‘ಸಂಪದ’ ನಗೆಬುಗ್ಗೆ - ಭಾಗ ೧೩೬

ಆತ್ಮಹತ್ಯೆ
ಸೂರಿ, ಗಾಂಪ, ಮುನ್ನ ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರೂ ಪ್ರತಿದಿನ ಲಂಚ್ ಬ್ರೇಕ್‌ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್ ನಲ್ಲಿ ತರ್ತಾ ಇದ್ರು. ಅವರೆಲ್ಲರಿಗೂ ಒಂದು ವಿಷಯದ ಬಗ್ಗೆ ಕಿರಿಕಿರಿ ಆಗ್ತಾ ಇತ್ತು. ಸೂರಿ ಅವತ್ತು ಕ್ಯಾಂಟೀನ್‌ನಲ್ಲಿ ಕೂತು, "ನನ್ ಹೆಂಡ್ತಿ ಬೆಳಗ್ಗೆ ಮಾಡಿದ ತಿಂಡಿನೇ ಲಂಚ್‌ಗೂ ಹಾಕಿಕೊಡ್ತಾಳೆ. ಅದೂ ಬರೀ ಮೊಸರನ್ನ. ಹೆಂಗಪ್ಪಾ ತಿನ್ನೋದು?'' ಅಂತ ತನ್ನ ಕಷ್ಟ ಹೇಳಿಕೊಂಡು, "ನೋಡು, ನನ್ನ ಬಾಕ್ಸ್‌ನಲ್ಲಿ ಇವತ್ತೂ ಮೊಸರನ್ನ ಇದ್ರೆ, ನಾನು ಈ ಬಿಲ್ಡಿಂಗ್ ಮೇಲಿಂದ ಹಾರಿ ಕೆಳಗೆ ಬಿದ್ದು ಸತ್ತೋಗ್ತಿನಿ'' ಅಂತ ಬಾಕ್ಸ್ ಓಪನ್ ಮಾಡಿದ. ಮೊಸರನ್ನ ಇತ್ತು. ಗಾಂಪ ಮುಖ ನೋಡಿದ. ಗಾಂಪ ಕೂಡಾ ಅದೇ ಮಾತನ್ನ ಹೇಳಿ, “ನೋಡು, ಇವತ್ತೂ ನನ್ನ ಬಾಕ್ಸ್‌ನಲ್ಲಿ ಚಿತ್ರಾನ್ನ ಇದ್ರೆ ನಾನೂ ಮೇಲಿಂದ ಬಿದ್ದು ಸಾಯ್ತಿನಿ" ಅಂತ ಓಪನ್ ಮಾಡಿದ. ಚಿತ್ರಾನ್ನವೇ ಇತ್ತು. ಇವರಿಬ್ಬರ ನಂತರ ಮುನ್ನ ಕೂಡಾ, ''ಇವತ್ತೂ ನನ್ನ ಕ್ಯಾರಿಯರ್‌ನಲ್ಲಿ ಉಪ್ಪಿಟ್ಟು ಇದ್ರೆ, ನಾನೂ ಸಾಯ್ತಿನಿ'' ಅಂತ ಅಂದ. ತೆಗೆದು ನೋಡಿದ್ರೆ ಉಪ್ಪಿಟ್ಟೇ ಇತ್ತು. ಮೂವರೂ ಮೇಲಿಂದ ಬಿದ್ದು ಸತ್ತೋದ್ರು. ಪೊಲೀಸರು ಬಂದು ವಿಚಾರಣೆ ಮಾಡುವಾಗ ಸೂರಿ ಹೆಂಡ್ತಿ, “ಅಯ್ಯೋ ಅವರಿಗೆ ಮೊಸರನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಂಗೊತ್ತಿರಲಿಲ್ಲ'' ಅಂದಳು. ಗಾಂಪನ ಹೆಂಡ್ತಿ, “ಅಯ್ಯೋ, ಅವರಿಗೆ ಚಿತ್ರಾನ್ನ ಕಂಡ್ರೆ ಇಷ್ಟ ಇಲ್ಲ ಅಂತ ಗೊತ್ತಿರಲಿಲ್ಲ'' ಅಂದಳು. ಕೊನೆಗೆ ಮುನ್ನನ ಹೆಂಡ್ತಿ ಹೇಳಿದಳು- "ಅದೇನಾಯ್ತು ಅಂತಲೇ ಗೊತ್ತಾಗ್ತಿಲ್ಲ, ಡೈಲಿ ಅವರ ಲಂಚ್ ಅವರೇ ಪ್ರಿಪೇರ್ ಮಾಡ್ಕೊತಾ ಇದ್ರು"!
