‘ಸಂಪದ’ ನಗೆಬುಗ್ಗೆ - ಭಾಗ ೧೨೯

‘ಸಂಪದ’ ನಗೆಬುಗ್ಗೆ - ಭಾಗ ೧೨೯

ಹೆಬ್ಬುಲಿ

ದಿನ ನಿತ್ಯವೂ ಮಾತೆತ್ತಿದರೆ ಜಗಳ. ಮಾತು ಮಾತಿಗೆ ಕಾಲು ಕೆದರುವ ಜಗಳಗಂಟಿ ಹೆಂಡತಿಯ ಕಾಟ ತಾಳಲಾರದೆ ಸೂರಿ ರೋಸಿಹೋದ. ಪ್ರಾಣಿಗಳಿಗೆ ಆಹಾರವಾಗುವ ಮೂಲಕ ಪುಣ್ಯ ಸಂಪಾದನೆ ಮಾಡಬೇಕು ಎಂದು ಯೋಚಿಸಿದ. ಹೀಗೆ ಸಾಯಲು ನಿರ್ಧರಿಸಿ ಒಂದು ಮೃಗಾಲಯಕ್ಕೆ ಹೋದ. ಆಗ ಹೆಬ್ಬುಲಿಯೊಂದು ಗೂಡಿನಿಂದ ತಪ್ಪಿಸಿಕೊಂಡು ಅವನನ್ನು ತಿನ್ನಲು ಬಾಯ್ದೆರೆದು ಮುಂದೆ ಬಂದಿತು. ಅಬ್ದುಲ್ಲ ಸ್ವಲ್ಪವೂ ಭಯ ಪಡಲಿಲ್ಲ.

ಹೆಬ್ಬುಲಿಗೆ ಆಶ್ಚರ್ಯ. 'ನೀನೆಂಥ ಮನುಷ್ಯನಯ್ಯ? ಹೆಬ್ಬುಲಿ ಮುಂದೆ ಬಂದರೂ ಭಯಪಡುವುದಿಲ್ಲ ಎಂದರೆ ಹೆಬ್ಬುಲಿಯನ್ನೇ ಸೋಲಿಸಲು ನಿನ್ನಲ್ಲಿ ಏನಿದೆ ಅಂತಹ ಅಸ್ತ್ರ?' ಎಂದು ಕೇಳಿತು.

'ಅಸ್ತ್ರವೂ ಇಲ್ಲ. ವಸ್ತ್ರವೂ ಇಲ್ಲ. ನಾನು ಇಷ್ಟು ವರ್ಷ ನಿನಗಿಂತ ದೊಡ್ಡ ಹೆಬ್ಬುಲಿಯೊಂದಿಗೆ ಸಂಸಾರ ಮಾಡಿ ಇಲ್ಲಿಗೆ ಬಂದಿದ್ದೇನೆ. ಅದರ ಅನುಭವದ ಮುಂದೆ ನೀನು ನನಗೊಂದು ಲೆಕ್ಕವೇ ಅಲ್ಲ' ಎಂದ ಸೂರಿ.

