‘ಸಂಪದ’ ನಗೆಬುಗ್ಗೆ - ಭಾಗ ೧೨೮

‘ಸಂಪದ’ ನಗೆಬುಗ್ಗೆ - ಭಾಗ ೧೨೮

ಬೆಂಜ್ ಕಾರು

ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಸೂರಿ ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಖೇಮುನ ಕೇಳಿದ್ರು.

ಯಾರ್ದು ಕಾರು?

ನಂದೇ, ಇವತ್ತು ಕೊಂಡುಕೊಂಡೆ?

ಅಷ್ಟು ದುಡ್ಡು ಎಲ್ಲಿತ್ತು

೨೦೦೦ ರುಪಾಯಿ ಕೊಟ್ಟೆ ಅಷ್ಟೆ

೨೦೦೦ ರುಪಾಯಿಗೆ ನಿಂಗೆ ಬೆಂಜ್ ಕಾರ್ ಯಾರ್ ಕೊಡ್ತಾರೆ. ಏನ್ ತಮಾಷೆ ಮಾಡ್ತೀಯಾ?

ಇಲ್ಲ, ಎದುರುಮನೆ ಆಂಟಿ ನಂಗೆ ಮಾರಿದ್ರು

ಸೂರಿ ಅಪ್ಪ ಅಮ್ಮ ಈ ಆಂಟಿ ಕಾಲೇಜು ಹುಡುಗ ಸಿಕ್ಕ ಅಂತ ಬುಟ್ಟಿಗೆ ಹಾಕ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತೆ ಅಂತ ಗುಸುಗುಸು ಮಾತಾಡಿಕೊಳ್ಳೋಕೆ ಶುರು ಮಾಡಿದ್ರು. ನಂತರ ನಡಿ ಅಂತ ಅವನನ್ನು ಕರ್ಕೊಂಡು ಆಂಟಿ ಮನೆಗೆ ಹೋದ್ರು. ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಸೂರಿ ಅಪ್ಪ ಕೇಳಿದ-

ನನ್ನ ಮಗನಿಗೆ ನೀವು ೨೦೦೦ ರುಪಾಯಿಗೆ ಬೆಂಜ್ ಕಾರ್ ಮಾರಿದ್ರಂತೆ. ಯಾಕಂತ ಕೇಳಬಹುದಾ?.

ಆಂಟಿ ಹೇಳಿದ್ದು- ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇರಲಿಲ್ಲ. ಇವತ್ತು ಬೆಳಿಗ್ಗೆ ಕಾಲ್ ಮಾಡಿ, ನಾನು ನನ್ನ ಸೆಕ್ರೆಟರಿ ಜೊತೆ ಹೋಗ್ತಾ ಇದ್ದೀನಿ. ಇನ್ನೇಲೆ ಮನೆಗೆ ಬರಲ್ಲ. ನಾನು ಅವಳ ಜೊತೆನೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು ಇಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ ಹೆಸರಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು ಅಂದ. ಅದಕ್ಕೇ ಮಾರಿದೆ.

***

ಮೂವಿಗೆ ಹೋಗರ್ತೀನಿ.....!

ಮುಂಬೈ ವಾಸಿಯಾದ ಸೂರಿ, ಹಳ್ಳಿಯಲ್ಲಿ ಜಮೀನ್ದಾರನಾಗಿದ್ದ ತನ್ನ ಬಾಲ್ಯದ ಗೆಳೆಯ ಗಾಂಪನ ಮನೆಗೆ ಸಂಸಾರ ಸಮೇತ ಬಂದಾಗ, ಅವರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ರಾಜ್ಯಾತಿಥ್ಯ ನಡೆಯುತ್ತಿತ್ತು. ಆದರೆ, ಗಾಂಪ ಮಾತ್ರ ಆಗಾಗ್ಗೆ ಸೂರಿಗೆ 'ಮೂವಿಗೆ ಹೋಗಿ ಬರ್ತೀನಿ' ಅಂತ ಹೇಳಿ, ಮೂರ್ನಾಲ್ಕು ನಿಮಿಷಗಳ ಅನಂತರ ಬರುತ್ತಿದ್ದ. ಇದನ್ನು ಕಂಡು ಚಕಿತನಾಗಿ, ತಡೆಯಲಾರದೆ ಸೂರಿ ಕೇಳಿಯೇಬಿಟ್ಟ - 'ಅಲ್ಲಯ್ಯಾ, ಅದ್ಯಾವುದಯ್ಯಾ ಶಾರ್ಟ್ ಫಿಲ್ಮ್ ? ನೀನೊಬ್ಬನೆ ಆಗಾಗ್ಗೆ ಹೋಗಿ ನೋಡಿಕೊಂಡು ಬರ್ತೀಯಾ, ನಮಗೆಲ್ಲಾ ತೋರಿಸಲ್ವಾ ಆ ಮೂವಿನಾ? ಎಂದು. ಗಾಂಪ - 'ಅಯ್ಯೋ ರಾಮ, ಅದು ನೋಡೋದಲ್ಲಾ, ಅವರವರೇ ಮಾಡೋದು' ಎಂದಾಗ, 'ಏನಯ್ಯಾ ಹಾಗಂದರೆ?' ಮತ್ತೆ ಕೇಳಿದಾಗ, ಗಾಂಪ- 'ಮೂವಿ ಅಂದರೆ ಮೂತ್ರ ವಿಸರ್ಜನೆ ಅಂದಾಗ, ಸೂರಿ ಸುಸ್ತೋ ಸುಸ್ತು...!

