‘ಲಿಜ್ಜತ್ ಪಾಪಡ್' ಎಂಬ ಗೃಹ ಉದ್ದಿಮೆಯ ವಿರಾಟ್ ಲೋಕ

‘ಲಿಜ್ಜತ್ ಪಾಪಡ್' ಎಂಬ ಗೃಹ ಉದ್ದಿಮೆಯ ವಿರಾಟ್ ಲೋಕ

ಹಪ್ಪಳ ಪಪ್ಪಡ ತಿನ್ನದವರೂ ಕೇಳಿರಬಹುದಾದ ಹೆಸರೆಂದರೆ ಲಿಜ್ಜತ್ ಪಾಪಡ್. ಬಹಳ ಹಿಂದಿನಿಂದಲೂ ಲಿಜ್ಜತ್ ಪಾಪಡ್ ಅವರ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಒಂದು ಮೊಲದ ವೇಷ ಹಾಕಿದ ವ್ಯಕ್ತಿ ತನ್ನ ಎರಡೂ ಕೈಗಳಲ್ಲಿ ಪಾಪಡ್ ಹಿಡಿದುಕೊಂಡು ಲಿಜ್ಜತ್ ಪಾಪಡ್ ಎಂದು ಹೇಳುವ ದೃಶ್ಯವಂತೂ ಎಲ್ಲಾ ಮಕ್ಕಳಿಗೆ ಅಚ್ಚು ಮೆಚ್ಚು. ಇದೇನು ಲಿಜ್ಜತ್ ಪಾಪಡ್? ಏನಿದರ ಒಳಲೋಕ ಬನ್ನಿ ತಿಳಿದುಕೊಳ್ಳೋಣ.

೧೯೫೯ರಲ್ಲಿ ೮೦ರೂ ಬಂಡವಾಳ, ೨೦೧೮ರಲ್ಲಿ ವಾರ್ಷಿಕ ವಹಿವಾಟು ೮೦೦ ಕೋಟಿ. ೪೩ ಸಾವಿರ ಮಂದಿಗೆ ಉದ್ಯೋಗ. ಅಚ್ಚರಿಯಾಯಿತಾ? ಇದೇ ಮಹಿಳಾ ಶಕ್ತಿಯ ವಿರಾಟ್ ರೂಪ. ೧೯೫೯ರಲ್ಲಿ ಶ್ರೀ ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್ ಎಂಬ ಮಹಿಳಾ ಸ್ವಸಹಾಯ ಸಂಘವು ಮುಂಬಯಿಯಲ್ಲಿ ಪ್ರಾರಂಭವಾಯಿತು. ಅಂದು ಈ ಗೃಹ ಉದ್ದಿಮೆಗೆ ಹಾಕಿದ ಬಂಡವಾಳ ಎಂಬತ್ತು ರೂಪಾಯಿ ಮಾತ್ರ. ಅಂದಿನ ಆ ಎಂಬತ್ತು ರೂಪಾಯಿ ೬೦ ವರ್ಷಗಳಲ್ಲಿ ಬೆಳೆದು ೮೦೦ ಕೋಟಿಯ ವಾರ್ಷಿಕ ವಹಿವಾಟಿನ ಸಂಸ್ಥೆಯನ್ನಾಗಿ ಮಾಡಿದೆ. ಇಂದು ೪೩ ಸಾವಿರ ಮಂದಿ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಲಿಜ್ಜತ್ ಪಾಪಡ್ ಇದರ ವ್ಯಾಪಾರ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ವಿಸ್ತರಿಸಿದೆ.

