‘ಶರಪಂಜರ' ಸಿನೆಮಾದಲ್ಲಿ ಕಲ್ಪನಾ ಅಭಿನಯಿಸದೇ ಇದ್ದಿದ್ದರೆ...!

‘ಶರಪಂಜರ' ಸಿನೆಮಾದಲ್ಲಿ ಕಲ್ಪನಾ ಅಭಿನಯಿಸದೇ ಇದ್ದಿದ್ದರೆ...!

೧೯೭೧ರಲ್ಲಿ ಬಿಡುಗಡೆಯಾದ ‘ಶರಪಂಜರ' ಚಲನಚಿತ್ರವು ಈಗ ೫೦ ವರ್ಷಗಳ ಬಳಿಕವೂ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಅಂದಿನ ಚಿತ್ರವನ್ನು ಇಂದು ನೋಡುವಾಗಲೂ ನಮ್ಮ ಮನಸ್ಥಿತಿ ಅಂದಿನ ಸಮಯಕ್ಕೇ ಹೋಗುತ್ತದೆ. ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿಯವರು ಕಲ್ಪನಾಗೋಸ್ಕರವೇ ಈ ಕಥೆಯನ್ನು ಬರೆದರೇ ಎನ್ನುವಷ್ಟು ಆಪ್ತವಾಗಿ ಅಭಿನಯಿಸಿದ್ದಾರೆ ಮಿನುಗುತಾರೆ ಕಲ್ಪನಾ. ಹೌದು, ಪುಟ್ಟಣ್ಣ ಕಣಗಾಲ್ ಅಂದು ಕಲ್ಪನಾರನ್ನು ಈ ಚಿತ್ರದಲ್ಲಿ ಬಳಸದೇ ಇದ್ದಿದ್ದರೆ ಏನಾಗುತ್ತಿತ್ತು?

ಬನ್ನಿ, ಅದಕ್ಕಿಂತ ಮೊದಲು ‘ಶರಪಂಜರ' ಚಿತ್ರದ ಸುತ್ತ ಒಮ್ಮೆ ನೋಟವನ್ನು ಬೀರೋಣ. ತ್ರಿವೇಣಿಯವರು ಬರೆದ ‘ಶರಪಂಜರ' ಕಾದಂಬರಿಯು ಮನೋವೈಜ್ಞಾನಿಕ ಆಯಾಮಗಳನ್ನು ಒಳಗೊಂಡಿತ್ತು. ಕಾದಂಬರಿಯಲ್ಲಿ ತ್ರಿವೇಣಿಯವರ ಬರವಣಿಗೆ ಓದುಗರ ಕಣ್ಣಾಲಿಗಳನ್ನು ಒದ್ದೆ ಮಾಡಿದಂತೂ ನಿಜ. ಆದರೆ ಇದೇ ಕಥೆ ಚಲನ ಚಿತ್ರವಾದಲ್ಲಿ ಅದೇ ತೀವ್ರತೆಯನ್ನು ಉಳಿಸಿಕೊಳ್ಳಬಲ್ಲುದೇ? ಎನ್ನುವ ಸಂಶಯ ಬಹುತೇಕ ಎಲ್ಲರಿಗೂ ಇತ್ತು. ಆದರೆ ಅದರ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ಕಿಂಚಿತ್ತೂ ಸಂಶಯ ಇರಲಿಲ್ಲ. ಈ ಚಿತ್ರದಲ್ಲಿ ನಟಿಸುವಾಗ ಕಲ್ಪನಾಳಿಗೆ ೨೮ ವರ್ಷ ವಯಸ್ಸು. ಆದರೆ ಈ ಪಾತ್ರದಲ್ಲಿ ಹೊಕ್ಕು ಆಕೆ ನಟಿಸಿದ್ದು ಮಾತ್ರ ಇತಿಹಾಸ. ಈಗಲೂ ಚಿತ್ರರಂಗಕ್ಕೆ ಕಾಲಿಡುವ ಯಾವುದೇ ಹೊಸ ನಟಿಯರನ್ನು ಕೇಳಿದಾಗ ಅವರು ಹೇಳುವ ಮಾತೊಂದೇ ‘ಕಲ್ಪನಾ ಅವರು ಶರಪಂಜರ ಚಿತ್ರದಲ್ಲಿ ನಟಿಸಿದಂತೆ, ಹುಚ್ಚಿ ಪಾತ್ರದಲ್ಲಿ ನಟಿಸುವ ಆಸೆ' ಎಂದು. ಈ ಚಿತ್ರ ತೆರೆಕಂಡು ಐದು ದಶಕಗಳ ಬಳಿಕವೂ ಜನರ ಮನಃಪಟಲದಲ್ಲಿ ಇನ್ನೂ ಹಸಿರಾಗಿರುವುದು ಕಥೆಯಲ್ಲಿನ ಗಟ್ಟಿತನ, ನಾಯಕಿಯಾಗಿ ನಟಿಸಿದ ಕಲ್ಪನಾ ಅಭಿನಯ ಮತ್ತು ಪುಟ್ಟಣ್ಣರ ಧೀಮಂತ ನಿರ್ದೇಶನ. 

