‘ಸಂಪದ’ ನಗೆಬುಗ್ಗೆ - ಭಾಗ ೧೨೧

‘ಸಂಪದ’ ನಗೆಬುಗ್ಗೆ - ಭಾಗ ೧೨೧

ಬ್ಯೂಟಿಪಾರ್ಲರ್ ಮಹಿಮೆ

ಸೂರಿ ಮದುವೆ ಆಗಿ ಹದಿನೈದು ದಿನಗಳಾಗಿತ್ತು. ಶ್ರೀಮತಿ ಜತೆ ಬ್ಯೂಟಿಪಾರ್ಲರ್ ಗೆ ಬಂದಿದ್ದ. ಹೆಂಡತಿ ಪಾರ್ಲರ್ ಒಳಗೆ ಹೋಗಿದ್ದರೆ, ಈತ ವೇಟಿಂಗ್ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇದ್ದ. ಒಂದು ಗಂಟೆ ಆದ ಮೇಲೆ ಮಹಿಳೆಯೊಬ್ಬರು ಸೂರಿಯ ಬಳಿಗೆ ಬಂದು 'ಬರ್ತೀರಾ, ಹೋಗುವನಾ?’ ಎಂದು ಕೇಳಿದಳು.

ತಕ್ಷಣವೇ ಸೂರಿ ಆ ಮಹಿಳೆಯನ್ನು ನೋಡಿ ಗಾಬರಿಯಿಂದ 'ಅಯ್ಯೋ ನಾನು ಅಂಥವನಲ್ಲ. ನನಗೆ ಮದುವೆ ಆಗಿದೆ. ನನ್ನ ಹೆಂಡತಿ ಪಾರ್ಲರ್ ಒಳಗೆ ಇದ್ದಾಳೆ' ಎಂದ.

ಆಗ ಆ ಮಹಿಳೆ ನಗುತ್ತಾ 'ಸುಮ್ಮೆ ಬನ್ನಿ. ನಾನೇ ನಿಮ್ಮ ಹೆಂಡತಿ' ಅಂದಳು!

***

ಇದೇನು ಮಹಾತಪ್ಪು?

'ನೋಡಪ್ಪಾ, ಅಮ್ಮ ಸುಮ್‌ಸುಮ್ಮನೆ ಬೈತಿದಾಳೆ' ಅಂದ ಸೂರಿ. 

'ಯಾಕಪ್ಪಾ ಏನಾಯ್ತು?' ಅಂದ ಅಪ್ಪ. ಆಗ ಸೂರಿ 'ಇವತ್ತು ರಿಪೋರ್ಟ್ ಕಾರ್ಡ್ ಕೊಟ್ರಪ್ಪಾ, ಏನೋ ಒಂದು 'ಸಣ್ಣ ತಪ್ಪು' ಮಾಡಿದ್ದೆ. ಅದನ್ನು ನೋಡಿ ಕೋಪ ಮಾಡ್ಕೊಂಡಿದಾಳೆ ಅಮ್ಮ ಎಂದ. 

ಮಗನ ಮಾತು ಕೇಳಿ ಅಪ್ಪ 'ಹೌದಾ ಎಲ್ಲಿ ರಿಪೋರ್ಟ್ ಕಾರ್ಡ್ ಕೊಡು ನೋಡೋಣ' ಎಂದ. ಸೂರಿ ಕೊಟ್ಟ ರಿಪೋರ್ಟ್ ಕಾರ್ಡ್ ನೋಡಿದ ಅಪ್ಪ 'ಏನೋ ಇದು. ಇದು ಸಣ್ಣ ತಪ್ಪಾ? ಎಲ್ಲ ವಿಷಯಗಳಲ್ಲೂ ಸೊನ್ನೆ ತಗೊಂಡಿದ್ದೀಯಲ್ಲೋ' ಕೆಂಡಾಮಂಡಲವಾದ. 

'ಅಯ್ಯೋ ನೀವೂ ತಪ್ಪು ತಿಳಿದ್ರಿ ನೋಡಿ. ಸೊನ್ನೆ ತೊಗೊಳೋದು ಹೆಮ್ಮೆಯ ವಿಷಯ. ಸೊನ್ನೆ ಎನ್ನೋದು ನಮ್ಮ ಹೆಮ್ಮೆಯ ಆರ್ಯಭಟನ ಅವಿಷ್ಕಾರ. ಅಲ್ವೇ ದೊಡ್ಡಪ್ಪ' ಎಂದ ಸೂರಿ. ಅದನ್ನು ಕೇಳಿದ ದೊಡ್ಡಪ್ಪ, ಅಪ್ಪ, ಅಮ್ಮ ಎಲ್ಲರೂ ನಗುವಿನಲ್ಲಿ ಮುಳುಗಿದರು.

