‘ಸಂಪದ’ ನಗೆಬುಗ್ಗೆ - ಭಾಗ ೧೦೮

ಒಂಟೆ ಬೇಕಾ?
ಒಬ್ಬ ಅರಬನೊಂದಿಗೆ ಸೂರಿ ಬರಿಗಾಲಿನಲ್ಲಿ ಮರುಭೂಮಿಯ ಮೇಲೆ ಹೋಗುತ್ತಿದ್ದ. ಅರಬ್ಬಿ ‘ಕುಳಿತುಕೊಳ್ಳಲು ಒಂಟೆ ಬೇಕಾ?’ ಕೇಳಿದ. ಅವನು ಬೇಡವೆಂದ. ಅರಬ್ಬಿಗೆ ಕೋಪ ಬಂತು. ಒಂಟೆಯಿಂದ ಕೆಳಗಿಳಿದು ಸೂರಿಗೆ ಹೊಡೆಯಲು ಹೋದ. ಅವನು ಅರಬ್ಬಿಯ ಕೈಗೆ ಸಿಗದೆ ಓಡತೊಡಗಿದ. ಅರಬ್ಬಿ ಹಿಂದಿನಿಂದ ಓಡಿಸಿಕೊಂಡು ಬಂದ, ತುಂಬ ದೂರ ಓಡಿದಾಗ ಮರುಭೂಮಿ ಮುಗಿಯಿತು. ಅರಬ್ಬಿ ಆಯಾಸದಿಂದ ಸುಸ್ತಾದ. ಸೂರಿ ‘ನಾನು ಗೆದ್ದು ಬಿಟ್ಟೆ, ಕೋಟಿ ರೂಪಾಯಿ ನನ್ನದಾಯಿತು’ ಎಂದು ಕುಣಿಯತೊಡಗಿದ.
ಅರಬ್ಬಿಗೆ ಅರ್ಥವಾಗಲಿಲ್ಲ. ‘ಕೋಟಿ ರೂಪಾಯಿ ನಿನ್ನದಾಯಿತೇ? ಹೇಗೆ? ‘ ಅಚ್ಚರಿಯಿಂದ ಕೇಳಿದ. ‘ಒಂಟೆಯಿಲ್ಲದೆ ಮರುಭೂಮಿಯನ್ನು ದಾಟುವುದು ಹೇಗೆ? ಎಂಬುದನ್ನು ಕಂಡುಕೊಳ್ಳಲು ಒಂದು ಪಂಥ ಏರ್ಪಾಡಾಗಿತ್ತು. ಒಬ್ಬ ಅರಬ್ಬಿಗೆ ಕೋಪ ಬರಿಸಿದರೆ ಅದನ್ನು ಮಾಡಬಹುದು ಎಂದು ಗೊತ್ತಾಯಿತು.’ ಎಂದ ಸೂರಿ ಹರುಷದಿಂದ.
***
ಶುಭಾಶಯ
ಸೂರಿ ಮತ್ತು ಗಾಂಪ ಪ್ರಯಾಣಿಸುತ್ತಿದ್ದ ವಿಮಾನ ಅರಬ್ ಮರುಭೂಮಿಯಲ್ಲಿ ದುರಂತಕ್ಕೀಡಾಗಿ ಅವರಿಬ್ಬರೂ ಬದುಕಿ ಉಳಿದುಕೊಂಡರು. ನೀರು ಹುಡುಕುತ್ತ ಮುಂದೆ ಹೋದಾಗ ಒಂದು ಮಸೀದಿ ಕಾಣಿಸಿತು. ಗಾಂಪ ‘ಅಲ್ಲಿಗೆ ಹೋದರೆ ನೀರು ಸಿಗಬಹುದು. ಆದರೆ ಅರಬ್ಬರಲ್ಲದವರಿಗೆ ನೀರು ಕೊಡಲಿಕ್ಕಿಲ್ಲ. ಆದ್ದರಿಂದ ನನ್ನ ಹೆಸರನ್ನು ಮಹಮ್ಮದ್ ಎಂದು ಬದಲಾಯಿಸಿಕೊಳ್ಳುತ್ತೇನೆ’ ಎಂದು ಹೇಳಿದ. ಸೂರಿ ಅದಕ್ಕೆ ಒಪ್ಪಲಿಲ್ಲ. ಇಬ್ಬರೂ ಮಸೀದಿಗೆ ಹೋದರು. ಸೂರಿ ತನ್ನ ನಿಜವಾದ ಹೆಸರನ್ನೇ ಹೇಳಿ ದುರಂತದ ವಿಷಯ ತಿಳಿಸಿದ. ಮಸೀದಿಯವರು ಅವನಿಗೆ ಕುಡಿಯಲು ನೀರು ಮತ್ತು ಆಹಾರ ಕೊಟ್ಟರು.
