‘ಶುಭಕೃತ್’ ಸಂವತ್ಸರ ಚಾಂದ್ರಮಾನ ಯುಗಾದಿ ಹಬ್ಬ
ಮತ್ತೆ ಮರಳಿ ಬಂದಿದೆ, ಹೊಸ ವರ್ಷ, ಹೊಸ ಸಡಗರ, ಹೊಸ ಆನಂದ. ಹೌದು ಯುಗಾದಿ ಮರಳಿ ಬಂದಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಸಂತಸ ತಂದಿದೆ ಎಂದು ಹೇಳಬಹುದು. ಹಿಂದಿನ ವರ್ಷ ಕೊರೋನಾ ಎರಡನೇ ಅಲೆಯ ಕಾರಣದಿಂದ ಲಾಕ್ ಡೌನ್ ಎಂಬ ಸಂಕಷ್ಟಕ್ಕೆ ಒಳಗಾಗಿದ್ದೆವು. ಆದರೆ ಈ ವರ್ಷ ಕೋವಿಡ್ ಮೂರನೇ ಅಲೆ ಕಳೆದು ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದೇವೆ ಅನಿಸುತ್ತಿದೆ. ಈ ಕಾರಣದಿಂದ ಈ ವರ್ಷ ಹಬ್ಬದ ಸಂಭ್ರಮ ಮತ್ತೆ ಯುಗಾದಿಯಂತೆಯೇ ಮರಳಿ ಬಂದಿದೆ ಅನಿಸುತ್ತಿದೆ. ಆದರೂ ಕೊರೋನಾ ಇನ್ನೂ ನಮ್ಮ ನಡುವೆ ಇದೆ ಎಂಬುವುದನ್ನು ಮರೆಯದೇ ಎಚ್ಚರ ವಹಿಸಿ ಹಬ್ಬದ ಸಂಭ್ರಮವನ್ನು ಸವಿಯೋಣ. ಯುಗಾದಿಯ ಬೇವು-ಬೆಲ್ಲದಂತೆ ನಾವೂ ಜೀವನದ ಸವಿ-ಕಹಿಯನ್ನು ಸಮಾನವಾಗಿ ಅನುಭವಿಸೋಣ. ನಿಮಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಅಂಕಣಕಾರರೂ, ಸಾಹಿತಿಯೂ ಆದ ಶ್ರೀವತ್ಸ ಜೋಶಿಯವರು ಬರೆದ ಒಂದು ಪುಟ್ಟ ಬರಹವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ…
***
‘ಶುಭಕೃತ್’ ಎಂದು ಈ ಹೊಸ ಸಂವತ್ಸರದ ಹೆಸರು. ಪ್ರಭವಾದಿ 60 ಸಂವತ್ಸರಗಳಲ್ಲಿ ‘ಶುಭಕೃತ್’ 36ನೆಯದು. ‘ಅರುವತ್ತು’ ಸಂವತ್ಸರಗಳ ಹೆಸರುಗಳನ್ನು ತಿಳಿಸುವ ಆರು ಶ್ಲೋಕಗಳು ಹೀಗಿವೆ:
ಪ್ರಭವೋ ವಿಭವಃ ಶುಕ್ಲಃ ಪ್ರಮೋದೋಥಪ್ರಜಾಪತಿಃ
ಅಂಗಿರಾ ಶ್ರೀಮುಖೋ ಭಾವೋ ಯುವಾ ಧಾತಾ ತಥೈವಚ | ೧ |
ಈಶ್ವರೋ ಬಹುಧಾನ್ಯಶ್ಚ ಪ್ರಮಾಥೀ ವಿಕ್ರಮೋ ವೃಷಃ
ಚಿತ್ರಭಾನುಃ ಸುಭಾನುಶ್ಚ ತಾರಣಃ ಪಾರ್ಥಿವೋ ವ್ಯಯಃ | ೨ |
ಸರ್ವಜಿತ್ ಸರ್ವಧಾರೀ ಚ ವಿರೋಧೀ ವಿಕೃತಿಃ ಖರಃ