***

ದಪ್ಪ ವಸ್ತುಗಳು

ಸೂರಿ: ನಿನ್ನನ್ನು ದಪ್ಪಗಾಗಿಸುವ ವಸ್ತುಗಳಿಂದ ದೂರವಿರುವಂತೆ ಡಾಕ್ಟರ್ ತಿಳಿಸಿದ್ದಾರಲ್ಲ, ಅದನ್ನು ಸರಿಯಾಗಿ ಪಾಲಿಸುತ್ತಿರುವೆ ತಾನೆ?

ಗಾಂಪ: ಹೌದು ಕಣೋ.

ಸೂರಿ: ಹಾಗಾದರೆ ಏನೇನು ಬಿಟ್ಟಿಟ್ಟೆ?

ಗಾಂಪ: ಕನ್ನಡಿ, ತೂಕದ ಮೆಶಿನ್ ಮತ್ತು ತೆಳ್ಳಗಿರುವ ಮಿತ್ರರು!

***

ಟೆನ್ಶನ್

ಸೂರಿ: ಭಾರತೀಯ ಮಹಿಳೆ ಒಂದೇ ವೇಳೆ ಹಲವಾರು ಕುಟುಂಬಗಳ ಟೆನ್ಶನ್ ತೆಗೆದುಕೊಳ್ಳುತ್ತಾಳೆ.

ಗಾಂಪ: ಅಂದ್ರೆ..?

ಸೂರಿ: ಈಗ ನನ್ನ ಪತ್ನಿಯನ್ನೇ ನೋಡು.. ಅವಳು ಸ್ವತಃ ತನ್ನ ಅವಳ ತವರಿನ, ನೆರೆಮನೆಯವರ ಕುಟುಂಬಗಳ ಜೊತೆಗೆ, ಟಿವಿ ಧಾರಾವಾಹಿಯ ಅನೇಕ ಕುಟುಂಬಗಳ ಟೆನ್ಶನ್ ಕೂಡಾ ತೆಗೆದುಕೊಳ್ಳುತ್ತಿದ್ದಾಳೆ. ಅದಕ್ಕೇ ಧಾರಾವಾಹಿ ನೋಡುತ್ತಾ ಅಳುತ್ತಿದ್ದಾಳೆ..!

***

ಸೊಳ್ಳೆ

ರಾತ್ರಿ ಮಲಗಿರುವಾಗ ಸೂರಿಗೆ ಒಂದು ಸೊಳ್ಳೆ ಕಚ್ಚಿತು. ಸಿಟ್ಟು ಬಂದು ಸೂರಿ ಚಪ್ಪಲಿ ಹಿಡಿದು ಆ ಸೊಳ್ಳೆಯ ಹಿಂದೆ ಓಡಿದ. ಆದರೆ ರಾತ್ರಿ ಪೂರ್ತಿ ಹಿಂಬಾಲಿಸಿದರೂ ಅದನ್ನು ಹೊಡೆಯಲಾಗಲಿಲ್ಲ. ಹಾಗೇ ಬೆಳಗಾಯಿತು. ಆಗ ಸೂರಿ ಸ್ವಗತದಲ್ಲಿ ಅಂದು ಕೊಂಡ, ಈ ಸೊಳ್ಳೆಯನ್ನು ಹೊಡೆಯಲಂತೂ ಆಗಲಿಲ್ಲ.ಆದರೆ ಒಂದೇ ಒಂದು ಖುಷಿಯೆಂದರೆ, ರಾತ್ರಿ ಪೂರ್ತಿ ನಾನು ಇದಕ್ಕೂ ಮಲಗಲು ಬಿಡಲಿಲ್ಲ..!

(ಸಂಗ್ರಹ)