಯೇ ಬಂಧಿಸಿ ಇಡಲಾಗಿತ್ತು. ಆನೆಯು ಬಂಧನದಲ್ಲಿರುವಾಗ ಜೋರಾಗಿ ಘೀಳಿಡುತ್ತಿತ್ತು. ‘ನನ್ನನ್ನು ಕಾಡಿಗೆ ಬಿಟ್ಟು ಬಿಡಿ. ನಾನು ನನ್ನ ಸಂಗಾತಿಯ ಜೊತೆ ಇರಬೇಕು' ಎಂದು ಹೇಳುವಂತೆ ಅನಿಸುತ್ತಿತ್ತು. ಈ ವಿಷಯವನ್ನು ನಾವು ಮರೆತರೂ ಆನೆ ಮರೆತಿರಲಿಲ್ಲವೆಂದು ಅದು ಬರೆದ ಚಿತ್ರದಿಂದ ಮಾವುತನಿಗೆ ಅರಿವಾಯಿತು.

ರೂಬಿ ಏಷ್ಯಾ ತಳಿಯ ಆನೆ. ಬಹಳ ಗಂಭೀರ ನಡುಗೆ, ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿತ್ತು. ರೂಬಿಯ ಚಿತ್ರ ಕಲಾ ಪ್ರತಿಭೆಯನ್ನು ಪರೀಕ್ಷಿಸಲು ಶ್ಯಾಮ್ ಥೇರಾ ಸ್ವಲ್ಪ ಬಣ್ಣಗಳನ್ನು ಹಾಗೂ ಕುಂಚವನ್ನು ತಂದ. ಕುಂಚವನ್ನು ಆನೆಯ ಸೊಂಡಿಲಿಗೆ ಸಿಕ್ಕಿಸಿದ. ಕೂಡಲೇ ರೂಬಿ ತನ್ನ ಕಲಾ ಚಾತುರ್ಯವನ್ನು ತೋರಿಸಿತು. ಕುಂಚವನ್ನು ಬಣ್ಣದಲ್ಲಿ ಅದ್ದುತ್ತಾ, ನುರಿತ ಕಲಾವಿದನಂತೆ ಎದುರಿದ್ದ ಕ್ಯಾನ್ವಾಸ್ ಹಾಳೆಯಲ್ಲಿ ಚಿತ್ರ ಗೀಚಲು ಪ್ರಾರಂಭಿಸಿತು. ಅದು ಏನೇನೋ ಗೀಚುವಂತೆ ಅನಿಸಿದರೂ, ಕಡೆಗೆ ಅದರಲ್ಲಿ ಒಂದು ಸೊಗಸಾದ ಚಿತ್ರ ಮೂಡಿ ಬರುತ್ತಿತ್ತು. ಆನೆಗೆ ಬಣ್ಣಗಳು ತಿಳಿಯುವುದಿಲ್ಲ. ಆದರೂ ರೂಬಿ ವಿವಿಧ ಬಣ್ಣಗಳನ್ನು ಬಳಸುತ್ತಿತ್ತು. ಹೀಗೆ ತನ್ನ ಮನದ ಭಾವನೆಯನ್ನು ವ್ಯಕ್ತ ಪಡಿಸಲು ರೂಬಿ ಅನೇಕ ಚಿತ್ರಗಳನ್ನು ಬಿಡಿಸಿತು. ಅದನ್ನು ನೋಡಲು ಬಂದ ಪ್ರೇಕ್ಷಕರು ರೂಬಿಯನ್ನು ‘ಚಿತ್ರಕಾರ ಆನೆ' ಎಂದೇ ಕರೆಯಲು ಪ್ರಾರಂಭಿಸಿದರು. 