ಅಡುಗೆ ಮಾಡುವುದರ ಹೊರತಾಗಿ ಏನೂ ಗೊತ್ತಿಲ್ಲದ ಗುಜರಾತ್ ಮೂಲದ ಮುಂಬಯಿಯಲ್ಲಿ ನೆಲೆಸಿದ್ದ ೭ ಮಂದಿ ಮಹಿಳೆಯರ ಕನಸಿನ ಕೂಸೇ ಈ ಲಿಜ್ಜತ್ ಪಾಪಡ್. ತಮಗೆ ಗೊತ್ತಿರುವ ವಿದ್ಯೆ ಅಡುಗೆ. ಅದರಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದ ಮಹಿಳೆಯರಾದ ಜಸ್ವಂತೀಬೆನ್, ಪಾರ್ವತಿಬೆನ್, ಉಜಮ್ ಬೆನ್, ಬಾನುಬೆನ್, ಲಗುಬೆನ್, ಜಯಾಬೆನ್ ಹಾಗೂ ಚುಟಡ್ ಬೆನ್ ಸೇರಿಕೊಂಡು ಕಟ್ಟಿದ ಸಂಸ್ಥೆ ಇದು. ಸಮಾಜಸೇವಕ ಛಗನ್ ಲಾಲ್ ಪಾರೇಖ್ ಅವರಿಂದ ಎಂಬತ್ತು ರೂಪಾಯಿಗಳ ಸಾಲವನ್ನು ಪಡೆದು ತಮ್ಮ ಉದ್ದಿಮೆಯನ್ನು ಪ್ರಾರಂಭಿಸಿದರು. ಲಕ್ಷ್ಮೀದಾಸ ಭಾಯಿ ಎಂಬವರಿಂದ ತಮ್ಮ ಉದ್ದಿಮೆಗೆ ಬೇಕಾದ ಕಚ್ಚಾವಸ್ತು ಹಾಗೂ ಸಲಕರಣೆಗಳನ್ನು ಪಡೆದುಕೊಂಡ ಈ ಮಹಿಳೆಯರು ತಮ್ಮದೇ ಮನೆಯ ತಾರಸಿಯಲ್ಲಿ ಮಾರ್ಚ್ ೧೫, ೧೯೫೯ರಂದು ಪಪ್ಪಡವನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಅಂದು ಅವರಿಂದ ಕೇವಲ ೪ ಪ್ಯಾಕೆಟ್ ಪಪ್ಪಡಗಳನ್ನಷ್ಟೇ ಮಾಡಲು ಸಾಧ್ಯವಾಯಿತು. ಅದನ್ನು ಅವರು ಭುಲೇಶ್ವರದ ತಮ್ಮ ಪರಿಚಿತ ವ್ಯಾಪಾರಿಗೆ ಮಾರಾಟಕ್ಕೆ ಕೊಡುತ್ತಾರೆ. ಎಷ್ಟೇ ನಷ್ಟವಾದರೂ ಯಾರಿಂದಲೂ ಸಾಲ ಅಥವಾ ಹಣಕಾಸಿನ ನೆರವು ಪಡೆದುಕೊಳ್ಳುವುದಿಲ್ಲ ಎಂದು ಈ ಏಳು ಮಂದಿ ಮಹಿಳಾ ಮಣಿಗಳು ನಿರ್ಧರಿಸುತ್ತಾರೆ. 

ಬಂಡವಾಳ ಸಾಲ ನೀಡಿದ್ದ ಛಗನ್ ಲಾಲ್ ಪಾರೇಖ್ ತಮ್ಮ ಉದ್ಯೋಗದ ಜ್ಞಾನವನ್ನು ಈ ಮಹಿಳೆಯರಿಗೆ ಧಾರೆ ಎರೆಯುತ್ತಾರೆ. ಮೊದಲಿಗೆ ಎರಡು ಬಗೆಯ ಪಪ್ಪಡಗಳನ್ನು ಮಾಡುತ್ತಿದ್ದ ಮಹಿಳೆಯರಿಗೆ ಒಂದೇ ಬಗೆಯ, ಆದರೆ ಗುಣ ಮಟ್ಟದ, ಸರಿಯಾದ ಆಕಾರದ ಪಪ್ಪಡ ಮಾಡಲು ಹೇಳುತ್ತಾರೆ. ಯಾಕೆಂದರೆ ಅವರ ಪ್ರಕಾರ ಯಾವತ್ತೂ ಗುಣಮಟ್ಟದಲ್ಲಿ ರಾಜಿ ಮಾಡ ಬಾರದು ಎಂಬುದು. ಅವರು ಮಹಿಳೆಯರಿಗೆ ವ್ಯಾಪಾರದ ಲೆಕ್ಕಾಚಾರಗಳನ್ನು ನೋಡಿಕೊಳ್ಳಲೂ ಸಹಕಾರ ನೀಡುತ್ತಾರೆ.

