‘ಸಂಪದ’ ನಗೆಬುಗ್ಗೆ - ಭಾಗ ೧೧೧

ಕಿಟಕಿ ತೆಗೆಯಲ್ಲ
ಇಂಜಿನಿಯರಿಂಗ್ ಓದಿದ್ದ ಸೂರಿ ಮತ್ತು ಗಾಂಪ ಒಂದು ಸಂದರ್ಶನಕ್ಕೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಸೂರಿಗೆ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಮಾರು ಮೊದಲು ಒಳಗೆ ಹೋಗಿ ಬರ್ತಾರೋ ಅವರು ಸಂದರ್ಶನ ಕೊಠಡಿಯಿಂದ ಹೊರಬಂದ ಮೇಲೆ ಅಲ್ಲಿ ಕೇಳಿದ ಪ್ರಶ್ನೆಗಳನ್ನು ಇನ್ನೊಬ್ಬರಿಗೆ ಹೇಳಬೇಕು ಅಂತ ಕರಾರು ಆಗಿತ್ತು. ಸರಿ ಇಬ್ಬರೂ ಹೋಗಿ ಸಂದರ್ಶನಕ್ಕೆ ತಯಾರಾಗಿ ಕೂತರು. ಈ ಬಾರಿ ಮೊದಲು ಗಾಂಪನನ್ನು ಒಳಗೆ ಕರೆದರು. ಒಳಗೆ ಕುಳಿತ ಗಾಂಪನನ್ನು ಸಂದರ್ಶಕರು ಪ್ರಶ್ನಿಸಲು ಶುರು ಮಾಡಿದರು. ಎಲ್ಲಾ ವೈಯಕ್ತಿಕ ವಿವರಗಳನ್ನು ಕೇಳಿದ ಮೇಲೆ ‘ಜ್ಞಾನಾಧಾರಿತ’ ಪ್ರಶ್ನೆಗಳ ಸರದಿ ಆರಂಭವಾಯಿತು.
“ನೀವು ಒಂದು ರೈಲಿನಲ್ಲಿ ಹೋಗ್ತಾ ಇದೀರಾ. ಅದರ ಕಂಪಾರ್ಟ್ ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತೀರಿ?”
“ನಾನಿರುವ ಕಂಪಾರ್ಟ್ ಮೆಂಟ್ ನ ಕಿಟಕಿ ತೆಗಿತೀನಿ”
“ಸರಿ, ಈಗ ಕಿಟಕಿಯ ವಿಸ್ತೀರ್ಣ ೧.೫ ಚದರ ಮೀಟರ್ ಅಂದುಕೊಳ್ಳೋಣ. ಕಂಪಾರ್ಟ್ ಮೆಂಟ್ ನ ವಾಲ್ಯೂಮ್ ೧೨ ಮೀಟರ್ ಕ್ಯೂಬ್ ಇದೆ. ರೈಲು ಗಂಟೆಗೆ ೮೦ ಕಿ ಮೀ ವೇಗದಲ್ಲಿ ಉತ್ತರಮುಖವಾಗಿ ಚಲಿಸುತ್ತಿದೆ. ಗಾಳಿ ದಕ್ಷಿಣದ ಕಡೆಯಿಂದ ೫ ಕಿ ಮೀ ವೇಗದಲ್ಲಿ ಬೀಸುತ್ತಿದೆ. ಹಾಗಾದ್ರೆ, ನೀವು ಕಿಟಕಿ ತೆಗೆದ ಮೇಲೆ ಕಂಪಾರ್ಟ್ ಮೆಂಟ್ ತಂಪಾಗಲು ಎಷ್ಟು ಸಮಯ ಬೇಕು?”
ಗಾಂಪನಿಗೆ ಪಿತ್ತ ನೆತ್ತಿಗೇರಿ “ಇದಕ್ಕಿಂತ ಕೆಲಸ ಕೊಡಲ್ಲ ಅಂತ ನೇರವಾಗಿ ಹೇಳಿ” ಅಂತ ಬಯ್ದು ಎದ್ದು ಬಂದ. ಹೊರಗೆ ಬಂದ ಗಾಂಪನ ಮುಖ ನೋಡಿದ ಸೂರಿಗೆ ಗಾಬರಿ ಆಯ್ತು. ಆದ್ರೂ “ಏನ್ ಪ್ರಶ್ನೆ ಕೇಳಿದ್ರು?’ ಅಂದಿದ್ದಕ್ಕೆ ಗಾಂಪ, ಅವರು ಕೇಳಿದ ಪ್ರಶ್ನೆ ಹೇಳಿದಾಗ ಸೂರಿ ಅದಕ್ಕೆ ಉತ್ತರ ಏನು ಅಂತ ಹುಡುಕಿಕೊಳ್ಳುವಷ್ಟರಲ್ಲಿ ಒಳಗಿನಿಂದ ಅವನಿಗೆ ಕರೆ ಬಂತು. ಒಲ್ಲದ ಮನಸ್ಸಿನಿಂದಲೇ ಸೂರಿ ಒಳಗೆ ಹೋದ. ಮಾಮೂಲಿ ಪ್ರಶ್ನೆಗಳ ಸರದಿ ಮುಗಿದ ನಂತರ ಜ್ಞಾನಾಧಾರಿತ ಪ್ರಶ್ನೆಗಳು ಶುರುವಾದವು.
