‘ಸಂಪದ’ ನಗೆಬುಗ್ಗೆ - ಭಾಗ ೧೦೯

‘ಸಂಪದ’ ನಗೆಬುಗ್ಗೆ - ಭಾಗ ೧೦೯

ಹೇಳಿದ್ದು ವಕೀಲರು

ಒಂದು ಕಾರು ಮರಕ್ಕೆ ಢಿಕ್ಕಿಯಾಗಿತ್ತು. ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪೋಲೀಸರು ಚಾಲಕನ ಬಳಿಗೆ ಬಂದು, ‘ನಿನಗೆ ಯಾವುದೇ ಪ್ರಾಣಾಂತಿಕ ಗಾಯಗಳಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನೀನು ಸ್ವಲ್ಪ ಹೊತ್ತಿನ ಬಳಿಕ ಮನೆಗೆ ಹೋಗಬಹುದು’ ಎಂದರು. ಚಾಲಕ ‘ಗಾಯಗಳಾಗಿಲ್ಲವೇ? ಸ್ವಲ್ಪ ಹೊತ್ತಿಗೆ ಮೊದಲು ಬಂದಿದ್ದವರು ನನಗೆ ಹಲ್ಲುಗಳು 

ಮುರಿದಿವೆ, ಕೈಯ ಎಲುಬಿಗೆ ಘಾಸಿಯಾಗಿದೆ. ಕಾಲೊಂದು ಊನವಾಗಿದೆ ಎಂದು ಹೇಳಿದರಲ್ಲ?’ ಕೇಳಿದ. ‘ಹಾಗೆ ಹೇಳಿದರಾ? ಯಾವ ವೈದ್ಯರು ಈ ಮೊದಲು ಬಂದಿದ್ದರು?’ ಪೋಲೀಸರು ಅಚ್ಚರಿಯಿಂದ ಕೇಳಿದಾಗ ಚಾಲಕ ಹೇಳಿದ ‘ಹಾಗೆ ಹೇಳಿದವರು ವೈದ್ಯರಲ್ಲ, ನನ್ನ ವಿಮಾ ಪಾಲಿಸಿ ಕ್ಲೈಮ್ ಮಾಡುವ ವಕೀಲರು’

***

ವೈದ್ಯೋಪಚಾರ

ಸೂರಿಗೆ ವಿಪರೀತ ಸುಸ್ತು ಅನಿಸಿತು. ಅನುಭವಿ ವೈದ್ಯರ ಬಳಿಗೆ ಹೋದ. ಅವರು ಅವನ ನಾಡಿ ಮತ್ತು ಕಣ್ಣುಗಳನ್ನು ಪರೀಕ್ಷಿಸಿ ಯಾವ ನೌಕರಿ ಮಾಡುತ್ತಿದ್ದಾನೆಂದು ಕೇಳಿ ತಿಳಿದುಕೊಂಡರು. ಬಳಿಕ, ‘ನಾಳೆಯಿಂದ ಖಾಲಿ ನೀರನ್ನೇ ಸೇವಿಸಿರಿ. ಅನ್ನ ಕಾಫಿ, ಟೀ, ಮದ್ಯ, ತರಕಾರಿ ಎಲ್ಲ ವರ್ಜಿಸಿ, ಪತ್ರಿಕೆ ಓದಬೇಡಿ, ಟೀವಿ ನೋಡಬೇಡಿ’ ಎಂದು ಹೇಳಿದರು.

ಸೂರಿ ಭಯಭೀತನಾಗಿ, ‘ಡಾಕ್ಟರ್, ಇಷ್ಟೊಂದು ಪಥ್ಯ ಮಾಡಬೇಕಿದ್ದರೆ ನನಗೆ ಬಂದಿರುವ ಕಾಯಿಲೆ ಮಾರಣಾಂತಿಕವಾಗಿಲ್ಲ ತಾನೇ? ಕೇಳಿದ. ‘ಹಾಗೇನಿಲ್ಲ, ಕಾಯಿಲೆ ಸಣ್ಣದ್ದೇ. ನಿಮಗೆ ಬರ್ತಿರೋ ಸಂಬಳಕ್ಕೆ ನನ್ನ ಫೀಸು ಕೊಡಬೇಕಿದ್ರೆ ಇದನ್ನೆಲ್ಲ ಮಾಡಲೇ ಬೇಕಾಗುತ್ತೆ.’ ಎಂದರು ವೈದ್ಯರು.

