‘ಸಂಪದ’ ನಗೆಬುಗ್ಗೆ - ಭಾಗ ೧೩೪

‘ಸಂಪದ’ ನಗೆಬುಗ್ಗೆ - ಭಾಗ ೧೩೪

ಅಪ್ರಿಯ ಹೋಲಿಕೆ

ಸೊಸೆ ರೋದಿಸುತ್ತಲೇ ಮನೆ ಬಂದಳು. ಗಾಬರಿಗೊಂಡ ಅತ್ತೆ ಕಾರಣ ಕೇಳಿದಳು

‘ಯಾಕಮ್ಮಾ.. ಅಳ್ತೀಯಾ… ಏನಾಯ್ತು?

‘ಅತ್ತೆ ನಾನು ತಾಟಕಿ ತರಹ ಇದ್ದೀನಾ?’

‘ಛೇ ಯಾರು ಹೇಳಿದ್ದು?’

“ಮತ್ತೆ, ನನ್ನ ಕಣ್ಣು ಕಪ್ಪೆಯಂತೆ ಹೊರಗೆ ಚಾಚಿದ್ಯಾ?’

ಖಂಡಿತಾ ಇಲ್ಲ

‘ನನ್ನ ಮೂಗು ದೊಣ್ಣೆ ಮೆಣಸಿನಕಾಯಿ ತರಹ ಗುಂಡಗಿದ್ಯಾ?’

‘ಇಲ್ವೇ ಇಲ್ಲ’

‘ಮತ್ತೆ ನಾ ಏನಾದ್ರೂ ಎಮ್ಮೆಯಂತೆ ಕಪ್ಪಗೆ, ದಪ್ಪಗೆ ಇದ್ದೀನಾ?’

‘ಇಲ್ಲಮ್ಮಾ,ಯಾರು ಹಾಗಂದದ್ದು?

‘ಮತ್ಯಾಕೆ ನಮ್ಮ ಓಣಿಯವರೆಲ್ಲಾ ಹಾಗೇಳೋದು… ನೀನು ನಿಮ್ಮತ್ತೆ ಥರಾನೇ ಇದ್ದೀ ಅಂತಾ.!

***

ಅವ್ರನ್ನೂ ಕರ್ಕೊಂಡು ತುಂಬ್ರೀ…!

ಬಿಜಾಪುರದ ನಗರದಲ್ಲಿ ಕೆಲಸ ಮಾಡುತ್ತಿದ್ದ ಸೂರಿಯ ಮನೆಯ ಬೀದಿಯಲ್ಲೇ ಆತನ ಸಹಾಯಕನ ಮನೆ ಇತ್ತು. ಅದೊಂದು ದಿನ ಸೂರಿಯ ಕಚೇರಿ ಜೀಪು ರಿಪೇರಿಗೆ ಕೊಟ್ಟಿದ್ದರಿಂದ ಮಧ್ಯಾಹ್ನದ ಊಟ ಮಾಡಿ ಬರಲು ತನಗೆ ಡ್ರಾಪ್ ಕೊಡುವಂತೆ ಸೂರಿ, ಸಹಾಯಕನಿಗೆ ಕೇಳಿದ್ದ. ಅದರಂತೆ ಆತ ತನ್ನ ಸ್ಕೂಟರ್ ಮೇಲೆ ಸೂರಿಯನ್ನು ಮನೆಗೆ ಬಿಟ್ಟು ಬಂದಿದ್ದ.

ಅರ್ಧ ಗಂಟೆ ನಂತರ ಮತ್ತೆ ಸೂರಿ ಸಹಾಯಕನ ಮನೆಗೆ ಬಂದಾತ ಆತ, ‘ಒಂದೈದು ಮಿನಿಟ್ ಕೂತಿರಿ ಈಗ ಬಂದೆ’ ಎಂದು ಒಳಗೆ ಹೋಗಿದ್ದ. ಆಗ ಆತನ ಅರ್ಧಾಂಗಿ ರೂಮಿನಿಂದಲೇ ತನ್ನ ಪತಿಗೆ ‘ರ್ರೀ,, ನಳಾ ಬಂದಾವ ನೀರು ತುಂಬಿ ಇಟ್ಟು ಹೋಗ್ರೀ… ನನಗ ಯಾಕೋ ಸೊಂಟ ನೋಯ್ತಾ ಇದೆ.’ ಎಂದು ಹೇಳುತ್ತಿರುವುದು. ಅದಕ್ಕೆ ಪ್ರತಿಯಾಗಿ ಆಕೆಯ ಪತಿ, ‘ಏಯ್ ಸುಮ್ನಿರು ಅಲ್ಲಿ ನಮ್ಮ ಸಾಹೇಬ್ರು ಬಂದ ಕೂತಾರ.’ ಎಂದು ಹೇಳಿದಾಗ ಆಕೆ, ಅದೇ ಸ್ವರದಲ್ಲಿ ‘ಅದಕ್ಕೇನಂತ ಅವ್ರನ್ನೂ ಕರ್ಕೊಂಡು ತುಂಬ್ರೀ…’ ಎನ್ನುವ ಮಾತು ಸೂರಿಯ ಕಿವಿ ಮೇಲೆ ಬೀಳುತ್ತಿದ್ದಂತೆ ಸದ್ದಿಲ್ಲದೇ ಆ ಬಿಸಿಲಲ್ಲಿ ಕಚೇರಿಗೆ ನಡೆದು ಹೋಗಿದ್ದ.

