‘ಸಂಪದ’ ನಗೆಬುಗ್ಗೆ - ಭಾಗ ೧೨೪

‘ಸಂಪದ’ ನಗೆಬುಗ್ಗೆ - ಭಾಗ ೧೨೪

ಮೊಸರು

"ರೀ ಬರೋವಾಗ ಮೊಸರು ತರ್ತೀರಾ.. ಮನೇಲಿರೋ ಮೊಸರು ಮೂರು ದಿನ ಹಿಂದಿದು.. ತುಂಬಾ ಹುಳಿಯಾಗಿದೆ"

"ಹೌದಾ.... ಹಾಗಾದ್ರೆ ಅದನ್ನ ಏನು ಮಾಡ್ತೀಯೆ?"

"ಏನು ಮಾಡೋದು? ತಿಪ್ಪೆಗೆ ಚೆಲ್ಲೋದು.. ಅಷ್ಟೆ..."

"ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ ಚೆಲ್ಲಬಾರದು ಅಂತ. ಏನಾದರೂ ಮಾಡು...."

"ಏನು ಮಾಡಲಿ..ಮಜ್ಜಿಗೆ ಮಾಡಿದರೆ ಹುಳಿ ಹುಳಿ..  ಬಾಯಲ್ಲಿಡೋಕಾಗಲ್ಲಾ..."

"ಒಂದ್ಕೆಲ್ಸಾ ಮಾಡು ಮಜ್ಜಿಗೆ ಹುಳಿ ಮಾಡು.. ತಿನ್ನೋಕೂ ರುಚಿಯಾಗಿರುತ್ತೆ. ಅನ್ನಕ್ಕೂ ಜೊತೆಯಾಗುತ್ತೆ..."

"ಗುಡ್ ಐಡಿಯಾ...ಹೇಗೂ ಹೊರಗೆ ಹೋಗ್ತಿದ್ದೀರಾ..ಒಂದಷ್ಟು ಸಾಮಗ್ರಿ ಹೇಳ್ತೆನೆ, ಬರೆದುಕೊಂಡು ಬಿಡಿ"

"ಸರಿ..ಹೇಳು..."

"ಊ....ಕೊತ್ತಂಬರಿ ಸೊಪ್ಪು.. ಕರಿಬೇವು, ಶುಂಠಿ...ಹಾ..ಒಂದು ತೆಂಗಿನ ಕಾಯಿ... ಓಂಕಾಳು...."

"ಹೂ...ಬರೆದಾಯ್ತು...ಹೊರಡ್ಲಾ.."

"ಇನ್ನೂ ಇದೆ ತಡೀರಿ.... ಒಂದು ಬೂದುಗುಂಬಳಕಾಯಿ..."

"ಬೂದು ಗುಂಬಳಕಾಯಿನಾ? ಅದ್ಯಾಕೆ?"

"ಮತ್ತೆ ಮಜ್ಜಿಗೆ ಹುಳಿ ಏನು ಬೆಂಡೆಕಾಯಲ್ಲಿ ಮಾಡೋಕಾಗುತ್ತಾ? ತರ್ತಾ ದೊಡ್ದೆ ತನ್ನಿ. ಹೋಳು, ಗೀಳು ತರಬೇಡಿ... ತೆರೆದಿಟ್ಟದ್ದು ಚೆನ್ನಾಗಿರೋಲ್ಲಾ .."

"ಆಯ್ತಾ...ಹೊರಡಲಾ?"

"ಊ.. ಸ್ವಲ್ಪ ತಡೀರಿ...ರೀ ಒಂದೆ ಕುಂಬಳಕಾಯಿ ತರಬಾರದಂತೆ, ಅಜ್ಜಿ ಹೇಳ್ತಾ ಇದ್ರು. ತರೋದು ತರ್ತೀರಾ ಎರಡು ಕುಂಬಳಕಾಯಿ.. ದೊಡ್ಡದು ತನ್ನಿ. ಹೇಗೂ ದೊಡ್ಡ ಕುಂಬಳಕಾಯಿ ತರ್ತೀದ್ದೀರಾ ಅಷ್ಟನ್ನೂ ಮಜ್ಜಿಗೆ ಹುಳಿಗೆ ಹಾಕೋಕೆ ಆಗುತ್ತಾ? ಒಂದು ಕೆಲಸಾ ಮಾಡಿ, ಒಂದೆರಡು ಕೆಜಿ ಸಕ್ಕರೆ, ಒಂದು ಕೆಜಿ ನಂದಿನಿ ತುಪ್ಪ, ಕಾಲು ಕಾಲು ಕೆಜಿ ದ್ರಾಕ್ಷಿ, ಗೋಡಂಬಿ, ಏಲಕ್ಕಿ...."

"ಇದೆಲ್ಲಾ ಮಜ್ಜಿಗೆ ಹುಳಿಗೆ ಹಾಕ್ತಾರೆಯೆ?"

