‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗಳೇ, ನೀವು ದಡ್ಡರಲ್ಲ !

‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗಳೇ, ನೀವು ದಡ್ಡರಲ್ಲ !

ಹೌದು, ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಕೊನೆಯ ಬೆಂಚ್ ನಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಎಲ್ಲರೂ ದಡ್ಡರಾಗಿರುವುದಿಲ್ಲ. ಅವರು ತಾವು ಲಾಸ್ಟ್ ಬೆಂಚ್ ಎನ್ನುವ ಕೀಳಿರಿಮೆಯನ್ನು ಬೆಳೆಸಿಕೊಳ್ಳಬೇಕಾಗಿಯೂ ಇಲ್ಲ. ಏಕೆಂದರೆ ನಾನೂ ಲಾಸ್ಟ್ ಬೆಂಚ್ ವಿದ್ಯಾರ್ಥಿಯೇ. ನಾನು ಕೊನೆ ಬೆಂಚ್ ಅನ್ನು ಅಲಂಕರಿಸಿದ ಕಾರಣ ನಾನು ದಡ್ಡ ಎಂದಲ್ಲ, ನನ್ನ ಎತ್ತರವೇ ಇದಕ್ಕೆ ಕಾರಣ. ನೀವು ಹಿಂದಿನಿಂದಲೂ ಗಮನಿಸುತ್ತಾ ಬಂದರೆ ಬಹುತೇಕ ಎಲ್ಲಾ ಶಾಲೆಗಳಲ್ಲಿ ಗಿಡ್ಡ ಇರುವವರನ್ನು ಎದುರು ಬೆಂಚಿನಲ್ಲೂ, ಎತ್ತರ ಇರುವವರನ್ನು ಕೊನೆಯ ಬೆಂಚಿನಲ್ಲೂ ಕೂರಿಸುತ್ತಾರೆ. ಇದಕ್ಕೆ ಕಾರಣ ಎತ್ತರದವರ ಹಿಂದೆ ಗಿಡ್ಡವರು ಕುಳಿತರೆ ಅವರಿಗೆ ಕರಿಹಲಗೆ (ಬ್ಲಾಕ್ ಬೋರ್ಡ್) ಕಾಣಿಸದೇ ಹೋಗಬಹುದು ಎಂದು.

