‘ಸಂಪದ’ ನಗೆಬುಗ್ಗೆ - ಭಾಗ ೧೧೦

ಸಂದರ್ಶನ
ಸೂರಿ, ಗಾಂಪ ಮತ್ತು ಮಾರಿ ಸಿಬಿಐ ಸಂದರ್ಶನಕ್ಕೆ ಹೋಗಿದ್ದರು. ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲದಲ್ಲಿಯೇ ಮೂವರು ಹೊರಗೆ ಕುಳಿತಿದ್ದರು. ಸ್ವಲ್ಪ ಹೊತ್ತಿನಲ್ಲಿ ಗಾಂಪನ ಸರದಿ ಬಂತು. ಒಳಗೆ ಹೋದ ಗಾಂಪನಿಗೆ ಅಲ್ಲಿ ನೋಟೀಸ್ ಬೋರ್ಡ್ ನಲ್ಲಿದ್ದ ಉಗ್ರಗಾಮಿಯ ಫೋಟೋ ಒಂದನ್ನು ತೋರಿಸಿದ ಸಂದರ್ಶಕರು ‘ಈ ಫೋಟೋದಿಂದ ನಿಮಗೆ ಏನಾದರೂ ಸುಳಿವು ಸಿಗುತ್ತಾ?’ ಅಂತ ಕೇಳಿದ್ರು. ಗಾಂಪ ಒಂದು ಕ್ಷಣ ಯೋಚನೆ ಮಾಡಿ ‘ ಇವನಿಗೆ ಬಲಗಾಲು ಇಲ್ಲ’ ಅಂದ. ಸಂದರ್ಶಕರು ‘ಯಾಕೆ?’ ಅಂತ ಕೇಳಿದಾಗ ಗಾಂಪ ಕೇಳಿದ ‘ನೋಡಿ, ಫೋಟೋದಲ್ಲಿ ಅವನ ಎಡಗಾಲು ಮಾತ್ರ ಕಾಣಿಸುತ್ತಿದೆ. ಬಲಗಾಲು ಕಾಣುತ್ತಿಲ್ಲ’ ಅಂದ. ಸಿಟ್ಟಿಗೆದ್ದ ಸಂದರ್ಶಕರು ‘ಅಯ್ಯೋ ನಿನ್ನ, ಅವನು ಎಡಕ್ಕೆ ತಿರುಗಿ ನಿಂತಿದ್ದಾನೆ ಅದಕ್ಕೆ ಬಲಗಾಲು ಕಾಣಿಸುತ್ತಿಲ್ಲ ಅಷ್ಟೇ, ನಡಿ ಮನೆಗೆ’ ಅಂತ ಕಳಿಸಿದರು.
ನಂತರ ಮಾರಿಯ ಸರದಿ ಬಂತು. ಅವನಿಗೂ ಅದೇ ಫೋಟೋ ಅದೇ ಪ್ರಶ್ನೆ. ಎಷ್ಟೇ ಆದರೂ ಸ್ನೇಹಿತರಲ್ಲವೇ?ಹಾಗಾಗಿ ಮಾರಿ ಸಹ ಅದೇ ಉತ್ತರ ಕೊಟ್ಟ ಮತ್ತು ಸಂದರ್ಶಕರಿಂದ ಅದೇ ಬೈಗುಳ ಸಿಕ್ಕಿತು. ಕೊನೆಯದಾಗಿ ಸೂರಿಯನ್ನು ಕರೆದರು. ಅವನಿಗೂ ಅದೇ ಫೋಟೋ. ಅದೇ ಪ್ರಶ್ನೆ. ಸೂರಿ ಒಂದು ಕ್ಷಣ ಯೋಚಿಸಿ, ‘ಈತ ಮರದ ಕಾಲು ಹಾಕ್ಕೊತಾನೆ’ ಅಂದ. ಸಂದರ್ಶಕರಿಗೆ ಅಚ್ಚರಿ. ‘ಇರು ಒಂದು ನಿಮಿಷ ‘ ಅಂತ ಹೇಳಿ, ಆ ಉಗ್ರಗಾಮಿಯ ಪ್ರೊಫೈಲ್ ಚೆಕ್ ಮಾಡಿ ನೋಡಿದರು. ಸೂರಿ ಹೇಳಿದ್ದು ಸರಿ ಇತ್ತು. ಸಂದರ್ಶಕರು ಬಹಳ ಖುಷಿ ಪಟ್ಟು ‘ಅವನು ಮರದ ಕಾಲು ಹಾಕ್ಕೊತಾನೆ ಅಂತ ನಿಮಗೆ ಹೇಗೆ ಗೊತ್ತಾಯ್ತು?’ ಅಂತ ಕೇಳಿದ್ರು. ಅದಕ್ಕೆ ಸೂರಿ ತಣ್ಣಗೆ ಹೇಳಿದ ‘ಆ ಫೋಟೋ ನೋಡಿ, ಅವನಿಗೆ ಬಲಗಾಲೇ ಇಲ್ಲ, ಆದ್ರೂ ಅವನು ಎಲ್ಲಾ ಕಡೆ ಓಡಾಡಿಕೊಂಡು ಉಗ್ರಗಾಮಿ ಕೆಲಸ ಮಾಡ್ತಾನೆ ಅಂದ್ರೆ ಅವನು ಮರದ ಕಾಲು ಹಾಕ್ಕೊಂಡಿರಬೇಕು ಅಂತ ಊಹೆ ಮಾಡಿದೆ ಸರ್ !’
