‘ಸಂಪದ’ ನಗೆಬುಗ್ಗೆ - ಭಾಗ ೧೦೩
ಮನೆಕೆಲಸ
ಸೂರಿ ಒಂದು ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೊರಗೆ ಅಂಗಳದಲ್ಲಿ ಕಸದ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸಿಲನ್ನೂ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿಯಿಡುತ್ತಿದ್ದಂತೆ ಸೂರಿಗೆ ಮಕ್ಕಳು ಆಡುವ ಸದ್ದು ಕೇಳಿಸಿ ಆ ಕಡೆ ತಿರುಗಿ ನೋಡಿದ. ಮಕ್ಕಳು ಮನೆಯ ಸಾಮಾನುಗಳನ್ನೆಲ್ಲಾ ಎಲ್ಲೆಂದ್ರಲ್ಲಿ ಹರಡಿ ರಾಡಿ ಮಾಡಿಟ್ಟಿದ್ದರು. ಮೊದಲು ನೀರು ಕುಡಿಯೋಣ ಅಂತ ಅಡುಗೆ ಮನೆಗೆ ಹೋದ ಸೂರಿಗೆ ಅಲ್ಲೂ ಶಾಕ್ ಕಾದಿತ್ತು. ಬೆಳಿಗ್ಗೆ ಮಾಡಿದ ತಿಂಡಿ ಪಾತ್ರೆಗಳು, ತಿಂದ ಪ್ಲೇಟ್, ಕಾಫಿ ಗ್ಲಾಸ್ ಎಲ್ಲವೂ ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಸೂರಿಗೆ ಒಂದು ಕ್ಷಣ ಗಾಬರಿ ಆಯ್ತು. ಬೆಡ್ ರೂಮಿಗೆ ಹೋಗಿ ನೋಡಿದರೆ ಅಲ್ಲಿ ಶ್ರೀಮತಿ ಇರಲಿಲ್ಲ. ಅದರ ಬದಲಾಗಿ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಬಟ್ಟೆಗಳು ಬಿದ್ದಿದ್ದವು. ಹಾಸಿಗೆಯ ಮೇಲಿನ ದಿಂಬು, ಬೆಡ್ ಶೀಟ್ ಗಳು ಅಗಸರ ಅಂಗಡಿಯನ್ನು ನೆನಪಿಸುತ್ತಿದ್ದವು. ಹಾಲಿನಲ್ಲಿ ಹಾಕಿದ ಟಿವಿ ಹಾಗೇ ಇತ್ತು. ಯಾರೂ ನೋಡುತ್ತಿರಲಿಲ್ಲ. ದೇವರ ಮನೆಯ ದೀಪ ಹಚ್ಚಿರಲಿಲ್ಲ. ಬಚ್ಚಲು ಮನೆಯ ನಲ್ಲಿಯಿಂದ ನೀರು ಸೋರಿ ಹೋಗುತ್ತಿತ್ತು. ಆಫ್ ಮಾಡುವವರೇ ಇರಲಿಲ್ಲ. ಇದನ್ನೆಲ್ಲಾ ನೋಡಿದ ಸೂರಿಗೆ ಪಿತ್ತ ನೆತ್ತಿಗೇರಿತು. ಮನೆಯನ್ನು ಹೀಗೆ ಅಧ್ವಾನ ಮಾಡಿ ಶ್ರೀಮತಿ ಎಲ್ಲಿಗೆ ಹೋದಳು ಎಂದು ಹುಡುಕುತ್ತಾ ಹೊರಟ. ಆಗ ಹೆಂಡತಿ ಲಿವಿಂಗ್ ರೂಮ್ ನಲ್ಲಿ ಇದ್ದಾಳೆ ಎಂದು ಗೊತ್ತಾಯಿತು. ಅಲ್ಲಿ ಹೋಗಿ ನೋಡಿದರೆ ಶ್ರೀಮತಿ ಯಾವುದೋ ಹಳೆಯ ನೈಟಿ ಹಾಕಿಕೊಂಡು ಮ್ಯಾಗಜಿನ್ ಓದುತ್ತಾ ಹಾಯಾಗಿ ಅಡ್ಡಾದಿಡ್ಡಿಯಾಗಿ ಮಲಗಿದ್ದಳು. ಸೂರಿಗೆ ಸಿಟ್ಟು ಇನ್ನಷ್ಟು ಜಾಸ್ತಿಯಾಗಿ, ‘ಏನಿದು, ಮನೆ ಹೀಗಿದೆ, ಏನಾಗಿದೆ ನಿಂಗೆ? ‘ ಅಂತ ಜೋರು ದನಿಯಲ್ಲಿ ಅವಳನ್ನು ಕೇಳಿದ. ಅದಕ್ಕೆ ಶ್ರೀಮತಿ ಶಾಂತವಾಗಿ, ‘ಪ್ರತಿದಿನ ನೀನು ಆಫೀಸಿನಿಂದ ಮನೆಗೆ ಬಂದಾಗ, ನಂಗೆ ಆಫೀಸಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಎಷ್ಟು ಕೆಲಸ ಇರುತ್ತೆ ಗೊತ್ತಾ? ಎಷ್ಟು ಸುಸ್ತಾಗಿರ್ತೀನಿ, ನೀನೇನು ಇಡೀ ದಿನ ಮನೆಯಲ್ಲಿ ಕಡಿದು ಕಿತ್ತಾಕುವಂಥ ಕೆಲಸ ಮಾಡ್ತೀಯಾ? ಅಂತ ಕೇಳ್ತೀಯ ಅಲ್ವಾ?’ ಅಂತ ಕೇಳಿದಳು. ಅದಕ್ಕೆ ಸೂರಿ, ‘ಹೌದು ಕೇಳ್ತೀನಿ ಅದಕ್ಕೇನಿಗ?’ ಅಂದ. ಅದಕ್ಕೆ ಶ್ರೀಮತಿ ಹೇಳಿದಳು, ‘ಇವತ್ತು ಮನೇಲಿದ್ಕೊಂಡು ನಾನು ಏನೂ ಕಡಿದು ಕಿತ್ತಾಕಲಿಲ್ಲ’.
***
ಆರ್ಡರ್
ಸೂರಿ ಮತ್ತು ಆತನ ಪ್ರಿಯತಮೆ ಹೋಟೇಲಿಗೆ ಬಂದು ಕುಳಿತಿರುತ್ತಾರೆ. ವೈಟರ್ ಅವರ ಬಳಿ ಬಂದು ‘ಏನು ಬೇಕು?’ ಎಂದು ಕೇಳುತ್ತಾನೆ. ಆಗ ಸೂರಿಗೆ ಪ್ರಿಯತಮೆ ಹೀಗೆ ಹೇಳುತ್ತಾಳೆ ‘ನನಗೊಂದು ಕಾಫಿ ಹೇಳಿ. ನಿಮಗೆ ಆಂಬುಲೆನ್ಸ್ ಬುಕ್ ಮಾಡಲು ಹೇಳಿ. ಯಾಕಂದ್ರೆ ನಿಮ್ಮ ಹಿಂದಿನ ಸೀಟಿನಲ್ಲಿ ನಿಮ್ಮ ಶ್ರೀಮತಿ ಟೀ ಕುಡಿತಾ ಇದ್ದಾಳೆ !’
***
ಓಹ್, ದುರ್ವಿಧಿಯೇ…!
ಒಂದು ಫೋನ್ ಸಂಭಾಷಣೆ…
ಹಲೋ ಸರ್, ನಿಮಗೆ ಎಷ್ಟು ವಯಸ್ಸಾಗಿದೆ ಈಗ?
೫೫
ನಿಮ್ಮ ಹೈಟು ಮತ್ತು ವೈಟು ಎಷ್ಟು?
೭೦ ಕಿಲೋ ಮತ್ತು ೧೭೦ ಸೆಂ ಮೀ.
ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿರುವಿರಾ?
ಹೌದು, ಬೂಸ್ಟರ್ ಡೋಸ್ ಕೂಡಾ ಹಾಕಿಸಿಕೊಂಡಿದ್ದೇನೆ.
ಬಿ ಪಿ, ಶುಗರ್, ಹಾರ್ಟ್ ಪ್ಲಾಬ್ಲೆಂ ಏನಾದರೂ ಇದೆಯಾ?
ಇಲ್ಲ.
ಬೇರೆ ಏನಾದರೂ ಮೆಡಿಕಲ್ ಇಶ್ಯೂಸ್ ಇದೆಯಾ?
ಇಲ್ಲ.
ನೀವು ಯಾವಾಗ ಪೂರ್ತಿ ಮೆಡಿಕಲ್ ಚೆಕ್ ಅಪ್ ಮಾಡಿಸಿಕೊಂಡಿದ್ದು?
ಹೋದ ತಿಂಗಳ ಕೊನೆಯಲ್ಲಿ.
