‘ಸಂಪದ’ ನಗೆಬುಗ್ಗೆ - ಭಾಗ ೧೦೨
ಪರಿಹಾರ
ಮಹಿಳೆಯೊಬ್ಬಳು ಡಾಕ್ಟರ್ ಸೂರಿ ಹತ್ತಿರ ಬಂದಳು. ನೋಡಿದರೆ ಅವಳನ್ನು ಯಾರೂ ಹಿಗ್ಗಾಮುಗ್ಗ ಥಳಿಸಿದಂತೆ ಕಾಣುತ್ತಿತ್ತು. ‘ಏನಾಯ್ತು?’ ಅಂತ ಸೂರಿ ಕೇಳಿದ್ದಕ್ಕೆ ಆಕೆ ಹೇಳಿದಳು ‘ಡಾಕ್ಟ್ರೇ ನನ್ನ ಗಂಡ ಪ್ರತಿ ದಿನ ಕುಡಿದು ಬಂದಾಗ ನನ್ನ ಹಿಗ್ಗಾಮುಗ್ಗ ಹೊಡಿತಾನೆ, ನನಗಂತೂ ಅವನ ಹಿಂಸೆ ತಡೆಯೋಕಾಗಲ್ಲ, ಇದಕ್ಕೆ ಏನಾದರೂ ಪರಿಹಾರ ಸೂಚಿಸಿ’. ಸೂರಿ ಕೊಂಚ ಯೋಚಿಸಿ ಹೇಳಿದ. ‘ಒಂದ್ ಕೆಲ್ಸ ಮಾಡಿ, ಇನ್ಮೇಲೆ ನಿಮ್ ಗಂಡ ಕುಡಿದು ಮನೆಗೆ ಬಂದ ಕೂಡಲೇ ನೀವು ಒಂದು ಲೋಟ ನೀರನ್ನು ಕುಡಿಯಿರಿ. ಆದರೆ ನೀರನ್ನು ನುಂಗದೆ ಬಾಯಲ್ಲೇ ಇಟ್ಕೊಂಡಿರಿ. ಗಂಡ ಹಾಸಿಗೆ ಮೇಲೆ ಮಲಗಿ ನಿದ್ರಿಸುತ್ತಿದ್ದಾನೆ ಅಂತ ಗ್ಯಾರಂಟಿ ಆದ ಮೇಲೆ ನೀರನ್ನು ನುಂಗಿ’. ‘ಸರಿ’ ಅಂತ ಮಹಿಳೆ ಹೊರಟುಹೋದಳು. ವಾರದ ನಂತರ ಮತ್ತೆ ಬಂದ ಅವಳು ‘ಡಾಕ್ಟರೇ ಎಂಥ ಅದ್ಭುತ ಐಡಿಯಾ ಕೊಟ್ರಿ. ನನ್ನ ಗಂಡ ಕುಡ್ಕೊಂಡು ಮನೆಗೆ ಬಂದಾಗಲೆಲ್ಲ ಒಂದು ಲೋಟ ನೀರನ್ನು ಅವನು ಮಲಗೋವರೆಗೂ ಬಾಯಲ್ಲಿ ಇಟ್ಕೊತಿದ್ದೀನಿ. ಈಗ ಅವನು ನನ್ನ ಟಚ್ ಕೂಡ ಮಾಡ್ತಿಲ್ಲ ಗೊತ್ತಾ?’ ಅಂತ ಸೂರಿಯನ್ನು ಹೊಗಳಿದಳು. ಅದಕ್ಕೆ ಸೂರಿ ಹೇಳಿದ ‘ನೋಡಿದ್ರಾ? ನೀವು ಬಾಯಿ ಮುಚ್ಚಿಕೊಂಡಿರೋದ್ರಿಂದ ಎಷ್ಟು ಹೆಲ್ಪ್ ಆಗುತ್ತೆ !’
***
ಕಳ್ಳ - ಪೋಲೀಸ್
ಕಳ್ಳ: ಸಾರ್, ನಾನು ಬೀಡಿ ಸೇದಬೇಕು. ಅಂಗಡಿಗೆ ಹೋಗಿ ಬೀಡಿ ತೆಗೆದುಕೊಂಡು ಬರುತ್ತೇನೆ. ನನ್ನ ಕೈಗೆ ಹಾಕಿರುವ ಕೋಳ ಬಿಚ್ಚಿ.
