‘ಸಂಪದ’ ನಗೆ ಬುಗ್ಗೆ - ಭಾಗ ೪೩

‘ಸಂಪದ’ ನಗೆ ಬುಗ್ಗೆ - ಭಾಗ ೪೩

ಕಾರಣ!

ಸೂರಿ ಒಬ್ಬ ಪ್ರಖ್ಯಾತ ಡಾಕ್ಟರ್ ಆಗಿದ್ದ. ಅವನು ತನ್ನ ರೋಗಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ. ಯಾರಿಗೆ ಎಷ್ಟೇ ಹೊತ್ತಿಗೆ ಹುಷಾರಿಲ್ಲದೇ ಇರಲಿ, ಟ್ರೀಟ್ಮೆಂಟ್ ಕೊಡೋಕೆ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅದಕ್ಕೆ ತನ್ನ ಮನೆ ಮುಂದೆ ೨೪ ಗಂಟೆ ರೋಗಿಗಳನ್ನು ನೋಡಲಾಗುತ್ತದೆ ಎಂದು ಬೋರ್ಡ್ ಹಾಕಿಕೊಂಡಿದ್ದ. ಅಂಥ ಡಾಕ್ಟರ್ ಸೂರಿ ಮನೆಯಲ್ಲಿ ಒಂದು ದಿನ ಮಧ್ಯರಾತ್ರಿ ಕಾಲಿಂಗ್ ಬೆಲ್ ಸದ್ದಾಯಿತು. ನಿದ್ದೆ ಮಾಡುತ್ತಿದ್ದ ಸೂರಿ ಯಾರಪ್ಪ ಇಷ್ಟು ಹೊತ್ತಿನಲ್ಲಿ ಎಂದು ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಗಾಂಪ ನಿಂತುಕೊಂಡಿದ್ದ. ಏನಾಗಬೇಕಿತ್ತು ಅಂತ ಕೇಳಿದ್ದಕ್ಕೆ ಗಾಂಪ ಹೇಳಿದ, ಡಾಕ್ಟರ್, ನನ್ನ ಹೆಂಡತಿಗೆ ಹುಷಾರಿಲ್ಲ ಯಾಕೋ ಒಂಥರಾ ಆಡ್ತಾ ಇದ್ದಾಳೆ, ನೀವು ಈಗಲೇ ಅವಳಿಗೆ ಟ್ರೀಟ್ಮೆಂಟ್ ಕೊಡಬೇಕು ಅಂದ. ಅದಕ್ಕೆ ಸರಿ ನಿನ್ನ ಹೆಂಡತಿ ಎಲ್ಲಿ? ಎಂದು ಸೂರಿ ಕೇಳಿದಕ್ಕೆ ಅವಳು ಮನೆಯಲ್ಲಿದ್ದಾಳೆ, ಅವಳನ್ನ ಇಲ್ಲಿಗೆ ಕರ್ಕೊಂಡು ಬಂದು ತೋರಿಸಿದ್ರೆ ಎಷ್ಟು ಚಾರ್ಜ್ ಮಾಡ್ತೀರಾ, ನೀವೇ ನಮ್ಮನೆಗೆ ನಿಮ್ಮ ಕಾರಲ್ಲಿ ಬಂದು ಟ್ರೀಟ್ಮೆಂಟ್ ಕೊಡೋದಾದ್ರೆ ಎಷ್ಟು ಚಾರ್ಜ್ ಮಾಡ್ತೀರಾ ಎಂದು ಕೇಳಿದ. ಅದಕ್ಕೆ ಡಾಕ್ಟರ್ ಸೂರಿ, ನೋಡಪ್ಪ, ನೀನು ಆಕೆನ ಕರ್ಕೊಂಡು ಬಂದ್ರೆ, ೩೦೦ ರೂಪಾಯಿ, ನನ್ನ ಕಾರಲ್ಲಿ ನಾನೇ ನಿಮ್ಮ ಮನೆಗೆ ಬಂದು ನೋಡಬೇಕು ಅಂದ್ರೆ ೫೦೦ ರೂಪಾಯಿ ಅಂದ. ಸರಿ, ನಾನು ಹೋಗಿ ಕರ್ಕೊಂಡ್ ಬರೋದು ಲೇಟ್ ಆಗುತ್ತೆ. ನೀವೇ ಬಂದುಬಿಡಿ ಅಂತ ಡಾಕ್ಟರ್ ನ ಕರ್ಕೊಂಡು ಹೋದ ಗಾಂಪ. ಡಾಕ್ಟರ್ ಸೂರಿ ಕಾರಲ್ಲಿ ಇಬ್ಬರು ಗಾಂಪನ ಮನೆ ತಲುಪುವ ಹೊತ್ತಿಗೆ ತುಂಬಾ ತಡವಾಗಿತ್ತು. ಕಾರಿನಿಂದ ಹೇಳಿದವನೇ ಗಾಂಪ, ಸರಿ ಡಾಕ್ಟರ್ ತಗೊಳ್ಳಿ ನಿಮ್ಮ ೫೦೦ ರೂಪಾಯಿ, ತುಂಬಾ ಥ್ಯಾಂಕ್ಸ್, ಬರ್ತೀನಿ ಅಂತ ಹೊರಟ. ಡಾಕ್ಟರ್ ಗೆ ಆಶ್ಚರ್ಯ. ಅಲ್ಲಪ್ಪ. ನಿನ್ನ ಹೆಂಡ್ತಿಗೆ ಹುಷಾರಿಲ್ಲ ಅಂದ್ಯಲ್ಲ ಅಂತ ಕೇಳಿದ್ದಕ್ಕೆ ಗಾಂಪ ಹೇಳಿದ, ಹಂಗೇನಿಲ್ಲ ಡಾಕ್ಟರ್, ಅವಳು ಚೆನ್ನಾಗೇ ಇದ್ದಾಳೆ. ನಾನು ಸ್ವಲ್ಪ ಕೆಲಸ ಇದೆ ಅಂತ ನಿಮ್ಮ ಕಡೆ ಏರಿಯಾಗೆ ಬಂದಿದ್ದೆ. ವಾಪಸ್ ಮನೆಗೆ ಹೊರಡುವುದು ತಡ ಆಯಿತು. ಓಲಾ, ಉಬರ್ ಬುಕ್ ಮಾಡೋಣ ಅಂತ ಹೋದರೆ ಅದರಲ್ಲಿ ೮೦೦ ರೂಪಾಯಿ ತೋರಿಸಿತು. ಅದಕ್ಕೇ ಅದಕ್ಕಿಂತ ನೀವೇ ವಾಸಿ ಅಂತ ನಿಮ್ಮನ್ನೇ ಕರ್ಕೊಂಡು ಬಂದೆ. ತುಂಬಾ ಥ್ಯಾಂಕ್ಸ್.

