‘ಸಂಪದ’ ನಗೆ ಬುಗ್ಗೆ - ಭಾಗ ೩೬

ಡಿವೋರ್ಸ್
ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ೪೦ ವರ್ಷಗಳೇ ಆಗಿದ್ದವು. ಮಗ ಮತ್ತು ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಗಾಂಪ ತನ್ನ ಮಗನಿಗೆ ಕಾಲ್ ಮಾಡಿದ. ಅತ್ತ ಮಗ ಕಾಲ್ ರಿಸೀವ್ ಮಾಡುತ್ತಿದ್ದಂತೆ, ನೋಡಪ್ಪಾ, ಈ ವಿಷಯ ಹೇಳೋಕೆ ನನಗೆ ಕಷ್ಟ ಆಗುತ್ತಿದೆ. ನಿಂಗೂ ಬೇಜಾರಾಗಬಹುದು. ಬೆಳಿಗ್ಗೆ ಬೆಳಿಗ್ಗೆ ನಿನ್ನ ಮೂಡು ಹಾಳು ಮಾಡುತ್ತಿರುವುದಕ್ಕೆ ಸಾರಿ, ಆದರೆ ನಿನಗೆ ಒಂದು ವಿಷಯ ಹೇಳಬೇಕಿದೆ. ನಾನು ನಿನ್ನ ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇದ್ದೀನಿ. ೪೦ ವರ್ಷ ಅವಳನ್ನು ಸಹಿಸಿಕೊಂಡಿದ್ದು ಸಾಕಾಗಿದೆ ಅಂದ. ಗಾಂಪನ ಮಗನಿಗೆ ಆಶ್ಚರ್ಯ. ಇಷ್ಟು ದಿನ ಚೆನ್ನಾಗೇ ಇದ್ರಲ್ಲ, ಏನಾಯ್ತು? ಅಂತ ಕೇಳಿದ. ಅದಕ್ಕೆ ಗಾಂಪ, ನನಗೆ ನಿನ್ನಮ್ಮನ ಮುಖ ನೋಡಿದ್ರೆ ಆಗಲ್ಲ, ನಾನು ನಾಳೆನೇ ಡಿವೋರ್ಸ್ ಗೆ ಅಪ್ಲೈ ಮಾಡ್ತೀನಿ. ಅದನ್ನ ಮತ್ತೆ ನಿನ್ನ ತಂಗಿಗೆ ಹೇಳುವಷ್ಟು ತಾಳ್ಮೆ ನನಗಿಲ್ಲ. ನೀನೇ ಅವಳಿಗೆ ಕಾಲ್ ಮಾಡಿ ಹೇಳು ಅಂತ ಫೋನಿಟ್ಟ. ಗಾಂಪನ ಮಗ ತಕ್ಷಣ ತನ್ನ ತಂಗಿಗೆ ಕಾಲ್ ಮಾಡಿ ಹಿಂಗೆ ಅಪ್ಪ, ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇದ್ದಾರೆ. ನಾಳೆನೇ ಡಿವೋರ್ಸ್ ಫೈಲ್ ಮಾಡ್ತಾ ಇದ್ದಾರೆ ಅಂತ ಹೇಳಿದ. ಗಾಂಪನ ಮಗಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅದು ಹೇಗಾಗುತ್ತೆ? ನಾನು ಅವರತ್ರ ಮಾತಾಡುತ್ತೇನೆ, ನೀನು ನನ್ನ ಜೊತೆ ಬಾ, ಯಾವುದೇ ಕಾರಣಕ್ಕೂ ನಾನು ಡಿವೋರ್ಸ್ ಕೊಡೋಕೆ ಬಿಡಲ್ಲ ಅಂತ ಹೇಳಿ ಮರುಕ್ಷಣವೇ ಅಪ್ಪನಿಗೆ ಫೋನ್ ಮಾಡಿ ಹೇಳಿದಳು, ನೋಡಪ್ಪ ಈ ವಯಸ್ಸಲ್ಲಿ ಸುಮ್ಮನೆ ಹೆಂಗೆಂಗೋ ಆಡಬೇಡ. ನೀನು ನಮ್ಮ ಜೊತೆ ಮಾತನಾಡದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಹಾಗಿಲ್ಲ ನಾವು ನಾಳೆನೇ ಇಂಡಿಯಾಗೆ ಬರ್ತಾ ಇದ್ದೀವಿ, ಅಲ್ಲೇ ಕುಳಿತು ಮಾತಾಡೋಣ., ಅಷ್ಟೇ ಅಂತ ಫೋನ್ ಇಟ್ಟಳು. ಈ ಕಡೆ ಕಾಲ್ ಕಟ್ ಮಾಡಿದ ಗಾಂಪ, ಶ್ರೀಮತಿ ಕಡೆ ತಿರುಗಿ ಹೇಳಿದ, ಲೇ, ಇವಳೇ, ದಸರಾ ಹಬ್ಬಕ್ಕೆ ಒಂದು ವ್ಯವಸ್ಥೆಯಾಯ್ತು, ದೀಪಾವಳಿಗೆ ಏನು ಸುಳ್ಳು ಹೇಳೋದು?
