‘ಸಂಪದ’ ನಗೆಬುಗ್ಗೆ - ಭಾಗ ೧೦೪

‘ಸಂಪದ’ ನಗೆಬುಗ್ಗೆ - ಭಾಗ ೧೦೪

ಸ್ವಂತ ತಮ್ಮ !

ಊರಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ಇತ್ತು. ಎಲ್ಲ ಕಡೆ ಪ್ರಚಾರದ ಹವಾ. ಸೂರಿ ಕೂಡಾ ಎಲೆಕ್ಷನ್ ನಲ್ಲಿ ಬಿಸಿಯಾಗಿದ್ದ. ಒಂದು ದಿನ ಬೆಳಿಗ್ಗೆ ಹೀಗೇ ತಮ್ಮ ಪಕ್ಷದ ಕಾರ್ಯಕರ್ತರೊಡನೆ ಊರಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿಗೆ ಮಾರಿ ಬಂದ. ಅದಾಗಲೇ ಫುಲ್ ಟೈಟಾಗಿದ್ದ ಪಾರ್ಟಿ, ಸೂರಿ ಹತ್ರ ಬಂದು ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕಬೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’ ಅಂದ. ಅದನ್ನು ಕೇಳಿದ ಸೂರಿಗೆ ಕೆಂಡಾ ಮಂಡಲ ಸಿಟ್ಟು ಬಂತು. ಒಂದೇ ಸಮನೆ ಮಾರಿಯನ್ನು ಹಿಡಿದು ಹಿಗ್ಗಾಮುಗ್ಗ ಬಾರಿಸತೊಡಗಿದ. ಸರಿ ಮಾರಿ ಅಲ್ಲಿಂದ ಎಸ್ಕೇಪ್. ನಂತರ ಮಧ್ಯಾಹ್ನದ ಹೊತ್ತಿಗೆ ಮಾರಿ ಮತ್ತೆ ಸೂರಿ ಮುಂದೆ ಹಾಜರಾದ. ಈಗಲೂ ಫುಲ್ ಟೈಟು. ಈಗಲೂ ಅದೇ ಡೈಲಾಗ್. ‘ಸರ್, ನೀವು ನಮ್ ಪಾರ್ಟಿಗೇ ಓಟು ಹಾಕ್ಬೇಕು, ನಾನು ನಿಮ್ಮ ತಮ್ಮ ಇದ್ದಂಗೆ ಅಂದ್ಕಳಿ’. ಮತ್ತೆ ಸೂರಿ ಕಡೆಯಿಂದ ಅವನಿಗೆ ಧರ್ಮದೇಟುಗಳು ಬಿದ್ದವು. ಮತ್ತೆ ಮಾರಿ ಎಸ್ಕೇಪ್.

ಸಂಜೆ ಇನ್ನೇನು ಕತ್ತಲಾಗಿ ಸ್ವಲ್ಪ ಹೊತ್ತು ಕಳೆದು ಪ್ರಚಾರ ಮುಗಿಯುವ ಹಂತಕ್ಕೆ ಬಂದಿತ್ತು. ಸೂರಿ ಬಳಿಗೆ ಮತ್ತೆ ಮಾರಿ ಅದಾಗಲೇ ಸಾಕಷ್ಟು ರಿಪೀಟ್ ಆರ್ಡರ್ ಮಾಡಿ ಇನ್ನಷ್ಟು ಟೈಟ್ ಆಗಿ, ಸೇಮ್ ಡೈಲಾಗ್ ರಿಪೀಟ್ ಮಾಡಿದ. ‘ಸರ್, ನೀವು ನಮ್ ಪಾರ್ಟಿಗೇ ಓಟ್ ಹಾಕ್ಬೇಕು. ನಾನು ನಿಮ್ ತಮ್ಮ ಇದ್ದಂಗೆ ಅಂದ್ಕಳಿ’. ಸೂರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇನ್ನೇನು ಹೊಡೆಯಲು ಕೈ ಎತ್ತಬೇಕು. ಅಷ್ಟರಲ್ಲಿ ಸೂರಿ ಪಕ್ಕದಲ್ಲಿದ್ದವರು ಕೇಳಿದರು. ‘ಅಲ್ರೀ ಸೂರಿ, ಪಾಪ ಅವನಿಗೆ ಯಾಕ್ರೀ ಹೊಡಿತೀರಾ? ಏನೋ ವೋಟ್ ಕೇಳ್ತಾನೆ, ಹಾಕಂಗಿದ್ರೆ ಹಾಕಿ, ಇಲ್ಲಾಂದ್ರೆ ಬಿಟ್ಟಾಕಿ. ಪಾಪ ಅದಕ್ಯಾಕೆ ಅವನಿಗೆ ಧರ್ಮದೇಟು ಹಾಕ್ತೀರಿ? ಪಾಪ, ನಾನು ನಿಮ್ಮ ತಮ್ಮ ಇದ್ದಂಗೆ ಅಂತ ತಿಳ್ಕಳಿ ಅಂತ ಬೇರೆ ಅಂತಿದಾನೆ. ಅದಕ್ಕಾದರೂ ಕರುಣೆ ಬೇಡ್ವಾ?’ ಅದಕ್ಕೆ ಸೂರಿ ಹೇಳಿದ, ‘ಹೊಡಿತಾ ಇರೋದು ಅದಕ್ಕೇನೇ !, ವೋಟ್ ಕೇಳಿದ್ದಕ್ಕೆ ಬೇಜಾರಿಲ್ಲ, ಅದ್ ಬಿಟ್ಟು ತಮ್ಮ ಇದ್ದಂಗೇ ಅಂತಾನೇ. ತಮ್ಮ ಇದ್ದಂಗೆ ಏನ್ ಬಂತು ರೀ, ಈ ಬಡ್ಡಿಮಗ ನನ್ ಸ್ವಂತ ತಮ್ಮನೇ’!