***

ಬುದ್ಧಿವಂತರಿಗೆ ಮಾತ್ರ

ಆ ಹಾಸ್ಯಗೋಷ್ಠಿ ಸ್ಪರ್ಧೆಯಲ್ಲಿ ಸೂರಿನೂ ಭಾಗವಹಿಸಿದ್ದ. ಆ ಸ್ಪರ್ಧೆಯ ನಿಯಮದ ಪ್ರಕಾರ ಮೊದಲನೆಯ ವಾಕ್ಯದಲ್ಲಿಯೇ ಎಲ್ಲರನ್ನು ನಗಿಸಬೇಕು ಎಂಬುದಾಗಿತ್ತು. ಸ್ಪರ್ಧೆಯಲ್ಲಿ ಎಲ್ಲರೂ ಏನೇನೋ ಹಾಸ್ಯದ ವಿಷಯಗಳನ್ನು ಹೇಳಿದರು. ಆದರೆ ಯಾರೊಬ್ಬರೂ ನಗಲೇ ಇಲ್ಲ.

ಕೊನೆಗೆ ಸೂರಿಯ ಸರದಿಯೂ ಬಂತು. ಆತ ವೇದಿಕೆ ಏರಿದವನೇ 'ನೋಡಿ ನಾನು ಹೇಳುವ ಹಾಸ್ಯದ ವಿಷಯ ಬುದ್ಧಿವಂತರಿಗೆ ಮಾತ್ರವೇ ಅರ್ಥವಾಗುವುದು' ಎಂದು ಅವನು ಹೇಳಿದ್ದೇ ತಡ ಎಲ್ಲರೂ ಆ ಕ್ಷಣವೇ ಗಹಗಹಿಸಿ ನಗತೊಡಗಿದರು!

***

ಕೊನೇ ಆಸೆ

ಯಮರಾಜ: ಎಲೇ, ಕುಡುಕನೇ ನಿನ್ನ ಸಾವು ಸನ್ನಿಹಿತವಾಗಿದೆ. ಕೊನೆ ಆಸೆ ಏನಾದರೂ ಇದ್ದರೆ ಹೇಳು ?

ಸೂರಿ: ಹೇ ಪ್ರಭು, ಮುಂದಿನ ಜನ್ಮದಲ್ಲಿ ನನಗೆ ಹಲ್ಲನ್ನು ಒಂದೇ ಕೊಡಿ, ಆದರೆ ಲಿವರ್ ಮಾತ್ರ ೩೨ ನೀಡಿ.

***

ಸ್ವರ್ಗ ಸಿಗುತ್ತೆ !

ಭಿಕ್ಷುಕ : ಏನಾದರೂ ತಿನ್ನಕ್ಕೆ ಕೊಡಿ ಸರ್, ನಿಮಗೆ ಸ್ವರ್ಗ ಸಿಗುತ್ತೆ !

ಸೂರಿ: ಬೆಂಗಳೂರ್ ಕೊಡ್ತೀನಿ ತಗೋ

ಭಿಕ್ಷುಕ: ತಿನ್ನಕ್ಕೆ ಏನಾದರೂ ಕೊಡಿ ಅಂದರೆ ಬೆಂಗಳೂರ್ ಕೊಡ್ತಾರಂತೆ, ಬೆಂಗಳೂರ್ ಏನ್ ನಿಮ್ದಾ?

ಸೂರಿ: ಸ್ವರ್ಗ ಸಿಗುತ್ತೆ ಅಂತಿದ್ದಿಯಲ್ಲ ಸ್ವರ್ಗ ನಿಂದಾ?

***

ಮಚ್ಚೆ 

ಜ್ಯೋತಿಷಿ: ನಿನ್ನ ಎಡ ತೊಡೆಯ ಮೇಲೆ ಮಚ್ಚೆ ಇದೆ. ನೀನು ಮಹಾಶೂರ, ಮಹಾವೀರನಾಗ್ತೀಯ

ಸೂರಿ: ಸ್ವಾಮಿ, ಅದು ಮಚ್ಚೆ ಅಲ್ಲ, ನನ್ನ ಹೆಂಡತಿ ಹಾಕಿದ ಬರೆ !

***

ಲಾಟರಿ

ಮಗ: ಅಪ್ಪ, ನಿಮಗೆ ಒಂದು ಕೋಟಿ ಲಾಟರಿ ಹೊಡೆಯುತ್ತೆ, ಅವತ್ತೇ ಮಮ್ಮಿ ಕಿಡ್ನಾಪ್ ಆಗಿಬಿಟ್ರೆ ಏನ್ ಮಾಡ್ತೀಯ?

ಸೂರಿ: ಸಾಧ್ಯಾನೇ ಇಲ್ಲ, ಒಂದೇ ದಿನಕ್ಕೆ ಎರಡೆರಡು ಲಾಟರಿ ಹೊಡೆಯಲ್ಲ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