***

ಉಚಿತ ಕೆಲಸ

ವೈದ್ಯರು ಸೂರಿಗೆ ಔಷಧದ ಚೀಟಿ ಬರೆದು ಕೊಟ್ಟು ಹೀಗೆ ಹೇಳಿದರು.

ವೈದ್ಯ: ಇದು ದುಬಾರಿ ಬೆಲೆಯ ಔಷಧಿ. ಇದನ್ನು ತೆಗೆದುಕೋ. ಆರೋಗ್ಯ ಚೆನ್ನಾಗಿರುತ್ತದೆ.

ಸೂರಿ: ಸರ್, ನಾನು ತುಂಬಾ ಬಡವ. ನನ್ನ ಹತ್ರ ಅಷ್ಟೊಂದು ದುಡ್ಡಿಲ್ಲ.

ವೈದ್ಯ: ದುಡ್ಡಿನ ಬದಲು ಏನು ಕೊಡಲು ಸಾಧ್ಯ?

ಸೂರಿ: ನೀವು ನಿಮ್ಮ ಕೆಲಸಕ್ಕೆ ಹಣ ತಗೋಬೇಡಿ. ಉಚಿತವಾಗಿ ಚಿಕಿತ್ಸೆ ಕೊಡಿ. ನಾನು ನನ್ನ ಕೆಲಸದಲ್ಲಿ ನಿಮ್ಮ ಹತ್ರ ಹಣ ತಗೊಳಲ್ಲ. ಉಚಿತವಾಗಿ ಕೆಲಸ ಮಾಡಿಕೊಡುತ್ತೇನೆ.

ವೈದ್ಯ: ಓಕೆ. ನೀನೇನು ಕೆಲಸ ಮಾಡ್ತೀಯಾ?

ಸೂರಿ: ನಾನು ಸ್ಮಶಾನದಲ್ಲಿ ಸತ್ತವರನ್ನು ಸುಡುವ ಕೆಲಸ ಮಾಡ್ತೇನೆ, ಸರ್ !

***

ಸಣ್ಣ ರೂಮ್

ರೂಮ್ ಬಾಯ್: ಬನ್ನಿ ಸರ್, ನಿಮಗೆ ರೂಮ್ ತೋರಿಸುತ್ತೇನೆ.

ಸೂರಿ: ನಾನು ಇಲ್ಲಿ ಉಳಿಯುವುದಾ? ಇಷ್ಟು ಚಿಕ್ಕ ಕೋಣೆಯಲ್ಲಿ?

ರೂಮ್ ಬಾಯ್: ರೂಮ್ ಸೆಕೆಂಡ್ ಫ್ಲೋರ್ ನಲ್ಲಿದೆ. ಇದು ಲಿಫ್ಟ್ ಸರ್ !

***

ಔಷಧಿ

ಸೂರಿ: ತುಂಬ ದಿನಗಳಿಂದ ಕೆಮ್ಮುತ್ತಿದ್ದ ನಿನ್ನ ಹೆಂಡತಿಗೆ, ಕೆಮ್ಮು ಇದ್ದಕ್ಕಿದ್ದಂತೆ ವಾಸಿಯಾಯ್ತಲ್ಲ. ಎಲ್ಲಿ, ಯಾವ ಔಷಧಿ ಕೊಡಿಸಿದೆ?

ಗಾಂಪ: ಯಾವ ಔಷಧಿಯನ್ನೂ ಕೊಡಿಸಲಿಲ್ಲ. ವಯಸ್ಸಾದಂತೆ ಇದೆಲ್ಲಾ ಸಾಮಾನ್ಯ ಎಂದೆ ಅಷ್ಟೇ !

***

ಪೇಪರ್

ಸೂರಿ ಡೆಲ್ಲಿಗೆ ಹೋಗಿದ್ದ. ಡೆಲ್ಲಿಯ ರೈಲು ನಿಲ್ದಾಣದಲ್ಲಿ ಪೇಪರ್ ಅಂಗಡಿಗೆ ಹೋಗಿ ಪೇಪರ್ ಕೇಳಿದ.

ಅಂಗಡಿಯಾತ: ಯಾವ ಪೇಪರ್ ಕೊಡಲಿ, ಹಿಂದಿ ಅಥವಾ ಇಂಗ್ಲೀಷ್?

ಸೂರಿ: ಯಾವುದಾದರೊಂದು ಕೊಡಯ್ಯ. ನನಗೆಲ್ಲಿ ಓದು ಬರುತ್ತದೆ? ತಿಂಡಿ ಪೊಟ್ಟಣ ಕಟ್ಟಲಿಕ್ಕಾದರೆ ಸಾಕು !

***

(ಸಂಗ್ರಹ)

ಚಿತ್ರ : ಅಂತರ್ಜಾಲ ತಾಣ