ಪೋಲೀಸ್: ವಾರೆ ವಾ, ಕೋಳ ಬಿಚ್ಚಿಸಿಕೊಂಡು ತಪ್ಪಿಸಿಕೊಂಡು ಹೋಗುವ ಉದ್ದೇಶನಾ… ಏನೂ ಬೇಡ ಇಲ್ಲೇ ಇರು, ನಾನೇ ಅಂಗಡಿಗೆ ಹೋಗಿ ಬೀಡಿ ತರುತ್ತೇನೆ.
ಕಳ್ಳ: ಹಾಗಾದರೆ, ನೀವೇ ನಿಮ್ಮ ಕೈಗೆ ಹಾಕಿರುವ ಕೋಳ ಬಿಚ್ಚಿಕೊಂಡು ಹೋಗಿ ಬೇಗ ಬನ್ನಿ. ನಾನು ಇಲ್ಲೇ ಇರುತ್ತೇನೆ.
ಪೋಲೀಸ್ ಆ ಕಡೆ ಹೋಗುತ್ತಲೇ ಕಳ್ಳ ಅಲ್ಲಿಂದ ಎಸ್ಕೇಪ್ !
***
ಪುಸ್ತಕ
ಸೂರಿ: ಸರ್, ‘ದಾರಿ ತಪ್ಪಿದ ಮಗ’ ಕಾದಂಬರಿ ಓದುತ್ತಾ ದಾರಿ ತಪ್ಪಿ ಎಲ್ಲಿಗೆ ಬಂದಿದ್ದೇನೆಂದು ಗೊತ್ತಿಲ್ಲ. ಮನೆಗೆ ಹಿಂದಿರುಗುವುದೂ ಹೇಗೆಂದು ಗೊತ್ತಿಲ್ಲ.
ಅಪರಿಚಿತ: ತಗೋ ಈ ಪುಸ್ತಕ. ಇದರಿಂದ ನೀನು ಮನೆಗೆ ಹೋಗ ಬಹುದು.
ಸೂರಿ: ಯಾವುದು ಆ ಪುಸ್ತಕ, ಸ್ಥಳ ನಕ್ಷೆಯಾ?
ಅಪರಿಚಿತ: ಅಲ್ಲಲ್ಲಾ, ಅದು ‘ಮರಳಿ ಮನೆಗೆ’ ಎನ್ನುವ ಕಾದಂಬರಿ. ಓದುತ್ತಾ ಓದುತ್ತಾ ಮನೆಗೆ ತಲುಪುವಿರಿ !
***
ಜಟಕಾ ಬಂಡಿ
ಟೀಚರ್: ಹೇ ಸೂರಿ, ಮನುಷ್ಯನ ಬದುಕನ್ನು ಜಟಕಾ ಬಂಡಿಗೆ ಏಕೆ ಹೋಲಿಸ್ತಾರೆ? ಕಾರಿಗೆ ಏಕೆ ಹೋಲಿಸುವುದಿಲ್ಲ?
ಸೂರಿ: ಏಕೆಂದರೆ ಜಟಕಾ ಬಂಡಿಯು ನಿಧಾನವಾಗಿ ಚಲಿಸಿ ಸಾವಿನ ಹತ್ತಿರಕ್ಕೆ ತಡವಾಗಿ ಕರೆದುಕೊಂಡು ಹೋಗುತ್ತದೆ. ಆದರೆ, ಕಾರು ವೇಗವಾಗಿ ಚಲಿಸಿ, ಸಾವಿನ ಹತ್ತಿರಕ್ಕೆ ಬೇಗ ತಲುಪಿಸುತ್ತದೆ.
***
ಅರಬ್ಬರ ದಾಳಿ
ಅರಬ್ ಪೋಷಕರ ಮಗು ನ್ಯೂಯಾರ್ಕಿನ ಶಾಲೆಗೆ ದಾಖಲಾಯಿತು. ಟೀಚರ್, ‘ನಿನ್ನ ಹೆಸರೇನು?’ ಕೇಳಿದರು. ಅವನು ‘ಮೊಹಮ್ಮದ್’ ಎಂದ. ‘ಈ ಹೆಸರು ಚೆನ್ನಾಗಿಲ್ಲ, ಇನ್ನು ಮುಂದೆ ನಿನ್ನ ಹೆಸರು ಜಾನ್’ಎಂದರು ಟೀಚರ್. ಹುಡುಗ ಮನೆಗೆ ಬಂದ. ತಾಯಿ, ‘ಮಹಮ್ಮದ್’ ಎಂದು ಕರೆದಳು. ‘ಇಲ್ಲ ನನ್ನ ಹೆಸರು ಜಾನ್’ ಎಂದ. ಕುಪಿತಳಾಗಿ ತಾಯಿ ಅವನ ಬಲಗೆನ್ನೆಗೆ ಒಂದೇಟು ಬಾರಿಸಿದಳು. ತಂದೆ ಕರೆದಾಗಲೂ ಹುಡುಗ ಹಾಗೆಯೇ ಹೇಳಿದ. ತಂದೆ ಕೋಪದಿಂದ ಮಗನ ಎಡಗೆನ್ನೆಗೆ ಹೊಡೆದ.