***
ಉಗುಳಿದರೆ ದಂಡ
ಸೂರಿಗೆ ಅದೊಂದು ದೊಡ್ದ ತಲೆನೋವಾಗಿತ್ತು. ರಸ್ತೆಗೆ ತಗುಲಿಕೊಂಡೇ ಇದ್ದ ಅವನ ಮನೆಯ ಗೇಟಿನ ಹೊರಗಿನ ಮೂಲೆಗಳಲ್ಲಿ ಅಲ್ಲಿ ಸಾಗುವವರು ಇವನಿಗೆ ಕಾಣುವಂತೆ ಗುಟ್ಕಾ ರಸ ಉಗಿದು ಕೆಂಪು ರಕ್ತದ ರಂಗೋಲಿ ಹಾಕುತ್ತಿದ್ದರು. ಬೇಸತ್ತ ಸೂರಿ ಮೂಲೆಗಳನ್ನು ಉಜ್ಜಿಸಿ ಸ್ವಚ್ಛಗೊಳಿಸಿ ಇಲ್ಲಿ ಉಗುಳಬಾರದು. ಉಗುಳಿದರೆ ಒಂದು ಸಾವಿರ ದಂಡ ಎಂದು ಬೋರ್ಡ್ ಬರೆಸಿ ಗೇಟ್ ಗೆ ತಗುಲಿ ಹಾಕಿದ.
ಬೆಳಿಗ್ಗೆ ಎದ್ದವನೇ ಬಂದು ಮೂಲೆಗಳನ್ನು ನೋಡಿದ. ಅಬ್ಬಾ । ಯಾರೂ ಉಗುಳಿಲ್ಲ ಹಾಗೇ ಬೋರ್ಡ್ ಕಡೆ ನೋಡಿದ. ಇಡೀ ಬೋರ್ಡ್ ಅಕ್ಷರಗಳೇ ಕಾಣದಂತೆ ಕೆಂಪು ಕೆಂಪಾಗಿದ್ದವು !
***
ಮತವನ್ನು ಮಾರಬೇಡಿ !
ಆ ಪಕ್ಷದ ಚುನಾವಣಾ ಪ್ರಚಾರ ಭರದಿಂದ ಸಾಗಿತ್ತು. ಮರಿ ಪುಡಾರಿ ಸೂರಿ ಮೈಕ್ ಮುರಿದಂತೆ ಅರಚುತ್ತಿದ್ದ. ಈ ಬಾರಿ ನಮ್ಮ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ. ಹಣ, ಹೆಂಡ, ವಿರೋಧ ಪಕ್ಷಗಳವರು ಕೊಡುವ ನೋಟಿನ ಆಮಿಷಕ್ಕೆ ಬಲಿಯಾಗಿ ಓಟು ಕೊಡಬೇಡಿ. ಪ್ರಾಮಾಣಿಕ, ನಿಯತ್ತಿನ ನಮ್ಮ ಪಕ್ಷಕ್ಕೇ ನಿಮ್ಮ ಅಮೂಲ್ಯವಾದ ಮತ ನೀಡಿ.
ಸಭೆ ಮುಗಿದ ನಂತರ ಸೂರಿ ಸಮೀಪದ ಮರದ ಕೆಳಗೆ ಕುಳಿತು ತಮ್ಮ ನೇತಾರನಿಗೆ ಫೋನಾಯಿಸಿದ. ಸಾರ್, ಸಭೆ ಮುಗಿಯಿತು. ಸಕತ್ತಾಗಿ ಮಾತನಾಡಿದ್ದೇನೆ. ಎಲ್ಲರೂ ಹಣ ಯಾವಾಗ ಕೊಡ್ತೀರಾ ಅಂತ ಕೇಳ್ತಿದ್ದಾರೆ. ನಾಡಿದ್ದು ರಾತ್ರಿ ಹಂಚ್ತೀವಿ ಅಂತ ಹೇಳಿದ್ದೀನಿ. ಸೂಟ್ ಕೇಸ್ ತಗೊಂಡು ಹೋಗಲು ಯಾವಾಗ ಬರಲಿ?!
***
ಸಾಬೂನು ದರ
ಸೂರಿ: ಸ್ನಾನದ ಸೋಪು ಎಷ್ಟು ಸರ್?
ಅಂಗಡಿಯವ: ಮೂವತ್ತು ರೂಪಾಯಿ ಸರ್
ಸೂರಿ: ಕಡಿಮೆ ಆಗಲ್ವಾ?