ರೂಬಿಯ ಚಿತ್ರಕಲಾ ಪ್ರತಿಭೆಯನ್ನು ನೋಡಲು ಬಂದವರು ಮಂತ್ರಮುಗ್ಧರಾಗಿಬಿಡುತ್ತಿದ್ದರು. ಅದರಿಂದ ಪ್ರೇರಣೆ ಹೊಂದಿದ ಮೃಗಾಲಯದ ಅಧಿಕಾರಿಗಳು ಉಳಿದ ಕೆಲವು ಆನೆಗಳಿಗೂ ಇದೇ ರೀತಿ ಚಿತ್ರ ಬಿಡಿಸುವಂತೆ ತರಭೇತಿ ನೀಡಲು ಪ್ರಾರಂಭಿಸಿದರು. ರಷ್ಯಾದ ಕೆಲವು ಕಲಾವಿದರು ನಾಯಿಗಳಿಗೂ ಚಿತ್ರಕಲೆಯ ತರಭೇತಿ ನೀಡಿದರು. ಏಷ್ಯಾದ ಭಾಗಗಳಲ್ಲಿ ಆನೆಗಳನ್ನು ಬಹುತೇಕ ಪಳಗಿಸಿ ಅವುಗಳಿಂದ ಮರದ ದಿಮ್ಮಿಗಳನ್ನು ಎಳೆಯಲು, ಸಾಗಿಸಲು ಬಳಸಲಾಗುತ್ತಿತ್ತು. ದಿನವಿಡೀ ಅವಿರತವಾಗಿ ದುಡಿದ ಆನೆಗಳು ಸುಸ್ತಾಗಿ ಬಿಡುತ್ತಿದ್ದವು. ಅವುಗಳು ದುಡಿಯದೇ ಇದ್ದರೆ ಅದರ ಮಾಲೀಕರಿಗೆ ಹಣ ಸಂಪಾದನೆಯಾಗುತ್ತಿರಲಿಲ್ಲ. ಮಾವುತರಿಗೆ ಸಂಬಳವಿರಲಿಲ್ಲ. ಹೀಗೆ ಆನೆಗಳ ಪರಿಸ್ಥಿತಿ ತುಂಬಾನೇ ಕಷ್ಟಕರವಾಗಿತ್ತು. ಮರ ಕಡಿಯುವುದನ್ನು ನಿಷೇಧಿಸಿದ ಬಳಿಕವಂತೂ ಆನೆಯನ್ನು ನಂಬಿಕೊಂಡವರ ಪರಿಸ್ಥಿತಿಯು ಚಿಂತಾಜನಕವಾಯಿತು. ಆ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದೇ ರೂಬಿ ಆನೆ ಮಾಡಿದ ಚಿತ್ರಗಳು. ಆ ಚಿತ್ರಗಳನ್ನು ಮಾರಾಟ ಮಾಡಿ ‘ಆನೆ ಸಂರಕ್ಷಣಾ ಕೇಂದ್ರ'ಗಳ ನಿರ್ವಹಣೆ ಮಾಡಲಾಯಿತು. 

ಆದರೆ ರೂಬಿಯ ಮನಸ್ಸಿನಲ್ಲಿ ಸಂಗಾತಿಯನ್ನು ಕಳೆದುಕೊಂಡ ದುಃಖ ಮಾತ್ರ ಮರೆಯಾಗಿರಲಿಲ್ಲ. ಕಡೆಗೊಮ್ಮೆ ಪ್ರಾಣಿ ಪ್ರಿಯರ ಒತ್ತಾಸೆಯ ಮೇರೆಗೆ ರೂಬಿಯ ಸಂಗಾತಿಯನ್ನು ಹುಡುಕಲಾಯಿತು. ಅದು ಬೇರೊಂದು ಮೃಗಾಲಯದಲ್ಲಿತ್ತು. ಅದರ ಹೆಸರು ಜೆನಿ. ಜೆನಿಯನ್ನು ಕಡೆಗೊಮ್ಮೆ ತಂದು ರೂಬಿಯ ಎದುರು ನಿಲ್ಲಿಸಿದಾಗ ಅದರ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮದೇ ಆದ ಧ್ವನಿಯಲ್ಲಿ ಸಂತಸವನ್ನು ವ್ಯಕ್ತ ಪಡಿಸಿದವು. ಅವುಗಳನ್ನು ಏಕಾಂತದಲ್ಲಿರಿಸಲು ಅವಕಾಶ ಮಾಡಿಕೊಡಲಾಯಿತು. ಅಲ್ಲೂ ಕುಂಚ ಹಾಗೂ ಬಣ್ಣದ ವ್ಯವಸ್ಥೆ ಮಾಡಿದ್ದರು. ತನ್ನ ಸಂತಸದ ಭಾವನೆಗಳನ್ನು ರೂಬಿ ಬಹಳ ಸೊಗಸಾಗಿ ಚಿತ್ರಗಳಲ್ಲಿ ಮೂಡಿಸ ತೊಡಗಿತು. ಇಂತಹ ಪೈಂಟಿಂಗ್ ಗಳು ಕೋಟಿ ರೂಪಾಯಿಗೆ ಮಾರಾಟವಾದವು. ರೂಬಿ ವಾರ್ಷಿಕವಾಗಿ ಹತ್ತು ಕೋಟಿಗೂ ಅಧಿಕ ಆದಾಯವನ್ನು ತನ್ನ ಪೈಂಟಿಂಗ್ ಮೂಲಕ ಸಂಪಾದಿಸಿತು. ಈ ಹಣವು ಆನೆಗಳ ಸಂರಕ್ಷಣೆಗೆ ಬಳಕೆಯಾಯಿತು. ಈ ಮೂಲಕ ರೂಬಿ ತನ್ನ ಜೊತೆಗಾರರ ಬದುಕನ್ನು ರೂಪಿಸಲು ಸಹಯೋಗ ನೀಡಿತು. 