***

ಅನುಭವ

ಗ್ರಾಹಕಿ: ವಾವ್, ಫೇಷಿಯಲ್, ಕ್ಲೀನ್ ಅಪ್ ಚೆನ್ನಾಗಿ ಮಾಡಿರುವೆ. ಎಷ್ಟು ವರ್ಷಗಳ ಅನುಭವವಿದೆ ನಿನಗೆ?

ಬ್ಯೂಟಿ ಪಾರ್ಲರ್ ಕೆಲಸದವಳು: ಬ್ಯೂಟಿ ಪಾರ್ಲರ್ ನಲ್ಲಿ ಇವತ್ತು ಮೊದಲನೇ ದಿನ ಮೇಡಂ… ನಿನ್ನೆಯ ತನಕ ನಾನು ಪಕ್ಕದ ವಠಾರದಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದೆ !

***

ಶರಾಬು

ಮದಿರಾಪ್ರಿಯ ಸೂರಿಯ ಅನುಭವದ ಪ್ರಕಾರ…

ಶ್ರೀಮತಿ: ಹೀಗೆ ದಿನವೂ ಶರಾಬು ಕುಡಿಯುವುದರಿಂದ ಏನು ಸಿಗುತ್ತದೆ ನಿಮಗೆ?

ಸೂರಿ: ನಿರರ್ಗಳವಾಗಿ ಇಂಗ್ಲಿಷ್ ಮಾತಾಡಲು ಸಾಧ್ಯವಾಗುತ್ತೆ. ಲೀಲಾಜಾಲವಾಗಿ ಡ್ಯಾನ್ಸ್ ಮಾಡಲು ಶಕ್ಯವಾಗುತ್ತದೆ. ಸ್ನೇಹಿತರ ನಡುವೆ ಗೆಳೆತನ ಆಳವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹೆಂಡತಿಯ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಉಗಮಿಸುತ್ತದೆ.

***

ಪ್ರಾರ್ಥನೆ

ಶ್ರೀಮತಿ: ಒಳ್ಳೆಯ ವರ ಸಿಗಲಿ ಎಂದು ಪ್ರಾರ್ಥನೆ ಮಾಡಕ್ಯ್ ನಾವು ದೇವಸ್ಥಾನಕ್ಕೆ ಹೋಗುತ್ತಿದ್ದೇವೆ. ಆದರೆ ಈಗಾಗಲೇ ಮದುವೆ ಆಗಿರುವ ವಿವಾಹಿತ ಮಹಿಳೆಯರು ಎಲ್ಲಿಗೆ ಹೋಗುತ್ತಾರೆ?

ತಾರಾ: ‘ನಾನು ಕೇಳಿದ್ದೇನು ನೀನು ಕೊಟ್ಟಿದ್ದೇನು’ ಅಂತ ದೇವರನ್ನು ಕೇಳೋಕೆ ಹೋಗುತ್ತಿದ್ದಾರೆ ಕಣೆ!

***

ಕುತುಬ್ ಮಿನಾರ್

ಶಿಕ್ಷಕರು ವಿದ್ಯಾರ್ಥಿ ಸೂರಿಯೊಂದಿಗೆ, ‘ಕುತುಬ್ ಮಿನಾರ್ ಎಲ್ಲಿದೆ?’ ಕೇಳಿದರು. ‘ಗೊತ್ತಿಲ್ಲ’ ಎಂದ ಸೂರಿ. ‘ಗೊತ್ತಿಲ್ವಾ? ಬೆಂಚಿನ ಮೇಲೆ ನಿಲ್ಲು’ ಎದರು ಶಿಕ್ಷಕರು. ಸೂರಿ ಸ್ವಲ್ಪ ಹೊತ್ತು ಬೆಂಚಿನ ಮೇಲೆ ನಿಂತು ಕೆಳಗಿಳಿದ. ‘ಯಾಕೋ ಕೆಳಗಿಳಿದೆ?’ ಕೇಳಿದರು ಶಿಕ್ಷಕರು.

‘ಸರ್, ಅದು ತುಂಬಾ ದೂರದಲ್ಲಿದೆ ಅಂತ ಕಾಣುತ್ತೆ. ಬೆಂಚಿನ ಮೇಲೆ ನಿಂತ್ರೂ ನನಗೆ ಕಾಣಿಸಲೇ ಇಲ್ಲ’ ಎಂದ ಸೂರಿ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