‘ಸಂಪದ’ ನಗೆಬುಗ್ಗೆ - ಭಾಗ ೧೦೧
ಕಾರ್ ಕಳವು
ಶ್ರೀಮತಿ ಶಾಪಿಂಗ್ ಮಾಲ್ ನಿಂದ ಖರೀದಿ ಮುಗಿಸಿ ಹೊರ ಬಂದಳು. ಕಾರಿನ ಕೀ ತೆಗೆಯಲು ಪರ್ಸ್ ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು, ಕಾರ್ ಕೀ ವಿಷಯದಲ್ಲಿನ ತನ್ನ ಬೇಜವಾಬ್ದಾರಿತನ ಇದೇನೂ ಮೊದಲ ಬಾರಿ ಅಲ್ಲ ಎಂಬುದು. ಎಷ್ಟೋ ಸಾರಿ, ಕಾರ್ ಕೀಯನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಕ್ಕಾಗಿ ಗಂಡ ಸೂರಿಯಿಂದ ಸಿಕ್ಕಾಪಟ್ಟೆ ಬೈಸಿಕೊಂಡದ್ದು ಅವಳಿಗಿನ್ನೂ ನೆನಪಿತ್ತು. ಈ ಸಲಾನೂ ಹಂಗೇ ಆಯ್ತಾ, ಹಂಗೇ ಆಗಿದ್ರೆ ಅಕಸ್ಮಾತ್ ಯಾರಾದ್ರೂ ಕಾರನ್ನ ಲಪಟಾಯಿಸಿದ್ರೆ ಏನ್ ಗತಿ ಎಂಬ ಆತಂಕದಲ್ಲಿ ಪಾರ್ಕಿಂಗ್ ಗೆ ಓಡೋಡಿ ಬಂದಳು. ಅವಳು ಅಂದುಕೊಂಡ ಹಾಗೇ ಆಗಿತ್ತು. ಅಲ್ಲಿ ಅವಳ ಕಾರ್ ಇರಲಿಲ್ಲ.
ತಕ್ಷಣ ಪೋಲೀಸರಿಗೆ ಕಾಲ್ ಮಾಡಿ ಕರೆಸಿ, ಕಾರ್ ನ ಕಲರ್, ನಂಬರ್ ಮತ್ತಿತರ ವಿವರಕೊಟ್ಟು ದೂರು ಕೊಟ್ಟಳು. ಪೋಲೀಸರು ಕಾರು ಹುಡುಕಲು ಹೊರಟರು. ಒಬ್ಬಳೇ ನಿಂತಿದ್ದ ಶ್ರೀಮತಿ ಸ್ವಲ್ಪ ಹೊತ್ತಿನ ನಂತರ, ಬೈಸಿಕೊಂಡರೂ ಪರವಾಗಿಲ್ಲ, ಯಾವುದಕ್ಕೂ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸೋದು ಒಳ್ಳೇದು ಎಂದು ಸೂರಿಗೆ ಕಾಲ್ ಮಾಡಿ ಮೆಲ್ಲನೆ ಅಳುಕಿನಿಂದಲೇ ಹೇಳಿದಳು ‘ರೀ, ನನ್ನ ಕಾರ್ ಕೀ ಕಾರಲ್ಲೇ ಬಿಟ್ಟಿದ್ದೆ. ಈಗ ಕಾರು ಕಳವಾಗಿದೆ. ಬಯ್ ಬೇಡಿ, ನಾನಿಲ್ಲಿ ಶಾಪಿಂಗ್ ಮಾಲ್ ಬಳಿ ಒಬ್ಬಳೇ ಇದೀನಿ, ಬರ್ತೀರಾ ಪ್ಲೀಸ್’ ಆ ಕಡೆಯಿಂದ ಗಂಡ ಸೂರಿ ರೇಗಿದ.’ಅಯ್ಯೋ, ನಿನ್ನ, ಲೇ, ಇವತ್ತು ನೀನೆಲ್ಲೇ ಡ್ರೈವ್ ಮಾಡ್ಕೊಂಡ್ ಹೋಗಿದ್ದೆ?, ಬೆಳಿಗ್ಗೆ ನಾನೇ ನಿನ್ನ ಕಾರಲ್ಲಿ ಕರ್ಕೊಂಡು ಹೋಗಿ ಶಾಪಿಂಗ್ ಮಾಲ್ ಹತ್ರ ಬಿಟ್ ಬರಲಿಲ್ವಾ? ಈಗ ಈ ಪೋಲೀಸ್ನೋರಿಗೆ ನಿನ್ನ ಕಾರನ್ನ ನಾನು ಕದ್ದಿಲ್ಲ ಎಂದ ಮನವರಿಕೆ ಮಾಡಿ ಆಮೇಲೆ ಬರ್ತೀನಿ ಇರು !’