***

ಮಚ್ಚೆ 

ಸೂರಿ ಒಂದು ಹುಡುಗೀನ ತುಂಬಾ ಲವ್ ಮಾಡ್ತಾ ಇದ್ದ. ಆದರೆ ಆ ಹುಡುಗಿ ಇವನನ್ನು ಇಷ್ಟಪಡ್ತಾ ಇರಲಿಲ್ಲ. ತುಂಬಾ ಯತ್ನಿಸಿದ ಮೇಲೂ ಹುಡುಗಿ ಸೂರಿಯನ್ನು ಮದುವೆ ಆಗಲು ಒಪ್ಪಲಿಲ್ಲ. ಸೂರಿಗೆ ದೊಡ್ಡ ನಿರಾಸೆ ಆಗುವಂತೆ ಅವಳ ಮದುವೆ ಕೂಡ ಫಿಕ್ಸ್ ಆಯ್ತು. ಈಗ ಸೂರಿ ತೀರಾ ನಿರಾಸೆಗೊಳಗಾದ. ಸ್ನೇಹಿತ ಗಾಂಪನನ್ನು 'ಎಣ್ಣೆ ಹೊಡಿ ಬೇಕು ಬಾ' ಅಂತ ಕರೆದು ತನ್ನ ಮನಸ್ಸಿನ ನೋವನ್ನೆಲ್ಲಾ ತೋಡಿಕೊಂಡ. ಅದಕ್ಕೆ ತುಂಬಾ ಯೋಚಿಸಿದ ಗಾಂಪ, "ನೋಡು, ಒಂದ್ ಕೆಲ್ಸ ಮಾಡು. ಅವಳನ್ನು ಮದ್ದೆ ಆಗ್ತಾ ಇರೋ ಹುಡುಗನ ಹತ್ರ ಹೋಗಿ, ನನಗೆ ಆ ಹುಡುಗಿ ಜತೆ ಅಫೇ‌ರ್ ಇತ್ತು ಅಂತ ಹೇಳು. ಆಗ ಮದುವೆ ಮುರಿದು ಬೀಳತ್ತೆ' ಅಂದ. 'ಅವನು ಹೆಂಗ್ ನಂಬ್ತಾನೆ?' ಅಂತ ಕೇಳಿದ ಸೂರಿ. ಅದಕ್ಕೆ ಗಾಂಪ, 'ನನ್ನ ಮೈ ಮೇಲೆ ಟೋಟಲ್ 6 ಮಚ್ಚೆ ಇದೆ ಅಂತ ನನ್ ತಂಗಿ ಹತ್ರ ನಿನ್ ಹುಡುಗಿ ಹೇಳಿದ್ದಳಂತೆ. ನೀನು ಸುಮ್ನೆ, ಅವಳ ದೇಹದಲ್ಲಿ ಇಂಥ ಕಡೆ ಮಚ್ಚೆ ಇದೆ ಅಂತ ಮದುವೆ ಆಗೋ ಹುಡುಗನಿಗೆ ಹೇಳು. ಮದುವೆ ಮುರಿದು ಬೀಳುತ್ತೆ' ಅಂತ ಹೇಳಿದ. ಸರಿ ಸೂರಿ ಮರುದಿನ ಗಾಂಪ ಹೇಳಿದ ಪ್ಲಾನ್ ವರ್ಕ್‌ ಔಟ್ ಮಾಡೋಕೆ ಹೋಗಿ ಸಪ್ಪೆ ಮೋರೆ ಹಾಕ್ಕೊಂಡು ಬಂದ. ಅವನನ್ನು ನೋಡಿದ ಗಾಂಪ, 'ಏನಾಯ್ತ?' ಅಂತ ಕೇಳಿದ. ಅದಕ್ಕೆ ಸೂರಿ ಹೇಳಿದ, 'ಇಲ್ಲಾ ಕಣೋ, ನಮ್ಮ ಪ್ಲಾನ್ ವರ್ಕ್‌ ಔಟ್ ಆಗ್ಲಿಲ್ಲ. ನಾನು, ನೀನು ಹೇಳಿದ ಐಡಿಯಾ ಪ್ರಕಾರ ಹೇಳಿದ್ದಕ್ಕೆ ಆ ಹುಡುಗ, ಅದಕ್ಕೇ ನಿವಾಗ? ಅಂತ ತುಂಬಾ ಕ್ಯಾಷುವಲ್ ಆಗಿ ಹೇಳಿಬಿಟ್ಟ. ವಾಪಸ್ಸು ಬಂದೆ'. 'ಸರಿ, ನೀನು ಏನಂತ ಹೇಳಿದೆ?' ಅಂತ ಗಾಂಪ ಕೇಳಿದ. ಅದಕ್ಕೆ ಸೂರಿಯಿಂದ ಉತ್ತರ ಬಂತು- 'ನಾನ್ ಒಂದ್ ಮಾತು ಹೇಳ್ತಿನಿ. ಇದಕ್ಕೇನರ್ಥ ಅಂತ ನೀನೇ ಡಿಸೈಡ್ ಮಾಡು. ನೀನು ಮದ್ದೆ ಆಗ್ತಾ ಇರೋ ಹುಡುಗಿಯ ಎಡಗೆನ್ನೆಯ ಮೇಲೆ ಒಂದು ಮಚ್ಚೆ ಇದೆ, ಅಂತ ಹೇಳಿದೆ'.

***

ಚಪ್ಪಲಿಗಾಗಿ

ಮನೆಗೆ ಒಂದಿಬ್ಬರು ಅತಿಥಿಗಳು ಬಂದಿದ್ದರು. ಅವರನ್ನು ಸತ್ಕರಿಸಿದ ಬಳಿಕ ಬೀಳ್ಕೊಡಲು ಸುಲ್ತಾನ್ ಹೊರ ಬಾಗಿಲವರೆಗೂ ಅವರ ಹಿಂದೆಯೇ ಬಂದ. ಅತಿಥಿಗಳು, 'ಆಹಾ, ಎಂಥ ಸೌಜನ್ಯ ನಿಮ್ಮದು. ನಮ್ಮನ್ನು ಕಳುಹಿಸಿ ಕೊಡಲು ನಿಮ್ಮಂಥ ದೊಡ್ಡವರು ಅದೂ ಸಾವಿರಾರು ಒಂಟೆಗಳ ಮೇಲೆ ಬಂಗಾರದ ನಾಣ್ಯಗಳನ್ನು ಹೇರಿಕೊಂಡು ಪ್ರಯಾಣಿಸುವವರು ಇಲ್ಲಿ ವರೆಗೂ ಬರುವುದೆಂದರೆ ಏನು!' ಎಂದು ಹೊಗಳಿದರು.