ಈ ಚಿತ್ರಕ್ಕೆ ಪುಟ್ಟಣ್ಣನವರನ್ನು ನಂಬಿ ಹಣ ಹಾಕಿದ್ದು ದೊಡ್ಡಬಳ್ಳಾಪುರದ ರೇಷ್ಮೆ ವ್ಯಾಪಾರಿ ಕೆ.ಸಿ.ಎನ್. ಗೌಡ ಇವರು. ಪುಟ್ಟಣ್ಣನವರ ಗೆಜ್ಜೆ ಪೂಜೆ, ಬೆಳ್ಳಿ ಮೋಡ ಮೊದಲಾದ ಚಿತ್ರಗಳನ್ನು ಗಮನಿಸಿದ್ದ ಗೌಡರು ‘ಶರಪಂಜರ' ಚಿತ್ರ ಗೆಲ್ಲುವುದರಲ್ಲಿ ಯಾವುದೇ ಸಂದೇಹವನ್ನು ಹೊಂದಿರಲಿಲ್ಲ. ಶರಪಂಜರ ಚಿತ್ರಕ್ಕಾಗಿ ಪುಟ್ಟಣ್ಣನವರು ಹಲವಾರು ಹುಚ್ಚುತನಗಳನ್ನು ಮಾಡಿದ್ದರು. ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಹಸಿರು ಗುಡ್ಡದ ಮೇಲಿನಿಂದ ಲಾರಿಗಟ್ಟಲೆ ಕಿತ್ತಳೆ ಹಣ್ಣುಗಳನ್ನು ಕೆಳಗೆ ಸುರಿಯುವಂತೆ ಮಾಡಿದ್ದರು. ಎಲ್ಲರೂ ಇದನ್ನೊಂದು ಹುಚ್ಚುತನ ಎಂದರೂ ಪುಟ್ಟಣ್ಣನವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ‘ಸಂದೇಶ ಮೇಘ ಸಂದೇಶ...' ಎಂಬ ಹಾಡಿಗಾಗಿ ಹತ್ತು ಲಾರಿಗಳಲ್ಲಿ ಕಿತ್ತಳೆಯನ್ನು ತುಂಬಿಸಿ ತಂದು ಗುಡ್ಡದ ಮೇಲಿಂದ ಕೆಳಕ್ಕೆ ಉರುಳಿಸಿದ್ದರು. ಈ ಸಂಗತಿಯು ಪತ್ರಿಕೆಗಳಲ್ಲಿ ‘ಚಿತ್ರಕ್ಕಾಗಿ ದುಂದುವೆಚ್ಚ ಮಾಡುತ್ತಿರುವ ಪುಟ್ಟಣ್ಣ ಕಣಗಾಲ್’ ಎಂದು ಪ್ರಕಟವಾಗಿತ್ತು. ೭೦ರ ದಶಕದಲ್ಲಿ ಹತ್ತು ಲಕ್ಷ ರೂಪಾಯಿಗಳನ್ನು ಚಿತ್ರವೊಂದಕ್ಕೆ ವೆಚ್ಚ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿತ್ತು. ಆದರೆ ಪುಟ್ಟಣ್ಣನವರು ಹಿಂಜರಿಯಲಿಲ್ಲ. ನಿರ್ಮಾಪಕರಾದ ‘ವರ್ಧಿನಿ ಆರ್ಟ್ಸ್' ಇದರ ಸಿ ಎಸ್ ರಾಜಾ (ಕೆ ಸಿ ಎನ್ ಗೌಡರ ಸಂಬಂಧಿ) ಅವರೂ ಸಾಥ್ ನೀಡಿದರು. 