ನಂದನೋ ವಿಜಯಶ್ಚೈವ ಜಯೋ ಮನ್ಮಥ ದುರ್ಮುಖೌ | ೩ |
ಹೇಮಲಂಬೀ ವಿಲಂಬೀ ಚ ವಿಕಾರೀ ಶಾರ್ವರೀ ಪ್ಲವಃ
ಶುಭಕೃತ್ ಶೋಭನಃ ಕ್ರೋಧೀ ವಿಶ್ವಾವಸು ಪರಾಭವೌ | ೪ |
ಪ್ಲವಂಗಃ ಕೀಲಕಃ ಸೌಮ್ಯಃ ಸಾಧಾರಣ ವಿರೋಧಕೃತ್
ಪರಿಧಾವೀ ಪ್ರಮಾದೀ ಚ ಆನಂದೋ ರಾಕ್ಷಸೋಽನಲಃ | ೫ |
ಪಿಂಗಲಃ ಕಾಲಯುಕ್ತಶ್ಚ ಸಿದ್ಧಾರ್ಥೀ ರೌದ್ರ ದುರ್ಮತಿಃ
ದುಂದುಭೀ ರುಧಿರೋದ್ಗಾರೀ ರಕ್ತಾಕ್ಷೀ ಕ್ರೋಧನಃ ಕ್ಷಯಃ | ೬ |
ಯುಗಾದಿಯಂದು ಬೇವು-ಬೆಲ್ಲ ತಿನ್ನುವ ಸಂಪ್ರದಾಯ. ಬದುಕಿನಲ್ಲಿ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುತ್ತೇನೆ ಎಂಬ ಅರ್ಥ ಮತ್ತು ಆಶಯ ಈ ಸಂಪ್ರದಾಯದ ಹಿಂದೆ ಇದೆ. ಬೇವಿನ ಎಲೆಯನ್ನು ಏಕೆ ತಿನ್ನಬೇಕು ಎಂಬ ವಿವರಣೆಗೂ ಒಂದು ಸಂಸ್ಕೃತ ಶ್ಲೋಕ ಇದೆ.
ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕದಳ ಭಕ್ಷಣಮ್ ||
ಈ ಶ್ಲೋಕದ ಅರ್ಥ : ನೂರು ವರ್ಷಗಳ ಆಯುಷ್ಯ, ವಜ್ರದಂತೆ ಸುದೃಢ ದೇಹ, ಎಲ್ಲ ರೀತಿಯ ಸಂಪತ್ತುಗಳ ಪ್ರಾಪ್ತಿ, ಮತ್ತು ಎಲ್ಲ ವಿಧದ ಕೆಡುಕುಗಳ ನಿವಾರಣೆಗಾಗಿ ಬೇವಿನ ಎಲೆಯನ್ನು ಸೇವನೆ ಮಾಡಬೇಕು.
ಶ್ಲೋಕವನ್ನು ಕನ್ನಡದಲ್ಲಿ ದ್ವಿತೀಯಾಕ್ಷರ ಪ್ರಾಸಸಹಿತ ಛಂದೋಬದ್ಧ ಪದ್ಯದ ರೂಪದಲ್ಲಿ ಹೀಗೆ ಬರೆಯಬಹುದು-
ಗಟ್ಟಿ ದೇಹವ ತಳೆದು ನೂರ್ಕಾಲ ಬಾಳ್ವಿಕೆಗೆ
ಮುಟ್ಟಿದೆಲ್ಲವು ಹೊನ್ನು ಸಿರಿತನವ ಪಡೆವುದಕೆ|
ಕೆಟ್ಟದೆಲ್ಲವ ಕೊಂದು ನಿಟ್ಟುಸಿರು ಬಿಡುವುದಕೆ
ಇಷ್ಟು ತಿನ್ನಿರಿ ಬೇವಿನೆಲೆ ನಿಮ್ಮ ಸಂತಸಕೆ ||
ಇಂಗ್ಲಿಷ್ನಲ್ಲಿ ಈ ರೀತಿ-
Live long with a body strong
Be wealthy in life all along
Get rid of forces evil and ill
Eat neem leaf a custom known well.
