‘ಸಂಪದ’ ನಗೆಬುಗ್ಗೆ - ಭಾಗ ೧೦೬

‘ಸಂಪದ’ ನಗೆಬುಗ್ಗೆ - ಭಾಗ ೧೦೬

ಮಚ್ಚೆ ಹುಡುಗಿ

ಸೂರಿ ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟಪಡ್ತಾ ಇರಲಿಲ್ಲ. ತುಂಬಾ ಪ್ರಯತ್ನ ಪಟ್ಟ ಮೇಲೂ ಹುಡುಗಿ ಸೂರಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಸೂರಿಗೆ ಅತಿ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಸೂರಿ ತೀರಾ ನಿರಾಸೆಗೊಳಗಾದ. ‘ಎಣ್ಣೆ ಹೊಡಿಬೇಕು ಬಾ’ ಅಂತ ಸ್ನೇಹಿತ ಗಾಂಪನನ್ನು ಕರೆದು ತನ್ನ ಮನಸ್ಸಿನ ನೋವನ್ನೆಲ್ಲಾ ತೋಡಿಕೊಂಡ. ಅದಕ್ಕೆ ತುಂಬಾ ಯೋಚನೆ ಮಾಡಿದ ಗಾಂಪ, ನೋಡು ಒಂದು ಕೆಲ್ಸ ಮಾಡು, ಅವಳನ್ನು ಮದ್ವೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ ನನಗೆ ಆ ಹುಡುಗಿ ಜೊತೆ ಅಫೇರ್ ಇತ್ತು ಅಂತ ಹೇಳು. ಆಗ ಮದುವೆ ಮುರಿದು ಬೀಳುತ್ತೆ ಅಂದ. ಅವನು ಹೆಂಗ್ ನಂಬ್ತಾನೆ? ಅಂತ ಕೇಳಿದ ಸೂರಿ.

ಅದಕ್ಕೆ ಗಾಂಪ, ನನ್ನ ಮೈ ಮೇಲೆ ಟೋಟಲ್ ಆರು ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ಳಂತೆ. ನೀನು ಸುಮ್ನೆ ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ ಮುರಿದು ಬೀಳುತ್ತೆ ಅಂತ ಹೇಳಿದ. ಸರಿ, ಸೂರಿ ಮರುದಿನ ಗಾಂಪ ಹೇಳಿದ ಪ್ಲ್ಯಾನ್ ವರ್ಕ್ ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಗಾಂಪ, ಏನಾಯ್ತೋ ಅಂತ ಕೇಳಿದ. ಅದಕ್ಕೆ ಸೂರಿ, ಇಲ್ಲ ಕಣೋ, ನಮ್ಮ ಪ್ಲ್ಯಾನ್ ವರ್ಕೌಟ್ ಆಗ್ತಿಲ್ಲ. ನಾನು ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ ಆ ಹುಡುಗ, ಅದಕ್ಕೇನಿವಾಗ? ಅಂತ ತುಂಬ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಾಸ್ಸು ಬಂದೆ ಅಂತ ಹೇಳಿದ. ಅದಕ್ಕೆ ಗಾಂಪ, ಸರಿ ನೀನು ಏನಂತ ಹೇಳಿದೆ? ಅಂತ ಕೇಳಿದ. ಅದಕ್ಕೆ ಸೂರಿಯಿಂದ ಉತ್ತರ ಬಂತು - ‘ನಾನ್ ಒಂದು ಮಾತ್ ಹೇಳ್ತೀನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ವೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ ಅಂತ ಹೇಳಿದೆ.”

***

ಆತ್ಮಹತ್ಯೆ

ಸೂರಿ: ಹಿಂದಿನ ರಸ್ತೆಯ ಗೋಪಿ ಮತ್ತು ಲೀಲಾ ಇಬ್ಬರೂ ಒಂದೇ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರಂತೆ ಗೊತ್ತಾ?

ಗಾಂಪ: ಅಯ್ಯೋ ದೇವರೇ ಅವರು ಯಾಕೆ ಹಾಗೆ ಮಾಡಿಕೊಂಡರು? ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಸೂರಿ: ಹೇ, ನಾನು ಹೇಳಿದ್ದು ಅವರಿಬ್ಬರು ಮದುವೆಯಾದರು ಅಂತ.

***

ಫಸ್ಟ್ ನೈಟ್ !

ಅಕ್ಕ: ‘ಮುಂದಿನ ತಿಂಗಳು ಎರಡನೇ ತಾರೀಕು ನನ್ನ ಮದುವೆ. ಒಂದನೇ ತಾರೀಕು ರಾತ್ರಿನೇ ಬನ್ನಿ’ ಅಂತ ಇಂಗ್ಲೀಷ್ ನಲ್ಲಿ ಹಾಕ್ಬೇಕು. ಅದನ್ನು ಟೈಪ್ ಹೇಗೆ ಮಾಡುವುದು?

ಸೂರಿ: ಅಷ್ಟೇ ತಾನೇ? ಸೆಕೆಂಡ್ ಮ್ಯಾರೇಜ್, ಕಮ್ ಆನ್ ಫಸ್ಟ್ ನೈಟ್ ಅಂತ ಟೈಪ್ ಮಾಡಿದರಾಯ್ತು.