ನಾನು ಇಷ್ಟು ಪೀಠಿಕೆ ಹಾಕಿದ್ದು ಏಕೆಂದರೆ ಇತ್ತೀಚಿನ ಕೆಲವು ದಿನಗಳಲ್ಲಿ ನಮ್ಮ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವ ವ್ಯವಸ್ಥೆ ಬದಲಾಯಿಸಲು ಕೆಲವರು ಹೊರಟಿದ್ದಾರೆ. ಕೇರಳದ ಕೆಲವು ಶಾಲೆಗಳಲ್ಲಿ ಒಬ್ಬರ ಹಿಂದೆ ಒಬ್ಬರನ್ನು ಕೂರಿಸುವುದರ ಬದಲು ಎಲ್ಲಾ ಬೆಂಚ್ ಗಳನ್ನು ಆಂಗ್ಲ ಭಾಷೆಯ ‘ಯು’ (U) ಆಕಾರದಲ್ಲಿ ಅಳವಡಿಸಿ ಅಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕೂರಿಸುವ ಪರಿಪಾಠ ಪ್ರಾರಂಭಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಯಾರೂ ಹಿರಿಯವನಲ್ಲ, ಯಾರೂ ಕಿರಿಯವನಲ್ಲ ಅಂತೆ. ಶಿಕ್ಷಕ ತಾನು ಬೋಧಿಸುವ ವೇದಿಕೆ (ಹೆಚ್ಚಾಗಿ ಇದು ಸ್ವಲ್ಪ ಎತ್ತರದಲ್ಲಿ ಇರುತ್ತದೆ) ಬಿಟ್ಟು ಯು ಆಕಾರದಲ್ಲಿ ಕೂತಿರುವ ವಿದ್ಯಾರ್ಥಿಗಳ ನಡುವೆ ಬಂದು ಬೋಧಿಸಬೇಕಾಗುತ್ತದೆ. ಅವರು ಕರಿಹಲಗೆಯಲ್ಲಿ ಏನಾದರೂ ಬರೆಯ ಬೇಕಾದರೆ ಮತ್ತೆ ಸ್ಟೇಜ್ ಹತ್ತಿ ಹೋಗಿ ಬರೆದು ಕೆಳಗಿಳಿದು ಬಂದು ಆ ವಿಚಾರ ಬೋಧಿಸಬೇಕಾಗುತ್ತದೆ. ಗೋಡೆಗಳ ಎರಡೂ ಇಕ್ಕೆಲಗಳಲ್ಲಿ ಸಾಲಾಗಿ ಕುಳಿತ ಮಕ್ಕಳು ನೇರವಾಗಿ ಕರಿಹಲಗೆ ನೋಡಲು ಸಾಧ್ಯವಾಗುವುದಿಲ್ಲ. ಅವರು ತಮ್ಮ ಕುತ್ತಿಗೆಯನ್ನು ತಿರುಗಿಸಿ ನೋಡಬೇಕಾಗುತ್ತದೆ. ತುಂಬಾ ಸಮಯ ಹೀಗೆ ತಿರುಗಿ ನೋಡುವುದು ಅವರ ದೈಹಿಕ ಆರೋಗ್ಯಕ್ಕೆ ಹಿತಕರವಲ್ಲ. ಹಲವರಲ್ಲಿ ಕುತ್ತಿಗೆ ನೋವು ಬರುವ ಸಾಧ್ಯತೆ ಇದೆ. ಹಲವರಿಗೆ ಇದು ಮಾನಸಿಕ ಕಿರಿಕಿರಿ ಅನಿಸಲೂ ಬಹುದು. ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಅಧಿಕವಿದ್ದರೆ ಅವರನ್ನು ಈ ವ್ಯವಸ್ಥೆಗೆ ಅಳವಡಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲಾ ಪ್ರಾಯೋಗಿಕವಾಗಿ ಉತ್ತಮ ಕ್ರಮವಲ್ಲ ಎಂದೇ ನನ್ನ ಅಭಿಮತ.

ಮೊದಲಿನ ವ್ಯವಸ್ಥೆಯನ್ನು ದಯವಿಟ್ಟು ಬದಲಿಸುವ ಗೋಜಿಗೆ ಹೋಗದಿರಿ. ಕೈಯ ಎಲ್ಲಾ ಬೆರಳುಗಳು ಹೇಗೆ ಒಂದೇ ರೀತಿ ಇರುವುದಿಲ್ಲವೋ ಹಾಗೆಯೇ ಎಲ್ಲಾ ವಿದ್ಯಾರ್ಥಿಗಳ ಬೌದ್ಧಿಕ ಗುಣ ಮಟ್ಟ ಒಂದೇ ರೀತಿ ಇರುವುದಿಲ್ಲ. ಕಲಿಯುವುದರಲ್ಲಿ ಅಷ್ಟೊಂದು ಚುರುಕಿಲ್ಲದ ವಿದ್ಯಾರ್ಥಿ ಭವಿಷ್ಯದಲ್ಲಿ ಕ್ರೀಡೆಯಲ್ಲಿ ಶಾಲೆಗೆ ಕೀರ್ತಿ ತರಬಹುದು. ಸಾಂಸ್ಕೃತಿಕ ರಂಗದಲ್ಲಿ ಮಿಂಚಬಹುದು. ಏನಿಲ್ಲವಾದರೆ ಕೊನೆಗೆ ರಾಜಕೀಯ ರಂಗದಲ್ಲಂತೂ ಸ್ಥಾನ ಪಡೆದುಕೊಳ್ಳಬಹುದು. ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನಾನು ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ಕೊನೇ ಬೆಂಚಿನಲ್ಲಿ ನಾವು ಮೂರು ಮಂದಿ  ಇದ್ದೆವು. ನಾವು ಮೂವರೂ ಉಳಿದ ವಿದ್ಯಾರ್ಥಿಗಳಿಗಿಂತ ತುಂಬಾ ಎತ್ತರವಿದ್ದೆವು. ಸಹಜವಾಗಿಯೇ ನಾವು ಹಿಂದಿನ ಬೆಂಚಿನಲ್ಲಿದ್ದೆವು. ಪ್ರಸ್ತುತ ನಾವು ಮೂವರೂ ಉತ್ತಮ ಜೀವನ ಸಾಗಿಸುತ್ತಿದೇವೆ. ಒಬ್ಬನಂತೂ ಪ್ರಸ್ತುತ ಅಮೇರಿಕದಲ್ಲಿ ಒಂದು ಕಂಪೆನಿಯ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಹೀಗಾಗಿ ‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗಳು ಯಾವತ್ತೂ ದಡ್ಡರಲ್ಲ. ಹಾಗೇ ಮೊದಲಿನ ಬೆಂಚ್ ವಿದ್ಯಾರ್ಥಿಗಳು ಅದ್ವೀತೀಯರಲ್ಲ !

