‘ಸಂಕ್ರಮಣ' ದಲ್ಲಿ ಕಂಡ ರವಿ ಬೆಳಗೆರೆಯ ಕವನ !

‘ಸಂಕ್ರಮಣ' ದಲ್ಲಿ ಕಂಡ ರವಿ ಬೆಳಗೆರೆಯ ಕವನ !

ಖ್ಯಾತ ಸಾಹಿತಿ, ವಿಮರ್ಶಕ ಚಂದ್ರಶೇಖರ ಪಾಟೀಲರು (ಚಂಪಾ) ಬಹಳ ವರ್ಷಗಳ ಕಾಲ ‘ಸಂಕ್ರಮಣ' ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದವರು. ಮೊನ್ನೆ ನನ್ನ ಪುಸ್ತಕಗಳ ರಾಶಿಯಲ್ಲಿ ಹುಡುಕಾಟ ಮಾಡುವಾಗ ೧೯೮೩ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ‘ಸಂಕ್ರಮಣ' ಪತ್ರಿಕೆ ಸಿಕ್ಕಿತು. ಒಳಪುಟಗಳಲ್ಲಿ ಕಣ್ಣಾಡಿಸುವಾಗ ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರರು ಬರೆದ ಎರಡು ಕವನಗಳು ಕಂಡವು. ಈಗಾಗಲೇ ‘ಸುವರ್ಣ ಸಂಪುಟ' ಕೃತಿಯಲ್ಲಿದ್ದ ೧೨೦ ಕವಿಗಳ ಆಯ್ದ ಕವನಗಳನ್ನು ಓದಿದ ನಿಮಗೆ ರವಿ ಬೆಳಗೆರೆ ಅವರ ಕವನವೂ ಇಷ್ಟವಾದೀತು ಎಂಬ ನಂಬಿಕೆಯಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಿರುವೆ.

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು ಮಾರ್ಚ್ ೧೫, ೧೯೫೮ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಕನ್ನಡದ ಡೈಜೆಸ್ಟ್ ಎಂದೇ ಹೆಸರುವಾಸಿಯಾದ ‘ಕಸ್ತೂರಿ’ ಪತ್ರಿಕೆಯ ಸಂಪಾದಕರಾಗಿದ್ದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ‘ಹಾಯ್ ಬೆಂಗಳೂರು’ ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ‘ಓ ಮನಸೇ’ ಪಾಕ್ಷಿಕ ಪ್ರಾರಂಭಿಸಿದರು.

ಬಹು ಜನರಿಗೆ ಗೊತ್ತಿರಲಿಕ್ಕಿಲ್ಲ, ತಮ್ಮ ಬರವಣಿಕೆಯ ಪ್ರಾರಂಭಿಕ ದಿನಗಳಲ್ಲಿ ರವಿ ಬೆಳಗೆರೆಯವರು ಹಲವಾರು ಕವನಗಳನ್ನು ಬರೆದಿದ್ದರು. ಈ ಕವನಗಳು ೧೯೮೩ರಲ್ಲಿ ‘ಅಗ್ನಿ ಕಾವ್ಯ' ಎಂಬ ಕೃತಿಯ ರೂಪದಲ್ಲೂ ಹೊರಬಂದಿತ್ತು. ನಂತರ ದಿನಗಳಲ್ಲಿ ಪತ್ರಿಕೋದ್ಯಮದ ಗಿರಣಿಗೆ ಬಿದ್ದ ರವಿ ಕವನಗಳನ್ನು ಬರೆಯುವುದನ್ನೇ ಕಡಿಮೆ ಮಾಡಿದರು. “ಕವನಗಳು ನನ್ನಿಂದ ಮುನಿಸಿಕೊಂಡಿವೆ" ಎಂದು ಅವರೇ ಬಹಳಷ್ಟು ಸಲ ಪತ್ರಿಕೆಯಲ್ಲಿ ಬರೆದುಕೊಂಡಿದ್ದರು. 

