‘ಸಂಪದ’ ನಗೆಬುಗ್ಗೆ - ಭಾಗ ೧೧೯

ಒಂಟೆಯೋ ಮೊಲವೋ
ಸ್ಟಾಲಿನ್ ಆಡಳಿತ ಕಾಲದಲ್ಲಿ ಎರಡು ಮೊಲಗಳು ರಸ್ತೆಯಲ್ಲಿ ಎದುರಾದವು. ಒಂದು ಮೊಲ ಇನ್ನೊಂದರ ಬಳಿ, 'ತುಂಬ ಅವಸರದಿಂದ ಹೊರಟಿರುವಂತಿದೆ. ಯಾವ ಕಡೆಗೋ?' ಕೇಳಿತು. 'ನಿನಗಿನ್ನೂ ಸುದ್ದಿ ಬಂದಿಲ್ಲವೆ? ಎಲ್ಲ ಒಂಟೆಗಳನ್ನೂ ಕತ್ತರಿಸಿ ಹಾಕಬೇಕೆಂದು ಸ್ಟಾಲಿನ್ ಆಜ್ಞೆ ಮಾಡಿದ್ದಾರಂತೆ! ಅದಕ್ಕೆ ದೇಶ ಬಿಟ್ಟು ಹೊರಟಿದ್ದೇನೆ' ಎಂದಿತು ಎರಡನೆಯ ಮೊಲ.
ಮೊದಲನೆಯ ಮೊಲ ಸುಸ್ತಾಗುವಷ್ಟು ನಕ್ಕಿತು. 'ಮಂಕೇ, ಬುದ್ದಿ ಇದೆಯಾ ನಿನಗೆ? ಅವರು ಆಜ್ಞೆ ಮಾಡಿದ್ದು ಒಂಟೆಗಳನ್ನು ಕತ್ತರಿಸಲು ಅಲ್ಲವೆ?' ಕೇಳಿತು. 'ನಿಜ. ಒಂಟೆಯೋ ಮೊಲವೋ ಎಂಬುದು ಕಮ್ಯುನಿಸ್ಟರಿಗೆ ನಿಜ ತಿಳಿಯುವುದು ಕತ್ತರಿಸಿದ ಮೇಲೆ ಅಲ್ಲವೆ?' ಎಂದಿತು ಎರಡನೆಯ ಮೊಲ.
***
ಕತ್ತೆಯಲ್ಲ ಮೊಲ
ಕುಡುಕನೊಬ್ಬ ಮೃಗಾಲಯದ ಒಳಗೆ ಸುತ್ತಾಡುತ್ತ ಒಂದು ಕತ್ತೆಯನ್ನು ನೋಡಿದ. ಬಳಿಗೆ ಹೋಗಿ ಅದರ ಮುಖವನ್ನು ಕೈಗಳಿಂದ ಬಾಚಿ ಸೆಳೆದು ಮುತ್ತಿಟ್ಟ. 'ಮೊಲವೇ, ಎಷ್ಟು ಸುಂದರವಾಗಿದ್ದೆ ನೀನು. ಆದರೆ ನಿನ್ನ ಗುರುತೇ ಸಿಗದಷ್ಟು ಬದಲಾಗಿರುವೆಯಲ್ಲೋ' ಎಂದ. ಪಕ್ಕದಲ್ಲಿದ್ದ ಕೆಲಸದವನು, 'ಕಂಠಪೂರ್ತಿ ಕುಡಿದಿದ್ದೀ ಅಲ್ಲವೆ? ಅಷ್ಟೂ ತಿಳಿಯೋದಿಲ್ವೆ ಅದು ಮೊಲವಲ್ಲ ಕತ್ತೆ!' ಎಂದು ಕೂಗಿದ.
'ಒಂದು ಕಾಲದಲ್ಲಿ ಇದು ಮೊಲವೇ ಆಗಿತ್ತು. ಆದರೆ ಕಮ್ಯುನಿಸ್ಟರು ತಮ್ಮ ಸಿದ್ಧಾಂತಗಳನ್ನು ತಿನ್ನಿಸಿ ಸುಂದರವಾದ ಮೊಲವನ್ನು ಕತ್ತೆಯಾಗಿ ಮಾಡಿಬಿಟ್ಟರು' ಎಂದ ಕುಡುಕ.
***
ಕೆಲಸಗಾರನ ಮನೆ
ಅಮೆರಿಕನ್ ಕಾರ್ಖಾನೆ ಕೆಲಸಗಾರ ರಷ್ಯನ್ ಸಹೋದ್ಯೋಗಿಗೆ ತನ್ನ ಮನೆ ತೋರಿಸಲು ಕರೆದುಕೊಂಡು ಹೋಗಿದ್ದ 'ನೋಡು, ಇದು ನನ್ನ ಕೋಣೆ. ಅದು ನನ್ನ ಪತ್ನಿಯ ಖಾಸಗಿ ಕೋಣೆ. ಅಲ್ಲಿ ಹಿರಿಯ ಮಗಳ ಕೋಣೆ. ಇದು ಊಟದ ಕೋಣೆ. ಅದರಾಚೆ ಅತಿಥಿಗಳ ಕೋಣೆ.
ನಿನ್ನ ಮನೆಯೂ ಇದೇ ರೀತಿಯೇ ಇದೆಯೆ ಅಥವಾ ಇನ್ನೂ ವೈಭವದಿಂದ ಕೂಡಿದೆಯೆ?' ಕೇಳಿದ.