ಬೇವಿನ ಎಲೆ ಮಾನವನ ದೈಹಿಕ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಬಹಳ ಹಿಂದೆಯೇ ಆಯುರ್ವೇದ ಶಾಸ್ತ್ರ ವಿವರಿಸಿದೆ. ಅದರ ಒಳ್ಳೆಯ ಪರಿಣಾಮಗಳ ಬಗ್ಗೆ ಸಂಶಯವೇ ಬೇಡ. ಆದರೆ ಯುಗಾದಿಯ ‘ಬೇವು-ಬೆಲ್ಲ’ ಕಾನ್ಸೆಪ್ಟ್ ಬರೀ ದೈಹಿಕ ಆರೋಗ್ಯಕ್ಕೆ ಸೀಮಿತವಲ್ಲ. ಮೇಲೆ ಹೇಳಿರುವಂತೆ "ಬದುಕಿನಲ್ಲಿ ಸುಖ-ದುಃಖಗಳನ್ನು ಸಮವಾಗಿ ಸ್ವೀಕರಿಸುತ್ತೇನೆ" ಎಂಬ ಸಮಚಿತ್ತವನ್ನು ಸಾಧಿಸಲು ಸಾಂಕೇತಿಕವಾಗಿ ಈ ಸಂಪ್ರದಾಯದ ಮೌಲ್ಯ ಇನ್ನೂ ಹೆಚ್ಚಿನದು. ದಾರ್ಶನಿಕರು, ದಾಸರು, ಕವಿಗಳು ಇದನ್ನು ನಮಗೆ ಪರಿಪರಿಯಾಗಿ ಹೇಳಿದ್ದಾರೆ. ಅವು ಬರೀ ಉಪದೇಶವಲ್ಲ, ಸ್ವಾನುಭವ ಮಾತುಗಳು. "ಕೈ ಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವ ಸತ್ಯ ಅದ ನೆನಪಿಡಬೇಕು ನಿತ್ಯ..." (‘ಬಂಗಾರದ ಮನುಷ್ಯ’ ಸಿನೆಮಾಕ್ಕೆ ಈಗ 50 ಸಂವತ್ಸರಗಳು ಕಳೆದುವು ಎನ್ನುವುದೊಂದು ಇಲ್ಲಿ ಸ್ಮರಣೀಯ ವಿಚಾರ), "Smooth seas do not make skillful sailors" ಎಂಬ ಇಂಗ್ಲಿಷ್ ನಾಣ್ಣುಡಿ, "ಬಿಸಿಲಿಗೆ ಕರಗೋ ಮಂಜೇನಲ್ಲ ಕಷ್ಟ ನಷ್ಟ ಎಲ್ಲ ಎದುರಿಸಬೇಕು ಧೈರ್ಯದಿಂದ ಬೇರೆ ದಾರಿ ಇಲ್ಲ.. ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ... ಮುಂದೆ ನುಗ್ಗಿ ಹೋದ್ರೆ ತಾನೆ ದಾರಿ ಕಾಣೋದ್ ನಮ್ಗೆ" ಎಂಬ ಚಿತ್ರಗೀತೆಯ ಸಾಲು, ಎಲ್ಲದರದೂ ಸಂದೇಶ ಒಂದೇ- ಬದುಕಿನಲ್ಲಿ ಕಷ್ಟಗಳೇ ನಮ್ಮನ್ನು ಬಲಿಷ್ಠವಾಗಿಸುವುದು. ಹಾಗಾಗಿ ಬೇವಿನ ಶ್ಲೋಕದಲ್ಲಿನ "ಗಟ್ಟಿದೇಹವ ತಳೆದು ನೂರ್ಕಾಲ ಬಾಳ್ವೆ" ಸಿಗುವುದು ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಕೆಚ್ಚನ್ನು ಹೆಚ್ಚಿಸಿಕೊಂಡಾಗಲೇ.