ಉದ್ದಿಮೆಯ ಪ್ರಾರಂಭದಲ್ಲಿ ಸಣ್ಣ ಸಣ್ಣ ಹುಡುಗಿಯರಿಗೂ ಕೆಲಸ ಕೊಟ್ಟರೂ ನಂತರದ ದಿನಗಳಲ್ಲಿ ಕೆಲಸಕ್ಕೆ ಬರುವ ಮಹಿಳೆಯರ ಕನಿಷ್ಟ ಪ್ರಾಯ ಹದಿನೆಂಟು ಎಂದು ನಿರ್ಧರಿಸಲಾಯಿತು. ಮೂರೇ ತಿಂಗಳಲ್ಲಿ ಅವರ ಕೆಲಸಗಾರರ ಸಂಖ್ಯೆ ೨೫ಕ್ಕೆ ಏರಿತು. ಪ್ರಥಮ ವರ್ಷದಲ್ಲಿ ಅವರು ೬೧೯೬ರೂಪಾಯಿಗಳ ವಹಿವಾಟು ಮಾಡಿದರು. ಪಪ್ಪಡ ತಯಾರಿಸುವಾಗ ತುಂಡಾದ ಪಪ್ಪಡವನ್ನು ತಮ್ಮ ನೆರೆಕರೆಯವರಿಗೆ ಸ್ಯಾಂಪಲ್ ರೂಪದಲ್ಲಿ ನೀಡಿ ಪ್ರಚಾರ ಮಾಡಿದರು. ಹೀಗೆ ಸ್ವಸಹಾಯ ಸಂಘದ ರೀತಿಯಲ್ಲಿ ತಮ್ಮ ಗೃಹ ಉದ್ದಿಮೆಯನ್ನು ಈ ಮಹಿಳೆಯರು ಪ್ರಾರಂಭಿಸಿದರು.

ಉದ್ಯಮದ ಪ್ರಾರಂಭಿಕ ವರ್ಷದಲ್ಲಿ ಮಳೆಯ ಕಾರಣದಿಂದಾಗಿ ನಾಲ್ಕು ತಿಂಗಳು ವ್ಯಾಪಾರ ನಿಲ್ಲಿಸಬೇಕಾಗಿ ಬಂತು. ಏಕೆಂದರೆ ಮಳೆಯಿಂದಾಗಿ ಪಪ್ಪಡ ಒಣಗುತ್ತಿರಲಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಮಹಿಳೆಯರು ಒಣಗಿಸಲು ಬೇಕಾದ ಸಲಕರಣೆಗಳನ್ನು ತಯಾರಿಸಿಕೊಂಡರು. ಇದರಿಂದ ವರ್ಷವಿಡೀ ಪಪ್ಪಡ ಮಾಡಲು ಅವಕಾಶವಾಯಿತು. ಈ ಪಪ್ಪಡಕ್ಕೆ ೧೯೬೨ರಲ್ಲಿ ಒಂದು ಬ್ರಾಂಡ್ ನೇಮ್ ಕೊಡಲು ಬಯಸಿದ ಇವರು ‘ಲಿಜ್ಜತ್'  (ಗುಜರಾತಿಯಲ್ಲಿ ರುಚಿಕರ ಎಂದರ್ಥ) ಎಂದು ಹೆಸರು ನೀಡಿದರು. ಹಾಗೆ ಲಿಜ್ಜತ್ ಎಂಬ ಹೆಸರು ಹುಟ್ಟಿಕೊಂಡಿತು. ಹೀಗೆ ಪ್ರಾರಂಭವಾದ ಇವರ ಪ್ರಯಾಣ ಯಶಸ್ಸಿನ ಹಾದಿಯಲ್ಲಿ ಸಾಗ ತೊಡಗಿತು. ಕೆಲವೊಂದು ಕಷ್ಟಗಳೂ ಬಂದವು. ಮಲಾಡ್ ಹಾಗೂ ಸಾಂಗ್ಲಿಯಲ್ಲಿ ಪ್ರಾರಂಭಿಸಿದ ಶಾಖೆಗಳು ನಷ್ಟಕ್ಕೆ ಒಳಗಾದವು. ನಂತರದ ದಿನಗಳಲ್ಲಿ ಈ ಸಂಸ್ಥ್ರೆಯನ್ನು ಸ್ವಸಹಾಯ ಸಂಘಗಳ ಅಡಿಯಲ್ಲಿ ನೊಂದಾಯಿಸಲಾಯಿತು. ಹೀಗೆ ಯಶಸ್ಸಿನ ಒಂದೊಂದೇ ಹೆಜ್ಜೆ ಇಡಲು ಪ್ರಾರಂಭಿಸಿದ ಸಂಸ್ಥೆ ತನ್ನ ಉತ್ಪಾದನೆಯಲ್ಲೂ ಬದಲಾವಣೆಗಳನ್ನು ಮಾಡಿಕೊಂಡು ಬಂತು. ೧೯೭೪ರಲ್ಲಿ ಖಾಕ್ರಾ ಎಂಬ ಪ್ರಸಿದ್ಧ ಗುಜರಾತೀ ತಿನಸನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. 

