‘ವಂದೇ ಮಾತರಂ’ ರಾಷ್ಟ್ರಗೀತೆ ಏಕೆ ಆಗಲಿಲ್ಲ?

‘ವಂದೇ ಮಾತರಂ’ ರಾಷ್ಟ್ರಗೀತೆ ಏಕೆ ಆಗಲಿಲ್ಲ?

ದೇಶವು ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಷಯ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಇಂತಹ ಒಂದು ಅದ್ಭುತ ಗೀತೆ ಭಾರತದ ರಾಷ್ಟ್ರ ಗೀತೆ ಏಕೆ ಆಗಲಿಲ್ಲ? ನಿಮಗೆ ಗೊತ್ತೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ವಂದೇ ಮಾತರಂ ಗೀತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ…

ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದ ಬಳಿಕ ಅದು ರಾಷ್ಟ್ರದಾದ್ಯಂತ ಹೋರಾಟದ ಕಿಚ್ಚನ್ನು ಹಚ್ಚಿತು. ಇದರಿಂದ ಬ್ರಿಟೀಷ್ ಆಡಳಿತ ಸಹಜವಾಗಿಯೇ ರೊಚ್ಚಿಗೆದ್ದಿತು. ಈ ಗೀತೆಯ ಮೇಲೆ ನಿಷೇಧ ಹೇರಿತು. ಸಾರ್ವಜನಿಕವಾಗಿ ವಂದೇ ಮಾತರಂ ಘೋಷಣೆ ಕೂಗಿದವರನ್ನು ಬಂಧಿಸಲಾಗುತ್ತಿತ್ತು. ಆದರೆ ೧೯೧೫ರಿಂದ ಪ್ರತೀ ವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಲು ಪ್ರಾರಂಭಿಸಲಾಯಿತು. ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲೆಂದು ಆಗಿನ ಖ್ಯಾತ ಗಾಯಕ ವಿಷ್ಣು ದಿಗಂಬರ ಪಲುಸ್ಕರ್ ಅವರನ್ನು ಆಯೋಜಿಸಲಾಗಿತ್ತು. ಗಾಂಧೀಜಿಯವರು ಪ್ರತೀ ಕಾಂಗ್ರೆಸ್ ಸಮಾವೇಶದಲ್ಲಿ ವಂದೇ ಮಾತರಂ ಗೀತೆಯ ಅರ್ಥವನ್ನು ಒತ್ತಿ ಒತ್ತಿ ಹೇಳುತ್ತಿದ್ದರು. 

೧೯೦೫ರಲ್ಲಿ ವೀರ ಸಾವರ್ಕರ್ ಅವರ ಅನುಯಾಯಿ ಮೇಡಂ ಕಾಮಾ ಜರ್ಮನಿಯಲ್ಲಿ ಭಾರತದ ಧ್ವಜ ಹಿಡಿದು ಬ್ರಿಟೀಷರ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು (ಚಿತ್ರ ಗಮನಿಸಿ). ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ನ ಘೋಷ ವಾಕ್ಯವೇ ‘ವಂದೇ ಮಾತರಂ’ ಆಗಿತ್ತು. ೧೯೪೨-೨೪ರ ಅವಧಿಯಲ್ಲಿ ಆಝಾದ್ ಹಿಂದ್ ರೇಡಿಯೋದಲ್ಲಿ ನೇತಾಜಿಯವರ ಸಂದೇಶಗಳು ಪ್ರಕಟವಾಗುತ್ತಿದ್ದವು. ಈ ಸಂದೇಶಗಳು ಆರಂಭವಾಗುತ್ತಿದ್ದದ್ದು ‘ವಂದೇ ಮಾತರಂ’ ಎಂಬ ಘೋಷಣೆಯೊಂದಿಗೆ. ಸ್ವಾತಂತ್ರ್ಯ ಹೋರಾಟಗಾರರಾದ ಅರವಿಂದ ಘೋಷ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಸುಬ್ರಹ್ಮಣ್ಯ ಭಾರತಿ, ಚಿದಂಬರಂ ಪಿಳ್ಳೆ, ಸುಬ್ರಹ್ಮಣ್ಯ ಶಿವ, ಹೆಗಡೇವಾರ್ ಮೊದಲಾದವರು ವಂದೇ ಮಾತರಂ ಆಂದೋಲದ ಭಾಗವಾಗಿದ್ದರು. 