"ಛೆ..ಹುಳಿಗೆ ಅಲ್ರೀ.. ಕಾಶಿಹಲ್ವಾ ಮಾಡೋಕೆ. ಕುಂಬಳಕಾಯಿ ಒಡೆದು ಹಾಗೆ ಇಡಬಾರದು.. ಅಪಶಕುನ.."

"ಇಷ್ಟೆ ಸಾಕಾ?"

"ಸ್ವಲ್ಪ ತಡೀರಿ...ಒಂದು ನಾಲ್ಕು ಸೇರು ಭತ್ತದರಳು, ಎಂಟೋ ಹತ್ತೋ ನಿಂಬೆಹಣ್ಣು, ಒಳ್ಳೆ ಎಳೆಗಾಯಿ ಹಸಿ ಮೆಣಸು, ಎಸ್ ಎಸ್ ಪಿ ಇಂಗು ತನ್ನಿ.. ಘಮಘಮಾಂತ ಇರುತ್ತೆ..."

"ಕಾಶೀಹಲ್ವಾಕೆ ಇಂಗು ಹಾಕ್ತಾರೇನೆ?"

"ಥೋ..ನಿಮ್ಮ ಬುದ್ಧಿಗಿಷ್ಟು...ಹಲ್ವಾಕೆ ಯಾರಾದ್ರೂ ಇಂಗು ಹಾಕ್ತಾರೇನ್ರೀ.. ಇದು ಅರಳುಸಂಡಿಗೆಗೆ. ಕುಂಬಳಕಾಯಿ ತರ್ತಿದ್ದೀರಾ ಸಂಡಿಗೆ ಮಾಡದಿದ್ರೆ ಹೇಗೆ ಹೇಳಿ?..."

"ಈಗಲಾದರೂ ಹೊರಡಲಾ?"

"ಏನೋ ನೆನಪಿಗೆ ಬರ್ತಿದೆ ತಡೀರಿ... ಹಾ... ನೆನಪಾಯ್ತು ಒಂದು ಪಡವಲಕಾಯಿಯನ್ನೂ ತನ್ನಿ.  ಮಜ್ಜಿಗೆ ಹುಳಿಗೆ ಕುಂಬಳಕಾಯಿ ಜೊತೆ ಒಳ್ಳೆ ಕಾಂಬಿನೇಷನ್ನು... ಜೊತೆಗೆ ಒಂದರ್ಧ ಕೆಜಿ ಒಳ್ಳೆ ನುಣುಪಾದ ಕಡ್ಲೆಹಿಟ್ಟೂ ತನ್ನಿ... ಹೇಗೂ ಪಡವಲಕಾಯಿ ತರ್ತಿದ್ದೀರಾ ಬೊಂಡಾ ಮಾಡದಿದ್ರೆ ಹೇಗೆ ಹೇಳಿ? ಹಾ...ಅಡುಗೆ ಸೋಡಾನೂ, ರಿಫೈಂಡ್ ಎಣ್ಣೆನೂ ತನ್ನಿ, ಕಡಲೆಕಾಯಿದಲ್ಲಾ, ಸೂರ್ಯಕಾಂತಿದು..."

"ಸರಿ..ಹೊರಟೆ..."

"ಇದೇನು ಹೊರ ಬಾಗಿಲಿರೋದು ಆ ಕಡೆ...ಈ ಕಡೆಗೆಲ್ಲಿ ಹೊರಟಿರಿ..."

"ನಾನು ಹೊರಗೆ ಹೋಗ್ತಿಲ್ಲ, ಅಡುಗೆ ಮನೆಗೆ ಹೋಗ್ತಿದ್ದೀನಿ"

"ಯಾಕೆ? ಮಾರ್ಕೇಟಿಗೆ ಹೋಗಲ್ವಾ?"

"ನಿನ್ನ ಮಾರ್ಕೆಟ್ ಮನೆ ಹಾಳಾಗ. ಬಟ್ಟಲು ಹುಳಿ ಮಜ್ಜಿಗೆಗೆ ನೂರಾರು ರೂಪಾಯಿ ಖರ್ಚುಮಾಡಬೇಕಾ? ಬಂದ ಪಾಪ ಬರಲಿ.. ನಾನೆ ಆ ಮಜ್ಜಿಗೆನಾ ತಿಪ್ಪೆಗೆ ಸುರೀತೆನೆ...."

"ರೀ...ಮತ್ತೆ ನೀವೆ ಹೇಳಿದಿರಿ....."

"ಹೇಳಿದೆ.. ಬುದ್ಧಿ ಇಲ್ಲದೆ. ಹುಳಿ ನನಗೆ ಆಗೋದಿಲ್ಲ .. ಅಸಿಡಿಟಿ.

***

ಪತ್ನಿ ಮಾತು

ಓರ್ವ ಬುದ್ಧಿವಂತ ಪುರುಷ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ತುಂಬಾ ಆಲೋಚಿಸುತ್ತಾನೆ. ಹೃದಯದ ಮಾತನ್ನಾಲಿಸುತ್ತಾನೆ. ತಲೆ ಉಪಯೋಗಿಸುತ್ತಾನೆ ಮತ್ತು ಅಂತಿಮವಾಗಿ ತನ್ನ ಪತ್ನಿ ಹೇಳಿದ್ದನ್ನು ಚಾಚೂ ತಪ್ಪದೆ ಮಾಡುತ್ತಾನೆ.