ಹೀಗೆ ನಿರಂತರವಾಗಿ ಹೊಸ ಹೊಸ ಉತ್ಪನ್ನಗಳನ್ನು ತಯಾರು ಮಾಡಲು ಪ್ರಾರಂಭಿಸಿದರು. ಈಗ ಇವರು ಹಪ್ಪಳ, ಮಸಾಲೆಗಳು, ಗೋಧಿ ಹಿಟ್ಟು, ಚಪಾತಿ, ಬೇಕರಿ ಉತ್ಪನ್ನಗಳನ್ನೆಲ್ಲಾ ತಯಾರು ಮಾಡಿದರು. ಮಾರುಕಟ್ಟೆಯಲ್ಲಿ ಲಿಜ್ಜತ್ ಉತ್ಪನ್ನಗಳಿಗೆ ತಮ್ಮದೇ ಆದ ಗ್ರಾಹಕರು ಇದ್ದಾರೆ. ಕ್ರಮೇಣ ಕೇವಲ ತಿಂಡಿ ತಿನಸುಗಳು ಮಾತ್ರವಲ್ಲದೇ ಲಿಜ್ಜತ್ ತನ್ನ ಉದ್ದಿಮೆಯನ್ನು ಬೇರೆ ಉತ್ಪನ್ನಗಳತ್ತವೂ ಗಮನ ಹರಿಸಿತು. ೧೯೮೮ರಲ್ಲಿ ತಮ್ಮ ನೊಂದಾಯಿತ ಕಛೇರಿಯನ್ನು ಬಾಂದ್ರಾಕ್ಕೆ ವರ್ಗಾಯಿಸಿದ ಬಳಿಕ ಬಟ್ಟೆ ಒಗೆಯುವ ಸಾಬೂನು ಹಾಗೂ ಹುಡಿಗಳ ತಯಾರಿಕೆಯನ್ನು ಪ್ರಾರಂಭಿಸಿತು. ‘ಸಸಾ’ ಎಂಬ ಬ್ರಾಂಡ್ ಮೂಲಕ ಪ್ರಾರಂಭವಾದ ಈ ಉದ್ದಿಮೆಯೂ ಈಗ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದೆ. 

ಮಾರುಕಟ್ಟೆಯನ್ನು ವಿಸ್ತರಿಸಲು ಲಿಜ್ಜತ್ ಜಾಹೀರಾತು ಮೂಲಕ ಹಾಗೂ ವಸ್ತು ಪ್ರದರ್ಶನಗಳ ಮಳಿಗೆಗಳಲ್ಲಿ ತಮ್ಮ ಮಳಿಗೆಯನ್ನು ಹಾಕುವುದರ ಮೂಲಕ ಜನರಲ್ಲಿ ತಮ್ಮ ಉತ್ಪನ್ನದ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿತು. ಇದರಿಂದಲೂ ಲಿಜ್ಜತ್ ಇದರ ಮಾರುಕಟ್ಟೆ ಇನ್ನಷ್ಟು ವಿಸ್ತಾರವಾಯಿತು. ಮಹಿಳೆಯರಿಂದ ಪ್ರಾರಂಭವಾದ ಈ ಗೃಹ ಉದ್ದಿಮೆಯ ಖ್ಯಾತಿ ವಿದೇಶಕ್ಕೂ ತಲುಪಿತು. ೧೯೯೬ರಲ್ಲಿ ಉಗಾಂಡಾ ದೇಶದ ಉಪಾಧ್ಯಕ್ಷೆ ಲಿಜ್ಜತ್ ಕಛೇರಿಗೆ ಭೇಟಿ ನೀಡಿ, ತಮ್ಮ ದೇಶದಲ್ಲೂ ಇಂತಹ ಉದ್ದಿಮೆ ಪ್ರಾರಂಭಿಸುವ ಇಂಗಿತ ವ್ಯಕ್ತ ಪಡಿಸಿದರು. ಮುಂದೆ ಉಗಾಂಡದಲ್ಲೂ ಲಿಜ್ಜತ್ ಸಹಕಾರದೊಂದಿಗೆ ಗೃಹ ಉದ್ದಿಮೆ ಪ್ರಾರಂಭವಾಯಿತು.