'ಹಾಗೇನಿಲ್ಲ, ನನ್ನ ಚಿನ್ನದ ಚಪ್ಪಲಿಗಳು ಇವತ್ತು ತಾನೇ ತಂದಿರೋದು. ಅದರಲ್ಲಿ ವಜ್ರಗಳ ಕುಸುರಿಯೂ ಇದೆ. ನೀವು ಹೋಗುವ ಆತುರದಲ್ಲಿ ಅದಲು ಬದಲಾಗಬಾರದಲ್ಲ, ಹಾಗೆ ಜೊತೆಗೇ ಬಂದೆ' ಎಂದ ಸುಲ್ತಾನ್..

***

ಹೂಡಿಕೆ

ಸೇಲ್ಸ್ ರೆಪ್ರೆಸೆಂಟೇಟಿವ್:- ನೀವು ನಮ್ಮ ಬ್ಯಾಂಕಿನ ಮ್ಯೂಚುಯಲ್ ಫಂಡ್ ಖರೀದಿಸಿ. ನಿಮ್ಮ ಹೂಡಿಕೆ ಐದು ವರ್ಷಗಳಲ್ಲಿ ದುಪ್ಪಟ್ಟಾಗುವುದು.

ಹಿರಿಯ ನಾಗರಿಕ :- ನಾನೀಗ ವಯಸ್ಸಿನ ಯಾವ ಹಂತದಲ್ಲಿದ್ದೇನೆಂದರೆ, ಸರಿಯಾಗಿ ಹಣ್ಣಾಗದ ಅರೆಕಾಯಿ ಬಾಳೆಹಣ್ಣು ಕೂಡಾ ಖರೀದಿಸುತ್ತಿಲ್ಲ ಮಗೂ..!

***

ಮದುವೆ

ಗರ್ಲ್ ಫ್ರೆಂಡ್:- ಮದುವೆ ಆದ ಮೇಲೂ ನೀನು ನನ್ನನ್ನು ಹೀಗೆಯೇ ಪ್ರೀತಿಸುತ್ತಿರುವೆ ತಾನೆ?

ಬಾಯ್ ಫ್ರೆಂಡ್:- ಮತ್ತಿನ್ನೇನು.. ನಿಶ್ಚಯವಾಗಿಯೂ..! ಅಂದ ಹಾಗೆ, ಯಾವಾಗ ನಿನ್ನ ಮದುವೆ?

***

ಯೋಗ್ಯತೆ

ಸೂರಿ: ನಿನ್ನನ್ನು ಬಿಟ್ಟು ಇರೋಕ್ಕಾಗಲ್ಲ, ಐ ಲವ್ ಯು.

ಶ್ರೀಮತಿ: ನಿನ್ನನ್ನು ನೀನು ನೋಡ್ಕೊಂಡಿದಿಯಾ? ಒಳ್ಳೇ ಬ್ರಾಂಡೆಡ್ ಸ್ಲಿಪ್ಪರ್ ಹಾಕೋ ಯೋಗ್ಯತೆ ಇಲ್ಲ. ನೀನು ನನ್ನನ್ನು ಲವ್ ಮಾಡ್ತೀಯಾ?

ಸೂರಿ ಗೆಳೆಯ ಗಾಂಪ: ನನ್ನ ಫ್ರೆಂಡ್ ಯೋಗ್ಯತೆ ಬಗ್ಗೆ ಮಾತಾಡ್ತೀಯಾ? ನೂರಾರು ಜನಕ್ಕೆ ಅಕ್ಕಿ ಕೊಡೋ ಕೈ ಕಣ್ರೀ ಅದು.

ಶ್ರೀಮತಿ: ಹೌದಾ? ಏನು ಮಾಡ್ತಾರೆ?

ಗಾಂಪ: ಸೊಸೈಟಿಯಲ್ಲಿ ಅಕ್ಕಿ ಕೊಡ್ತಾರೆ.

***

ಹೆಂಡತಿ

ಸೂರಿ: ಎಲ್ಲರಿಗೂ ನಿನ್ನಂತ ಹೆಂಡತಿಯೇ ಸಿಗಲಿ ಅಂತ ದಿನವೂ ದೇವರಲ್ಲಿ ಬೇಡಿಕೊಳ್ಳುತ್ತೇನೆ.

ಶ್ರೀಮತಿ: ಯಾಕೆ? ನಾನು ಅಷ್ಟೊಂದು ಒಳ್ಳೆಯವಳಾ?

ಸೂರಿ: ಹಾಗೇನಿಲ್ಲ. ನಾನೊಬ್ಬನೇ ನರಕ ಯಾಕೆ ಅನುಭವಿಸಬೇಕು ಅಂತ!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾ ತಾಣ