‘ಸಂಪದ’ ನಗೆಬುಗ್ಗೆ - ಭಾಗ ೪೨

‘ಸಂಪದ’ ನಗೆಬುಗ್ಗೆ - ಭಾಗ ೪೨

ಸದ್ದಿನ ಕಾರಣ

ಒಂದು ದಿನ ಮುಲ್ಲಾ ನಸ್ರುದ್ದೀನ್ ಮನೆಯಿಂದ ಹೊರಬಿದ್ದ. ಅವನು ನೆಟ್ಟನೆ ನೆರೆಮನೆಗೆ ಹೋದ. ನೆರೆಮನೆಯವನು ವಿಶ್ವಾಸದಿಂದ ಅವನನ್ನು ಸ್ವಾಗತಿಸಿದ. ಬಳಿಕ ‘ಗೆಳೆಯಾ, ಇಂದು ಮುಂಜಾನೆಯಿಂದ ನಾನು ನಿನ್ನ ಬಗ್ಗೆಯೇ ಚಿಂತಿಸುತ್ತಾ ಇದ್ದೆ. ಇಂದು ಮುಂಜಾನೆ ನಿಮ್ಮ ಮನೆಯಿಂದ ಭಾರೀ ಗಲಾಟೆ ಕೇಳಿಸುತ್ತಿತ್ತಲ್ಲಾ, ಏನದು? ಏನು ನಡೆಯಿತು ಮನೆಯಲ್ಲಿ? ಆತಂಕದಿಂದ ಅವನು ವಿಚಾರಿಸಿದ.

“ಇಂದು ನನ್ನ ಹೆಂಡತಿಗೂ ನನಗೂ ವಾಗ್ವಾದ ನಡೆಯಿತು. ಅವಳಿಗೆ ಭಾರೀ ಸಿಟ್ಟು ಬಂತು. ಅವಳು ನನ್ನ ನಿಲುವಂಗಿಯನ್ನು ಮಾಳಿಗೆಯಿಂದ ಕೆಳಗೆ ಎಸೆದು ಬಿಟ್ಟಳು" ಮನಸ್ಸಿಲ್ಲದ ಮನಸ್ಸಿನಿಂದ ನಸ್ರುದ್ದೀನ್ ವಿವರಣೆ ನೀಡಿದ.

ನೆರೆಯವ ಗಲಿಬಿಲಿಗೊಂಡ. ಆದರೂ ವಿಷಯ ಖಾತರಿಪಡಿಸಿಕೊಳ್ಳಲು ಅವನು ಬಯಸಿದ್ದ. ಹಾಗಾಗಿ ಅವನು ಮತ್ತೆ ಕೇಳಿದ, ‘ಒಂದು ಅಂಗಿಯನ್ನು ಎಸೆದಾಗ ಅಷ್ಟು ದೊಡ್ದ ಸದ್ದಾಗಿತ್ತೇ?’ ಸಮಾಧಾನದಿಂದಲೇ ನಸ್ರುದ್ದೀನ್ ಹೇಳಿದ “ಹೌದು, ಸದ್ದಾಗಿತ್ತು. ಕಾರಣ ಆ ಅಂಗಿಯೊಳಗೆ ನಾನೂ ಇದ್ದೆ !”

***

ಕಿಲಾಡಿ

ಅದೊಂದು ಚಿತ್ರಕಲಾ ಸ್ಪರ್ಧೆ. ಗಾಂಪನ ಮಗನೂ ಸ್ಪರ್ಧೆಗೆ ಹೋದ. ಎಲ್ಲರೂ ಬಗೆ ಬಗೆಯ ಚಿತ್ರಗಳನ್ನು ಬರೆದರೆ ಗಾಂಪನ ಮಗ ಖಾಲಿ ಹಾಳೆಯ ಮೇಲೆ ಹಸು ಹುಲ್ಲು ತಿನ್ನುತ್ತಿರುವ ಚಿತ್ರ ಎಂದು ಬರೆದುಕೊಟ್ಟ. ಹುಲ್ಲು ಎಲ್ಲಿದೆ ಅಂತ ಬರೆದಿಲ್ಲವಲ್ಲೋ ಎಂದು ತೀರ್ಪುಗಾರರು ಕೇಳಿದರು. ಎಲ್ಲಾ ಹಸು ತಿಂದುಬಿಟ್ಟಿದೆಯಲ್ಲಾ ಸರ್ ಅಂದ ಗಾಂಪನ ಮಗ. ಮತ್ತೆ ಹಸು ಎಲ್ಲಿ? ಎಂದದಕ್ಕೆ, ಹುಲ್ಲು ತಿಂದ ಮೇಲೆ ಅದಕ್ಕೇನು ಕೆಲಸ? ಹೊರಟೋಯ್ತು ಅಂದ !

***

ಜ್ಞಾನೋದಯ !

ಗಾಂಪ ಊರ ಪಟೇಲರ ಮಗನನ್ನು ಸಿಕ್ಕಾಪಟ್ಟೆ ಹೊಡೆದುಬಿಟ್ಟ. ಯಾಕಪ್ಪಾ ಹೀಗೆ ಮಾಡಿದೆ? ಅಂತ ಪಟೇಲರು ಕೇಳಿದಾಗ “ಅಲ್ಲಾ ಬುದ್ದಿ, ಅವನು ನನ್ನ ಘೇಂಡಾಮೃಗ ಅಂತ ಕರೆದ್ನಲ್ಲಾ ಅದು ಸರಿಯಾ?” ಅಂದ. ಹಾಗಂದ್ನಾ? ಯಾವಾಗ? ಪಟೇಲರ ಪ್ರಶ್ನೆ. “ಐದು ವರ್ಷಗಳ ಹಿಂದೆ ಬುದ್ದಿ”. 

“ಅಲ್ವೋ ಗಾಂಪ, ಐದು ವರ್ಷದ ಹಿಂದೆ ಅವನು ಹಾಗೆ ಕರೆದದ್ದಕ್ಕೆ ನೀನು ಈಗ್ಯಾಕೆ ಅವನಿಗೆ ಹೊಡೆದೆ?” 

ನಾನು ಘೇಂಡಾ ಮೃಗವವನ್ನು ನಿನ್ನೆ ತಾನೇ ಮೈಸೂರು ಝೂ ನಲ್ಲಿ ನೋಡಿದೆ ಬುದ್ದೀ”.ಎಂದು ಗಾಂಪ ಪ್ರಾಮಾಣಿಕ ಉತ್ತರ ಕೊಟ್ಟ.

***

ಸೀಟಿನ ಸಮಸ್ಯೆ

ಗಾಂಪನಿಗೆ ರೈಲು ಪ್ರಯಾಣ ಮಾಡೋವಾಗ ಬಂಡಿ ಹೋಗ್ತಿರೋ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ಕುಳಿತರೆ ತಲೆ ಸುತ್ತು ಬರುತ್ತಂತೆ. ಮೊನ್ನೆ ಬೆಂಗಳೂರಿನಿಂದ ಹಾಗೇ ಬಂದು ವಿಪರೀತ ದೇಹಾಲಸ್ಯವಾಗಿದೆ ಅಂತ ಮಲಗಿದ್ದ. ಅಲ್ಲಯ್ಯಾ, ಅಷ್ಟು ಕಷ್ಟವಾಗಿದ್ರೆ, ನಿನ್ನ ಎದುರುಗಡೆ ಸೀಟಿನಲ್ಲಿದ್ದವನನ್ನ ನಿನ್ನ ಸೀಟಿನಲ್ಲಿ ಕೂರಿಸಿ ನೀನು ಅಲ್ಲಿ ಕೂತಿದ್ರೆ ಆಗ್ತಾ ಇರ್ಲಿಲ್ವ ಅಂದೆ. ನಾನೂ ಹಾಗೇ ಮಾಡ್ಬೇಕು ಅಂದ್ಕೊಂಡೆ. ಆದರೆ ಎದುರುಗಡೆ ಸೀಟಿನಲ್ಲಿ ಯಾರೂ ಕೂತೇ ಇರ್ಲಿಲ್ಲ ಅಂದ ಗಾಂಪ.!

***

ಹುಲಿಗೆ ಗೊತ್ತೇನ್ರೀ...?

ಸಿನೆಮಾ ನೋಡುತ್ತಿದ್ದ ಗಾಂಪ ಅದರಲ್ಲಿ ಹುಲಿ ನೆಗೆಯುವ ದೃಶ್ಯ ಬಂದಾಗ ಹೆದರಿ ಓಡಲು ಪ್ರಯತ್ನಿಸಿದ. ಪಕ್ಕದಲ್ಲಿ ಕುಳಿತವ ಅವನನ್ನು ತಡೆದು, “ಅಲ್ರೀ, ಯಾಕೆ ಓಡ್ತೀರಾ? ಇದು ಸಿನೆಮಾ ಅಲ್ವೇನ್ರೀ?” ಎಂದು ಕೇಳಿದ.

“ಹೌದ್ರೀ, ಆದ್ರೆ, ಆ ಹುಲಿಗೆ ಗೊತ್ತೇನ್ರೀ ಇದು ಸಿನೆಮಾ ಅಂತ" ಗಾಂಪ ಗಾಬರಿಯಿಂದಲೇ ಕೇಳಿದ.

***

ಸಂದರ್ಶನ

ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕ (ಕಂಡೆಕ್ಟರ್) ಹುದ್ದೆಗೆ ಸಂದರ್ಶನ ಹೋಗಿದ್ದ ಗಾಂಪ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಸಫಲನಾದ. ಆತನ ಸ್ನೇಹಿತ ಸೂರಿ ಆತನಲ್ಲಿ ಕೇಳಿದ. “ಅಲ್ಲಯಾ, ಸಂದರ್ಶನ ಹೇಗಿತ್ತು?”

“ಏನಿಲ್ಲಯ್ಯಾ, ಬಹಳ ಸುಲಭವಾಗಿತ್ತು. ಬಂದ ಅಭ್ಯರ್ಥಿಗಳಿಗೆ ತಲಾ ಹತ್ತು ರೂಪಾಯಿ ಕೊಟ್ಟು, ಒಂಬತ್ತು ರೂಪಾಯಿ ಹಿಡ್ಕೊಂಡು ಒಂದು ರೂಪಾಯಿ ವಾಪಾಸು ಕೊಡಿ” ಅಂದ್ರು. ಎಲ್ಲರೂ ಒಂದು ರೂಪಾಯಿ ವಾಪಾಸ್ ಕೊಟ್ಟರು. ಅವರನ್ನೆಲ್ಲಾ ಮನೆಗೆ ಕಳುಹಿಸಿದರು. 

ಮತ್ತೆ ನೀನು...?

“ಚಿಲ್ಲರೆ ಇಲ್ಲ ಅಂದೆ, ಸೆಲೆಕ್ಟ್ ಆಗಿ ಬಿಟ್ಟೆ.”

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