‘ವೃಕ್ಷ ದೇವತೆ' ತುಳಸಿ ಗೌಡ

‘ವೃಕ್ಷ ದೇವತೆ' ತುಳಸಿ ಗೌಡ

ಸಾಲು ಮರದ ತಿಮ್ಮಕ್ಕನವರ ಹೆಸರನ್ನು ನೀವು ಕೇಳಿಯೇ ಇರುತ್ತೀರಿ, ತನಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಗಿಡವನ್ನು ನೆಡುವುದರ ಮೂಲಕ ತೀರಿಸಿಕೊಂಡ ಮಹಾನ್ ಜೀವ ಇದು. ಇವರಂತೆಯೇ ಇನ್ನೊರ್ವ ವೃಕ್ಷ ಪ್ರೇಮಿ ಮಹಿಳೆಯೇ ತುಳಸಿ ಗೌಡ. ಹಾಲಕ್ಕಿ ಜನಾಂಗಕ್ಕೆ ಸೇರಿದ ಇವರು ಈಗಾಗಲೇ ಒಂದು ಲಕ್ಷಕ್ಕೂ ಸಸಿಗಳನ್ನು ನೆಟ್ಟು ಮರಗಳನ್ನಾಗಿಸಿದ್ದಾರೆ ಎಂದರೆ ಇದು ಸಣ್ಣ ಮಾತಲ್ಲ. ಇವರ ಈ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ ಇವರನ್ನು ೨೦೨೦ರ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ತುಳಸಿ ಗೌಡರವರು ಹಲವಾರು ಗಿಡಗಳನ್ನು ಹಾಗೂ ಅದರ ಆರೋಗ್ಯಕರವಾದ ಗುಣಗಳನ್ನು ಗುರುತಿಸಬಲ್ಲರು. ಇವರು ನಾಟಿ ವೈದ್ಯರೂ, ಜಾನಪದ ಕಲಾವಿದರೂ ಹೌದು. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇವರ ಬಳಿ ಗಿಡ ಮೂಲಿಕೆಗಳ ಮದ್ದುಗಳಿವೆ. ಬನ್ನಿ, ಒಂದಿಷ್ಟು ತುಳಸಿ ಗೌಡ ಇವರ ಬಗ್ಗೆ ತಿಳಿದುಕೊಳ್ಳೋಣ.

ತುಳಸಿ ಗೌಡ ಹುಟ್ಟಿದ್ದು ೧೯೪೪ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೊನ್ನಹಳ್ಳಿ ಎಂಬ ಕುಗ್ರಾಮದಲ್ಲಿ. ಬಾಲ್ಯದಲ್ಲೇ ತಂದೆಯವರನ್ನು ಕಳೆದುಕೊಂಡ ಇವರಿಗೆ ವಿದ್ಯಾಭ್ಯಾಸವು ಮರೀಚಿಕೆಯಾಗಿಯೇ ಉಳಿಯಿತು. ಮನೆಯಲ್ಲಿನ ಕಡು ಬಡತನವು ಇವರಿಗೆ ಸಣ್ಣ ಪ್ರಾಯದಲ್ಲೇ ಕೂಲಿಕೆಲಸಕ್ಕೆ ಹೋಗುವಂತೆ ಮಾಡಿತು. ಸಣ್ಣ ವಯಸ್ಸಿನಲ್ಲೇ ಗೋವಿಂದ ಗೌಡ ಎಂಬವರನ್ನು ಮದುವೆಯಾದ ಇವರ ದಾಂಪತ್ಯ ಜೀವನ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಗೋವಿಂದ ಗೌಡರ ಅಕಾಲ ಮೃತ್ಯು. ಬಾಲ್ಯದಿಂದಲೇ ಕಷ್ಟಗಳ ಸುರಿಮಳೆಯನ್ನು ನೋಡಿದ ತುಳಸಿ ಗೌಡ, ತನ್ನ ಭವಿಷ್ಯದ ಗುರಿಯಿಂದ ಹಿಂದೆ ಸರಿಯಲಿಲ್ಲ. 