ಏನು ಹೇಳಿದ್ದಾರೆ ರಿಪೋರ್ಟ್ ನಲ್ಲಿ?
ಏನೂ ತೊಂದರೆ ಇಲ್ಲ. ಬೇಕಿದ್ರೆ ಬಾಹುಬಲಿ ತರಾ ದೊಡ್ಡ ಕಲ್ಲನ್ನು ಹೊತ್ತು ಎರಡು ಕಿಮೀ ನಡೆಯಬಲ್ಲೆ.
ಏನಾದರೂ ಅಲರ್ಜಿ ಇದೆಯಾ?
ಇಲ್ಲ, ಅದು ಸರಿ, ನಿಮಗೆ ಏನು ಬೇಕು? ನೀವು ಯಾವ ಆಸ್ಪತ್ರೆ ಅಥವಾ ಹೆಲ್ತ್ ಇಶ್ಯೂರೆನ್ಸ್ ಕಂಪೆನಿಯಿಂದ ಮಾತನಾಡುತ್ತಿರುವುದು?
ನಾವು ಅದು ಯಾವುದೂ ಅಲ್ಲ. ED ಕಚೇರಿಯ ಆಫೀಸರ್ ಮಾತನಾಡುತ್ತಿರುವುದು. ನಿಮ್ಮ ಮನೆಗೆ ರೈಡ್ ಮಾಡಲು ಬಂದಿದ್ದೇವೆ. ಒಟ್ಟಿನಲ್ಲಿ ನಿಮ್ಮ ಪೂರ್ತಿಯಾದ ಮೆಡಿಕಲ್ ಚೆಕ್ ಅಪ್ ಮಾಡಿದಂತಾಯ್ತು ! ಸ್ವಲ್ಪ ಬೇಗ ಬಂದು ನಿಮ್ಮ ಮನೆಯ ಬಾಗಿಲನ್ನು ತೆರೆಯುತ್ತೀರಾ…?
ಓಹ್, ಎಂಥಾ ದುರ್ವಿಧಿಯೇ ಎಂದು ಹೇಳಿ ಬಾಗಿಲತ್ತ ಮೆಲ್ಲಗೆ ಹೆಜ್ಜೆ ಹಾಕಿದರು ಆ ಮಾಜಿ ಮಂತ್ರಿ !
***
ಅಲ್ಲೂ ಕ್ಯೂ
ವೋಡ್ಕಾ ಖರೀದಿಸಲು ಹೋಗಿ ತಾಸು ಗಟ್ಟಲೆ ಕಾದು ಬರಿಗೈಯಲ್ಲಿ ಬಂದ ಕುಡುಕ ಮಿತ್ರನೊಂದಿಗೆ ‘ಕ್ಯೂ, ಕ್ಯೂ , ಕ್ಯೂ! ಬಾರ್ ಮುದೆಯೂ ಮೈಲುಗಟ್ಟಲೆ ಉದ್ದದ ಕ್ಯೂ ಇದೆ. ಈ ದುಃಸ್ಥಿತಿಗೆ ಹಿಟ್ಲರ್ ಕಾರಣ. ಕ್ಯೂ ಇಲ್ಲದೆ ತಕ್ಷಣ ವೋಡ್ಕಾ ಸಿಗುವಂತೆ ಮಾಡದವರು ಅಧಿಕಾರದಲ್ಲಿರಬಾರದು, ಕೊಂದು ಬರುತ್ತೇನೆ’ ಎಂದು ಹೇಳಿ ಪಿಸ್ತೂಲಿನೊಂದಿಗೆ ಹೊರಟುಹೋದ.
ಎಷ್ಟೋ ಹೊತ್ತಿನ ಮೇಲೆ ಕುಡುಕ ಮರಳಿ ಬಂದ. ಮಿತ್ರ ‘ಮುಗಿಸಿ ಬಂದಿಯಾ?’ ಕೇಳಿದ. ‘ಹೇಗೆ ಮುಗಿಸುವುದು? ಬಾರ್ ಮುಂದೆ ಇದ್ದುದರ ಹತ್ತು ಪಟ್ಟು ಕ್ಯೂ ಹಿಟ್ಲರ್ ಮನೆಯ ಮುಂದೆಯೇ ಇದೆ. ಎಲ್ಲರ ಕೈಯಲ್ಲೂ ಪಿಸ್ತೂಲು ಇದೆ’ ಎಂದ ಕುಡುಕ ನಿರಾಶೆಯಿಂದ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