***

ಅಡುಗೆ

ಶ್ರೀಮತಿ (ಬೆಳದಿಂಗಳ ಬೆಳಕಿನಲ್ಲಿ): ಈ ಹಿಂದೆ ನಿಮ್ಮ ತಟ್ಟೆಯಿಂದ ನನಗೆ ಸದಾ ತಿನ್ನಿಸುತ್ತಿದ್ರಿ. ಆದರೆ ಈಗೀಗ ಅದನ್ನೆಲ್ಲ ಬಿಟ್ಟಿದ್ದೀರಿ ಯಾಕೆ?

ಸೂರಿ: ಇತ್ತೀಚೆಗೆ ನೀನು ತುಂಬಾ ಚೆನ್ನಾಗಿ, ರುಚಿರುಚಿಯಾದ ಅಡುಗೆ ಮಾಡುತ್ತಿದ್ದೀಯಾ ಅದಕ್ಕೆ !

***

ಸಾಲ

ಶಿಕ್ಷಕ: ಸೂರಿ, ನಾನು ನಿಮ್ಮ ತಂದೆಗೆ ೫೦೦ ರೂಪಾಯಿ ಸಾಲ ಕೊಟ್ಟಿದ್ದೆ. ಸ್ವಲ್ಪ ದಿನದ ಬಳಿಕ ಅವರು ಅದನ್ನು ನನಗೆ ಹಿಂದಿರುಗಿಸಿದರು. ಈಗ ಇನ್ನುಳಿದ ಬಾಕಿ ಎಷ್ಟು ಇದೆ.

ಸೂರಿ: ೫೦೦ ರೂಪಾಯಿ

ಶಿಕ್ಷಕ: ನಿನಗೆ ಲೆಕ್ಕಾನೇ ಬರಲ್ಲ.

ಸೂರಿ: ಸುಮ್ಮನಿರಿ ಸಾರ್, ನಮ್ಮ ತಂದೆ ಇದುವರೆಗೂ ಯಾರ ಸಾಲಾನೂ ವಾಪಾಸ್ ಕೊಟ್ಟಿಲ್ಲ. ಅವರು ಸಾಲ ವಾಪಾಸ್ ಕೊಟ್ಟಿರುತ್ತಿದ್ರೆ, ಮನೆ ಮುಂದೆ ದಿನವೂ ಸರದಿ ಏಕಿರುತ್ತಿತ್ತು?

***

ಕತ್ತೆ ಸವಾರಿ

ತಾಯಿ: ಯಾಕೋ ಮುಖ ಸಪ್ಪಗೆ ಮಾಡಿಕೊಂಡು ಕುಳಿತಿದ್ದೀಯಾ?

ಮರಿ ಸೂರಿ: ನನಗೆ ಕತ್ತೆಯ ಮೇಲೆ ಕುಳಿತುಕೊಂಡು ಸವಾರಿ ಮಾಡಬೇಕೂಂತ ಆಸೆ ಆಗ್ತಿದೆ.