ವಂದೇ ಮಾತರಂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ಸ್ವಾತಂತ್ರ್ಯದ ಬಳಿಕ ಈ ಗೀತೆಗೆ ರಾಷ್ಟ್ರಗೀತೆಯ ಸ್ಥಾನ ಸಿಗದಿದ್ದುದು ದುರಂತವೇ ಸರಿ. ರವೀಂದ್ರನಾಥ ಠಾಗೋರ್ ಅವರ ‘ಜನಗಣಮನ’ ಗೀತೆಯು ಭಾರತದ ರಾಷ್ಟ್ರ ಗೀತೆಯಾಗಿ ಸ್ಥಾನ ಪಡೆಯಿತು. ಇದಕ್ಕೆ ನೆಹರೂ ಕೊಟ್ಟ ಕಾರಣವೆಂದರೆ ಜನಗಣಮನ ವಿದೇಶೀ ಮಿಲಿಟರಿ ಬ್ಯಾಂಡ್ ನ ಸಂಗೀತ ರಚನೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ, ವಂದೇ ಮಾತರಂ ಹೊಂದುವುದಿಲ್ಲ ಎಂದು. ಆಗಿನ ಖ್ಯಾತ ಸಂಗೀತಗಾರ ಕೃಷ್ಣ ರಾವ್ ಪುಲಂಬ್ರೀಕರ್ ಅವರು ಯಾವುದೇ ಭಾರತೀಯ ಅಥವಾ ವಿದೇಶೀ ವಾದ್ಯಕ್ಕೆ ‘ವಂದೇ ಮಾತರಂ’ ಗೀತೆಯನ್ನು ಹೊಂದಿಸಬಹುದು ಎಂದು ಹೇಳಿದರೂ ನೆಹರೂ ತಮ್ಮ ಪಟ್ಟು ಸಡಿಲಿಸಲಿಲ್ಲ. ಕೆಲವು ಮಾಹಿತಿಗಳ ಪ್ರಕಾರ ವಂದೇ ಮಾತರಂ ಗೀತೆಗೆ ಮುಸ್ಲಿಂ ಸಮುದಾಯದವರ ವಿರೋಧ ಇತ್ತು. 

೧೯೨೩ರಲ್ಲೇ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮದ್ ಆಲಿ, ವಂದೇ ಮಾತರಂ ಗೀತೆಯನ್ನು ಮುಸ್ಲಿಮರು ಹಾಡುವಂತಿಲ್ಲ. ಏಕೆಂದರೆ ಇಸ್ಲಾಂ ನಲ್ಲಿ ಸಂಗೀತ ನಿಷೇಧ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅದಲ್ಲದೇ ತಮ್ಮ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲವೆಂದೂ ವಂದೇ ಮಾತರಂ ಗೀತೆಯಲ್ಲಿ ಭಾರತ ಮಾತೆಯ ಗುಣಗಾನವಿದೆಯೆಂದೂ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಅವರ ವಿರೋಧಗಳನ್ನು ಲೆಕ್ಕಿಸದೇ ಪಲುಸ್ಕರ್ ಅವರು ಕಾಂಗ್ರೆಸ್ ಸಮಾವೇಶಗಳಲ್ಲಿ ವಂದೇ ಮಾತರಂ ಹಾಡುತ್ತಿದ್ದರು. ಕ್ರಮೇಣ ಮಹಮ್ಮದ್ ಆಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಪ್ರಾಬಲ್ಯಕ್ಕೆ ಬರುತ್ತಿದ್ದಂತೆ ವಂದೇ ಮಾತರಂ ಗೀತೆ ನೇಪಥ್ಯಕ್ಕೆ ಸರಿಯಲು ಪ್ರಾರಂಭವಾಯಿತು. ಕಾಂಗ್ರೆಸ್ ಸಮಾವೇಶಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ೬ ಚರಣಗಳಿದ್ದ ವಂದೇ ಮಾತರಂ ಹಾಡಿನ ಮೊದಲ ಒಂದೆರಡು ಚರಣಗಳನ್ನಷ್ಟೇ ಹಾಡಲಾಗುತ್ತಿತ್ತು.   