ರೂಬಿಯ ಕಲಾ ಕೌಶಲವನ್ನು ಗಮನಿಸಲು ಖ್ಯಾತ ಕಲಾವಿದರಾದ ಅಲೆಗ್ಸಾಂಡರ್ ಹಾಗೂ ಕೋಮರ್ ಥಾಯಿಲ್ಯಾಂಡ್ ಬಂದರು. ಅವರು ರೂಬಿಯ ಕೌಶಲ್ಯವನ್ನು ಕಂಡು ಮೂಕರಾದರು. ಹಲವಾರು ಆನೆಗಳಿಗೆ ಚಿತ್ರಕಲೆಯ ತರಭೇತಿ ನೀಡಿದರು. ಆ ಆನೆಗಳು ಬಿಡಿಸಿದ ಚಿತ್ರಗಳನ್ನು ಹರಾಜು ಮೂಲಕ ಮಾರಾಟ ಮಾಡಿದರು. ಅವರ ಒತ್ತಾಸೆಯ ಪರಿಣಾಮವಾಗಿ ‘ಥಾಯ್ ಆನೆ ಸಂರಕ್ಷಣಾ ಕೇಂದ್ರ’ ಸ್ಥಾಪನೆಯಾಯಿತು. ಕಾಡಿನಿಂದ ಹಿಡಿದ ಹಲವಾರು ಆನೆಗಳನ್ನು ಇಲ್ಲಿ ಪಳಗಿಸಿ ಚಿತ್ರ ಕಲೆಯ ತರಭೇತಿ ನೀಡಲಾಯಿತು. ಈಗಲೂ ಹಲವಾರು ಆನೆಗಳು ಚಿತ್ರಕಲೆಯನ್ನು ಮಾಡುತ್ತಿವೆ. ರೂಬಿಯು ಬಿಡಿಸಿದ ಒಂದು ಚಿತ್ರ ೨೫ ಸಾವಿರ ಡಾಲರ್ ಗೆ ಮಾರಾಟವಾಗಿತ್ತು. ಇದೊಂದು ದಾಖಲೆಯೇ ಸರಿ. 

ಇಷ್ಟೆಲ್ಲಾ ಸಾಧನೆ ಮಾಡಿದ ರೂಬಿಯು ತನ್ನ ೨೫ನೇ ವಯಸ್ಸಿನಲ್ಲಿ ಹೆರಿಗೆಯ ಸಮಯದಲ್ಲಿ ಮರಣಹೊಂದಿತು. ಅದರ ಅಕಾಲ ನಿಧನವು ಎಲ್ಲಾ ಪ್ರಾಣಿಪ್ರಿಯರನ್ನು ದುಃಖದಲ್ಲಿ ಮುಳುಗಿಸಿತು. ೧೯೯೮ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಪ್ರಸವ ವೇದನೆ ಪ್ರಾರಂಭವಾದರೂ ಪ್ರಸವವಾಗದ ಕಾರಣ, ಪಶು ವೈದ್ಯರು ಪರೀಕ್ಷಿಸಿದಾಗ ರೂಬಿಯ ಮರಿ ಹೊಟ್ಟೆಯಲ್ಲೇ ಸತ್ತು ಹೋಗಿತ್ತು. ಕಡೆಗೊಮ್ಮೆ ನವೆಂಬರ್ ೬ ರಂದು ಸಿಸರಿಯನ್ ಶಸ್ತ್ರ ಚಿಕಿತ್ಸೆ ಮಾಡಿ ಮೃತ ಮರಿಯನ್ನು ಹೊರ ತೆಗೆಯಲು ನಿರ್ಧಾರ ಮಾಡಿದರು. ಆದರೆ ಆದರ ಗರ್ಭಾಶಯಕ್ಕೆ ಸೋಂಕು ತಗುಲಿದ ಕಾರಣ ರೂಬಿಯನ್ನೂ ಬದುಕಿಸಲು ಆಗಲಿಲ್ಲ. ಅದರ ಮರಿಯ ಗಾತ್ರ ತುಂಬಾನೇ ದೊಡ್ಡದಾಗಿತ್ತು. ಹೀಗೆ ವಿಶ್ವದ ಶ್ರೇಷ್ಟ ಚಿತ್ರಕಾರ ಆನೆ ರೂಬಿಯು ನವೆಂಬರ್ ೬, ೧೯೯೮ರಂದು ನಿಧನ ಹೊಂದಿತು. ರೂಬಿಯ ಗೌರವಾರ್ಥ ಫೀನಿಕ್ಸ್ ಪ್ರಾಣಿ ಸಂಗ್ರಹಾಲಯಕ್ಕೆ ಒಂದು ದಿನದ ಮಟ್ಟಿಗೆ ಉಚಿತ ಪ್ರವೇಶ ನೀಡಲಾಯಿತು. ಅಂದು ಸುಮಾರು ೪೩ ಸಾವಿರ ಜನರು ಭೇಟಿ ನೀಡಿದ್ದರು. ಸರ್ವರ ಪ್ರೀತಿಗೆ ಪಾತ್ರವಾಗಿದ್ದ ರೂಬಿಯ ಅನೇಕ ಚಿತ್ರಗಳು ಈಗಲೂ ಹಲವರ ಮನೆಯ ಗೋಡೆಗಳಲ್ಲಿ ಕಾಣಬಹುದು. ಆನೆಯೊಂದು ತನ್ನ ಭಾವನೆಗಳನ್ನು ಚಿತ್ರ ಬಿಡಿಸುವುದರ ಮೂಲಕ ವ್ಯಕ್ತ ಪಡಿಸಿದ ಪರಿ ಮಾತ್ರ ಅಪರೂಪದಲ್ಲಿ ಅಪರೂಪದ್ದು.

--- (ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