(ವಿಶ್ವವಾಣಿಯಿಂದ)
***
ಕಾರಣ
ಶ್ರೀಮತಿ ಅತೀವ ಕೋಪಗೊಂಡಿದ್ದಳು. ನೇರವಾಗಿ ಊರಿನ ಪ್ರಸಿದ್ಧ ಲಾಯರ್ ಹತ್ತಿರ ಹೋದಳು.
“ಕೂತ್ಕೋ ಶ್ರೀಮತಿ, ಏನು ವಿಷಯ?” ಲಾಯರ್ ಕೇಳಿದ.
“ನನಗೆ ನನ್ನ ಗಂಡ ಮೋಸ ಮಾಡ್ತಿದ್ದಾನೆ. ನನಗೆ ಅವನಿಂದ ಡಿವೋರ್ಸ್ ಬೇಕು.” ಶ್ರೀಮತಿ ಹೇಳಿದಳು.
‘ಕೊಡಿಸೋಣ, ಕೊಡಿಸೋಣ. ಆದರೆ ವಿಷಯ ಏನೆಂದು ಹೇಳಬಾರದಾ?” ಕೇಳಿದರು ಲಾಯರ್.
“ವಿಷಯ ಏನೆಂದರೆ ನನ್ನ ಕೊನೆಯ ಮಗ ಅವನಪ್ಪನ ಹಾಗೇ ಇಲ್ಲ ಅದಕ್ಕಾಗಿ..." ಎಂದಳು ಶ್ರೀಮತಿ ಮತ್ತಷ್ಟು ಕೋಪದಿಂದ.
***
ಭೂಮಿಗೆಷ್ಟು ದೂರ
ಟೈಟಾನಿಕ್ ಹಡಗು ಸಾಗುತ್ತಿದ್ದಾಗ ಹಡಗಿಗೆ ಮಂಜಿನಗಡ್ಡೆ ಬಡಿದು ಹಡಗು ಮುಳುಗತೊಡಗಿತ್ತು. ಆಶಾವಾದಿಯೊಬ್ಬ ಅದರ ಕ್ಯಾಪ್ಟನ್ ಗಾಂಪನನ್ನು ಕೇಳಿದ, “ಇಲ್ಲಿಂದ ಭೂಮಿ ಎಷ್ಟು ದೂರ?”
ಕೂಗಾಡುವ, ಕಿರಿಚಾಡುವ, ಪ್ರಾಣಭಯದಿಂದ ಬಿಳಿಚಿಕೊಂಡಿರುವ ಜನಗಳನ್ನು ಕಷ್ಟದಿಂದ ಸುಧಾರಿಸುತ್ತಿದ್ದ ಕ್ಯಾಪ್ಟನ್ ಗಾಂಪ ಉತ್ತರಿಸಿದ “ಎರಡು ಕಿಲೋ ಮೀಟರ್"
ಆಶಾವಾದಿಗೆ ತುಸು ಆಸೆ ಬಂತು. ಅಪಾಯದಿಂದ ಪಾರಾಗುವ ಸಾಧ್ಯತೆ ಇಲ್ಲದಿಲ್ಲ ‘ಯಾವ ಕಡೆಗೆ?’ ಪ್ರಶ್ನಿಸಿದ.
“ಕೆಳಗಡೆ" ಸಾವಕಾಶವಾಗಿ ಉತ್ತರಿಸಿದ ಕ್ಯಾಪ್ಟನ್ ಗಾಂಪ.
***
ಯಾರೂ ಅಲ್ಲ...!
ಇಬ್ಬರು ಹುಡುಗರು ಅವಸರದಿಂದ ಡಾಕ್ಟರಲ್ಲಿಗೆ ಬಂದರು. ಒಬ್ಬ ಹೇಳಿದ, “ಡಾಕ್ಟರೇ, ಇವನು ಗೋಲಿ ನುಂಗಿಬಿಟ್ಟಿದ್ದಾನೆ. ಹೊರ ತೆಗೆಯಿರಿ.”
ಹುಡುಗನನ್ನು ಪರೀಕ್ಷಿಸುತ್ತಾ ಡಾಕ್ಟರ್ ಇನ್ನೊಬ್ಬನನ್ನು ಕೇಳಿದರು, “ ಯಾರಪ್ಪಾ ನೀನು? ಇವನ ಅಣ್ಣನೋ, ತಮ್ಮನೋ?”
“ಅಣ್ಣನೂ ಅಲ್ಲ, ತಮ್ಮನೂ ಅಲ್ಲ ಡಾಕ್ಟರ್, ಜೊತೆಗಿದ್ದಾತ ಉತ್ತರಿಸಿದ “ಇವನು ನುಂಗಿದ್ದಾನಲ್ಲ, ಆ ಗೋಲಿ ನನ್ನದು.” ಅಂದ.
***
ಸಲಹೆಗಳು
ಗಾಂಪನು ಮದುವೆಯಾಗಲು ನಿರ್ಧರಿಸಿದ್ದ. ಆದರೆ ವಿವಾಹವೆಂದರೆ ಅವನಿಗೆ ಒಳಗೊಳಗೇ ಅವ್ಯಕ್ತ ಭಯ. ಏನು ಮಾಡಲೂ ತೋಚದೇ ಇಪ್ಪತ್ತು ವರ್ಷಗಳಿಂದ ಸಂಸಾರ ನಡೆಸುತ್ತಿರುವ ಅನುಭವಿಯೊಬ್ಬನ ಹತ್ತಿರ ಹೋಗಿ ಕೇಳಿದ, “ನಾನು ಮದುವೆಯಾಗಬೇಕು ಎಂದಿದ್ದೇನೆ. ಆದರೆ ಎಂತಹ ಹುಡುಗಿ ನನಗೆ ಸಮರ್ಪಕ ಎಂದೇ ತಿಳಿಯುತ್ತಿಲ್ಲ.”
ನಿನ್ನನ್ನು ಮದುವೆಯಾಗುವವಳು ಅಂದಗಾತಿಯಾಗಿರಬೇಕು, ಪ್ರೀತಿಸುವವಳಾಗಿರಬೇಕು ಮತ್ತು ಕರುಣಾಮಯಿಯಾಗಿರಬೇಕು" ಎಂದು ಅನುಭವಿ ಉಪದೇಶಿಸಿದ.
“ಮೂವರನ್ನು ಮದುವೆಯಾಗಬೇಕೇ? ಅದು ಕಾನೂನಿಗೆ ವಿರುದ್ಧವಲ್ಲವೇ?” ಎಂದು ಅಚ್ಚರಿಯಿಂದ ಗಾಂಪ ಪ್ರಶ್ನಿಸಿದ.
(ನೂತನ ಪತ್ರಿಕೆಯಿಂದ)
***
ಚಿತ್ರ ಕೃಪೆ: ಅಂತರ್ಜಾಲ ತಾಣ