ಗಾಂಪ, ‘ನಾನೂ ಅದೇ ವಿಮಾನದಲ್ಲಿದ್ದೆ. ನನ್ನ ಹೆಸರು ಮಹಮ್ಮದ್’ ಎಂದು ಹೇಳಿ ದೊಡ್ಡ ಸತ್ಕಾರದ ನಿರೀಕ್ಷೆಯಲ್ಲಿದ್ದ ಅವನನ್ನು ಮುಲ್ಲಾಗಳು ತಬ್ಬಿಕೊಂಡರು. ‘ರಂಜಾನಿನ ಉಪವಾಸ ದಿನಗಳಿವು ! ನಮ್ಮವನೇ ಆದ ನಿನಗೆ ಹಾರ್ದಿಕ ಶುಭಾಶಯಗಳು ಗೆಳೆಯಾ’ ಎಂದರು.
***
ಬರೆ
ಶ್ರೀಮತಿ: ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವುದು ನಮ್ಮ ತಾಯಿಗೆ ಗೊತ್ತಾದರೆ ನನ್ನ ಕೈ ಮೇಲೆ ಬರೆ ಹಾಕಿಬಿಡುತ್ತಾರೆ.
ಸೂರಿ: ನಿನ್ನ ಅಮ್ಮ ಅಷ್ಟೊಂದು ಜೋರಾ?
ಶ್ರೀಮತಿ: ಹೌದು ! ಬೇಕಾದರೆ ಈ ನನ್ನ ಕೈ ನೋಡು. ಈಗಾಗಲೇ ಐದಾರು ಬಾರಿ ಬರೆ ಹಾಕಿದ್ದಾರೆ.
***
ವಿಚಾರಣೆ
ಸೂರಿ: ಪೋಲೀಸರು ವಿಚಾರಣೆ ಹೇಗೆ ಮಾಡುತ್ತಾರೆ?
ಗಾಂಪ: ಅಪರಾಧಿಗಳ ಮೂಗು ಹಿಡಿಯುತ್ತಾರೆ.
ಸೂರಿ: ಅರೆ ಹೌದಾ? ಏಕೆ?
ಗಾಂಪ: ಆಗ ಅಪರಾಧಿ ಬಾಯಿ ಬಿಡುತ್ತಾನೆ.
***
ದೀರ್ಘಾಯಸ್ಸು
ಸಂದರ್ಶಕ: ನಿಮ್ಮ ಈ ೧೦೫ ವರ್ಷ ದೀರ್ಘಾಯಸ್ಸಿನ ಗುಟ್ಟೇನು?
ಸೂರಿ: ಬಹುಷಃ ೧೦೫ ವರ್ಷಗಳ ಹಿಂದೆ ಹುಟ್ಟಿದ್ದು ಇದಕ್ಕೆ ಕಾರಣವಿರಬಹುದು.
***
ಕಾರಣ
ವೈದ್ಯ: ಹಲ್ಲಿ ಹೊಟ್ಟೆಯೊಳಗೆ ಹೋಗೋ ತನಕ ನೀವೇನು ಮಾಡ್ತಿದ್ದಿರಿ?
ಸೂರಿ: ಹಲ್ಲಿಗೂ ಮೊದಲು ಒಂದು ನೊಣ ಹೋಗಿತ್ತು ಡಾಕ್ಟ್ರೇ. ಅದನ್ನು ಹಿಡಿಯಲು ಹಲ್ಲಿ ಹೋಗ್ತಾ ಇದೆ ಅಂತ ಅಂದುಕೊಂಡು ಸುಮ್ಮನಿದ್ದೆ. ಆದರೀಗ ಅದು ಹಿಂದೆ ಬಂದೇ ಇಲ್ಲ !
***
ನಾವು ಸಮಾನರು
ಶಿಕ್ಷಕನೊಬ್ಬ ವಿದ್ಯಾರ್ಥಿ ಸೂರಿಗೆ ಒಂದು ಪ್ರಶ್ನೆ ಕೇಳಿದ. ಅದಕ್ಕೆ ಅವನಿಗೆ ಉತ್ತರ ಹೊಳೆಯಲಿಲ್ಲ. ಶಿಕ್ಷಕ ಸಿಟ್ಟಿನಿಂದ, ‘ಮೂರ್ಖ, ಶತಮೂರ್ಖ ನೀನು. ಅಷ್ಟು ಸರಳವಾದ ಪ್ರಶ್ನೆಗೂ ನಿನಗೆ ಉತ್ತರ ಗೊತ್ತಾಗಲಿಲ್ಲವೇ? ನಾನು ಮತ್ತು ನೀನು ಎಷ್ಟು ಸಮಾನರು ಎಂಬುದು ನನ್ನ ಪ್ರಶ್ನೆಯ ಅರ್ಥ ಎಂದು ಹೇಳಿದ.
ಸೂರಿಯ ಮುಖ ಅರಳಿತು. ‘ಓಹ್, ಈಗ ಅರ್ಥವಾಯಿತು. ನಾನು ಮತ್ತು ನೀವು ಸಮಾನರು ಎಂಬುದು ನಿಜವೇ ಆದರೆ ಇಬ್ಬರೂ ಮೂರ್ಖರು, ಶತಮೂರ್ಖರು ಅಲ್ಲವೇ?’ ಕೇಳಿದ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