‘ಸಂಪದ’ ನಗೆಬುಗ್ಗೆ - ಭಾಗ ೧೨೦

‘ಸಂಪದ’ ನಗೆಬುಗ್ಗೆ - ಭಾಗ ೧೨೦

ಡೊನೇಷನ್ !

ಸಂಸತ್ ಭವನದ ಮುಂದೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಗಾಡಿಗಳು ಇಂಚಿಂಚೇ ಮುಂದೆ ಚಲಿಸುತ್ತಿದ್ದವು. ಅದೇ ದಾರಿಯಲ್ಲಿ ಗಾಂಪ ತನ್ನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆದರೆ ಮುಂದಕ್ಕೆ ಹೋಗದ ವಾಹನಗಳಿಂದಾಗಿ ಬೇಸತ್ತು ಹೋಗಿದ್ದ ಗಾಂಪ. ಕೊನೆಗೆ ಪೂರ್ತಿ ಜಾಮ್ ಆಗಿ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಬಂತು. ಅವನ ಮುಂದೆ ಸಾಲು ಸಾಲಾಗಿ ವಾಹನಗಳು ಎಂಜಿನ್ ಆಫ್ ಮಾಡಿಕೊಂಡು ನಿಂತಿದ್ದವು. ಅಷ್ಟರಲ್ಲಿ ಸೂರಿ ಆ ಕಡೆಯಿಂದ ಬಂದ. ಗಾಂಪ ಕಾರಿನ ಮುಂದೆ ಸಾಲಾಗಿ ನಿಂತಿದ್ದ ಎಲ್ಲ ವಾಹನಗಳ ಬಳಿಯೂ ಹೋಗಿ ಸೂರಿ ಏನೋ ಹೇಳುತ್ತಿದ್ದ. ಸ್ವಲ್ಪ ಹೊತ್ತಾದ ನಂತರ ಅವನು ಗಾಂಪನ ಕಾರಿನ ಬಳಿಯೂ ಬಂದ. ಕಾದು ಕಾದು ಸಾಕಾಗಿದ್ದ ಗಾಂಪ, ಸೂರಿ ಬಂದೊಡನೆ ಕೇಳಿದ 'ಬ್ರದರ್ ಏನ್ ಪ್ರಾಬ್ರಮ್? ಯಾಕೆ ಟ್ರಾಫಿಕ್ ಜಾಮ್ ಆಗಿದೆ?'. ಅದಕ್ಕೆ ಸೂರಿ ಹೇಳಿದ 'ಏನಿಲ್ಲ, ಸಂಸತ್ ಒಳಗೆ ಉಗ್ರರು ನುಗ್ಗಿದ್ದಾರೆ. ಅಲ್ಲಿ ಎಲ್ಲ ರಾಜಕಾರಣಿಗಳನ್ನು ಹೈಜಾಕ್ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಹತ್ತು ಕೋಟಿ ರುಪಾಯಿ ಕೊಡದಿದ್ರೆ ಎಲ್ಲ ರಾಜಕಾರಣಿಗಳನ್ನೂ ಪೆಟ್ರೋಲ್ ಹಾಕಿ ಸುಟ್ಟುಬಿಡ್ತವೆ ಅಂತ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ಎಲ್ಲಾ ಕಾರುಗಳ ಹತ್ರನೂ ಹೋಗಿ ಪ್ರತಿಯೊಬ್ಬರಿಂದಲೂ ಡೊನೇಶನ್ ಸಂಗ್ರಹ ಮಾಡ್ತಾ ಇದ್ದೀವಿ': ಅದನ್ನು ಕೇಳಿ ಗಾಬರಿಯಾದರೂ ಒಂದು ಕ್ಷಣ ಸಾವರಿಸಿಕೊಂಡು 'ಸರಿ, ಎಲ್ಲರೂ ಎಷ್ಟೆಷ್ಟು ಕೊಡ್ತಾ ಇದ್ದಾರೆ?' ಅಂತ ಕೇಳಿದ ಗಾಂಪ. ಅದಕ್ಕೆ ಸೂರಿ ತಣ್ಣಗೆ ಉತ್ತರಿಸಿದ 'ಸುಮಾರು ಒಂದೂವರೆಯಿಂದ ಎರಡು ಲೀಟರ್!’

***

ಸುಲಭ ವಿಧಾನ

ಪುಟಿನ್ ಹೇರ್ ಕಟಿಂಗ್ ಮಾಡಿಸಲು ಕ್ಷೌರಿಕನ ಮುಂದೆ ಕುಳಿತಿದ್ದರು. ಕ್ಷೌರಿಕ ಅವರೊಂದಿಗೆ ರಷ್ಯನ್ ಆರ್ಥಿಕ ನೀತಿ, ಯುದ್ಧನೀತಿ, ಬಿಗಿ ಕಾನೂನುಗಳ ಬಗೆಗೆ ಒಂದೊಂದಾಗಿ ಪ್ರಶ್ನೆಗಳನ್ನು ಕೇಳುತ್ತ ಹೋಗಿ ತನ್ನ ಕೆಲಸ ಮುಗಿಸಿದ. ಪುಟಿನ್ ಅವನನ್ನು ಮೆಚ್ಚಿಕೊಂಡು, 'ನಿನ್ನ ಆಸಕ್ತಿ ಕಂಡು ನನಗೆ ತುಂಬ ಖುಷಿಯಾಯಿತು. ರಷ್ಯದ ಬಗೆಗೆ ತುಂಬ ತಿಳಿದುಕೊಳ್ಳುವ ಇಚ್ಛೆಯಿದೆಯೆ?' ಕೇಳಿದರು.