***
ಬೇಡಿಕೆ
ಪತ್ರಕರ್ತ: ಮೇಡಂ, ಮಹಿಳಾ ದಿನಾಚರಣೆಯ ಶುಭಾಶಯಗಳು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಏನು ಒತ್ತಾಯ ಮಾಡ್ತೀರಿ?
ಶ್ರೀಮತಿ: ಒಂದೇ ಒಂದು ಜಾಹೀರಾತು ಇಲ್ಲದೆ ಧಾರಾವಾಹಿಗಳನ್ನು ಪ್ರಸಾರ ಮಾಡುವ ಕಾನೂನು ತರಬೇಕು. ಅದೇ 'ನನ್ನ ಒತ್ತಾಯ.
***
ಭಾಷೆ
ಶಿಕ್ಷಕ: ಭಾಷೆ ಅರ್ಥ ಆಗುತ್ತೋ ಇಲ್ಲೋ ಅದೇ ಡೌಟ್ ನನಗೆ, ಒಂದಲ್ಲ ಎರಡು ಬಾರಿ ಬಿ ಸೈಲೆಂಟ್, ಬಿ ಸೈಲೆಂಟ್ ಅಂತ ಹೇಳಿದ್ರು ಗುಸು ಗುಸು ಅಂತ ಸೌಂಡ್ ಮಾಡ್ತಿದ್ದೀರಿ.
ವಿದ್ಯಾರ್ಥಿ ಸೂರಿ: ನಿಜ ಸರ್, ಡೌಟ್ ನಲ್ಲಿ ಬಿ ಸೈಲೆಂಟ್ !
***
ಕಾರಣ
ಸೂರಿ: ಅಯ್ಯಾ ಗಾಂಪ, ಮನೇಲಿ ಸೋಫಾ ಇದ್ದರೂ ಬೀದಿಯ ಜಗಲಿಕಟ್ಟೆ ಮೇಲೆ ಯಾಕೆ ಕೂತಿರ್ತೀಯಾ?
ಗಾಂಪ: ನಾನಿನ್ನೂ ಗಟ್ಟಿಮುಟ್ಟಾಗಿ ಇದ್ದೇನೆಂದು ಜನಕ್ಕೆ ಗೊತ್ತಾಗಲಿ ಅಂತ.
***
ಓದು
ಸೂರಿ: ಅಯ್ಯಾ ಗಾಂಪ ನಿನ್ ಮಗ ಹೇಗೆ ಓದುತ್ತಿದ್ದಾನೆ?
ಗಾಂಪ: ಕಾಮ, ಫುಲ್ ಸ್ಟಾಫ್ ನೋಡ್ಕೊಂಡು ಓಡ್ತಾ ಇದ್ದಾನೆ.
***
ಅಭಿಮಾನ
ಪತ್ರಕರ್ತ: ಕನ್ನಡ ಕನ್ನಡ ಅಂತ ಮಾತು ಮಾತಿಗೆ ಅಭಿಮಾನ ತೋರುತ್ತಿರುವ ನೀವು ಕನ್ನಡಕ್ಕಾಗಿ ಏನೇನು ಮಾಡ್ತಾ?
ಅಭಿಮಾನಿ ಸೂರಿ: ವಾರಕ್ಕೊಂದು ಕನ್ನಡ ಸಿನಿಮಾ ನೋಡ್ತಿನಿ.
ಪತ್ರಕರ್ತ: ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಓಡ್ತಾ ಇಲ್ವೆ,
ಅಭಿಮಾನಿ ಸೂರಿ: ನಾನು ಕನ್ನಡ ಸಿನಿಮಾ ನೋಡೋದು ಟೀವಿನಲ್ಲಿ.
***
ಊಟ
ಅಜ್ಜಿ: ಯಾಕಮ್ಮಾ ಇಂಚರ, ನಿಂತ್ಕಂಡು ಊಟ ಮಾಡ್ತಾ ಇದ್ದೀಯಾ? ಕೂತ್ಕಂಡು ಆರಾಮಾಗಿ ಊಟ ಮಾಡಬಾರದೆ?
ಇಂಚರ: ನಿನ್ನೆ ತಾನೆ ಹೇಳಿದೆ, ಕೂತು ಉಳ್ಳೂರಿಗೆ ಕುಡಿಕೆ ಹೊನ್ನು ಸಾಲದು
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