ಲಿಜ್ಜತ್ ಉದ್ದಿಮೆಗೆ ಹಲವಾರು ಪುರಸ್ಕಾರಗಳು ಬಂದಿವೆ. ಅವುಗಳಲ್ಲಿ ‘ಉತ್ತಮ ಗ್ರಾಮೀಣ ಕೈಗಾರಿಕೆ ಪ್ರಶಸ್ತಿ' ಹಾಗೂ 'ವರ್ಷದ ಉತ್ತಮ ಮಹಿಳಾ ಉದ್ಯಮಿ' ಪುರಸ್ಕಾರಗಳು ಸಿಕ್ಕಿವೆ. ಆದರೆ ಜನರು ನೀಡಿದ ಪ್ರೋತ್ಸಾಹದ ಎದುರು ಈ ಪ್ರಶಸ್ತಿಗಳು ಏನೇನೂ ಅಲ್ಲ ಎನ್ನುತ್ತಾರೆ ಲಿಜ್ಜತ್ ಉದ್ಯಮದ ಪ್ರಮುಖರು. 

ಮಹಿಳಾ ಗೃಹ ಉದ್ಯೋಗ ಲಿಜ್ಜತ್ ಪಾಪಡ್ ಸಂಸ್ಥೆಯು ತಮ್ಮದೇ ಆದ ಉತ್ತಮ ಮ್ಯಾನೇಜ್ ಮೆಂಟ್ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದರಿಂದ ತಮ್ಮ ಸಂಸ್ಥೆಯಲ್ಲಿ ದುಡಿಯುವ ಪ್ರತಿಯೊಬ್ಬ ಕೆಲಸಗಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿದೆ. ‘ಲಿಜ್ಜತ್ ಪತ್ರಿಕಾ’ ಎಂಬ ಗೃಹ ಪತ್ರಿಕೆಯನ್ನು ಲಿಜ್ಜತ್ ಮುದ್ರಿಸುತ್ತಾ ಬಂದಿದೆ. ಲಿಜ್ಜತ್ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಿವೃತ್ತಿಯ ವಯಸ್ಸಿನ ನಿರ್ಭಂಧವಿಲ್ಲ. ಎಷ್ಟು ಸಮಯ ಕೆಲಸ ಮಾಡಲು ಬಯಸುತ್ತಾರೋ ಅಷ್ಟು ಸಮಯ ಅವರು ದುಡಿಯಬಹುದಾಗಿದೆ. ಸಂಸ್ಥೆಯ ನಿಯಮಗಳನ್ನು ಮುರಿದಾಗ ಮಾತ್ರ ಅವರನ್ನು ಕೆಲಸದಿಂದ ರಾಜೀನಾಮೆ ಕೊಡಿಸಲಾಗುತ್ತದೆ. ನಿವೃತ್ತಿ ಏಕೆ ಇಲ್ಲ ಎಂಬುದಾಗಿ ಸಂಸ್ಥೆಯ ಅಧ್ಯಕ್ಷೆಯ ಬಳಿ ಕೇಳಿದಾಗ ಅವರು ಹೇಳಿದ ಮಾತು ನಿಜಕ್ಕೂ ಹೃದಯಕ್ಕೆ ತಟ್ಟುವಂತದ್ದು. ‘ಮಹಿಳೆಯರಿಗೆ ಕೆಲಸದಲ್ಲಿ ಯಾವತ್ತೂ ನಿವೃತ್ತಿ ಇರುವುದಿಲ್ಲ. ತಮ್ಮ ಹೊಟ್ಟೆಯ ಹಸಿವನ್ನು ತಣಿಸಲು ಅವರಿಗೆ ನಾವು ಯಾವತ್ತೂ ಸಹಕಾರ ನೀಡುತ್ತೇವೆ, ನಿವೃತ್ತಿಯ ಶಿಕ್ಷೆಯಲ್ಲ'.