***
ಮದುವೆ
ಸೂರಿ: ಮಹೇಶ, ಆ ನಳಿನಿಯನ್ನು ಸೋಮಪ್ಪ ಮತ್ತು ಭೀಮಪ್ಪ ಮದುವೆಯಾಗಲು ಪ್ರಯತ್ನಿಸುತ್ತಿದ್ದರಲ್ಲ, ಅವರಲ್ಲಿ ಯಾರಿಗೆ ಅದೃಷ್ಟ ಒಲಿಯಿತು?
ಮಹೇಶ್: ಸೋಮಪ್ಪನಿಗೆ.
ಸೂರಿ: ಆಕೆಯನ್ನು ಮದುವೆ ಮಾಡಿಕೊಂಡನೆ?
ಮಹೇಶ್: ಇಲ್ಲ, ಆಕೆಯನ್ನು ಅವನು ಮದುವೆ ಮಾಡಿಕೊಳ್ಳಲಿಲ್ಲ.!
***
ನೋವು
ಶ್ರೀಮತಿ: ಲಲಿತಾ, ನಮ್ಮ ಗೆಳತಿ ನಿರ್ಮಲಾಳ ಬಗ್ಗೆ ಕೆಲವು ವಿಷಯಗಳನ್ನ ಹೇಳುವುದಿತ್ತು. ಆದರೆ ನನಗೆ ಬೇರೆ ಗಂಟಲು ನೋವು.
ಲಲಿತ: ಒಳಗೆ ಬಾ ಶ್ರೀಮತಿ, ಸ್ವಲ್ಪ ಕಷಾಯ ಮಾಡಿಕೊಡುತ್ತೇನೆ. ಅದನ್ನು ಕುಡಿದ ಮೇಲೆ ಆದಷ್ಟು ಬೇಗ ಗಂಟಲು ಸರಿಹೋಗುತ್ತೆ. ಆಮೇಲೆ ವಿಷಯ ಹೇಳಬಹುದು.
***
ನೂಕುನುಗ್ಗಲು
ಗೆಳೆಯ ಮೈಕಲ್ ಬಳಿ ಕೇಳಿದ ‘ರಷ್ಯದಿಂದ ಹೊರಗೆ ವಲಸೆ ಹೋಗಲು ಇಚ್ಛಿಸುವವರಿಗಾಗಿ ಗಡಿಯ ಬಾಗಿಲು ತೆರೆದರು ಎಂದಿಟ್ಟುಕೋ. ಆಗ ನೀನೇನು ಮಾಡುತ್ತೀಯಾ?’ ಮೈಕೆಲ್, ‘ನಾನಾ? ಗಡಿಯ ಬಳಿಯಿರುವ ದೊಡ್ದ ಮರವೇರಿ ಕುಳಿತುಕೊಳ್ಳುತ್ತೇನೆ’ ಎಂದ. ಗೆಳೆಯನಿಗೆ ಆಶ್ಚರ್ಯ. ‘ಅಲ್ಲಯ್ಯ, ವಲಸೆ ಹೋಗಲು ಗಡಿ ಬಾಗಿಲು ತೆರೆದರೆ ನೀನು ಮರವೇರಿ ಯಾಕೆ ಕುಳಿತುಕೊಳ್ಳಬೇಕು?’ ಪ್ರಶ್ನಿಸಿದ.
“ಯಾಕೆ ಅಂದರೆ, ನೂಕು ನುಗ್ಗಲಿನಲ್ಲಿ ನಾನು ಜನರ ಕಾಲಿನ ತುಳಿತಕ್ಕೆ ಸಿಕ್ಕಿ ಸಾಯಬಾರದಲ್ವವೇ?’ ಎಂದ ಮೈಕಲ್.