ರವಿ ಬೆಳಗೆರೆ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ರಾಜ್ಯ ಸರ್ಕಾರದ ‌ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬೆಳಗೆರೆ ಅವರಿಗೆ ಓದು, ತಿರುಗಾಟ ಇಷ್ಟವಾದ ಹವ್ಯಾಸ. ಇವರ ಕೆಲವು ಕೃತಿಗಳು ದಾರಿ, ಅಗ್ನಿ ಕಾವ್ಯ, ಅರ್ತಿ, ನೀ ಹಿಂಗ ನೋಡಬ್ಯಾಡ ನನ್ನ, ಗಾಂಧೀ ಹತ್ಯೆ ಮತ್ತು ಗೋಡ್ಸೆ, ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು?, ಗೋಲಿಬಾರ್, ಪಾಪಿಗಳ ಲೋಕದಲ್ಲಿ, ಲವಲವಿಕೆ, ಹೇಳಿ ಹೋಗು ಕಾರಣ, ಒಮರ್ಟಾ, ಪಾ ವೆಂ ಹೇಳಿದ ಕಥೆಗಳು ಮುಂತಾದವು. ಇವರು ನವೆಂಬರ್‌ ೧೩, ೨೦೨೦ರಂದು ನಿಧನ ಹೊಂದಿದರು. 

‘ಸಂಕ್ರಮಣ' ಪತ್ರಿಕೆಯಲ್ಲಿ ಪ್ರಕಟವಾದ ರವಿ ಬೆಳಗೆರೆ ಅವರ ಎರಡು ಕವನಗಳು ಕೊಳಕು ಗೀತೆ ಹಾಗೂ ಕ್ಷಮೆ. ಈ ಎರಡು ಕವನಗಳಿಂದ ‘ಕೊಳಕು ಗೀತೆ' ಕವನವನ್ನು ಆರಿಸಿ ಪ್ರಕಟಿಸಲಾಗಿದೆ. ಓದಿ ಅಭಿಪ್ರಾಯ ತಿಳಿಸಿ.

ಕೊಳಕು ಗೀತೆ

ಹೌದು ಸರ್, ನಾನು ಹಾಡೋದೇ ಕೊಳಕು ಗೀತೆ,

ನಾನು ನಗಲಾರೆ ಸರ್!

 

ಶೃಂಗೇರಿಯ ಮಠದಲ್ಲೋ, ಶ್ರೀ ಉಡುಪಿಯ ಪೀಠದಲ್ಲೋ 

ವೇದಪಾಠವಾದ ಹುಡುಗ

ಬೊಜ್ಜೆಗರಿಸಿ ಬಿಳಿ ಹಲ್ಲಲಿ ಖಿಲಖಿಲನೆ ನಕ್ಕಂತೆ…

ಕಾನ್ವೆಂಟಿನ ಸಿಸ್ಟರ್ ಗಳ ಗಿಳಿಪಾಠ ಕಲಿತ ಹುಡುಗ

ಬಿಳಿ ಚಡ್ದಿಯ ಬಿಸಿ ತೊಡೆಯಲಿ ಕಿಲಕಿಲನೆ ನಕ್ಕಂತೆ…

ನಾನು ನಗಲಾರೆ ಸರ್…

ನಾನು ಹಾಡೋದೇ ಕೊಳಕು ಗೀತೆ!

 

ಅಪ್ಪನಲ್ಲದ ಅಪ್ಪ ಚೆಲ್ಲಿ ಹೋದ ಕಪ್ಪು ವೀರ್ಯಕ್ಕೆ

ಅಮ್ಮನ ಹಸಿದೊಡಲಿನಲ್ಲಿ ಚಿಗುರೊಡೆದ

ಗನೋರಿಯಾ ಕೂಸು ನಾನು.

ಹೇಲು, ಉಚ್ಚೆ, ಎಂಜಲೆಲೆ, ಸುಖರೋಗ, ಉಪ್ಪು ಹನಿ

ಕಾಲೊದೆತ, ಮೈಮುರಿತ-ಬಾಲ್ಯದ ನೆನಪುಗಳಿವು

ಹುಟ್ಟಿನಿಂದ ನೇರವಾಗಿ ಮುಪ್ಪಿಗೆಗರಿದವನು ನಾನು

ನಾನು ನಗಲಾರೆ ಸರ್…

ನಾನು ಹಾಡೋದೇ ಕೊಳಕು ಗೀತೆ !