ತಮ್ಮ ಮಹಿಳಾ ಸಹೋದರಿಯರಿಗಾಗಿ ಮತ್ತು ಅವರ ಮಕ್ಕಳಿಗಾಗಿ ಲಿಜ್ಜತ್ ಸಂಸ್ಥೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಹಾಗೂ ಕಂಪ್ಯೂಟರ್ ಜ್ಞಾನ ಒದಗಿಸಲು ಕ್ರಮ ಕೈಗೊಂಡಿದೆ. ಸಂಸ್ಥೆಯ ಪ್ರಾರಂಭದಲ್ಲಿ ೮೦ ರೂ. ನೀಡಿ ಸಹಕಾರ ನೀಡಿದ ಛಗನ್ ಲಾಲ್ (ಛಗನ್ ಬಾಪಾ) ನೆನಪಿನಲ್ಲಿ ‘ಛಗನ್ ಬಾಪಾ ವಿದ್ಯಾರ್ಥಿವೇತನ' ವನ್ನು ಸಂಸ್ಥೆಯ ಉದ್ಯೋಗಿಗಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ. 

ಲಿಜ್ಜತ್ ಸಂಸ್ಥೆಯು ಕೇವಲ ಉದ್ಯಮ ರಂಗದಲ್ಲಷ್ಟೇ ಅಲ್ಲ. ಸಾಮಾಜಿಕ ಕ್ಷೇತ್ರದಲ್ಲೂ ಹಲವಾರು ಸೇವೆಗಳನ್ನು ಮಾಡುತ್ತಲೇ ಬಂದಿದೆ. ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ರಕ್ತದಾನ ಶಿಬಿರಗಳ ಆಯೋಜನೆ, ಬಡ ಹೆಣ್ಣು ಮಕ್ಕಳ ಮದುವೆಗೆ ಹಣಕಾಸಿನ ನೆರವು, ಉತ್ತಮ ವಿದ್ಯಾರ್ಥಿನಿಗೆ ಬಹುಮಾನ ಹೀಗೆ ಹತ್ತು ಹಲವಾರು ಸಮಾಜಮುಖೀ ಕೆಲಸಗಳನ್ನು ಮಾಡಿದೆ. ಗುಜರಾತ್ ನ ಲತೂರ್ ನ ಭೂಕಂಪದ ಸಮಯದಲ್ಲಿ ನಿರ್ವಸಿತರಾದವರಿಗಾಗಿ ಮನೆಗಳನ್ನು ಕಟ್ಟಿಕೊಡುವಲ್ಲಿ ನೆರವಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಲಿಜ್ಜತ್ ಸಂಸ್ಥೆಯ ಬೆಳವಣಿಗೆಯೇ ಸಾಕ್ಷಿ. ಲೇಖನದಲ್ಲಿ ಲಿಜ್ಜತ್ ಬಗ್ಗೆ ಬರೆದದ್ದು ಕಮ್ಮಿಯೇ. ಇವರ ಸಾಧನೆಯ ವಿರಾಟ್ ದರ್ಶನ ಪೂರ್ತಿಯಾಗಿ ಮಾಡ ಬೇಕಾದಲ್ಲಿ ಒಂದು ಪುಸ್ತಕವನ್ನೇ ಬರೆಯಬೇಕಾಯಿತು. ನಾನು ಹೆಣ್ಣು, ನಾನು ಅಬಲೆ ಎಂದು ಕೊರಗುವ ಹೆಣ್ಣು ಮಕ್ಕಳಿಗೆ ಬಹಳ ಹಿಂದೆ ಅದೂ ೫೦ರ ದಶಕದಲ್ಲಿ ನಡೆದ ಈ ಮಹಿಳಾ ಶಕ್ತಿಯ ಪರಿಣಾಮವನ್ನು ತೋರಿಸಬೇಕು. ಸೌಟು ಹಿಡಿಯುವ ಕೈ ದೇಶವನ್ನು ನಡೆಸುತ್ತೆ ಎಂಬುದನ್ನು ನಿಜ ಮಾಡಿದ ಲಿಜ್ಜತ್ ಪಾಪಡ್ ನ ಎಲ್ಲಾ ಮಹಿಳಾ ಮಣಿಗಳಿಗೆ ಸಹಸ್ರ ನಮನಗಳು.