ಮರುದಿನ ಹುಡುಗ ಕೆನ್ನೆ ಊದಿಸಿಕೊಂಡು ಶಾಲೆಗೆ ಹೋದ. ‘ಮುಖಕ್ಕೆ ಏನಾಗಿದೆ?’ ಕೇಳಿದರು ಟೀಚರ್. ‘ಮೇಡಂ, ನಾನು ಅಮೇರಿಕನ್ ಆಗಿ ಬದಲಾದ ನಾಲ್ಕೇ ತಾಸುಗಳಲ್ಲಿ ಇಬ್ಬರು ಅರಬ್ಬರು ನನ್ನ ಮೇಲೆ ದಾಳಿ ಮಾಡಿದರು’ ಎಂದ ಅವನು.
***
ರಕ್ತದಾನ
ಒಬ್ಬ ಅರಬ್ಬಿಗೆ ಶಸ್ತ್ರಚಿಕಿತ್ಸೆ ಮಾಡಲು ವಿಶೇಷ ವರ್ಗದ ರಕ್ತ ಬೇಕಾಗಿತ್ತು. ಅದನ್ನು ಒಬ್ಬ ಸ್ಕಾಟಿಷ್ ವ್ಯಕ್ತಿ ನೀಡಿದ. ಪ್ರತಿಯಾಗಿ ಅರಬ್ಬಿ ಅವನಿಗೆ ಮೋಟಾರ್ ಸೈಕಲ್, ವಜ್ರಗಳು, ಚಿನ್ನದ ನಾಣ್ಯಗಳ ಉಡುಗೊರೆ ನೀಡಿದ.
ಎರಡನೇ ಸಲ ಚಿಕಿತ್ಸೆ ಬೇಕಾದಾಗ ಅದೇ ಸ್ಕಾಟಿಷ್ ರಕ್ತದಾನ ಮಾಡಿದ. ಅರಬ್ಬಿ ಅವನಿಗೆ ಚಾಕಲೇಟ್ ಪ್ಯಾಕುಗಳನ್ನು ಕಳುಹಿಸಿದ. ಮೂರನೇ ಸಲವೂ ಅವನಿಂದ ರಕ್ತ ಪಡೆದಾಗ ಕೇವಲ ಧನ್ಯವಾದ ತಿಳಿಸುವ ಪತ್ರ ಕಳಿಸಿಕೊಟ್ಟ.
ಸ್ಕಾಟಿಷ್ ವ್ಯಕ್ತಿಗೆ ಅಸಮಧಾನವಾಯಿತು. ‘ಮೊದಲ ಸಲ ನೀಡಿದ ರಕ್ತಕ್ಕೆ ಪ್ರತಿಯಾಗಿ ಬೆಲೆಬಾಳುವ ಉಡುಗೊರೆ ನೀಡಿದಿರಿ. ಎರಡನೆಯ ಸಲ ಚಾಕಲೇಟ್, ಮೂರನೆಯ ಸಲ ಬರೇ ಪತ್ರ । ಏನಿದು?’ ಕೇಳಿದ.
‘ಹೌದು’ ಅರಬ್ಬಿ ಮುಗುಳ್ನಗುತ್ತ ಹೇಳಿದ. ‘ಮೊದಲ ಸಲ ನನ್ನ ಮೈಯಲ್ಲಿ ಸ್ವಲ್ಪವಾದರೂ ಅರಬ್ಬಿ ರಕ್ತ ಉಳಿದಿತ್ತು. ಆದರೆ ಈಗ ಪೂರ್ಣವಾಗಿ ಸ್ಕಾಟಿಷ್ ರಕ್ತವೇ ಹರಿಯುತ್ತಿದೆ.!’
***
(ಸಂಗ್ರಹ)