ನಿಮಗೊಂದು ಪುಟ್ಟ ಉದಾಹರಣೆ ನೀಡಿ ಈ ಲೇಖನ ಮುಗಿಸುವೆ. ಕಳೆದ ಕೆಲವು ದಿನಗಳ ಹಿಂದೆ ನಮ್ಮ ಊರಿನಲ್ಲಿ ಒಂದು ಸಭಾಂಗಣದ ಉದ್ಘಾಟನೆಯಾಯಿತು. ಸಭಾಂಗಣ ನಿರ್ಮಾಣಕ್ಕೆ ಊರ ಗಣ್ಯರು ಉದಾರ ಧನ ಸಹಾಯ ನೀಡಿದ್ದರು. ಧನ ಸಹಾಯ ನೀಡಿದ ಮಹನೀಯರ ಹೆಸರುಗಳನ್ನು ಸಭಾಂಗಣದ ಒಳಗೆ ಒಂದು ಫಲಕ ಮಾಡಿ ಅದರಲ್ಲಿ ಬರೆಯುವುದು ಎಂದು ನಿರ್ಧಾರವಾಯಿತು. ಹತ್ತು ಸಾವಿರ ರೂಪಾಯಿ ನೀಡಿದ ಸುಮಾರು ೨೫ ಮಂದಿ ವ್ಯಕ್ತಿಗಳು ಇದ್ದರು. ಇವರಲ್ಲಿ ಯಾರ ಹೆಸರನ್ನು ಮೊದಲು ಹಾಕುವುದು ಎನ್ನುವ ಸಮಸ್ಯೆ ಕಾಡತೊಡಗಿತು. ಕೆಲವರು ಅಕ್ಷರದ ಪ್ರಕಾರ ಹಾಕಿ ಎಂದರೆ, ಕೆಲವರು ಹಣ ಸಂದಾಯವಾದ ದಿನಾಂಕ ಪ್ರಕಾರ ಹಾಕಿ ಎಂದರು. ಹೇಗೆ ಹಾಕಿದರೂ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಹೆಸರು ಕೊನೆಯಲ್ಲಿ ಬರಲೇ ಬೇಕಲ್ಲವೇ? ಹಾಗೆ ಪಟ್ಟಿಯ ಕೊನೆಯಲ್ಲಿ ಬಂದ ಹೆಸರಿನ ವ್ಯಕ್ತಿಯ ಸಹಾಯ ಕಡಿಮೆಯದ್ದೇ? ಅಥವಾ ಆತ ನೀಡಿದ ಹತ್ತು ಸಾವಿರ ಉಳಿದ ವ್ಯಕ್ತಿಗಳ ಹತ್ತು ಸಾವಿರಕ್ಕಿಂತ ಕಡಿಮೆ ಬೆಲೆ ಬಾಳುವುದೇ? 