“ನೀವು ಒಂದು ರೈಲಿನಲ್ಲಿ ಹೋಗ್ತಾ ಇದೀರಾ. ಅದರ ಕಂಪಾರ್ಟ್ ಮೆಂಟ್ ತುಂಬಾ ಬಿಸಿ ಆಗೋಕೆ ಶುರುವಾಗಿದೆ. ಆಗ ನೀವು ಏನು ಮಾಡುತೀರಿ?”
“ನಾನು ನನ್ನ ಕೋಟ್ ಬಿಚ್ತೀನಿ”
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?”
“ನನ್ನ ಶರ್ಟ್ ಬಿಚ್ತೀನಿ”
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ?”
“ಪ್ಯಾಂಟ್ ಬಿಚ್ತೀನಿ”
“ಆಗ್ಲೂ ಬಿಸಿ ಕಮ್ಮಿ ಆಗದೇ ಇದ್ರೆ”
“ಅವ್ನಜ್ಜಿ ಅದೇರಾನಾ ಆಗ್ಲಿ, ಬೇಕಿದ್ರೆ ಚಡ್ಡಿನೂ ಬಿಚ್ತೀನಿ. ಆದ್ರೆ ಆ ಕಿಟಕಿ ಮಾತ್ರ ತೆಗೆಯಲ್ಲ “!
***
ಉಚಿತ ಭಾಗ್ಯ
ಒಂದೂರಲ್ಲಿ ಹೊಸ ಪಕ್ಷ ಆಡಳಿತದ ಗದ್ದುಗೇರಲು ಮುಂದಾಯಿತು. ‘ಎಲ್ಲರೂ ನಮ್ಮ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರೆ ಊಟಕ್ಕೆ ಬೇಕಾದಷ್ಟು ಅಕ್ಕಿ ಉಚಿತವಾಗಿ ಕೊಡುತ್ತೇವೆ. ಉಚಿತವಾಗಿ ಬಸ್ಸಿನಲ್ಲಿ ಬೇಕಾದಲ್ಲಿಗೆ ಕರೆದೊಯ್ಯುತ್ತೇವೆ’ ಎಂದು ಅಭ್ಯರ್ಥಿಗಳು ಹೇಳಿಕೊಂಡರು. ಬಡತನದಿಂದ ನೊಂದಿದ್ದ ಜನ ಹೊಟ್ಟೆ ತುಂಬ ಅನ್ನ ಸಿಗುತ್ತದೆ, ಊಟ ಮಾಡಿ ಮನಬಂದಂತೆ ತಿರುಗಾಡಿಕೊಂಡಿರಬಹುದೆಂಬ ಕಾರಣಕ್ಕೆ ಮತ ನೀಡಿ ಆ ಪಕ್ಷವನ್ನು ಗೆಲ್ಲಿಸಿದರು.
ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಉಚಿತವಾಗಿ ಅಕ್ಕಿಯನ್ನು ಕರೆದು ಹಂಚಿತು. ಜನ ಸಂತೋಷದಿಂದ ಹೊಸ ಸರಕಾರವನ್ನು ಹೊಗಳಿದರು. ಆದರೆ ಪೇಟೆಗೆ ಹೋದರೆ ಅಡುಗೆ ಅನಿಲದ ಬೆಲೆ ಗಗನಕ್ಕೇರಿತ್ತು. ಹೇಗೋ ಕಟ್ಟಿಗೆ ತಂದು ಅನ್ನ ಬೇಯಿಸಿದರು. ಊಟ ಮಾಡಲು ಉಪ್ಪು ತರಲು ಹೋದರೆ ಅದರ ಬೆಲೆಯೂ ಹತ್ತು ಪಟ್ಟು ಏರಿತ್ತು. ನೀರು ಕುಡಿದು ಬದುಕೋಣವೆಂದರೆ ನೀರಿಗೂ ತೆರಿಗೆ ವಿಧಿಸಲಾಗಿತ್ತು.