'ಇದರಲ್ಲಿ ಹೊಸದೇನೂ ಇಲ್ಲ. ನನ್ನ ಮನೆಯೂ ಹೀಗೆಯೇ ಇದೆ. ಆದರೆ ಕೋಣೆಗಳ ನಡುವೆ ಅಡ್ಡಗೋಡೆಗಳು ಮಾತ್ರ ಇಲ್ಲ' ಎಂದ ರಷ್ಯನ್ ಕೆಲಸಗಾರ.
***
ಮೂರು ಕೊಳಗಳು
ವಾಸ್ತುಶಿಲ್ಪಿಯೊಂದಿಗೆ ರಷ್ಯನ್ ಧನಿಕ, 'ಇಲ್ಲಿ ಮೂರು ಈಜುಕೊಳಗಳನ್ನು ನಿರ್ಮಿಸು. ಒಂದರಲ್ಲಿ ಬಿಸಿನೀರು, ಇನ್ನೊಂದರಲ್ಲಿ ತಣ್ಣೀರು ಇರಲಿ. ಮೂರನೆಯದರಲ್ಲಿ ನೀರು ಬೇಡ, ಒಣದಾಗಿರಲಿ' ಎಂದ.
ವಾಸ್ತುಶಿಲ್ಪಿ ಹುಬ್ಬೇರಿಸಿದ. 'ನೀರಿಲ್ಲದ ಈಜುಕೊಳವೆ? ಅದರಿಂದ ಏನು ಲಾಭವಿದೆ?' ಕೇಳಿದ. 'ನನ್ನ ತುಂಬ ಮಂದಿ ಗೆಳೆಯರು ಸೌದಿ ಅರೇಬಿಯಾದಿಂದ ಬರುತ್ತಾರೆ. ಅವರಿಗೆ ಈಜಲು ಗೊತ್ತಿರುವುದಿಲ್ಲ. ಮೂರನೆಯ ಕೊಳ ಅವರಿಗಾಗಿ' ಎಂದ ಧನಿಕ.
***
ರಹಸ್ಯ ಬಯಲಾದುದಕ್ಕೆ
ಕೆಂಪು ಚೌಕದಲ್ಲಿ ನಿಂತು ಪತ್ರಕರ್ತನೊಬ್ಬ 'ಬ್ರೆಜ್ಞೇವ್ ಮೂರ್ಖರಲ್ಲಿ ಮೂರ್ಖ' ಎಂದು ಕೂಗಿದ. ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಈ ಅಪರಾಧಕ್ಕೆ ನ್ಯಾಯಾಧೀಶರು ಅವನಿಗೆ ಹದಿನೈದು ಸಾವಿರ ರೂಬಲ್ ಜುಲ್ಮಾನೆ ವಿಧಿಸಿದರು.
ಪತ್ರಕರ್ತ, 'ಘೋಷಣೆ ಕೂಗಿ, ದೇಶವನ್ನು ಅವಮಾನಿಸಿದ್ದಕ್ಕೆ ಹತ್ತು ಸಾವಿರ ರೂಬಲ್ ಜುಲ್ಮಾನೆ ವಿಧಿಸಲು ಅವಕಾಶವಿದೆ. ಆದರೆ ಇನ್ನೂ ಐದು ಸಾವಿರ ರೂಬಲ್ ಅಧಿಕ ದಂಡ ವಿಧಿಸಿದ್ದು ಯಾಕೆ?' ಎಂದು ಪ್ರಶ್ನಿಸಿದ.
'ಸೋವಿಯತ್ ದೇಶವನ್ನು ಅವಮಾನಿಸಿದ್ದಕ್ಕೆ ಹತ್ತು ಸಾವಿರ ರೂಬಲ್ ದಂಡ. ಹಾಗೆಯೇ ರಾಜ ರಹಸ್ಯವೊಂದನ್ನು ಬಯಲು ಮಾಡಿದ್ದಕ್ಕೆ ಉಳಿದ ಮೊತ್ತದ ಜುಲ್ಮಾನೆ' ಎಂದರು. ನ್ಯಾಯಾಧೀಶರು.
***
ಬಣ್ಣದ ಶೂ
ಅಧಿಕಾರಿಯೊಬ್ಬರು ಬ್ರೆಜ್ಞೇವ್ ಜೊತೆಗೆ, 'ತಾವು ಅವಸರದಲ್ಲಿ ಒಂದು ಕಪ್ಪು ಮತ್ತು ಒಂದು ಕೆಂಪು ಶೂ ಧರಿಸಿ ಬಂದಿದ್ದೀರಿ ಸಾರ್' ಎಂದು ಹೇಳಿದ.
ಬ್ರೆಜ್ಞೇವ್, 'ಅದು ನನಗೆ ಗೊತ್ತಿದೆ. ನಾನು ಧರಿಸುವ ಇನ್ನೊಂದು ಜೊತೆ ಶೂ ಕೂಡ ಒಂದು ಕಪ್ಪು ಇನ್ನೊಂದು ಕೆಂಪು ಬಣ್ಣದ್ದೇ ಆಗಿದೆಯೆಂದು ಗೊತ್ತಾಯಿತು. ಅದ್ದರಿಂದ ಬದಲಾಯಿಸದೆಯೇ ಬಂದುಬಿಟ್ಟೆ' ಎಂದರು.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