***
ಸಿಹಿ

ಸೂರಿ: ಗಾಂಪ, ನಾನು ನಿನಗೊಂದು ಒಳ್ಳೆಯ ಹುಡುಗಿ ನೋಡಿದ್ದೇನೆ. ತುಂಬಾ ರೂಪವಂತೆ.

ಗಾಂಪ: ಹೌದೇನೋ? ಹುಡುಗಿ ಹೆಸರೇನು?

ಸೂರಿ: ಸಿಹಿ

ಗಾಂಪ: ಅಯ್ಯೋ ಬೇಡ ಕಣೋ.

ಸೂರಿ: ಅರೆ ಯಾಕೆ ಬೇಡ?

ಗಾಂಪ: ನಾನು ಡಯಾಬೆಟಿಕ್ ಪೇಷೆಂಟ್ ಅಂತ ನಿನಗೆ ಗೊತ್ತಿಲ್ವಾ? ಅದಕ್ಕೆ ಬೇಡ.

***

ಅಡುಗೆ

ಸೂರಿ: ನಿನ್ನೆ ನಮ್ಮ ಮನೆಗೆ ಬಂದು ಹೋದ ಭಿಕ್ಷುಕನನ್ನು ನೋಡಿದರೆ ನನಗೆ ಹೊಟ್ಟೆ ಉರಿಯುತ್ತೆ

ಗಾಂಪ: ಯಾಕೆ?

ಸೂರಿ: ಮತ್ತಿನ್ನೇನು? ನನ್ನ ಹೆಂಡತಿ ಹಾಕಿದ ಅಡುಗೆಯನ್ನು ತಿಂದು ಸ್ವಲ್ಪವೂ ಚೆನ್ನಾಗಿಲ್ಲವೆಂದು ಬಾಯಿಗೆ ಬಂದಹಾಗೆ ಬೈದು ಹೋದ. ಆದರೆ ನಾನು ಬೈಯುವ ಹಾಗಿಲ್ಲವಲ್ಲ ಅದಕ್ಕೆ.!

***

ಒಂದೇ ವಾಕ್ಯ

ಸೂರಿ ತಾನು ಪ್ರೀತಿಸಿದ ಶ್ರೀಮತಿಗೆ ಹೇಳಿದ “ನನಗೆ ಇಪ್ಪತ್ತೆಂಟು ವಯಸ್ಸು. ನನ್ನ ಬಳಿ ಎರಡು ಮನೆಗಳಿವೆ. ಕೋಟಿ ಬೆಲೆ ಬಾಳುವ ಕಾರು ಇದೆ, ನನ್ನ ತಂದೆಗೆ ನಾನೊಬ್ಬನೇ ಮಗ. ಅವರ ಆಸ್ತಿ ಶತಕೋಟಿಗಿಂತಲೂ ಹೆಚ್ಚಿದೆ. ಹಾಗೆಯೇ ನಿನ್ನ ಬಗೆಗೆ ಏನಾದರೂ ಹೇಳ್ತಿಯಾ?”

‘ನಾನು ಇಷ್ಟು ದೀರ್ಘ ವಿವರಗಳನ್ನು ಹೇಳುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾನು ನಿಮ್ಮ ಭಾವೀ ಹೆಂಡತಿ’ ಎಂದಳು ಶ್ರೀಮತಿ.

***

ಮದುವೆ ಸಾಲ

ಸೂರಿ ಬ್ಯಾಂಕಿಗೆ ಕರೆ ಮಾಡಿ, ‘ನಾವು ಕಾರುಕೊಳ್ಳಲು ಸಾಲ ಪಡೆದ ಬಳಿಕ ಸಕಾಲಕ್ಕೆ ಕಂತಿನ ಹಣ ಪಾವತಿಸದಿದ್ದರೆ ನೀವು ಕಾರನ್ನು ತೆಗೆದುಕೊಂಡು ಹೋಗುತ್ತೀರಲ್ಲವೇ?’ ಕೇಳಿದ. 

‘ಹೌದು, ನಾವು ಯಾವುದೇ ಉದ್ದೇಶಕ್ಕೆ ಸಾಲ ಕೊಟ್ಟರೂ ಕಂತು ಮರು ಪಾವತಿ ಮಾಡದಿದ್ದರೆ ವಸ್ತುವನ್ನು ತಂದು ಬ್ಯಾಂಕಿನಲ್ಲಿ ಇಡುತ್ತೇವೆ.’ ಎಂದರು ಮ್ಯಾನೇಜರ್.

‘ಸದ್ಯ । ದೇವರ ದಯೆ’ ಎಂದ ಸೂರಿ. ‘ಅಂದರೆ ನೀವು ಕಾರು ಕೊಳ್ಳಲು ಸಾಲ ಪಡೆದಿಲ್ಲವೇ? ಕೇಳಿದರು ಮ್ಯಾನೇಜರ್. 

‘ಇಲ್ಲ, ನನ್ನ ಕಂತುಗಳು ಬಾಕಿಯಾಗಿರುವುದು ಮದುವೆಯಾಗಲು ಪಡೆದುಕೊಂಡ ಸಾಲಕ್ಕೆ’ ಹೇಳಿದ ಸೂರಿ. !

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