 

ಫುಟ್ ಪಾತಿನ ಧೂಳಿನಲಿ ಹಸಿದೊಡಲಿನ ಗೋಳಿನಲಿ

ಬಿಸಿಲಲ್ಲೂ ಬಿಸಿಯಾಗದ ನರಸತ್ತ ಮೈಯಲ್ಲಿ

ಟಾಟಾಗಳ ಎಂಜಲೆಲೆ, ಬಿರ್ಲಾಗಳ ಭಿಕ್ಷಾನ್ನ

ಪೋಲೀಸರ ಬೂಟುಣಿಸಿದ ಮದ್ಯಾಹ್ನದ ಮೃಷ್ಟಾನ್ನ

ದ ಕೂಟದಲಿ

ಉಣ್ಣದೆಯೇ ತೇಗಿದ ಉಸಿರಾಡದೆ ಬದುಕಿದ

ನಿಮ್ಮೂರಿನ ಮುಳ್ಳು ಬೇಲಿ ನೆರಳಲ್ಲೇ ಹೊರಳಿ ಬೆಳೆದ 

ತೊನ್ನು ಹರಿದ ಹಂದಿ ನಾನು

ನಾನು ನಗಲಾರೆ ಸಾರ್…

ನಾನು ಹಾಡೋದೇ ಕೊಳಕು ಗೀತೆ !

 

ನೇತಾಡುವ ತರಡು ಹಿಡಿದು

ನಡೆದಾಡಲು ಪರದಾಡುವ ಎಂಭತ್ತರ ನೇತಾರರು

ಜೋಲು ಮೊಲೆಯ ಮುದುಕಿಯರು

ಐದು ವರ್ಷಕ್ಕೊಮ್ಮೆ

ಭಾಯಿಯೋ..ಔರ್ ಬೆಹನೋ,

ಸೋದರ ಸೋದರಿಯರೇ,

ಮತದಾರ ಬಾಂಧವರೇ... ಹಿಂದೂಗಳೇ,

ಕಾಮ್ರೆಡ್ಸ್…

ಎಂದೆಲ್ಲಾ ಕಿರುಚಾಡಿದಾಗ

ಬಿಕ್ಕು ಹತ್ತಿದ ನಮ್ಮೂರಿನ ಹಸಿದೊಡಲಿನ ಮುಗ್ಧರು

ಕಿವಿ ಹರಿಯೆ ಚಪ್ಪಾಳೆ ತಟ್ಟಿದಾಗ,

ಉಸಿರುಗಟ್ಟಿ ಅವರಿವರ ಭಾಷಣಗಳ ಕುಡಿದಾಗ

ನಿಟ್ಟುಸಿರುಗಳ ಹೂಸಿದಾಗ

ಎದೆಯುಬ್ಬಿಸಿ ಫೋಟಕ್ಕೆ ಫೋಜು ಕೊಟ್ಟಾಗ…

ಎಲ್ಲ ಮುಗಿದ ಮೇಲೆ ಕಪ್ಪು ಬಾಕ್ಸಿನಲ್ಲಿ

ಬಿಳಿಯ ಬ್ಯಾಲೆಟ್ ತುರುಕಿ

ರಹಸ್ಯವಾಗಿ ಲುಚ್ಚಾಗಳನ್ನಾರಿಸಿ ಕಳಿಸಿ

ಕುಂಡಿ ಝೂಡಿಸಿಕೊಂಡು ಮನೆಗಳೆಂಬ

ಗೋರಿಗಳತ್ತ ನಡೆದಾಗ…

ಸರ್...ಬಲು ಜೋರಾಗಿ ನಗುತ್ತೇನೆ !

(‘ಸಂಕ್ರಮಣ' ಪತ್ರಿಕೆಯಿಂದ ಆಯ್ದ ಕವನ)