'ಇಲ್ಲ ಇಲ್ಲ, ನಿಮ್ಮ ತಲೆಯಲ್ಲಿ ವಿರಳವಾಗಿರುವ ಕೂದಲುಗಳು ಪ್ರತಿಯೊಂದು ಪ್ರಶ್ನೆ ಕೇಳಿದಾಗಲೂ ನೆಟ್ಟಗೆ ನಿಲ್ಲುತ್ತಿದ್ದವು. ಕಟಿಂಗ್ ಮಾಡಲು ಸುಲಭವಾಯಿತು' ಎಂದ ಕ್ಷೌರಿಕ.

***

ಪ್ರಬಂಧ

ವಿದ್ಯಾರ್ಥಿಯೊಬ್ಬ ಒಂದು ಪ್ರಬಂಧ ಬರೆದಿದ್ದ 'ನನ್ನ ಮನೆಯಲ್ಲಿ ಮೂರು ಬೆಕ್ಕಿನ ಮರಿಗಳಿವೆ. ಅವುಗಳು ಕಮ್ಯುನಿಸ್ಟರ ಪ್ರತಿಬಿಂಬಗಳಾಗಿವೆ. ಮೈಯ ಕೂದಲಿನ ಬಣ್ಣ ಕೂಡ ಅವರ ಹಾಗೆಯೇ ಕಪ್ಪಾಗಿದೆ'

ಮರುದಿನ ಅದೇ ವಿದ್ಯಾರ್ಥಿ ಅಧ್ಯಾಪಕಿಯ ಬಳಿಗೆ ಬಂದ. 'ನಿನ್ನೆ ನಾನು ಬರೆದ ಪ್ರಬಂಧದಲ್ಲಿ ಮೂರು ಮರಿಗಳೂ ಕಮ್ಯುನಿಸ್ಟರ ಹಾಗಿವೆ ಎಂದು ಬರೆದಿದ್ದೆ ಆದರೆ ಅದರಲ್ಲಿ ಒಂದು ಮರಿ ಕಮ್ಯುನಿಸ್ಟ್‌ ಅಲ್ಲ ಅಂತ ತಿದ್ದಬಹುದೆ?' ಕೇಳಿದ.

'ಯಾಕೆ, ಮೂರು ಮರಿಗಳೂ ಕಮ್ಯುನಿಸ್ಟ್ ತರಹವೇ ಅಂತ ಬರೆದರೆ ಏನು ದೋಷವಿದೆ?' ಅಧ್ಯಾಪಕಿ ಕೇಳಿದರು. 'ಇಲ್ಲ, ಅದರಲ್ಲಿ ಒಂದು ಮರಿ ಇವತ್ತು ಕಣ್ಣು ತೆರೆದಿದೆ' ಎಂದ ವಿದ್ಯಾರ್ಥಿ.

***

ಮೊಬೈಲ್ ನಂಬರ್

ಸೂರಿ: ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತ್ ಡೇಗೆ ಏನು ಕೊಡೋದು ಅಂತಾ ಯೋಚನೆ ಮಾಡಿ ಮಾಡಿ ಸಾಕಾಯಿತು.

ಗಾಂಪ: ಅವಳು ನೋಡೋಕೆ ಹೇಗಿದ್ದಾಳೆ?

ಸೂರಿ: ತುಂಬಾ ತುಂಬಾ ಚೆನ್ನಾಗಿದ್ದಾಳೆ.

ಗಾಂಪ: ಹಾಗಾದರೆ ನನ್ನ ಮೊಬೈಲ್ ನಂಬರ್ ಕೊಡು !

***

ಗಂಡ ಬೇಕು !

ಶ್ರೀಮತಿ: ನನಗೆ ನನ್ನ ಗಂಡ ಬೇಕು ಸರ್ !

ವಕೀಲ: ಇದೇನಮ್ಮಾ, ನಿಮ್ಮಿಬ್ಬರ ಡೈವೋರ್ಸ್ ಆಗಿ ಒಂದು ವಾರ ಕೂಡಾ ಆಗಿಲ್ಲ. ಈಗ ಮತ್ತೆ ಅವನೇ ಬೇಕು ಅಂತ ಕೇಳ್ತಿಯಲ್ಲ?

ಶ್ರೀಮತಿ: ಡೈವೋರ್ಸ್ ಆದ ಮೇಲೆ ಅವನು ಪಡುತ್ತಿರುವ ಸಂತೋಷ ನನ್ನ ಕೈಯಲ್ಲಿ ನೋಡೋಕ್ಕೆ ಆಗ್ತಾ ಇಲ್ಲ ಸ್ವಾಮಿ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