‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಬರಹ

ಪಾಲಸಿಯನು ಮಾಡೋ,
ನಿನ್ನದು ಒಂದು
ಪಾಲಸಿಯನು ಮಾಡೋ.
ಬರುವ ದಿನದ ಗತಿ ಬಲ್ಲವರಾರು?
ಇರುವಾಗಲೇ ಸಾವಿಗೆ ಸಹಿ ಮಾಡೋ!

ಎಂದು ಹಾಡುತ್ತ ರಂಗಕ್ಕೆ ಬರುವ ಇನ್ಸುರೆನ್ಸ್ ಕಂಪೆನಿ ಏಜೆಂಟ್ ಒಂದು ಅಂತಾರಷ್ಟ್ರೀಯ ವಿಮೆ ಕಂಪೆನಿಯವನು. ಅವನ ಬಳಿ ಪ್ರೇಮಿಗಳಿಗಾಗಿ ಅಡ್ವಾನ್ಸ್ ‘ವಿಚ್ಚೇದನ ಪಾಲಸಿ’, ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗಾಗಿ ‘ಭಯೋತ್ಪಾದನಾ ಪಾಲಸಿ’ ಹೀಗೆ ಅನೇಕ ಪಾಲಸಿಗಳು. ಬದುಕಿನಲ್ಲಿ ಇಲ್ಲದ ಚಿಂತೆಗಳನ್ನು ಇವೆ ಎಂದು ತೋರಿಸಿ, ಅದಕ್ಕೆಲ್ಲ ಹಣದ ರೂಪದಲ್ಲಿ ಪರಿಹಾರ ನೀಡುವ ಪಾಲಸಿಯನ್ನು ಪರಿಚಯಿಸುವ ನಾಟಕ ‘ಸಂತೆ’.

ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ದಿವಾಕರ ಹೆಗಡೆ ಬರೆದ ನಾಟಕವನ್ನು ರಂಗಕ್ಕೆ ತಂದವರು ಧಾರವಾಡದ ಭೂಮಿ ತಂಡದವರು. ನಿರ್ದೇಶಿಸಿದವರು ಯುವ ಉತ್ಸಾಹಿ ಉಮೇಶ ತೇಲಿ. ಹಾಗೆ ನೋಡಿದರೆ ನಾಟಕಕಾರ, ನಿರ್ದೇಶಕ, ನಟರು ಎಲ್ಲರೂ ಹೊಸಬರು. ನಾಟಕದ ವಸ್ತುವೂ ಹೊಸತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಧಾರವಾಡದ ಸಾಂಸ್ಕೃತಿಕ ಸಮುಚ್ಚಯದ ಹಿಂಭಾಗದಲ್ಲಿ ‘ಸಂತೆ’ ಏರ್ಪಾಡಾಗಿತ್ತು.

ಸಂತೆ ಎಂದರೆ ಘಟನೆಗಳ ಸಂಯೋಜನೆಯೇ ವಿನ: ಕಥೆಯಲ್ಲ. ಗಣಪತಿ ಪೂಜೆಯಿಂದಲೇ ವ್ಯವಹಾರಿಕ ಚೌಕಾಶಿ, ಶಿಸ್ತು ಆರಂಭವಾಗುತ್ತದೆ. ಜಾನಪದೀಯ ಮಟ್ಟದಿಂದ ಆರಂಭಿಸಿ ಪಾಪ್ ಸಂಗೀತದ ವರೆಗೆ ಎಲ್ಲ ಧಾಟಿಗಳು ಬರುತ್ತವೆ. ಜಾಗತೀಕರಣದ ಎಲ್ಲ ಮುಖಗಳಿಗೆ ತೆರೆದುಕೊಳ್ಳುವ ಗಣಪತಿ ಪೂಜೆ, ಭಕ್ತಿಯನ್ನು ‘ಸಂತೆ’ಯ ವಸ್ತುವಾಗಿಸುತ್ತದೆ. ಮುಂದೆ ಬದುಕಿನ ಭಾವುಕ ಮೌಲ್ಯಗಳಿಗೆ, ಆ ಸಂಬಂಧದ ಆತಂಕಕಗಳಿಗೆ; ತಾರ್ಕಿಕ ವಿಶ್ಲೇಷಣೆ ನೀಡುತ್ತ, ಆ ಎಲ್ಲ ಆತಂಕಗಳಿಗೆ ಮಾರುಕಟ್ಟೆಯ ದರದ ಅಧಾರದಲ್ಲಿ ಪರಿಹಾರ ಸೂಚಿಸುತ್ತ ಸಾಗುತ್ತದೆ ನಾಟಕ.

ದೇವಸ್ಥಾನದ ನಿತ್ಯ ಪೂಜೆಗೆ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಬಡ್ಡಿಯ ಆಧಾರ ನೀಡುವ ಮೊಕ್ತೇಸರ, ಚಪ್ಪಲಿ ಕಂಪನಿಯ ಮಾಡೆಲ್ ಗೆ ಸಾರ್ವಜನಿಕರಿಂದ ಸನ್ಮಾನ, ಅರ್ಧ ಬೆಲೆಯ ಅಂಗಡಿಯಲ್ಲಿ ಹಣ ತೊಡಗಿಸುವ ನಿವೃತ್ತ ಬ್ಯಾಂಕ್ ಅಧಿಕಾರಿ, ಜಾಣ ಪ್ರೊಫೇಸರ್ ಒಬ್ಬರು ತಮ್ಮ ಪುಸ್ತಕ ಮಾರಾಟ ಮಾಡುವ ಕ್ರಮ, ಭಾರತೀಯ ಸನಾತನ ಸಂಸ್ಕೃತಿಯ ಸಂರಕ್ಷಣೆಗೆ ಹೊಸ ವಿದೀಸನಾ ಪದ್ಧತಿ ಆರಂಭಿಸುವ ವಿದೇಶಿ ಸನ್ಯಾಸಿನಿ, ಹೀಗೆ ಬದುಕಿನ ಮೌಲ್ಯಗಳೆಲ್ಲ ಮಾರಾಟದ ವಸ್ತುವೇ ಆಗುತ್ತವೆ. ಮಾನವನ ಬದುಕಿಗೆ ಅಂತರಂಗವೇ ಇಲ್ಲ ಎನ್ನುವ ಹಾಗೆ ಎಲ್ಲ ಸಂಗತಿಗಳಿಗೂ ಮಾರುಕಟ್ಟೆಯ ದರ ನಿಗದಿಯಾಗುತ್ತದೆ.

ಹಾಸ್ಯದ ಲೇಪದಲ್ಲಿ ಹೆಣೆದ ಸಂಭಾಷಣೆ, ಒಂದರಹಿಂದೊಂದು ಸಾಲುಗಟ್ಟುವ ಘಟನೆಗಳು, ಆಧುನಿಕ ಬದುಕಿನ ವೇಗದ ಬದುಕನ್ನು ಚಿತ್ರಿಸುವಲ್ಲಿ ಯಶಸ್ವಿಯಾಗುತ್ತದೆ. ಎಲ್ಲೋ ಒಂದು ಕಡೆ ‘ಲಿಂಕ್ ಲೆಸ್’ ಎನಿಸುತ್ತದೆ. ಇದು ನಾಟಕದ ಸತ್ವವೂ ಹೌದು, ಮಿತಿಯೂ ಕೂಡ. ಪ್ರೇಕ್ಷಕರು ದೂರ ನಿಲ್ಲದೆ, ನಾಟಕದಲ್ಲಿ ಒಂದಾಗಿ ಬಿಡುತ್ತಾರೆ. ತಮ್ಮದೇ ಕನಸುಗಳ ಸಂತೆಯಲ್ಲಿ ಗಿರಾಕಿಗಳಾಗಿ ಬಿಡುತ್ತಾರೆ.

ನಾಟಕವನ್ನು ನಿರ್ದೇಶಿಸಿದ ಉಮೇಶ ತೇಲಿ ಹೊಸ ಹುಡುಗರನ್ನು ಕಟ್ಟಿಕೊಂಡು ಮಾಡಿದ ಪ್ರಯತ್ನ ಅಭಿನಂದನೀಯ. ಹೊಸಬರ ಸಂಗಡ ಸೇರಿಕೊಂಡು ಅಭಿನಯಿಸಿದ ಮುಕುಂದ ಮೈಗೂರ ಪ್ರೊಫೇಸರ್ ಆಗಿ ಮಾ.ಪು.ಲೇ. (ಮಾರಾಟವಾಗದ ಪುಸ್ತಕಗಳ ಲೇಖಕರ) ಸಂಘದ ಅಧ್ಯಕ್ಸ್ಧರಾಗಿ ನೀಡಿದ ಅಭಿನಯ ಅನನ್ಯವಾಗಿತ್ತು. ನಾಟಕದುದ್ದಕ್ಕೂ ಬರುವ ನಗೆಯ ಮಾತುಗಳಿಗೆ ಗಾಂಭೀರ್ಯದ ನೇಪಥ್ಯ, ಪಾತ್ರಧಾರಿಗಳ ಉತ್ಸಾಹಕ್ಕೆ ಹೊಂದಿದ್ದ ಸುಸಂಭದ್ಧತೆ ಪ್ರಾಪ್ತವಾದಲ್ಲಿ ಸಂತೆ ಉತ್ತಮ ಪ್ರದರ್ಶನವಾಗುತ್ತದೆ. ಹೊಸ ಹೊಳಹಿನ ನಾಟಕವಾಗುತ್ತದೆ. ಸಂತೆಯ ಕೊನೆಯಲ್ಲಿ ಬರುವ ಶಾಂತಿ ಮಂತ್ರದಲ್ಲಿ ‘ಶಾಂತಿಯೂ ಸರಕು ಸುಖವಾಗಿ ಬದುಕು’ ಎಂಬ ಘೋಷಣೆ ಅರಗಿಸಿಕೊಳ್ಳಲಾರದಷ್ಟು ಕಾಡುತ್ತದೆ. ನಾಟಕದ ಆರಂಭದಿಂದ ನಗುತ್ತ ಬಂದವರ ಮುಖದಲ್ಲಿ ವಿಷಾದದ ಗೆರೆ ಮೂಡಿಸುತ್ತದೆ.

ಪ್ರಥಮ ಬಾರಿಗೆ ಕನ್ನಡದ ರಂಗಭೂಮಿಯಲ್ಲಿ ಎಡ ಪಂಥೀಯ ವಿಚಾರಧಾರೆಯನ್ನು ಬಲಪಂಥೀಯ ದೃಷ್ಟಿಕೋನದಲ್ಲಿ ಸಮರ್ಥವಾಗಿ ಬಿಂಬಿಸುವಲ್ಲಿ, ಜೊತೆಗೆ ಮುಂದಾಲೋಚನೆಯಲ್ಲಿ ನಾಟಕಕಾರ ದಿವಾಕರ ಹೆಗಡೆ ಹಿರಿದಾದ ಹೆಜ್ಜೆಯನ್ನೇ ಇಟ್ಟಿದ್ದಾರೆ ಎನ್ನಲು ಅಡ್ಡಿಇಲ್ಲ.