***

ಒಂದು ರೂಪಾಯಿ

ಒಬ್ಬ ಭಿಕ್ಷುಕ ದೇವರನ್ನು ಕುರಿತು ಒಂದೇ ಸಮನೆ ಪ್ರಾರ್ಥಿಸುತ್ತಿದ್ದ. ‘ದೇವರೇ, ನೀನು ನನಗೆ ಎಲ್ಲಾದರೂ ಒಂದು ಹತ್ತು ರೂಪಾಯಿ ಸಿಗುವಂತೆ ಮಾಡಿದರೆ ಅದರಲ್ಲಿ ನಿನಗೆ ಅರ್ಧ ಕೊಡುತ್ತೇನೆ. ನಾವಿಬ್ರೂ ಒನ್ ಬೈ ಟು ಮಾಡಿಕೊಳ್ಳೋಣ' ಎಂದು ಹೋದ ಬಂದ ಕಡೆಯೆಲ್ಲಾ ಪ್ರಾರ್ಥಿಸುತ್ತಿದ್ದ. 

ಅವನ ಪ್ರಾರ್ಥನೆ ದೇವರಿಗೆ ಕೇಳಿತೋ ಇಲ್ಲವೋ ಅಂತೂ ಅವನಿಗೆ ಬೀದಿಯಲ್ಲಿ ಐದು ರೂಪಾಯಿ ಬಿಲ್ಲೆಯೊಂದು ಸಿಕ್ಕಿತು. ಭಿಕ್ಷುಕನು ಸಂತೋಷದಿಂದ ‘ನೀನೆಷ್ಟು ಬುದ್ಧಿವಂತ. ನಾನು ಕೊಡಬೇಕಾದ ಐದು ರೂಪಾಯಿಯನ್ನು ಮೊದಲೇ ನೀನು ಮುರಿದುಕೊಂಡು ನನಗೆ ಉಳಿದ ಐದು ರೂಪಾಯಿ ಕೊಟ್ಟಿದ್ದಿಯಲ್ಲಾ!’ ಎಂದು ಹೇಳಿ ಅದನ್ನು ಜೇಬಿಗೆ ಸೇರಿಸಿದ.

***

ಹೆಂಗಸು !

ಭಿಕ್ಷುಕ: ತಾಯಿ, ಅನ್ನ ತಾಯೀ…

ಯಜಮಾನ: ಹೆಂಗಸರಿಲ್ಲ, ಮುಂದೆ ಹೋಗಪ್ಪ

ಭಿಕ್ಷುಕ: ಸ್ವಾಮಿ, ನನಗೆ ಹೆಂಗಸ್ರು ಬೇಡ, ಒಂದು ತುತ್ತು ಅನ್ನ ಸಾಕು ಸ್ವಾಮಿ…

***

ಕನ್ನಡಿ

ಮರೆಗುಳಿ ಪ್ರೊಫೆಸರ್ ಗಾಂಪ ತಮ್ಮ ಮನೆಯ ಮಾಲೀಕನ ಬಳಿಗೆ ಬಂದು ಕೇಳಿದರು.

‘ನನ್ನ ರೂಮಿನಲ್ಲಿ ಒಂದು ದೊಡ್ಡ ಕನ್ನಡಿ ಹಾಕಿಸಿಕೊಳ್ಳಬೇಕೆಂದಿದ್ದೇನೆ ! ತಮ್ಮ ಆಕ್ಷೇಪಣೆಗಳೇನೂ ಇಲ್ಲವಲ್ಲಾ?’

ಮಾಲೀಕ: ಆಕ್ಷೇಪಣೆ ಏನೂ ಇಲ್ಲ, ಆದರೆ ಈಗಾಗಲೇ ಒಂದು ಕನ್ನಡಿ ರೂಮಿನಲ್ಲಿ ಇದೆಯಲ್ವೇ?

ಗಾಂಪ: ಹಾಳಾಗಿ ಹೋಗಲಿ ಅದು. ಅದನ್ನು ನಂಬಿ ನಾನು ಒಮ್ಮೊಮ್ಮೆ ಕಾಲೇಜಿಗೆ ಅರ್ಜೆಂಟಿನಲ್ಲಿ ಅದರಲ್ಲಿ ನೋಡಿಕೊಳ್ಳುತ್ತಾ ಡ್ರೆಸ್ ಮಾಡಿಕೊಂಡು ಪ್ಯಾಂಟ್ ಹಾಕೋದು ಮರೆತೇ ಕಾಲೇಜಿಗೆ ಹೋಗಿದ್ದೂ ಉಂಟು. !

***

ದಂಡ

ಗಾಂಪ: ಪೇಪರ್ ಓದಿದಿಯಾ?

ಸೂರಿ: ಇಲ್ಲ, ಏಕೆ? ಏನು ವಿಶೇಷ?

ಗಾಂಪ: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದವರಿಗೆ, ಶಿಕ್ಷೆ, ದಂಡ ಅಂತೆಲ್ಲಾ ಕೊಟ್ಟಿದ್ದಾರೆ ಕಣೋ.

ಸೂರಿ: ಅಷ್ಟೇನಾ? ನಾನು ಏನೋ ಅಂತಿದ್ದೆ. ಸಾರ್ವಜನಿಕರಿಲ್ಲದ ಯಾವುದಾದ್ರೂ ಮರದ ಕೆಳಗೆ ಸೇದಿದರಾಯ್ತು ಬಿಡು. ಅದಕ್ಯಾಕೆ ತಲೆ ಕೆಡಿಸಿಕೊಳ್ತೀಯಾ!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