***
ರಷ್ಯಾದ ಕೊಡುಗೆ
ಉಕ್ರೇನ್ ಪ್ರಜೆಯೊಬ್ಬ ಒಂದು ಜೀವಂತ ಮೊಲವನ್ನು ಹೆಂಡತಿಯ ಕೈಗೆ ಕೊಟ್ಟು ಹುರಿಯಲು ಹೇಳಿದ. ‘ಗ್ಯಾಸ್ ಎಲ್ಲ ಖಾಲಿಯಾಗಿದೆ. ಪೇಟೆಯಲ್ಲಿ ಸಿಗುವುದಿಲ್ಲ.’ ಎಂದಳು ಹೆಂಡತಿ.
‘ಹೋಗಲಿ, ಮೈಕ್ರೋವೇವ್ ಓವನ್ ಇದೆಯಲ್ಲ, ಬೇಯಿಸು’ ಎಂದ.
‘ವಿದ್ಯುತ್ ಪೂರೈಕೆ ನಿಂತು ಹೋಗಿ ತಿಂಗಳುಗಳೇ ಕಳೆದಿವೆಯಲ್ಲಾ?’ ಹೆಂಡತಿ ಕೈ ತಿರುವಿದಳು.
‘ಹಾಗಿದ್ದರೆ ಕಟ್ಟಿಗೆ ಒಲೆಯಲ್ಲಿ ಸುಡು’ ಗಂಡ ಹೀಗೆಂದಾಗ ಹೆಂಡತಿ ಕೋಪದಿಂದ ಕಿರುಚಿದಳು.
‘ಮರಗಳೆಲ್ಲಾ ಯುದ್ಧದಲ್ಲಿ ಸರ್ವನಾಶವಾಗಿವೆ. ಕಟ್ಟಿಗೆ ಬೇಕು ಎಂದರೆ ಎಲ್ಲಿದೆ?’
ಗಂಡ ಕೋಪದಿಂದ ಮೊಲವನ್ನು ಕಿಟಕಿಯಿಂದ ಹೊರಗೆ ಎಸೆದು ಬಿಟ್ಟ. ಮೊಲ ಸಾವರಿಸಿಕೊಂಡು ಎದ್ದು ಓಡುತ್ತ ಹೇಳಿತು.’ ನನ್ನ ಬದುಕಿಗಾಗಿ ಇಷ್ಟೊಂದು ದೊಡ್ಡ ಕೊಡುಗೆಯನ್ನು ನೀಡಿರುವ ರಷ್ಯಾಕ್ಕೆ ಧನ್ಯವಾದ ಹೇಳುತ್ತೇನೆ !’
***
ಬದಲಾಗದವರು
ಭಗ್ನ ಪ್ರೇಮಿಯೊಬ್ಬ ಗೆಳೆಯನ ಬಳಿ, ‘ಒಬ್ಬ ಹುಡುಗಿ ಮೊದಲನೆಯ ದಿನ ಮುಖರ್ಜಿಯೊಂದಿಗೆ ಕುಳಿತಿದ್ದಳು. ಎರಡನೆಯ ದಿನ ಚಟರ್ಜಿಯೊಡನೆ ಹೋಗುತ್ತಿದ್ದಳು. ಮೂರನೆಯ ದಿನ ಸಿನೆಮಾ ಮಂದಿರದಲ್ಲಿ ಬ್ಯಾನರ್ಜಿಯೊಂದಿಗೆ ಚಕ್ಕಂದವಾಡುತ್ತಿದ್ದಳು. ಅಂದರೆ ಇದು ಯಾವ ಸ್ವಭಾವವನ್ನು ಸೂಚಿಸುತ್ತದೆ?’ ಕೇಳಿದ.
‘ತುಂಬ ಸಿಂಪಲ್ ಕಣೋ, ಹುಡುಗರು ಬದಲಾಗುತ್ತಾರೆ. ಆದರೆ ಹುಡುಗಿಯರು ಯಾವತ್ತಿಗೂ ಬದಲಾಗುವುದಿಲ್ಲ ಎಂದು ಇದರಿಂದ ತಿಳಿಯುತ್ತದೆ.’ ಎಂದ ಗೆಳೆಯ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