***

ಜೀವನ ಸಂಗಾತಿ

ಹುಡುಗಿಯರು ಪ್ರತೀ ಸನ್ನಿವೇಶದಲ್ಲೂ ಹೆದರುತ್ತಾರೆ. ಏಕಾಂಗಿಯಾಗಿದ್ದಾಗ ದೆವ್ವಗಳ ಹೆದರಿಕೆ, ಗುಂಪಿನಲ್ಲಿದ್ದರೆ ಜನರ ಹೆದರಿಕೆ, ಗಾಳಿ ಬೀಸುತ್ತಿದ್ದರೆ ದುಪಟ್ಟಾ ಹಾರುವ ಹೆದರಿಕೆ, ಯಾರಾದರೂ ನೋಡುತ್ತಿದ್ದರೆ ಅವರ ದೃಷ್ಟಿಯ ಹೆದರಿಕೆ, ಬಾಲ್ಯದಲ್ಲಿ ಅಪ್ಪ ಅಮ್ಮನ ಹೆದರಿಕೆ. ಹೀಗೆ ಅವಳು ಹೆದರುತ್ತಲೇ ಇರುತ್ತಾಳೆ. ತನಗೊಬ್ಬ ಒಳ್ಳೆಯ ಜೀವನ ಸಂಗಾತಿ ಸಿಗುವ ತನಕ. ಆ ಬಳಿಕ ಈ ಎಲ್ಲಾ ಹೆದರಿಕೆಗಳ ಮುಯ್ಯಿ ಆ ವ್ಯಕ್ತಿಯ ಮೇಲೆ ಜೀವನ ಪರ್ಯಂತ ತೀರಿಸಿಕೊಳ್ಳುತ್ತಾಳೆ.

***

ಚಿಕ್ಕವನು

ಸೆಲೂನ್ ನಲ್ಲಿ ಹೇರ್ ಕಟ್ಟಿಂಗ್ ಮಾಡಿಸಿಕೊಂಡು ಬಂದ ಸೂರಿ ಹೆಂಡತಿ ಶ್ರೀಮತಿ ಬಳಿ ಹೀಗೆ ಕೇಳಿದ…

ಸೂರಿ: ಈಗ ನಾನು ನಿನಗಿಂತ ಹತ್ತು ವರ್ಷ ಚಿಕ್ಕವನಾಗಿ ಕಾಣಿಸುತ್ತಿದ್ದೇನೆ ತಾನೇ?

ಹಿಂದು ಮುಂದು ನೋಡದೇ ಶ್ರೀಮತಿ ತಕ್ಷಣ ಉಸುರಿದಳು.

ಶ್ರೀಮತಿ: ತಲೆ ಪೂರ್ತಿ ಬೋಳಿಸಿಕೊಂಡಿದ್ದರೆ ಈಗ ತಾನೇ ಜನಿಸಿದ ಹಸುಳೆಯಂತೆ ಕಾಣಿಸುತ್ತಿದ್ದಿರಿ.

***

ಮಾರಾಟ

ಶ್ರೀಮತಿ: ರೀ, ಈ ದಿನಪತ್ರಿಕೆಯಲ್ಲಿ ಒಬ್ಬಾತ ತನ್ನ ಪತ್ನಿಯನ್ನು ಮಾರಿಬಿಟ್ಟನೆಂಬ ಸುದ್ದಿಯಿದೆ.

ಸೂರಿ: ಹೌದೇ, ಎಷ್ಟಕ್ಕೆ?

ಶ್ರೀಮತಿ: ಒಂದು ಸೈಕಲ್ ಜೊತೆ ವಿನಿಮಯ ಮಾಡಿಕೊಂಡನಂತೆ. ನೀವೂ ಹಾಗೆ ಮಾಡೋದಿಲ್ಲ ತಾನೇ?

ಸೂರಿ: ಎಲ್ಲಾದರೂ ಉಂಟೇ? ಯಕಶ್ಚಿತ್ ಸೈಕಲ್ ತಕೊಂಡು ನಾನೇನು ಮಾಡಲಿ?

***

ವ್ಯತ್ಯಾಸ

ಸೂರಿ: ಸನ್ಯಾಸಿಗೂ ಸಂಸಾರಿಗೂ ಇರುವ ವ್ಯತ್ಯಾಸ ಏನು ಗೊತ್ತಾ?

ಗಾಂಪ: ಹುಲಿ ಚರ್ಮದ ಮೇಲೆ ಮಲಗೋನು ಸನ್ಯಾಸಿ, ಹುಲಿಯ ಜೊತೆಗೇ ಮಲಗುವವನು ಸಂಸಾರಿ ಕಣೋ!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