ಚಿತ್ರ ಬಿಡುಗಡೆಯಾದಲ್ಲೆಲ್ಲಾ ಜಯಭೇರಿ ಬಾರಿಸಿತು. ಈ ಚಿತ್ರದ ಮೊದಲ ಪ್ರದರ್ಶನವು ಮದರಾಸು (ಇಂದಿನ ಚೆನ್ನೈ) ನಲ್ಲಿ ನಡೆದಾಗ ತಮಿಳು ಮಾತ್ರವಲ್ಲ ತೆಲುಗು, ಮಲಯಾಳಂ ಭಾಷೆಯ ಗಣ್ಯರೂ ಪೈಪೋಟಿಗೆ ಬಿದ್ದವರಂತೆ ಚಿತ್ರಮಂದಿರಕ್ಕೆ ನುಗ್ಗಿ ಸಿನೆಮಾ ವೀಕ್ಷಿಸಿದರಂತೆ. ಅಂದಿನ ಕಾಲದ ಖ್ಯಾತ ಹಿಂದಿ ನಟಿ ಲೀನಾ ಚಂದಾವರ್ಕರ್ ಅವರಿಗೆ ಈ ಚಿತ್ರದ ಹಿಂದಿ ಅವತರಣಿಕೆಯನ್ನಾಗಿ ಮಾಡಿ ಅದರಲ್ಲಿ ಕಲ್ಪನಾ ಅವರ ಪಾತ್ರವನ್ನು ತಾವೇ ಮಾಡುವ ಆಸೆ ಆಯಿತಂತೆ. ಬೆಂಗಳೂರಿನ ‘ಸ್ಟೇಟ್ಸ್' ಚಿತ್ರ ಮಂದಿರದಲ್ಲಿ ಸತತವಾಗಿ ೨೫ ವಾರಗಳ ಪ್ರದರ್ಶನ ಕಂಡಿತು. ೧೯೭೧-೭೨ರ ಸಾಲಿನ ರಾಜ್ಯ ಪ್ರಶಸ್ತಿಯೂ ದೊರೆಯಿತು. ಉತ್ತಮ ನಟಿಯಾಗಿ ಕಲ್ಪನಾ, ನಿರ್ದೇಶಕರಾಗಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಬಾಚಿಕೊಂಡರು. ಚಿತ್ರ ಪ್ರದರ್ಶನದಿಂದ ನಿರ್ಮಾಪಕರಾದ ರಾಜಾ ಮತ್ತು ಕೆ ಸಿ ಎನ್ ಗೌಡರು ಆರ್ಥಿಕವಾಗಿ ಲಾಭವನ್ನು ಮಾಡಿಕೊಂಡರು. ಚಿತ್ರದ ರಜತ ಮಹೋತ್ಸವದ ಕಾರ್ಯಕ್ರಮವನ್ನು ಬೆಂಗಳೂರಿನ ಲಾಲ್ ಭಾಗ್ ನಲ್ಲಿರುವ ಗಾಜಿನ ಮನೆಯಲ್ಲಿ ವರ ನಟ ಡಾ. ರಾಜ್ ಕುಮಾರ್ ಸಾರಥ್ಯದಲ್ಲಿ ಜರುಗಿತು. ಪುಟ್ಟಣ್ಣ ಕಣಗಾಲ್ ಅವರು ಸದಾ ಗೌರವಿಸುತ್ತಿದ್ದುದು ಚಿತ್ರ ಕಥಾ ಸಾಹಿತಿಗಳನ್ನು. ಈ ಕಾರಣದಿಂದ ಈ ಚಿತ್ರದ ಮೊದಲ ನೆನಪಿನ ಕಾಣಿಕೆಯನ್ನು ದಿ. ತ್ರಿವೇಣಿಯವರ ಪರವಾಗಿ ಅವರ ಮಗಳಾದ ಮೀರಾ ಅವರಿಗೆ ನೀಡಿದರು. 

ಮನೋವಿಕಲತೆಗೆ ಗುರಿಯಾಗುವ ಮಹಿಳೆಯೊಬ್ಬಳ ಪಾತ್ರದಲ್ಲಿ ಕಲ್ಪನಾ ಅವರು ಎಷ್ಟೊಂದು ತನ್ಮಯತೆಯಿಂದ ನಟಿಸಿದರೆಂದರೆ ಚಿತ್ರ ನೋಡಿದ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು. ಹುಚ್ಚಿಯ (ಮನೋರೋಗಿ) ಪಾತ್ರದಲ್ಲಿ ಕಲ್ಪನಾ ಎಷ್ಟು ಸೊಗಸಾಗಿ ನಟಿಸಿದರೆಂದರೆ ಅಂತಹ ಪಾತ್ರಗಳಿಗೆ ಅವರೇ ರೋಲ್ ಮಾಡೆಲ್ ಆಗಿಬಿಟ್ಟರು. ಈ ಚಿತ್ರದ ಪಾತ್ರವರ್ಗದಲ್ಲಿ ಕಲ್ಪನಾ ಜೊತೆ ಗಂಗಾಧರ್, ಲೀಲಾವತಿ, ಶಿವರಾಂ, ಕೆ ಎಸ್ ಅಶ್ವಥ್, ನರಸಿಂಹ ರಾಜು ಮೊದಲಾದವರಿದ್ದರು. ಚಿತ್ರಕ್ಕೆ ಸಂಗೀತ ನೀಡಲು ಪುಟ್ಟಣ್ಣನವರು ಆಯ್ಕೆ ಮಾಡಿದ್ದು ತಮ್ಮ ಆತ್ಮೀಯ ಮಿತ್ರರಾದ ವಿಜಯ ಭಾಸ್ಕರ್ ಅವರನ್ನು ಮತ್ತು ಗೀತೆ ರಚನೆಗಾಗಿ ಆಯ್ಕೆ ಮಾಡಿದ್ದು ವಿಜಯನಾರಸಿಂಹ ಅವರನ್ನು. ಇವರಿಬ್ಬರ ಜುಗಲ್ ಬಂದಿಯು ಬಹಳ ಸೊಗಸಾದ ಹಾಡುಗಳನ್ನು ನೀಡಿತು. ‘ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ' ಹಾಗೂ ‘ಹದಿನಾಲ್ಕು ವರುಷ ವನವಾಸದಿಂದ' ಹಾಡುಗಳು ಬಹಳ ಖ್ಯಾತಿಯನ್ನು ಪಡೆದವು. ಪಿ.ಬಿ.ಶ್ರೀನಿವಾಸ್ ಹಾಗೂ ಎಸ್ ಜಾನಕಿ ಅವರು ತಮ್ಮ ಮಧುರ ಕಂಠದಿಂದ ಹಾಡುಗಳಿಗೆ ಜೀವ ತುಂಬಿದರು. 

ತ್ರಿವೇಣಿಯವರ ಕಥೆಯಲ್ಲಿನ ಗಟ್ಟಿತನ ಮತ್ತು ಪುಟ್ಟಣ್ಣ ಕಣಗಾಲ್ ಅವರ ಹಠ ಸಾಧನೆಯು ಶರಪಂಜರ ಚಿತ್ರವನ್ನು ಗೆಲ್ಲಿಸಿತು. ಈ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಲ್ಪನಾ ಅವರ ಮನೋಜ್ಞ ಅಭಿನಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಕಟ್ಟಕಡೆಗೆ ನಮ್ಮಲ್ಲಿ ಉಳಿಯುವ ಪ್ರಶ್ನೆ ಏನಪ್ಪಾ ಅಂದರೆ, ಕಲ್ಪನಾ ಬದಲಿಗೆ ಈ ಚಿತ್ರದಲ್ಲಿ ಬೇರೆ ಯಾರದರೂ ನಟಿಸಿದ್ದರೆ ಏನಾಗುತ್ತಿತ್ತು? ಇದಕ್ಕೆ ತಮಾಷೆಯಾಗಿ ಚಿತ್ರ ರಂಗ ಹೇಳುವುದು ಪೂಜಾ ಗಾಂಧಿ ನಟನೆಯ ‘ಅಭಿನೇತ್ರಿ' ಆಗಿರುತ್ತಿತ್ತು.!

(ಆಧಾರ: ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