ಮನೆಯಲ್ಲಿ ಒಲೆ ಉರಿಸಲು ಬೇಕಾದ ಕಟ್ಟಿಗೆಯನ್ನು ಸಂಗ್ರಹಿಸಲು ಕಾಡಿಗೆ ಹೋಗುತ್ತಿದ್ದ ತುಳಸಿ ಗೌಡ ಇವರಿಗೆ ಸಹಜವಾಗಿಯೇ ಪ್ರಕೃತಿಯ ಮೇಲೆ ಪ್ರೀತಿ ಬೆಳೆಯಿತು. ಮರಗಳಿಂದ ಒಣಗಿ ಬೀಳುವ ಬೀಜಗಳನ್ನು ಸಂಗ್ರಹಿಸಿ ಇವರು ಖಾಲಿ ಇದ್ದ ಜಾಗದಲ್ಲಿ ನೆಟ್ಟು ಪೋಷಿಸಲು ತೊಡಗಿದರು. ಹೀಗೆ ನೆಟ್ಟ ಬೀಜವು ಗಿಡವಾಗಿ, ಮರವಾಗಿ ಬೆಳೆಯಲು ಪ್ರಾರಂಭಿಸಿದಾಗ ತುಳಸಿ ಗೌಡ ಅವರಿಗೆ ಈ ಕಾರ್ಯದಲ್ಲಿ ಆಸಕ್ತಿ ಕುದುರಿತು. ನಿಧಾನವಾಗಿ ಅವರು ಬೀಜವನ್ನು ಸಂಗ್ರಹಿಸಿ ಅದನ್ನು ಸಸಿ ಮಾಡಿ ಆಸಕ್ತರಿಗೆ ಮಾರಲು ಪ್ರಾರಂಭಿಸಿದರು. ಇದಕ್ಕೆ ಅರಣ್ಯ ಇಲಾಖೆಯ ಸಹಯೋಗವೂ ಅವರಿಗೆ ದೊರೆಯಿತು. 

ಆ ಸಮಯದಲ್ಲಿ ಅರಣ್ಯಾಧಿಕಾರಿಯಾಗಿದ್ದ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರ ಮುತುವರ್ಜಿಯಿಂದ ಇವರಿಗೆ ಅಂಕೋಲಾದ ಮಾಸ್ತಿಕಟ್ಟೆ ಎಂಬಲ್ಲಿನ ಅರಣ್ಯ ವಲಯದಲ್ಲಿ ಗಿಡಗಳನ್ನು ಪೋಷಿಸುವ ನರ್ಸರಿಯಲ್ಲಿ ಕೆಲಸವೂ ದೊರೆಯಿತು. ಹಲವಾರು ವರ್ಷ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಇವರ ಕೆಲಸವನ್ನು ಕೊನೆಗೊಮ್ಮೆ ಖಾಯಂ ಗೊಳಿಸಲಾಯಿತು. ಯಾವುದೇ ವಿದ್ಯಾರ್ಹತೆ ಇಲ್ಲವಾದರೂ ಕೇವಲ ತಮ್ಮ ಜ್ಞಾನದಿಂದ ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ತುಳಸಿ ಗೌಡ ಅವರಿಗೆ ಸಲ್ಲುತ್ತದೆ. ೧೪ ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ ಇವರು ನಿವೃತ್ತರಾದರೂ ಗಿಡಗಳನ್ನು ತಯಾರಿಸುವ , ನೆಡುವ ಕಾರ್ಯವನ್ನು ನಿಲ್ಲಿಸಿಲ್ಲ. ಈಗ ಅವರಿಗೆ ಇರುವ ಕೊರಗೆಂದರೆ ಗಿಡವನ್ನು ನೆಡಲು ಸೂಕ್ತ ಸ್ಥಳಾವಕಾಶ ಇಲ್ಲ ಎಂದು.

ತುಳಸಿ ಗೌಡ ಅವರು ತಾತ್ಕಾಲಿಕ ನೆಲೆಯಲ್ಲಿ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಪ್ರಾರಂಭಿಸಿದಾಗ ಅವರಿಗೆ ಸಿಗುತ್ತಿದ್ದ ಕೂಲಿ ಕೇವಲ ೧ರೂ ೨೫ ಪೈಸೆ. ಕಟ್ಟಿಗೆಯನ್ನು ಸಂಗ್ರಹಿಸಿ ಮಾರುತ್ತಿದ್ದಾಗ ಅವರಿಗೆ ೫ ರಿಂದ ೬ ರೂಪಾಯಿ ಸಿಗುತ್ತಿತ್ತು. ಊರಿನವರೆಲ್ಲಾ ಯಾಕೆ ಈ ಕಮ್ಮಿ ಕೂಲಿಯ ಕೆಲಸ ಮಾಡುತ್ತಿಯಾ ಎಂದರೂ ಕೇಳದೇ ತಮ್ಮ ಪರಿಸರ ಪ್ರೇಮವನ್ನು ಮುಂದುವರೆಸಿದರು. ಇವರ ಈ ಸಾಧನೆಯಿಂದ ಆ ಸಸಿಗಳು ಈಗ ೧ ಲಕ್ಷಕ್ಕೂ ಅಧಿಕ ಮರಗಳಾಗಿ ಬೆಳೆದಿವೆ. ನಂದಿ, ಆಲ, ಅಂಜೂರ, ಬಿದಿರು, ಜಾಯಿಕಾಯಿ, ಮಾವು, ಗೇರು, ಹಲಸು, ಕೋಕಮ್ ಮುಂತಾದ ಹತ್ತು ಹಲವಾರು ಸಸಿಗಳನ್ನು ಬೆಳೆಸಿ ಮರವಾಗಿಸಿದ್ದಾರೆ. ಇವರು ಸಸಿ ನೆಡುವ ಬಗ್ಗೆ, ಅದರ ಪೋಷಣೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಾರೆ. 