ಇದೇ ರೀತಿ ಒಂದು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯ ವ್ಯಕ್ತಿಗಳ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ವಿಚಾರದಲ್ಲೂ ತಕರಾರುಗಳು ತಲೆದೋರುತ್ತವೆ. ಸರಕಾರಿ ಕಾರ್ಯಕ್ರಮವಾದರೆ ಅಲ್ಲೊಂದು ಶಿಷ್ಟಾಚಾರದ ವ್ಯವಸ್ಥೆ ಇದೆ. ಸ್ಥಳೀಯ ಶಾಸಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಮುಖ್ಯಮಂತ್ರಿ ಅಥವಾ ರಾಜ್ಯಪಾಲರು ಪಾಲ್ಗೊಳ್ಳುವುದಾದರೆ ಅವರ ಹೆಸರು ಮೊದಲು, ನಂತರ ಮಂತ್ರಿಗಳು, ಲೋಕಸಭಾ/ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್/ ವಿಧಾನ ಸಭೆ ಸದಸ್ಯರು ಹೀಗೆ ಕ್ರಮವಾಗಿ ಹೆಸರುಗಳು ಮುದ್ರಿತವಾಗಿರುತ್ತವೆ. ಆದರೆ ಖಾಸಗಿ ಸಮಾರಂಭದಲ್ಲಿ? ಯಾವ ರೀತಿಯಿಂದ ಮುದ್ರಿಸಿದರೂ ಅತಿಥಿಯಾಗಿ ಭಾಗವಹಿಸುವ ಒಬ್ಬ ವ್ಯಕ್ತಿಯ ಹೆಸರು ಕೊನೆಯಲ್ಲಿ ಬರಲೇಬೇಕಲ್ಲವೇ? ಹಾಗೆ ಆ ವ್ಯಕ್ತಿಯ ಹೆಸರು ಕೊನೆಯಲ್ಲಿ ಮುದ್ರಿತವಾದರೆ ಅವರ ಗೌರವ ಕಡಿಮೆಯಾಗುತ್ತದೆಯೇ? ಇದೇ ಸಂಗತಿ ನಾನು ‘ಲಾಸ್ಟ್ ಬೆಂಚ್’ ವಿದ್ಯಾರ್ಥಿಗೆ ಹೋಲಿಸುವೆ. ಕೊನೇ ಬೆಂಚಿನಲ್ಲಿ ಕುಳಿತುಕೊಳ್ಳುವುದರಿಂದ ಯಾವುದೇ ವಿದ್ಯಾರ್ಥಿಯ ಗುಣಮಟ್ಟ ಕಡಿಮೆಯಾಗುವುದಿಲ್ಲ. ಆತ ಯಾವುದೇ ಕೀಳಿರಿಮೆಯಿಂದ ಕುಗ್ಗಬೇಕಿಲ್ಲ. ಪರೀಕ್ಷೆಯಲ್ಲಿ ಫೈಲ್ ಆದರೂ ಪರವಾಗಿಲ್ಲ ಬದುಕಿನಲ್ಲಿ ಸೋಲದಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಆದುದರಿಂದ ಕೊನೇ ಬೆಂಚಿನ ವಿದ್ಯಾರ್ಥಿ/ನಿಯರೇ ನಿಮ್ಮ ಮನಸ್ಸಿನಿಂದ ನಾವು ಹಿಂದಿನ ಬೆಂಚಿನವರು ಎನ್ನುವ ಗುಮ್ಮನನ್ನು ಹೊಡೆದೋಡಿಸಿದರೆ ಸಫಲತೆ ಖಂಡಿತವಾಗಿಯೂ ನಿಮ್ಮ ಕೈಹಿಡಿಯುತ್ತದೆ.

ಚಿತ್ರದಲ್ಲಿ: ಇತ್ತೀಚೆಗೆ ಹೊಸದಾಗಿ ಅಳವಡಿಸಲಾದ ‘U’ ಆಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ

ಚಿತ್ರ ಕೃಪೆ: ಅಂತರ್ಜಾಲ ತಾಣ