ಅಂಗಡಿಯವ: ದಿನಾಲೂ ಸ್ನಾನ ಮಾಡ್ತಾ ಇರಿ ಕಡಿಮೆ ಆಗುತ್ತೆ ಸರ್!
***
ನೀರು
ಮಧ್ಯರಾತ್ರಿಯ ವೇಳೆ ಗದ್ದಲಕ್ಕೆ ಎಚ್ಚರವಾದ ಸೂರಿ ಮನೆಯ ಹೊರಗೆ ಬಂದು ವಿಚಾರಿಸಿದ. ಆಗ ನೆರೆಮನೆಯಾತ ಯಾರೋ ಕಿಡಿಗೇಡಿಗಳು ಕಾಲೊನೆಯ ನೀರಿನ ಟ್ಯಾಂಕಿಗೆ ವಿಷ ಹಾಕಿ ಬಿಟ್ಟಿದ್ದಾರೆ ಅಂದ. ಅದನ್ನು ಕೇಳಿ ಒಳಗೆ ಬಂದ ಸೂರಿಯನ್ನು ನೋಡಿ ಶ್ರೀಮತಿ ಕೇಳಿದಳು -’ಏನು ವಿಷಯ?
ಸೂರಿ ಹೇಳಿದ ‘ಏನಿಲ್ಲ ಪುಂಡು ಪೋಕರಿಗಳ ಜಗಳ. ನೀನು ನೀರು ಕುಡಿದು ಮಲಗು!’
***
ಹೊಗಳಿಕೆ
ಸೂರಿ: ಮಾವ, ನೀವು ತುಂಬಾ ಗ್ರೇಟ್, ತುಂಬಾ ಕೂಲ್, ತುಂಬಾ ಸಾಫ್ಟ್. ನಿಮ್ಮಂತಹ ಸಹನಾಶೀಲರನ್ನು ನಾನು ಕಂಡೇ ಇಲ್ಲ.
ಮಾವ: ಇದೇನು ಅಳಿಯಂದ್ರೇ ನನ್ನನ್ನು ಇಷ್ಟೊಂದು ಹೊಗಳುತ್ತಿದ್ದೀರಿ. ಯಾಕೆ?
ಸೂರಿ: ಹೌದು ಮತ್ತೆ, ನಿಮ್ಮ ಮಗಳನ್ನು ಮದುವೆಯಾಗಿ ವರ್ಷವಾಗಿಲ್ಲ, ಅಷ್ಟರಲ್ಲೇ ಅವಳ ಕಾಟ ತಡೆದುಕೊಳ್ಳಲು ಆಗ್ತಾ ಇಲ್ಲ. ಅಂಥದ್ರಲ್ಲಿ ಇಪ್ಪತ್ತೊಂದು ವರ್ಷ ತಡೆದುಕೊಂಡಿದ್ರಲ್ಲ ನೀವು ಗ್ರೇಟ್ ಅಲ್ಲದೆ ಮತ್ತೇನು?’
***
ಸೀರೆ
ಅಂಗಡಿಯಾತ: ಬನ್ನಿ ಮೇಡಂ, ನಿಮಗೆ ಎಂಥಾ ಸೀರೆ ತೋರಿಸಲಿ?
ಶ್ರೀಮತಿ: ನನ್ನ ನಾದಿನಿ ನೋಡಿ ಹೊಟ್ಟೆ ಕಿಚ್ಚಿನಿಂದ ಉರಿದು ಹೋಗುವಂಥಾ ಚೆಂದದ ಸೀರೆ ತೋರಿಸಿ.
ಅಂಗಡಿಯಾತ: ಅಂತಹ ಸೀರೆ ಒಂದೇ ಒಂದು ಪೀಸ್ ಇತ್ತು. ಅದನ್ನು ಈಗಷ್ಟೇ ನಿಮ್ಮ ನಾದಿನಿ ಖರೀದಿಸಿ ಕೊಂಡು ಹೋದರು!
***
ಪಾರಿವಾಳ
ಶ್ರೀಮತಿ: ಆ ಜೋಡಿ ಪಾರಿವಾಳಗಳನ್ನು ನಾನು ಒಂದು ಗಂಟೆಯಿಂದ ನೋಡ್ತಾ ಇದ್ದೇನೆ. ಅವೆಷ್ಟು ಅನ್ಯೋನ್ಯವಾಗಿ ಪ್ರೀತಿಸುತ್ತಿವೆ ನೋಡಿ, ನೀವೂ ಇದ್ದೀರಾ…
ಸೂರಿ: ನಾನೂ ಒಂದು ವಾರದಿಂದ ನೋಡ್ತಾ ಇದ್ದೇನೆ. ಆ ಗಂಡು ಪಾರಿವಾಳ ಪ್ರತೀ ದಿನ ಹೊಸ ಹೆಣ್ಣು ಪಾರಿವಾಳವನ್ನು ಕರೆ ತರುತ್ತಿದೆ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