‘ಸಂಪದ’ ನಗೆಬುಗ್ಗೆ - ಭಾಗ ೧೨೭

‘ಸಂಪದ’ ನಗೆಬುಗ್ಗೆ - ಭಾಗ ೧೨೭

ಔತಣ ಕೂಟ

ಸೂರಿಗೆ ಲಾಟರಿಯಲ್ಲಿ ದೊಡ್ಡ ಬಹುಮಾನ ಬಂದ ಮೇಲೆ ಗೆಳೆಯರ ಬಳಗವೂ ದೊಡ್ಡದಾಗಿತ್ತು. ರಾತ್ರೆ, ಹಗಲೆಂಬ ಭೇದವಿಲ್ಲದೆ ಪೋಲಿ ಗೆಳೆಯರ ಪಟಾಲಂ ಒಟ್ಟಿಗೆ ತಿರುಗಾಡುತ್ತ ಗುಂಡು, ತುಂಡು, ಜೂಜು ಇದರಲ್ಲೇ ಮಜಾ ಮಾಡಿಕೊಂಡಿದ್ದ. ಹಬ್ಬ ಬಂದಾಗ ಗೆಳೆಯರು ಸೂರಿಯ ಮನೆಯಲ್ಲಿ ದೊಡ್ಡ ಔತಣಕೂಟ ಮಾಡುವ ಪ್ಲಾನು ಹಾಕಿದರು. ಆದರೆ ಅವನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. 'ನನ್ ಹೆಂಡ್ತಿ ಇದನ್ನೆಲ್ಲ ಸಹಿಸೋದಿಲ್ಲ ಕಣೋ. ಮನೇಲಿ ಗುಂಡು ಹಾಕೋ ಹಂಗಿಲ್ಲ. ತುಂಡು ತಿನ್ನೋ ಹಂಗೂ ಇಲ್ಲ, ಹೆಮ್ಮಾರಿಯಾಗಿ ಬಿಡ್ತಾಳೆ' ಎಂದು ಗೋಗರೆದ.

'ಸರಿ ಬಿಡು. ಈ ಊರಲ್ಲಿ ನಿರ್ಜನವಾದ ಒಂದು ಕಾಡು ಇದೆ. ನಾವು ತುಂಬ ಸಲ ಮಜಾ ಮಾಡೋದಕ್ಕೆ ಅಲ್ಲಿಗೆ ಹೋಗಿದ್ದೇವೆ. ಈ ಕಾಡಿಗೆ ಮಧ್ಯರಾತ್ರೆ ಗುಂಡು ತಗೊಂಡು ನಾವು ಬರ್ತೇವೆ. ನೀನು ರಾತ್ರೆ ನಿನ್ ಹೆಂಡತಿ ಮಲಗಿದ ಮೇಲೆ ನಿಮ್ಮ ಮನೇಲಿರೋ ಮೇಕೇನ ಹಗ್ಗ ಹಾಕಿ ತಂದ್ದಿಡು. ಅಲ್ಲೇ ಖತಂ ಮಾಡಿ ಬಿರಿಯಾನಿ ತಯಾರಿಸಿದ್ರಾಯ್ತು. ಬೇಯಿಸೋದಕ್ಕೆ ಬೇಕಾದ ಪಾತ್ರೆ, ಮಸಾಲೆ ನಾವೇ ತಂದ್ದಿದ್ದೇವೆ' ಗೆಳೆಯರು ಉಪಾಯವೊಂದನ್ನು ಹೇಳಿದರು.

'ಅಂಗಾದ್ರೆ ಅಡ್ಡಿ ಇಲ್ಲ. ಮೇಕೆ ತರೋ ಕೆಲಸ ನಂದು' ಸೂರಿ ಒಪ್ಪಿಕೊಂಡ.

ಹೆಂಡತಿಗೆ ಚೆನ್ನಾಗಿ ನಿದ್ರೆ ಹತ್ತಿದ ಮೇಲೆ ಸೂರಿ ಸದ್ದಾಗದಂತೆ ಎದ್ದು ಮೇಕೆಗೆ ಹಗ್ಗ ಹಾಕಿ ತೆಗೆದುಕೊಂಡು ಹೋದ. ಅರೆಗತ್ತಲಿನಲ್ಲಿ ಗೆಳೆಯರು ಅದನ್ನು ಹದ ಮಾಡಿ ಬಿರಿಯಾನಿ ತಯಾರಿಸಿದರು. ಊಟ, ಕುಡಿತ, ನೃತ್ಯ, ಜೂಜು ಎಲ್ಲ ನಸುಕು ಹರಿಯುವವರೆಗೂ ನಡೆಯಿತು.