ಸ್ವಾತಂತ್ರ್ಯದ ಬಳಿಕ ‘ವಂದೇ ಮಾತರಂ’ ಹಾಡಿಗೆ ರಾಷ್ಟ್ರಗೀತೆಯ ಸ್ಥಾನ ಸಿಗದೇ ಹೋದರೂ ೧೯೫೦ರ ಜನವರಿ ೨೪ರಂದು ರಾಷ್ಟ್ರಗೀತೆಗೆ ಸಮನಾದ ಗೀತೆಯ ಸ್ಥಾನಮಾನ ನೀಡಲಾಯಿತು. ಅಂದು ಸಂವಿಧಾನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ‘ಜನಗಣ ಮನ ಭಾರತದ ರಾಷ್ಟ್ರಗೀತೆಯಾಗಿರಲಿದೆ, ಜೊತೆಗೆ ವಂದೇ ಮಾತರಂ ಗೀತೆಗೂ ಸರಿಸಮನಾದ ಸ್ಥಾನ ನೀಡಲಾಗುವುದು’ ಎಂದು ಘೋಷಿಸಿದರು. ಹೀಗೆ ವಂದೇ ಮಾತರಂ ಹಾಡಿಗೆ ಪೂರ್ಣ ಪ್ರಮಾಣದ ಗೌರವ ದೊರೆಯದೇ ಹೋದರೂ ರಾಷ್ಟ್ರಗೀತೆಗೆ ಸಮಾನವಾದ ಸ್ಥಾನಮಾನ ದೊರೆತಿದೆ.

ಸ್ವಾತಂತ್ರ್ಯಾನಂತರ ಹಲವು ಚಲನ ಚಿತ್ರಗಳಲ್ಲಿ ವಂದೇ ಮಾತರಂ ಹಾಡು ಅಳವಡಿಕೆಯಾಗಿದೆ. ಹಲವು ರಾಗಗಳಲ್ಲಿ ಸಂಯೋಜನೆ ಮಾಡಲಾಗಿದೆ. ೧೯೪೭ರ ಆಗಸ್ಟ್ ೧೫ರಂದು ಪಂಡಿತ್ ಓಂಕಾರನಾಥ್ ಠಾಕೂರ್ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ತಮ್ಮ ಶಾಸ್ತ್ರೀಯ ಗಾಯನದಲ್ಲಿ ಈ ಗೀತೆಯನ್ನು ಹಾಡಿದ್ದರು. ೧೯೫೨ರಲ್ಲಿ ತೆರೆಕಂಡ ‘ಆನಂದ ಮಠ’ ಕಾದಂಬರಿ ಆಧಾರಿತ ಚಿತ್ರದಲ್ಲಿ ನಿರ್ದೇಶಕ ಹೇಮಂತ್ ಕುಮಾರ್ ಅವರು ‘ವಂದೇ ಮಾತರಂ’ ಗೀತೆಗೆ ಹೊಸ ಆಯಾಮವನ್ನು ಕಲ್ಪಿಸಿದರು. ಲತಾ ಮಂಗೇಶ್ಕರ್ ಅವರಿಂದ ಹಿಡಿದು ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್, ಸಂಗೀತಾ ಕಟ್ಟಿ, ಎ ಆರ್ ರೆಹಮಾನ್ ಮೊದಲಾದವರು ವಂದೇ ಮಾತರಂ ಗೀತೆಗೆ ಹೊಸ ರೂಪವನ್ನು ನೀಡಲು ಶ್ರಮಿಸಿದರು. ಇದರಿಂದ ಯುವ ಪೀಳಿಗೆಯಲ್ಲೂ ವಂದೇ ಮಾತರಂ ಗೀತೆ ಜನಪ್ರಿಯವಾಯಿತು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