ಯುಗಾದಿ ಹಬ್ಬದ ಶುಭಾಶಯಕ್ಕೆ ಸಂಬಂಧಿಸಿದಂತೆ ಒಂದು ಮಾತು:
"ಯುಗಾದಿ" ಸರಿಯಾದ ರೂಪ. ಆಡುಮಾತಿನಲ್ಲಿ ‘ಉಗಾದಿ’ ಎಂದು ಕೆಲವರು ಬಳಸುತ್ತಾರೆ. ಅದೇನೂ ತಪ್ಪಲ್ಲ. ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರ ಅಭಿನಯದ "ಪ್ರೀತಿನೇ ಆ ದ್ಯಾವ್ರು ತಂದ..." ಹಾಡಿನಲ್ಲೂ "ದಿನವು ನಿತ್ಯ ಉಗಾದಿನೇ..." ಎಂಬ ಸಾಲು ಬರುತ್ತದೆ. ಆದರೆ ಸರಳ-ಸುಂದರವಾಗಿ ‘ಯುಗಾದಿ’ ಎಂದರೇನೇ ಚಂದ. ಇನ್ನು ಕೆಲವರು ಇಂಗ್ಲಿಷ್ನಲ್ಲಿ Ugadi ಎಂದು ಬರೆದು ಕನ್ನಡದಲ್ಲೂ ‘ಉಗಾದಿ’ ಎಂದು ಹೇಳಿದರೇನೇ/ಬರೆದರೇನೇ ತಮ್ಮ ಲೆವೆಲ್ ಹೆಚ್ಚಿಸಿಕೊಂಡಂತೆ ಎಂದುಕೊಳ್ಳುವ ಪೊಳ್ಳು ಪ್ರತಿಷ್ಠೆಯವರೂ ಇದ್ದಾರೆ.
ಅಂಥವರ ಗಮನಕ್ಕೆ: ನಾವು "ಯುಧಿಷ್ಠಿರ"ನನ್ನು ಹೇಗೆ ‘ಉಧಿಷ್ಠಿರ’ ಎನ್ನುವುದಿಲ್ಲವೋ, "ಯುವರಾಜ್ ಸಿಂಗ್"ನನ್ನು ಹೇಗೆ ‘ಉವರಾಜ್ ಸಿಂಗ್’ ಎನ್ನುವುದಿಲ್ಲವೋ, "ಯುವಕ"ರನ್ನು ಹೇಗೆ ‘ಉವಕರು’ ಎನ್ನುವುದಿಲ್ಲವೋ, "ಯುದ್ಧ"ವನ್ನು ಹೇಗೆ ‘ಉದ್ಧ’ ಎನ್ನುವುದಿಲ್ಲವೋ, "ಯುರೇನಸ್" ಗ್ರಹವನ್ನು ಹೇಗೆ ‘ಉರೇನಸ್’ ಎನ್ನುವುದಿಲ್ಲವೋ, "ಯುರೋಪ್" ಖಂಡವನ್ನು ಹೇಗೆ "ಉರೋಪ್" ಖಂಡ ಎನ್ನುವುದಿಲ್ಲವೋ, "ಯುಟ್ಯೂಬ್"ಅನ್ನು ಹೇಗೆ "ಉಟ್ಯೂಬ್" ಎನ್ನುವುದಿಲ್ಲವೋ, ಅಂದಮೇಲೆ "ಯು" ಎಂದು ಉಚ್ಚರಿಸಲು ನಮ್ಮ ನಾಲಿಗೆ ಖಂಡಿತ ಹೊರಳುತ್ತದೆ ಎಂದು ಗೊತ್ತಿರುವುದರಿಂದ "ಯುಗಾದಿ" ಎಂದು ಹೇಳಿದರೆ/ಬರೆದರೆ ಒಳ್ಳೆಯದು. ಇಂಗ್ಲಿಷ್ನಲ್ಲಿ Yugaadi ಎಂದು ಬರೆದರೆ ಮತ್ತೂ ಒಳ್ಳೆಯದು. ಅಂದಂತೆ ಶುಭಾಶಯ ಸರಿಯಾದ ಪದ. ಶುಭ+ಆಶಯ. ಪಟ್ಟೆ ಷ ಬಳಸಿದ "ಶುಭಾಷಯ" ಅಲ್ಲ.
ಮತ್ತೊಮ್ಮೆ ಎಲ್ಲರಿಗೂ ‘ಶುಭಕೃತ್’ ಸಂವತ್ಸರ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯ.
-ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ
ಚಿತ್ರ ಕೃಪೆ: ಅಂತರ್ಜಾಲ ತಾಣ