ತಾಯಿ: ಅಷ್ಟೇ ತಾನೇ, ಪಕ್ಕದಲ್ಲೇ ಅಪ್ಪ ಇದ್ದಾರಲ್ಲ, ಅವರ ಮೇಲೆ ಕುಳಿತುಕೊಂಡು ಸವಾರಿ ಮಾಡು, ಅಷ್ಟೇ.

***

ಶತಮೂರ್ಖ

ಶ್ರೀಮತಿ: ನನ್ನನ್ನು ಮದುವೆಯಾಗಲು ಎಷ್ಟೊಂದು ಗಂಡುಗಳು ಬಂದಿದ್ದವು ಗೊತ್ತಾ?

ಸೂರಿ: ಆ ಮೂರ್ಖರ ಪೈಕಿ ಅತ್ಯಂತ ಶತಮೂರ್ಖನನ್ನೇ ಮದುವೆಯಾಗಬೇಕಿತ್ತು. ನನ್ನನ್ನೇಕೆ ಮದುವೆಯಾದೆ?

ಶ್ರೀಮತಿ: ರೀ, ನಿಮಗೆ ಹೇಗೆ ಗೊತ್ತಾಯಿತು? ನಾನು ಮಾಡಿದ್ದು ಅದನ್ನೇ.

***

ರಕ್ಷಣೆ

ಸೂರಿ ತನ್ನ ಗೆಳೆಯನೊಂದಿಗೆ, ‘ನಾನು ನಾಳೆ ಸರ್ಕಸ್ ನೋಡಲು ಹೆಂಡತಿಯೊಂದಿಗೆ ಹೋಗುತ್ತಿದ್ದೇನೆ. ನೀನು ನಿನ್ನ ಹೆಂಡತಿಯೊಂದಿಗೆ ನನ್ನೊಡನೆ ಬರುತ್ತೀಯಾ?’ ಕೇಳಿದ. ‘ಖಂಡಿತ ಬರುತ್ತೇನಯ್ಯ, ಆದರೆ ಒಂದು ಪ್ರಶ್ನೆ ನಮ್ಮಿಬ್ಬರ ಹೆಂಡತಿಯರೂ ಅಕಸ್ಮಾತ್ ಸಿಂಹದ ಬೋನಿಗೆ ಬಿದ್ದರು ಅಂದುಕೊಳ್ಳೋಣ. ಆಗ ಅವರಲ್ಲಿ ನೀನು ಮೊದಲು ಯಾರನ್ನು ರಕ್ಷಿಸುತ್ತೀಯಾ?’ ಗೆಳೆಯ ಪ್ರಶ್ನಿಸಿದ.

ಸೂರಿ ನಕ್ಕುಬಿಟ್ಟ. ‘ನಾನು ರಕ್ಷಿಸುವುದು ಸಿಂಹವನ್ನು. ಯಾಕೆಂದರೆ ಭಾರತದಲ್ಲಿ ಸಿಂಹವು ಅಳಿವಿನಂಚಿಗೆ ಬಂದುಬಿಟ್ಟಿದೆ.’ ಎಂದ.

***

ಟಿವಿ ಮತ್ತು ಕಾರ್ಪೆಟ್

ಸೂರಿ ಹುಡುಗಿಯೊಂದಿಗೆ ಹೇಳಿದ, ‘ನಾನು ಟಿವಿ ಮತ್ತು ಕಾರ್ಪೆಟ್ ನೊಡನೆ ಕೆಲಸ ಮಾಡುತ್ತಿದ್ದೇನೆ, ನೀವು? ಶ್ರೀಮತಿ ಮುಗುಳ್ನಕ್ಕಳು. ‘ನಾನೂ ಕೂಡ ಟಿವಿ ಮತ್ತು ಕಾರ್ಪೆಟ್ ಜೊತೆಗಿರುವವಳು’

ಸೂರಿ ಖುಷಿಪಟ್ಟ. ‘ಹಾಗಿದ್ದರೆ ಇಬ್ಬರದ್ದೂ ಒಂದೇ ಕಂಪೆನಿ ಎಂದಾಯಿತು. ನಾನು ಆ ಕಂಪೆನಿಯ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದೇನೆ. ತಾವು?’ ಕೇಳಿದ. ‘ನಾನಾ? ಶ್ರೀಮತಿ ಕಿಲಕಿಲ ನಕ್ಕಳು. ‘ನಾನು ಇಡೀ ದಿನ ಕಾರ್ಪೆಟ್ ಮೇಲೆ ಮಲಗಿ ಟಿವಿ ನೋಡ್ತಾ ಇರುತ್ತೇನೆ’

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