ಬೆಳಗಾಗುವ ಮೊದಲು ಸೂರಿ ಮನೆಗೆ ಬಂದು ಮಂಚ ಸೇರಿಕೊಂಡ. ಬೆಳಗಾದ ಮೇಲೆ ಸೂರಿ ಎದ್ದು ಹೊರಗೆ ಬಂದ. ನೋಡಿದರೆ ಅವನ ಮೇಕೆ ಆರಾಮವಾಗಿ ನಿಂತುಕೊಂಡಿತ್ತು. 'ಎಲಾ, ಇದನ್ನು ರಾತ್ರೆ ಕಣ್ಣೆದುರೇ ಕತ್ತರಿಸಿ ಬೇಯಿಸಿ ತಿಂದದ್ದು ಸುಳ್ಳಲ್ಲ. ಇದು ಜೀವಂತವಾಗಿ ಹೇಗೆ ಬಂತು? ದೆವ್ವಗಿವ್ವ ಏನಾದರೂ ಹೀಗೆ ಬಂದಿರಬಹುದೆ?' ಸಣ್ಣಗೆ ಬೆವತುಬಿಟ್ಟ ಅವನು.

ಆಗ ಹೆಂಡತಿ ಅಂಗಳಕ್ಕೆ ಬಂದಳು. 'ನಿನ್ನ ರಾತ್ರೆಯಿಂದ ನಮ್ಮ ನಾಯಿ ಕಾಣಿಸ್ತಾನೇ ಇಲ್ಲ ನೀವೆಲ್ಲಾದ್ರೂ ನೋಡಿದಿರಾ?' ಕೇಳಿದಳು.

***

ಚಾಟಿಂಗ್

ಹುಡುಗ- ಹುಡುಗಿ ವಾಟ್ಸಪ್ ನಲ್ಲಿ ಚ್ಯಾಟ್ ಮಾಡುತ್ತಿದ್ದರು..

ಹುಡುಗಿ :- 4, f9, I'll talk 2 u t9i8, w8 4 me.

ಹುಡುಗ:-ಕನ್ನಡದಲ್ಲಿ ಮಾತಾಡು ಅಥವಾ ಇಂಗ್ಲಿಷ್‌ ನಲ್ಲಿ.... ಈ ಗಣಿತದಲ್ಲೇಕೆ ಮಾತಾಡುತ್ತಿರುವೆ?!

***

ನಿದ್ರೆ

ಶ್ರೀಮತಿ: ನೀವು ನಿದ್ರಿಸುತ್ತಿದ್ದಾಗ ನನ್ನ ಮೇಲೆ ತುಂಬಾ ರೇಗಾಡುತ್ತಿದ್ದಿರಿ.

ಸೂರಿ: ಅದು ನಿನ್ನ ಭ್ರಮೆ.

ಶ್ರೀಮತಿ: ಯಾವುದು, ನೀವು ರೇಗಾಡುತ್ತಿದ್ದುದೆ?

ಸೂರಿ: ಅಲ್ಲ ನಾನು ನಿದ್ರಿಸುತ್ತಿದ್ದುದು!

***

ಜಗಳ

ಸೂರಿ: ಹೆಂಡತಿಯರಿಗೆ ಜಗಳ ತೆಗೆಯಲು ಯಾವುದೇ ಕಾರಣ ಬೇಕೆಂದಿಲ್ಲ ಅಲ್ವೇನಯ್ಯ?

ಗಾಂಪ: ಅದೇನೋ ಹೌದು, ಆದರೂ ಅವರಿಗೆ ಒಂದು ಕಾರಣ ಮಾತ್ರ ಬೇಕೇ ಬೇಕು.

ಸೂರಿ: ಯಾವುದೋ ಅದು?

ಗಾಂಪ: ಪತಿ!

***

ನಿದ್ದೆ

ಸೂರಿ: ನಿನ್ನೆ ರಾತ್ರಿ ಪೂರ್ತಿ ನನಗೆ ನಿದ್ದೆ ಬರಲಿಲ್ಲ.

ಗಾಂಪ: ಏಕೆ?

ಸೂರಿ: ರಾತ್ರಿಯೆಲ್ಲಾ ಎದ್ದಿರುವಂತೆ ಕನಸು ಕಂಡೆ ಕಣೋ..!

***

ಸವಾಲು

ಯಾವುದಕ್ಕೆ 'ಸವಾಲು' ಎನ್ನುತ್ತಾರೆ? ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ ಬಂದಿತ್ತು. ಸೂರಿ ಉತ್ತರ ಪತ್ರಿಕೆಯನ್ನು ಪೂರ್ತಿ ಖಾಲಿ ಬಿಟ್ಟು ಕೊನೆಯಲ್ಲಿ ಬರೆದ, ತಾಕತ್ತಿದ್ದರೆ ನನ್ನನ್ನು ಪಾಸ್ ಮಾಡಿ ತೋರಿಸಿ!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