ಹೊನ್ನಹಳ್ಳಿ ವಿಭಾಗದ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಸುಮಾರು ೫ ದಶಕಗಳ ಕಾಲ ಗಿಡ ನೆಟ್ಟು ಫೋಷಿಸಿದ್ದಾರೆ. ಇವರು ಅಂದು ನೆಟ್ಟ ಗಿಡಗಳು ಮರಗಳಾಗಿ ನೆರಳು ನೀಡುತ್ತಿವೆ. ಅಸಂಖ್ಯಾತ ಪ್ರಾಣಿ ಪಕ್ಷಿಗಳಿಗೆ ಆಶ್ರಯ, ಹಣ್ಣುಗಳನ್ನು ನೀಡುತ್ತಿದೆ. ಪರಿಸರಕ್ಕೆ ಶುದ್ಧ ಗಾಳಿಯನ್ನು ನೀಡುತ್ತಿದೆ. ಯಾವ ಸಮಯ, ಯಾವ ಸಸ್ಯ ನೆಡಬೇಕು?, ಯಾವ ಗಿಡದ ಹಣ್ಣು, ಹೂವು ಯಾವ ರೋಗಕ್ಕೆ ಮದ್ದು ಎಂಬೆಲ್ಲಾ ಮಾಹಿತಿಗಳು ಇವರ ಬಳಿ ಇವೆ. ಈ ಕಾರಣದಿಂದಲೇ ಇವರನ್ನು ‘ಕಾಡಿನ ವಿಶ್ವಕೊಶ' (ಎನ್ ಸೈಕ್ಲೋಪೀಡಿಯಾ) ಎಂದೇ ಕರೆಯುತ್ತಾರೆ. ಹಲವರು ಇವರನ್ನು ಮರಗಳ ವಿಜ್ಞಾನಿ ಎಂದೇ ಕರೆಯುತ್ತಾರೆ.

ತಾನು ನೆಟ್ಟ ಸಸಿಗಳನ್ನು ಅಥವಾ ಮರಗಳನ್ನು ಯಾರಾದರೂ ಕಡಿದಾಗ ಅದನ್ನು ಬಿಗಿದಪ್ಪಿ ಅತ್ತದ್ದೂ ಇದೆ. ಸ್ವಂತ ಮಕ್ಕಳಂತೆ ಗಿಡಮರಗಳನ್ನು ಪ್ರೀತಿಸುತ್ತಾರೆ ಎನ್ನುತ್ತಾರೆ ಇವರ ಮಗ ಸುಬ್ಬರಾಯ ಗೌಡ. ತನ್ನ ಅಮ್ಮನ ಸಾಧನೆಯ ಬಗ್ಗೆ ಇವರಿಗೆ ಬಹಳ ಹೆಮ್ಮೆ ಇದೆ. ಈಗ ತುಳಸಿ ಗೌಡ ಅವರಿಗೆ ಸುಮಾರು ೭೬ ವರ್ಷ. ಆದರೂ ಗಿಡಮರಗಳ ಬಗ್ಗೆ ಅವರ ಪ್ರೇಮ ಕಮ್ಮಿಯಾಗಿಲ್ಲ. ಈಗಲೂ ಅರಣ್ಯ ಇಲಾಖೆಯ ನರ್ಸರಿ ವಿಭಾಗಕ್ಕೆ ಯಾವ ಗಿಡದ ಸಸಿ ತಯಾರಿಸಬೇಕು ಎಂಬೆಲ್ಲಾ ಮಾಹಿತಿ ನೀಡುತ್ತಾರೆ.

ಇವರ ಈ ಸಾಧನೆಯನ್ನು ಗಮನಿಸಿ ಕರ್ನಾಟಕವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯೂ ಇವರ ಮುಡಿಯೇರಿದೆ. ಹತ್ತು ಹಲವಾರು ಸಂಸ್ಥೆಗಳು ಇವರನ್ನು ಕರೆದು ಗೌರವಿಸಿದೆ. ತುಳಸಿ ಗೌಡ ಅವರಂತಹ ಮಹಾನ್ ಪ್ರಕೃತಿ ಪ್ರೇಮಿ ಇನ್ನಷ್ಟು ವರ್ಷ ಈ ಗಿಡ ಮರಗಳನ್ನು ಪೋಷಿಸುವ ಕಾಯಕವನ್ನು ಮುಂದುವರೆಸಲಿ ಎನ್ನುವುದೇ ನಮ್ಮ ಆಶಯ. ಇವರಿಂದ ಕೆಲವರಾದರೂ ಪ್ರೇರಣೆಗೊಂಡು ಈ ಕೆಲಸವನ್ನು ಮುಂದುವರೆಸಿದರೆ ನಮ್ಮ ಪರಿಸರ ನಿತ್ಯ ಹಸುರಾಗಿರುತ್ತದೆ. ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣದಿಂದ