‘ಸಂಪದ'ದ ಹೆಮ್ಮೆಯ ಬರಹಗಾರರು
ಸಂಪದ ಜಾಲತಾಣದ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಕಳೆದ ಸುಮಾರು ೧೮ ವರ್ಷಗಳಿಂದ ‘ಸಂಪದ' ಕ್ಕೆ ಬರೆದವರು ನೂರಾರು ಮಂದಿ. ಲೇಖನ, ಕವನ, ಕಥೆ, ಪುಸ್ತಕ ಪರಿಚಯ, ಚಿತ್ರ ಮಾಹಿತಿ, ಅಡುಗೆ ಮುಂತಾದ ಬರಹಗಳನ್ನು ಬರೆದು ‘ಸಂಪದ' ದ ಪುಟಗಳನ್ನು ಶ್ರೀಮಂತವಾಗಿಸಿದವರು. ಆ ಎಲ್ಲಾ ಬರಹಗಾರರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ‘ಬರಹಗಾರರ ಬಳಗ' ಎಂಬ ಸಾಮಾಜಿಕ ಜಾಲತಾಣದ ಗುಂಪಿನ ಸದಸ್ಯರು ಬಹಳಷ್ಟು ಮಂದಿ ಸಂಪದಕ್ಕೆ ಬರೆಯುತ್ತಿದ್ದಾರೆ. ಕಥೆಯಾಗಿರಬಹುದು, ಲೇಖನವಾಗಿಬಹುದು ಅಥವಾ ಕವನವಾಗಿರಬಹುದು ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಅಂತಹ ಕೆಲವು ಬರಹಗಾರರ ಪುಟ್ಟ ಪರಿಚಯವನ್ನು ನಾವು ಇಲ್ಲಿ ನೀಡಲು ಬಯಸುತ್ತೇವೆ.
ಶ್ರೀರಾಮ ದಿವಾಣ: ಮೂಲತಃ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಹೋಬಳಿ ಎಡನಾಡು ಗ್ರಾಮ ನಿವಾಸಿ. ಕಳೆದ ೨೨ ವರ್ಷಗಳಿಂದ ಉಡುಪಿಯ ಖಾಯಂ ನಿವಾಸಿ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. "ಕೃಷ್ಣಾರ್ಪಣ !?" (೨೦೦೩) ಮತ್ತು "ವ್ಯವಸ್ಥೆಯೆಂಬ ಅವ್ಯವಸ್ಥೆ" (೨೦೧೭) ಅಂಕಣ ಬರಹಗಳ ಸಂಕಲನಗಳು. "ದಣಿವರಿಯದ ಕನ್ನಡ ಕಟ್ಟಾಳು ಸಾಹಿತಿ ಗಣಪತಿ ದಿವಾಣ" (೨೦೧೭) ಮತ್ತು "ಸಮಾಜವಾದಿ ಪತ್ರಕರ್ತ, 'ಸಂಗಾತಿ'ಯ ಮ. ನವೀನಚಂದ್ರಪಾಲ್" (೨೦೧೮) ಬದುಕು - ಬರಹಗಳ ಕೃತಿಗಳು ಪ್ರಕಟಿತ. ಪತ್ರಕರ್ತ, ಚುಟುಕು ಕವಿ, ಮಾಹಿತಿ ಹಕ್ಕು, ಮಾನವ ಹಕ್ಕು ಕಾರ್ಯಕರ್ತ, ಸಂಪನ್ಮೂಲ ವ್ಯಕ್ತಿ, ಸಂಘಟಕ, diwana punch YouTube ಛಾನೆಲ್ ನ ಪ್ರಧಾನ ಸಂಪಾದಕ. "ದಿವಾಣ ಮಂಟಪ" ಬ್ಲಾಗ್ ನ ಪ್ರಧಾನ ಸಂಪಾದಕ.
ರತ್ನಾ ಕೆ. ಭಟ್: ದ. ಕ. ಜಿಲ್ಲೆ ಬಂಟ್ಬಾಳ ತಾಲೂಕು ಅಡ್ಯನಡ್ಕ ನಿವಾಸಿ. ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯಿನಿ, ಯಕ್ಷಗಾನ ಕಲಾವಿದೆ, ಕವಯತ್ರಿ, ಲೇಖಕಿ. ‘ಸಂಪದ' ದಲ್ಲಿ ನಿರಂತರವಾಗಿ ಒಂದು ಒಳ್ಳೆಯ ನುಡಿ, ಬಾಳಿಗೊಂದು ಚಿಂತನೆಗಳ ಸರಣಿ ಬರಹಗಳನ್ನು ಬರೆಯುತ್ತಿದ್ದಾರೆ. ದಿನ ವಿಶೇಷದ ಲೇಖನಗಳನ್ನು ಬಹಳ ಮುತುವರ್ಜಿಯಿಂದ ತಪ್ಪದೇ ಬರೆಯುವುದು ಇವರ ಹೆಗ್ಗಳಿಕೆ. ಸೊಗಸಾದ ಕವನಗಳು, ಗಝಲ್ ಗಳು, ಹನಿಗವನಗಳು ಇವರ ಲೇಖನಿಯಿಂದ ಹೊರಹೊಮ್ಮಿವೆ.
ಹಾ ಮ ಸತೀಶ್: ಮೂಲತಃ ದ. ಕ. ಜಿಲ್ಲೆ ಬಂಟ್ವಾಳ ತಾಲೂಕಿನವರು. ಕಳೆದ ಹಲವು ವರ್ಷಗಳಿಂದ ಬೆಂಗಳೂರು ನಿವಾಸಿ. ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸ್ವಯಂ ನಿವೃತ್ತರು. ಪ್ರಸ್ತುತ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು. ಸ್ಕೌಟ್ ಶಿಕ್ಷಕರಾಗಿ ವಿಶೇಷ ಸೇವೆ ಸಲ್ಲಿಸಿದ ಅನುಭವ. ಕವನ, ಹನಿಗವನ, ಚುಟುಕು, ದೇಶಭಕ್ತಿಗೀತೆ, ಶಿಶುಗೀತೆ, ವೈಚಾರಿಕ ಲೇಖನಗಳ ಸಹಿತ ಒಟ್ಟು ಏಳು ಸಂಕಲನಗಳು ಪ್ರಕಟವಾಗಿವೆ. ‘ಸಂಪದ'ದಲ್ಲಿ ಇವರು ನಿರಂತರವಾಗಿ ಕವನಗಳು, ಗಝಲ್ ಗಳು, ಹನಿಗವನಗಳು, ಮುಕ್ತಕಗಳನ್ನು ಬರೆಯುತ್ತಿದ್ದಾರೆ.
ಕಾ. ವೀ. ಕೃಷ್ಣದಾಸ್ (ಯಶುಪ್ರಿಯ ಪಕ್ಷಿಕೆರೆ). ಮಂಗಳೂರು ಮಹಾನಗರದ ನಿವಾಸಿ. ಪತ್ರಕರ್ತರು, ಕವಿ, ಕಥೆಗಾರ, ಲೇಖಕರು, ವಿಮರ್ಶಕರು. ಇವರ ಮೂರು ಕವನ ಸಂಕಲನ, ಒಂದು ಸಂಪಾದಿತ ಕಥಾ ಸಂಕಲನ ಪ್ರಕಟವಾಗಿವೆ. ಇವರ ಸಾಹಿತ್ಯವಿರುವ ವಿಡಿಯೋ, ಆಡಿಯೋ ಆಲ್ಬಂಗಳು ಬಂದಿವೆ. ಸಿನಿಮಾಗಳಿಗೂ ಸಾಹಿತ್ಯ ನೀಡಿದ್ದಾರೆ. ಕೆಲವು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಕಳೆದ ೧೪ ವರ್ಷಗಳಿಂದ ಟೋಲ್, ರಿಟೇಲ್ ಮತ್ತು ಮಾಲ್ ಮ್ಯಾನೆಜ್ಮೆಂಟ್ ನಲ್ಲಿ ವ್ಯವಸ್ಥಾಪಕರಾಗಿ ದುಡಿಯುತ್ತಿದ್ದಾರೆ. ‘ಸಂಪದ' ದಲ್ಲಿ ಹನಿಗವನಗಳು, ಕವನಗಳನ್ನು ಬರೆಯುತ್ತಾರೆ.
ಶಿಕ್ರಾನ್ ಸೈಫುದ್ದೀನ್ ಎಂ: ಮಂಗಳೂರು ವಿಶ್ವವಿದ್ಯಾನಿಲಯದಿಂದ B.Sc ಪದವೀಧರರಾಗಿರುವ ಇವರು ಉತ್ತಮ ವೈಜ್ಞಾನಿಕ ಬರಹಗಾರನಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಇವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಾಲೇಜಿನ ರಂಗಭೂಮಿಗಾಗಿ ನಾಟಕಗಳನ್ನು ಬರೆದಿದ್ದಾರೆ. ಪದವಿ ವ್ಯಾಸಂಗದ ಸಮಯದಲ್ಲಿ ಇವರು ಚಲನಚಿತ್ರ ನಿರ್ಮಾಣವನ್ನು ಅಧ್ಯಯನ ಮಾಡಿ ಮತ್ತು ಸ್ಪೆಕ್ ಚಿತ್ರಕಥೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿದ್ದಾರೆ. ಪರಿಣಾಮವಾಗಿ, ಇವರು ಎರಡು ಕಿರುಚಿತ್ರಗಳು ಮತ್ತು ಐದು ಚಲನಚಿತ್ರಗಳಿಗೆ ಚಿತ್ರಕಥೆಗಳನ್ನು ರಚಿಸಿದ್ದಾರೆ.
ಚಿತ್ರಕಥೆಯ ಹೊರತಾಗಿ ಇವರು ಇಂಗ್ಲಿಷ್, ಕನ್ನಡ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಕಥೆಗಳು, ಕವನಗಳು, ಪ್ರಬಂಧಗಳು ಇತ್ಯಾದಿಗಳನ್ನು ರಚಿಸಿದ್ದಾರೆ. ಇಂಗ್ಲಿಷ್ನಲ್ಲಿ ಅಪ್ರಕಟಿತ ಕಿರು ಕಾದಂಬರಿಯೊಂದು ಸೇರಿದೆ. ಇವರ ಬರಹಗಳು ವಿವಿಧ ಪತ್ರಿಕೆಗಳು ಮತ್ತು ವೆಬ್ ಪೋರ್ಟಲ್ಗಳಲ್ಲಿ ಪ್ರಕಟಗೊಂಡಿದೆ. ಇವರಿಗೆ ‘Literary Colonel’ ಎಂಬ ಬಿರುದು ನೀಡಿ ಗೌರವಿಸಲಾಗಿದೆ. ಇವರು ಸಾಹಿತ್ಯಿಕ ವೃತ್ತಿಜೀವನದ ಜೊತೆಗೆ ಚದುರಂಗದಲ್ಲಿ 1800ರ ಚೆಸ್ ರೇಟಿಂಗ್ ಅನ್ನು ಹೊಂದಿದ್ದಾರೆ ಮತ್ತು ಕರಾಟೆಯಲ್ಲಿ ನೇರಳೆ ಬೆಲ್ಟ್ ಹೊಂದಿದ್ದಾರೆ. ‘ಸಂಪದ'ದಲ್ಲಿ ಇವರು ಖಗೋಳ ಶಾಸ್ತ್ರದ ಅಪರೂಪದ ಘಟನೆಗಳು ಹಾಗೂ ಅಪರೂಪದ ಖಗೋಳಶಾಸ್ತ್ರಜ್ಞರನ್ನು ಪರಿಚಯಿಸುವ ಕಾರ್ಯವನ್ನು ಲೇಖನದ ಮೂಲಕ ಮಾಡುತ್ತಿದ್ದಾರೆ.
ಧೀರಜ್ ಬೆಳ್ಳಾರೆ: ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಇಲ್ಲಿ ಕನ್ನಡ ಉಪನ್ಯಾಸಕರು. ಅಭಿನಯ, ಬರಹ, ನಿರ್ದೇಶನದಲ್ಲಿ ಆಸಕ್ತಿ. ‘ಶಕಲಕ ಬೂಂಬೂಂ’ ತುಳು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ. ಪ್ರತೀ ದಿನ ‘ಸ್ಟೇಟಸ್ ಕತೆ’ಯನ್ನು ಬರೆದು ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಕಟಿಸುತ್ತಾರೆ. ಅದರಲ್ಲಿ ಈಗ ೯೦೦ ಕ್ಕೂ ಅಧಿಕ ಪುಟ್ಟ ಕಥೆಗಳು ಪ್ರಕಟವಾಗಿವೆ. ವಿದ್ಯಾರ್ಥಿಗಳಿಗಾಗಿ ೧೦೦ಕ್ಕೂ ಅಧಿಕ ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸಿದ್ದಾರೆ. ಪ್ರತೀ ದಿನ ಹೊಸತನವನ್ನು ನೀಡುವ ತುಡಿತ ಇವರಿಗೆ ಇದೆ. ‘ಸಂಪದ' ದಲ್ಲಿ ಪ್ರತೀ ದಿನ ‘ಸ್ಟೇಟಸ್ ಕತೆ'ಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯದಲ್ಲೇ ಇದರ ಸಂಖ್ಯೆ ೫೦೦ ದಾಟಲಿದೆ.
ನಟರಾಜ್ ಕೆ.: ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು. ಪ್ರವೃತ್ತಿಯಾಗಿ ವಿಜ್ಞಾನದ ಬಗ್ಗೆ ಬರೆಯುವ ಒಲವನ್ನು ಹೊಂದಿದ್ದಾರೆ. ಈಗಾಗಲೇ ನಟರಾಜ್ ಅವರ ೧೫ ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ವಿಶ್ವ ಮತ್ತು ನಮ್ಮ ಭೂಮಿ, ನೂರೊಂದು ವಿಜ್ಞಾನಿಗಳು, ವಿಜ್ಞಾನ ವಿಸ್ಮಯ, ಓ ಮನವೇ (ಕವನ ಸಂಕಲನ), ಮುಳುಗಿದ ಸ್ವರ್ಗ ಟೈಟಾನಿಕ್, ಜೈವಿಕ ಯುದ್ಧ ಮುಂದೇನು...?, ಕೊರೋನಾ ಈ ಜಗ ತಲ್ಲಣ, ಸಾವಿತ್ರಿಬಾಯಿ ಫುಲೆ (ನಾಟಕ) ಪ್ರಮುಖವಾದವುಗಳು. ‘ಸಂಪದ' ದಲ್ಲಿ ಈಗಾಗಲೇ ಇವರು ಹಲವಾರು ವಿಜ್ಞಾನ ಸಂಬಂಧೀ ಕುತೂಹಲಕಾರಿ ವಿಷಯಗಳನ್ನು ಬರೆದಿದ್ದಾರೆ. ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುತ್ತಾರೆ.
ಈ ಮೇಲಿನ ಲೇಖಕರಲ್ಲದೇ ಇನ್ನೂ ಹಲವಾರು ‘ಬರಹಗಾರ ಬಳಗ’ದ ಸದಸ್ಯರು ತಮ್ಮ ಲೇಖನ, ಕತೆ, ಕವನಗಳನ್ನು ‘ಸಂಪದ' ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆಲ್ಲರಿಗೂ ಕೃತಜ್ಞತೆಗಳು.
ಒಂದು ವಿಷಯವನ್ನು ಬರಹಗಾರರಲ್ಲಿ ನಾನು ಭಿನ್ನವಿಸಿಕೊಳ್ಳುವಿದೇನೆಂದರೆ, ನಿಮ್ಮ ಸ್ವರಚಿತ ಬರಹಗಳನ್ನು ಹೆಚ್ಚಾಗಿ ಪ್ರಕಟಿಸಲು ಪ್ರಯತ್ನಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬರುವ ಮಾಹಿತಿಗಳು ಯೋಗ್ಯವಾಗಿದ್ದು, ಅದರ ಮೂಲ ಲೇಖಕರ ಹೆಸರಿದ್ದರೆ ಮಾತ್ರ ಸಂಗ್ರಹ ರೂಪದಲ್ಲಿ ಪ್ರಕಟಿಸಿ. ಏಕೆಂದರೆ ಕೆಲವು ಸಲ ಮಾಹಿತಿಗಳನ್ನು ಬರೆದ ಮೂಲ ಲೇಖಕರ ಹೆಸರು ಹಂಚಿಕೊಳ್ಳುವಾಗ ತಪ್ಪಿ ಹೋಗಿರುತ್ತದೆ. ಅದು ಆ ಮೂಲ ಲೇಖಕರಿಗೆ ಮಾಡುವ ಅನ್ಯಾಯ. ಆದುದರಿಂದ ದಯವಿಟ್ಟು ಸ್ವ ಬರಹಗಳನ್ನು ಪ್ರಕಟಿಸಲು ಪ್ರಯತ್ನಿಸಿ. ಉತ್ತಮ ಮಾಹಿತಿಯುಳ್ಳ ವಿಷಯಗಳನ್ನು ಸಂಗ್ರಹ ರೂಪದಲ್ಲಿ ಹಂಚಿಕೊಳ್ಳಲು ಅವಕಾಶ ಇದೆ ಆದರೆ ಮೂಲ ಲೇಖಕರಿಗೆ ಗೌರವ ನೀಡಿ.
ಮುಂದಿನ ವರ್ಷ ಇನ್ನಷ್ಟು ಬರಹಗಳು ತಮ್ಮಿಂದ ಬರಲಿ, ಇನ್ನಷ್ಟು ಹೊಸ ಲೇಖಕರು ಹೊರಬರಲಿ ಎಂಬ ಆಶಯ ನಮ್ಮದು.