ಜನ ಉಚಿತವಾಗಿ ಬಸ್ಸಿನಲ್ಲಿ ಹೋಗಬಹುದು ಎಂದು ದೂರದ ತೀರ್ಥಕ್ಷೇತ್ರಕ್ಕೆ ಯಾತ್ರೆ ಹೋದರು. ಮರಳಿ ಮನೆಗೆ ಬರುವಾಗ ಬಸ್ಸಿಗೆ ಏರಲು ನಿರ್ವಾಹಕ ಬಿಡಲಿಲ್ಲ. ‘ಹೋಗುವುದಕ್ಕೆ ಮಾತ್ರ ಉಚಿತ ಟಿಕೇಟು. ಮರಳಿ ಊರಿಗೆ ಬರಬೇಕಿದ್ದರೆ ಹಣ ಕೊಡಬೇಕು’ ಎಂದ. ಜನಗಳಿಗೆ ನಿಧಾನವಾಗಿ ಜ್ಞಾನೋದಯವಾಯಿತು.
***
ನಾಯಿ
ಸೂರಿ: ಗಾಂಪ, ನಾನು ಮುಂದಿನ ಜನ್ಮದಲ್ಲಿ ನಾಯಿಯಾಗಿಯಾದರೂ ಹುಟ್ಟಬೇಕು ಕಣೋ.
ಗಾಂಪ: ಏಕೆ ಈ ಯೋಚನೆ?
ಸೂರಿ: ನನ್ನ ಹೆಂಡತಿ ನಾಯಿಗೆ ಮಾತ್ರವೇ ಹೆದರುವುದು !
***
ತೂಕ ಕಡಿಮೆಯಾಗಲು..
ಸೂರಿ: ಸಾರ್, ತೂಕ ಕಡಿಮೆಯಾಗಲು ಏನು ಮಾಡಬೇಕು?
ವೈದ್ಯ: ಕುದುರೆ ಸವಾರಿ ಮಾಡಿ.
ಸೂರಿ: (೨ ತಿಂಗಳ ನಂತರ) ಸಾರ್, ನೀವು ಹೇಳಿದಂತೆ ಮಾಡಿದೆ.
ವೈದ್ಯ: ತೂಕ ಕಡಿಮೆಯಾಯಿತಾ?
ಸೂರಿ: ಆಗಿದೆ ಸಾರ್, ಆದರೆ ನನ್ನದ್ದಲ್ಲ, ಕುದುರೆಯದ್ದು !
***
ರೂಪಾಯಿ ನಾಣ್ಯ
ಸೂರಿ: ರೀ ನೀವಿಬ್ಬರೂ ಇಷ್ಟು ರಾತ್ರಿಯಲ್ಲಿ ಒಂದು ರೂಪಾಯಿ ನಾಣ್ಯ ಕೇಳ್ತಾ ಇದ್ದೀರಲ್ಲಾ ಏಕೆ?
ಅಪರಿಚಿತರು: ಅದರಲ್ಲಿ ಟಾಸ್ ಮಾಡಿ ನಿಮ್ಮಲ್ಲಿರುವ ಸರ, ಹಾಗೆಯೇ ಪರ್ಸ್ ಅನ್ನು ಯಾರು ಕಿತ್ತುಕೊಳ್ಳಬೇಕು ಅಂತ ತೀರ್ಮಾನಿಸುವುದಕ್ಕೆ.!
***
ಸರಿ ಉತ್ತರ
ಸೂರಿ: ಅಪ್ಪ, ನಮ್ ಟೀಚರ್ ಕೇಳಿದ ಪ್ರಶ್ನೆಗೆ ನನ್ನನ್ನು ಬಿಟ್ಟು ಬೇರೆ ಯಾರೂ ಸರಿ ಉತ್ತರ ಕೊಡಲಿಲ್ಲ.
ತಂದೆ: ಓಹ್ ಹೌದಾ, ಏನ್ ಪ್ರಶ್ನೆ ಕೇಳಿದ್ರು?
ಸೂರಿ: ನಿಮ್ಮ ತಂದೆಗೆ ತಾಯಿ ಹೊಡೆದಿರುವುದನ್ನು ನೋಡಿದ್ದೀರಾ? ಅಂದ್ರು. ಎಲ್ಲರೂ ಸುಮ್ಮನಿದ್ದರು. ನಾನು ಮಾತ್ರ ‘ಹೌದು’ ಎಂದು ನಿಜ ಹೇಳ್ದೆ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